ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ಕೊರಿಂಥಿಯರಿಗೆ
12ನೇ ಅಧ್ಯಾಯ
- Verse 1: ಸಹೋದರರೇ, ಪವಿತ್ರಾತ್ಮ ಅವರ ವರದಾನಗಳ ಬಗ್ಗೆ ನೀವು ಸರಿಯಾದ ಅರಿವುಳ್ಳವರಾಗಿರಬೇಕು.
- Verse 2: ನೀವು ಅನ್ಯಮತಸ್ಥರಾಗಿದ್ದಾಗ, ನಿಮಗೆ ಮನಸ್ಸು ಬಂದಂತೆಲ್ಲಾ ಮೂಕ ವಿಗ್ರಹಗಳ ಬಳಿ ಹೋಗಿ ಬರುತ್ತಿದ್ದಿರಿ; ಇದನ್ನು ನೀವೇ ಬಲ್ಲಿರಿ.
- Verse 3: ಇಷ್ಟುಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು.
- Verse 4: ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ.
- Verse 5: ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ.
- Verse 6: ಶಕ್ತಿಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ.
- Verse 7: ಪ್ರತಿಯೊಬ್ಬನಲ್ಲಿ ಕಂಡುಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ.
- Verse 8: ಪವಿತ್ರಾತ್ಮ ಮುಖಾಂತರ ಒಬ್ಬನಿಗೆ ಜ್ಞಾನೋಕ್ತಿಗಳು, ಇನ್ನೊಬ್ಬನಿಗೆ ಅವರ ಮುಖಾಂತರವೇ ವಿದ್ಯೋಕ್ತಿಗಳು ಲಭಿಸುತ್ತವೆ;
- Verse 9: ಅದೇ ಪವಿತ್ರಾತ್ಮರಿಂದ ಒಬ್ಬನಿಗೆ ಅಗಾಧ ವಿಶ್ವಾಸವೂ ಇನ್ನೊಬ್ಬನಿಗೆ ಸ್ವಸ್ಥತೆಯನ್ನೀಯುವ ಶಕ್ತಿಯೂ ದೊರಕುತ್ತವೆ.
- Verse 10: ಒಬ್ಬನಿಗೆ ಪವಾಡಗಳನ್ನು ಎಸಗುವ ಪರಾಕ್ರಮವನ್ನು, ಇನ್ನೊಬ್ಬನಿಗೆ ಪ್ರವಾದನೆಮಾಡುವ ಪ್ರತಿಭೆಯನ್ನು, ಮತ್ತೊಬ್ಬನಿಗೆ ಸತ್ಯಾಸತ್ಯವನ್ನು ವಿವೇಚಿಸುವ ಜಾಣ್ಮೆಯನ್ನು, ಮಗದೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಸಾಮರ್ಥ್ಯವನ್ನು, ಮತ್ತೂ ಒಬ್ಬನಿಗೆ ಅವುಗಳನ್ನು ಅರ್ಥೈಸುವ ಅರಿವನ್ನು ಆ ಪವಿತ್ರಾತ್ಮರಿಂದಲೇ ಕೊಡಲಾಗುತ್ತದೆ.
- Verse 11: ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.
- Verse 12: ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು.
- Verse 13: ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ-ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.
- Verse 14: ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ.
- Verse 15: ಎಂದಾದರೂ ಕಾಲು, “ನಾನು ಕೈ ಅಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?
- Verse 16: ಅಥವಾ ಕಿವಿ, “ನಾನು ಕಣ್ಣಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?
- Verse 17: ದೇಹವಿಡೀ ಕಣ್ಣೇ ಆದರೆ ಅದು ಕೇಳುವ ಬಗೆ ಹೇಗೆ? ಅಥವಾ ಅದು ಇಡೀ ಕಿವಿಯೇ ಆದರೆ, ಮೂಸಲು ಮೂಗು ಎಲ್ಲಿ?
- Verse 18: ಸದ್ಯ, ದೇವರು ತಮ್ಮ ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ.
- Verse 19: ಅವೆಲ್ಲವೂ ಒಂದೇ ಅಂಗವಾಗಿದ್ದರೆ ಆಗ ದೇಹವೆಲ್ಲಿ?
- Verse 20: ಹೀಗೆ ಅಂಗಗಳು ಅನೇಕವಾಗಿದ್ದರೂ ದೇಹ ಮಾತ್ರ ಏಕ.
- Verse 21: ಹೀಗಿರಲಾಗಿ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕೈಗೆ, ಕಣ್ಣು ಹೇಳಲಾಗದು. ಅಂತೆಯೇ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕಾಲುಗಳಿಗೆ ತಲೆ ಹೇಳಲಾಗದು.
- Verse 22: ಅಷ್ಟುಮಾತ್ರವಲ್ಲ, ಬಲಹೀನವಾಗಿ ತೋರುವ ಅಂಗಗಳೂ ನಮಗೆ ಬೇಕೇಬೇಕು.
- Verse 23: ಅಲ್ಪವೆಂದೆಣಿಸುವ ಅಂಗಗಳನ್ನು ಅಧಿಕವಾಗಿ ಮಾನ್ಯಮಾಡುತ್ತೇವೆ. ಗೋಪ್ಯವಾಗಿಡತಕ್ಕವುಗಳನ್ನು ಶೀಲದಿಂದ ಸಂರಕ್ಷಿಸುತ್ತೇವೆ.
- Verse 24: ಬಾಹ್ಯ ಅಂಗಗಳಿಗೆ ಇಂಥ ಸಂರಕ್ಷಣೆ ಅಗತ್ಯವಿರುವುದಿಲ್ಲ. ದೇಹವನ್ನು ನಿರ್ಮಿಸಿದ ದೇವರು ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ.
- Verse 25: ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು ಗಮನಿಸುವಂತೆ ಮಾಡಿದ್ದಾರೆ.
- Verse 26: ಒಂದು ಅಂಗಕ್ಕೆ ನೋವಾದರೆ, ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ನಲಿವಾದರೆ, ಮಿಕ್ಕೆಲ್ಲಾ ಅಂಗಗಳು ಅದರೊಡನೆ ಸೇರಿ ನಲಿದಾಡುತ್ತವೆ.
- Verse 27: ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ.
- Verse 28: ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು, ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾಪಂಡಿತರನ್ನು ನೇಮಿಸಿದ್ದಾರೆ.
- Verse 29: ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ,
- Verse 30: ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ.
- Verse 31: ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ: