ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರಕಟನೆ
7ನೇ ಅಧ್ಯಾಯ
- Verse 1: ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ; ನಾಲ್ಕುಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿದ್ದರು. ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ, ಮರಗಳ ಮೇಲಾಗಲಿ ಗಾಳಿಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ಅವರು ತಡೆಹಿಡಿದಿದ್ದರು.
- Verse 2: ಆಗ ಪೂರ್ವದಿಕ್ಕಿನಿಂದ ಮತ್ತೊಬ್ಬ ದೇವದೂತನು ಏರಿಬಂದನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ:
- Verse 3: “ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
- Verse 4: ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕುಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಮಂದಿ. ಅವರ ಬಿಡಿ ಸಂಖ್ಯೆ ಹೀಗಿತ್ತು :
- Verse 5: ಯೂದನ ಕುಲದಿಂದ ಹನ್ನೆರಡು ಸಾವಿರ ರೂಬೇನನ ಕುಲದಿಂದ ಹನ್ನೆರಡು ಸಾವಿರ ಗಾದನ ಕುಲದಿಂದ ಹನ್ನೆರಡು ಸಾವಿರ
- Verse 6: ಅಷೇರನ ಕುಲದಿಂದ ಹನ್ನೆರಡು ಸಾವಿರ ನೆಫ್ತಲೀಮನ ಕುಲದಿಂದ ಹನ್ನೆರಡು ಸಾವಿರ ಮನಸ್ಸೆಯ ಕುಲದಿಂದ ಹನ್ನೆರಡು ಸಾವಿರ
- Verse 7: ಸಿಮೆಯೋನನ ಕುಲದಿಂದ ಹನ್ನೆರಡು ಸಾವಿರ ಲೇವಿಯ ಕುಲದಿಂದ ಹನ್ನೆರಡು ಸಾವಿರ ಇಸ್ಸಾಕರನ ಕುಲದಿಂದ ಹನ್ನೆರಡು ಸಾವಿರ
- Verse 8: ಜೆಬುಲೋನನ ಕುಲದಿಂದ ಹನ್ನೆರಡು ಸಾವಿರ ಜೋಸೆಫನ ಕುಲದಿಂದ ಹನ್ನೆರಡು ಸಾವಿರ ಬೆನ್ಯಮೀನನ ಕುಲದಿಂದ ಹನ್ನೆರಡು ಸಾವಿರ.
- Verse 9: ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ; ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು.
- Verse 10: ಅವರು ಗಟ್ಟಿಯಾದ ಧ್ವನಿಯಿಂದ : “ಸಿಂಹಾಸನಾರೂಢರಾದ ದೇವರಿಂದ, ಬಲಿಯರ್ಪಿತರಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ಧಾರ,” ಎಂದು ಹಾಡಿದರು.
- Verse 11: ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರಮಾಡಿ,
- Verse 12: “ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ, ಆಮೆನ್,” ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು.
- Verse 13: ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನನ್ನು ಪ್ರಶ್ನಿಸಿದನು.
- Verse 14: ಅದಕ್ಕೆ ನಾನು, “ಸ್ವಾಮೀ ನೀವೇ ಬಲ್ಲಿರಿ,” ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು : “ಇವರು ಆ ಭೀಕರ ಹಿಂಸೆಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.
- Verse 15: ‘ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ.
- Verse 16: ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ.
- Verse 17: ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ', “ ಎಂದು ನನಗೆ ತಿಳಿಸಿದನು.