पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
88ನೇ ಅಧ್ಯಾಯ
1 : ಪ್ರಭು, ಜೀವೋದ್ಧಾರಕನೇ ಕೇಳು I ನಿನಗೆ ಮೊರೆಯಿಡುವೆ ಹಗಲಿರುಳು II
2 : ನನ್ನ ಯೋಚನೆ ನಿನ್ನ ಬಳಿಸೇರಲಿ I ನನ್ನ ಕೂಗು ನಿನ್ನ ಕಿವಿಗೆ ಬೀಳಲಿ II
3 : ಸಂಕಟದಿಂದ ತುಂಬಿದೆ ನನ್ನ ಜೀವನ I ಪಾತಾಳವ ಸಮೀಪಿಸಿದೆ ನನ್ನ ಪ್ರಾಣ II
4 : ನಾನಿರುವೆ ಸಮಾಧಿ ಸೇರಲಿರುವವರಂತೆ I ಇರುವೆ ಶಕ್ತಿಯಿಲ್ಲದ ನರಮಾನವರಂತೆ II
5 : ಇರುವೆ ಹತನಾಗಿ ಸಮಾಧಿ ಸೇರಿದವನಂತೆ I ಮೃತರಾದವರೊಳು ನಿರಾಕೃತನಾದವನಂತೆ II ನಿನ್ನಾ ನೆನಕೆಯಿಂದ ಅಳಿದು ಹೋದವನಂತೆ I ನಿನ್ನಾ ಪಾಲನೆಯಿಂದ ದೂರವಾದವನಂತೆ II
6 : ದಬ್ಬಿರುವೆ ನೀನೆನ್ನನು ಅಧೋಲೋಕಕೆ I ಅಗಾಧಸ್ಥಳಕೆ, ಗಾಢ ಅಂಧಕಾರಕೆ II
7 : ನಿನ್ನ ಕಡುಕೋಪ ಎರಗಿಬಿಟ್ಟಿದೆ ನನ್ನ ಮೇಲೆ II ನನ್ನ ಬಾಧಿಸುತ್ತಿವೆ ಅದರ ಕಲ್ಲೋಲ ಮಾಲೆ II
8 : ಆಪ್ತರೂ ಹೇಸಿ ದೂರಸರಿವಂತೆ ಮಾಡಿರುವೆ I ಬಂಧಿತನಾದ ನಾನು ಬಿಡಿಸಿಕೊಳ್ಳಲಾಗದಿರುವೆ II
9 : ಮಬ್ಬಾಗಿ ಹೋಗಿವೆ ಕಣ್ಗಳು ಬಾಧೆಯಿಂದ I ಪ್ರಭೂ, ಕೈಯೊಡ್ಡಿ ಮೊರೆಯಿಡುತ್ತಿರುವೆ ಸದಾ II
10 : ಮೃತರು ನಿನ್ನದ್ಭುತಗಳನು ಮೆಚ್ಚುವುದುಂಟೆ I ಸತ್ತ ಜನರೆದ್ದು ನಿನ್ನ ಸ್ತುತಿಸುವುದುಂಟೆ? II
11 : ಸಾರುವುದುಂಟೆ ಸಮಾಧಿಯಲಿ ನಿನ್ನ ಕೃಪೆಯನು? I ಅಧೋಲೋಕದಲಿ ನಿನ್ನ ಪ್ರಾಮಾಣಿಕತೆಯನು? II
12 : ತಿಳಿವರೆ ನಿನ್ನ ಪವಾಡಗಳನು ಇರುಳ ನಿಶೆಯೊಳು? I ನಿನ್ನ ನ್ಯಾಯ ನೀತಿಯನು ಮರೆವಾ ಲೋಕದೊಳು? II
13 : ನಾನಾದರೋ ಪ್ರಭೂ, ಮೊರೆಯಿಡುವೆ ನಿನಗೆ I ಉದಯದಲೆ ಸೇರುವುದೆನ್ನ ಜಪ ನಿನ್ನ ಸನ್ನಿಧಿಗೆ II
14 : ಪ್ರಭು, ನನ್ನ ತಳ್ಳಿಬಿಟ್ಟೆಯೇಕೆ? I ಮುಖವನು ತಿರುಗಿಸಿಕೊಂಡೆಯೇಕೆ? II
15 : ಬಾಲ್ಯದಿಂದಲು ಬಾಧಿತನು, ಮೃತಪ್ರಾಯನು I ನಿನ್ನ ದಂಡನೆ ಸಹಿಸಿ ಸೊರಗಿದವನು ನಾನು II
16 : ನನ್ನನು ಆವರಿಸಿಕೊಂಡಿದೆ ನಿನ್ನ ಕಡುಕೋಪಾಗ್ನಿಯು I ನನ್ನ ಹಾಳುಮಾಡುತ್ತಿದೆ ನಿನ್ನ ಭಯಂಕರ ದಾಳಿಯು II
17 : ದಿನವೆಲ್ಲಾ ನನ್ನನು ಅವು ಸುತ್ತುಗಟ್ಟಿವೆ I ಪ್ರವಾಹದಂತೆ ಎನ್ನ ಮೇಲೆ ಹರಿಯುತ್ತಿವೆ II
18 : ಬಂಧುಮಿತ್ರರನು ನನ್ನಿಂದ ದೂರ ಮಾಡಿರುವೆ I ಅಂಧಕಾರದೊಡನೆ ಸಂಗಾತಿಯನ್ನಾಗಿಸಿರುವೆ II