ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
97ನೇ ಅಧ್ಯಾಯ
1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ I ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ I ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ II
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು I ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು II
3 : ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ I ಸುಡುತ್ತದೆ ಆತನ ವೈರಿಗಳನು ಎಲ್ಲೆಡೆ II
4 : ಇಳೆಯನು ಬೆಳಗಿಸುತ್ತದೆ ಆತನ ಮಿಂಚು I ನಡುಗುತ್ತದೆ ಭೂಮಿ ಅದಕೆ ಬೆಚ್ಚುಬಿದ್ದು II
5 : ಸಾರ್ವಭೌಮನಾದ ಪ್ರಭುವಿನ ಮುಂದೆ I ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ II
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು I ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು II
7 : ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು I ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು II
8 : ಪ್ರಭು, ನಿನ್ನ ನ್ಯಾಯತೀರ್ಪನು ಕುರಿತು I ಸಿಯೋನ್ ನಗರವು ಆನಂದಪಟ್ಟಿತು I ಜುದೇಯ ಪ್ರಾಂತ್ಯವು ಹರ್ಷಗೊಂಡಿತು II
9 : ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ I ಮಹೋನ್ನತನು ನೀನು ದೇವರುಗಳಿಗೆಲ್ಲಾ II
10 : ಕೇಡನು ಹಗೆಮಾಡುವವನಿಗೆ ಪ್ರಭು ಒಲಿವನು I ತನ್ನ ಭಕ್ತರ ಪ್ರಾಣವನು ಕಾಪಾಡುವನು I ದುಷ್ಟರ ಕೈಯಿಂದವರನು ಬಿಡಿಸುವನು II
11 : ಉದಯವಾಗುವುದು ಜ್ಯೋತಿ ಸಜ್ಜನರಿಗೆ I ಆನಂದವಿದೆ ಯಥಾರ್ಥ ಹೃದಯಿಗಳಿಗೆ II
12 : ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ I ಆತನ ಶ್ರೀನಾಮವನು ಕೊಂಡಾಡಿರಿ II