ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
140ನೇ ಅಧ್ಯಾಯ
1 : ಬಿಡಿಸೆನ್ನನು ಪ್ರಭು ಕೆಡುಕರಿಂದ I ಕಾಪಾಡೆನ್ನನು ಹಿಂಸಕರಿಂದ II
2 : ಕೇಡನು ಕಲ್ಪಿಸುತ್ತಾರವರು ಮನದೊಳು I ಕಲಹವೆಬ್ಬಿಸುತ್ತಾರೆ ಯಾವಾಗಲೂ II
3 : ಅವರ ನಾಲಗೆಯು ಸರ್ಪದಂತೆ I ಹಾವಿನ ವಿಷ ಅವರ ತುಟಿ ಹಿಂದೆ II
4 : ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ I ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ I ನಾನೆಡವುದನೇ ನಿರೀಕ್ಷಿಸುವವರಿಂದ II
5 : ಒಡ್ಡಿದರು ಗರ್ವಿಗಳು ಗುಪ್ತವಾಗಿ I ಉರುಲನು, ಪಾಶಗಳನು ನನಗಾಗಿ I ಬಲೆಹಾಸಿದರು ದಾರಿಗೆ ಅಡ್ಡವಾಗಿ II
6 : “ನೀನೆ ನನ್ನ ದೇವರು” ಎಂದೆ ಪ್ರಭುವಿಗೆ I ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ II
7 : ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನ I ರಣರಂಗದಲಿ ನೀನೆನಗೆ ಶಿರಸ್ತ್ರಾಣ II
8 : ನೆರವೇರಿಸಬೇಡ ದುರುಳರ ಕೋರಿಕೆಯನು I ಕೈಗೂಡಿಸಬೇಡ ಪ್ರಭು, ಅವರ ಕುಯುಕ್ತಿಯನು II
9 : ನನ್ನನ್ನು ಸುತ್ತುವರೆದಿರುವವರು ತಲೆಯೆತ್ತದಿರಲಿ I ಅವರಾಡುವ ಕೇಡು ಅವರ ತಲೆಯ ಮೇಲೇ ಎರಗಲಿ II
10 : ಸುರಿಯಲಿ ಆ ಜನರ ಮೇಲೆ ಉರಿಉರಿವ ಬೆಂಕಿಕೆಂಡ I ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ II
11 : ಉಳಿಯದಿರಲಿ ನಾಡೊಳು ಚಾಡಿಕೋರರು I ಕೇಡಿಂದ ನಾಶವಾಗಲಿ ಹಿಂಸಕರು II
12 : ಪ್ರಭು ನೀ ದೀನದಲಿತರ ವಕೀಲನೆಂದು ನಾ ಬಲ್ಲೆ I ಬಡವರಿಗೆ ನ್ಯಾಯ ದೊರಕಿಸುವವ ನೀ ಅಲ್ಲವೆ? II
13 : ಭಜಿಸುವರು ಸಜ್ಜನರು ನಿನ್ನಾ ಸಿರಿನಾಮವನು I ಬಾಳ್ವರು ಸುಮನಸ್ಕರು ಬಿಡದೆ ನಿನ್ನ ಸನ್ನಿಧಿಯನು II