வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
132ನೇ ಅಧ್ಯಾಯ
1 : ನೆನಸಿಕೋ ಹೇ ಪ್ರಭೂ, ದಾವೀದನನು I ಆತ ಸಹಿಸಿದ ಕಷ್ಟದುಃಖಗಳನು II
2 : ಸ್ಮರಿಸಿಕೊ ಪ್ರಭೂ, ಆತನು ಮಾಡಿದ ಶಪಥವನು I ಯಕೋಬ್ಯ ಘನದೇವನಿಗಾತ ಕೊಟ್ಟ ಈ ಮಾತನು II
3 : “ಪ್ರಭುವಿಗೆ ಆಲಯವೊಂದನು ನಿರ್ಮಿಸುವ ತನಕ I ಯಕೋಬ್ಯ ಘನದೇವನಿಗೆ ಗುಡಿ ಕಟ್ಟುವ ತನಕ II
4 : ನಾ ಸೇರೆನು ನನ್ನರಮನೆಯನು I ನಾ ಏರೆನು ನನ್ನ ಶಯ್ಯೆಯನು II
5 : ಮುಚ್ಚೆನು ನಾನು ಕಣ್ಣುಗಳನು I ಕೂಡಿಸೆನು ನಾನು ರೆಪ್ಪೆಗಳನು” II
6 : ಮಂಜೂಷವನು ಕುರಿತು ಕೇಳಿದೆವು ಎಫ್ರಾತಾದಲಿ I ನಮಗದು ಕಾಣಬಂದಿತು ಆ ಯಹಾರ್ ಮೈದಾನದಲಿ II
7 : ಹೋಗೋಣ ಬನ್ನಿರಿ ಆತನ ಮಂದಿರಕೆ I ಅಡ್ಡಬೀಳೋಣ ಆತನ ಪಾದಪೀಠಕೆ II
8 : ಆಗಮಿಸು ಪ್ರಭು, ನಿನ್ನ ತೇಜೋ ಮಂಜೂಷದೊಡನೆ I ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ II
9 : ನೀತಿಭೂಷಿತರಾಗಲಿ ನಿನ್ನ ಯಾಜಕರು I ಆನಂದ ಘೋಷಮಾಡಲಿ ನಿನ್ನ ಭಕ್ತಜನರು II
10 : ನಿನ್ನ ದಾಸ ದಾವೀದನ ಪ್ರಯುಕ್ತ I ತಳ್ಳಲ್ಪಡದಿರಲಿ ನಿನ್ನಾ ಅಭಿಷಿಕ್ತ II
11 : ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: I ಆಣೆಯಿಟ್ಟು ಕೊಟ್ಟಾ ಮಾತಿಗೆ ತಪ್ಪಲಾರನಾತ: I “ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ ತನುಜನೊಬ್ಬನನು” II
12 : “ನನ್ನ ನೇಮನಿಯಮಗಳನು ನಿನ್ನ ಮಕ್ಕಳು ಅನುಸರಿಸುವರಾದರೆ I ಕೂರುವರು ಸದಾಕಾಲ ಅವರ ಮಕ್ಕಳ ನಿನ್ನಾ ಸಿಂಹಾಸನದ ಮೇಲೆ” II
13 : ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು I ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು II
14 : “ಎಂದೆಂದಿಗು ಇದೇ ನನ್ನ ನಿವಾಸ I ಇರುವೆನಿಲ್ಲೇ, ಇದು ನನ್ನ ಅಭಿಲಾಶ II
15 : ಇದಕ್ಕೊದಗಿಸುವೆನು ಧಾರಾಳ ಸಿರಿಸಂಪತ್ತನು I ಅನ್ನದಿಂದ ತೃಪ್ತಿಪಡಿಸುವೆನಿಲ್ಲಿಯ ದಲಿತರನು II
16 : ಹೊದಿಸುವೆನಿದರ ಯಾಜಕರಿಗೆ ರಕ್ಷಣಾವಸ್ತ್ರವನು I ಸಾಧುಸಂತರು ಮಾಡುವರಿದರ ಹರ್ಷೋದ್ಗಾರವನು II
17 : ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೆ I ನಂದಾದೀಪ ಬೆಳಗುವಂತೆ ಮಾಡುವೆ ನನ್ನ ಅಭಿಷಿಕ್ತನಿಗಿಲ್ಲೆ II
18 : ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು I ಮುಡಿಸುವೆನು ಅವನಿಗಾದರೋ ಪ್ರಜ್ವಲ ಕಿರೀಟವನು” II