ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರಕಟನೆ
21ನೇ ಅಧ್ಯಾಯ
- Verse 1: ತರುವಾಯ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮುದ್ರವು ಇನ್ನಿಲ್ಲವಾಯಿತು.
- Verse 2: ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು.
- Verse 3: ಆಗ ಸಿಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು : ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ ಪ್ರಜೆಗಳಾಗುವರು; ದೇವರೇ ಅವರುಗಳ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ.
- Verse 4: ಒರಸುವನಾತ ಅವರ ಕಂಬನಿಯನೆಲ್ಲಾ ಇರದಿನ್ನು ಸಾವುನೋವು ಅವರಿಗೆಲ್ಲಾ; ಇರವು ಶೋಕ ದುಃಖಗಳಾವುವು ಮರೆಯಾಗಿ ಹೋದವು ಹಿಂದಿನದೆಲ್ಲವು.”
- Verse 5: ಸಿಂಹಾಸನಾರೂಢನಾಗಿದ್ದವನು ಆಗ, “ಇಗೋ, ನಾನೆಲ್ಲವನ್ನೂ ಹೊಸದಾಗಿಸುತ್ತೇನೆ,” ಎಂದನು. ಅಲ್ಲದೆ ಅವನು, “ಇದನ್ನು ನೀನು ಬರೆ, ಈ ಮಾತುಗಳು ಸತ್ಯವಾದುವು ಹಾಗೂ ವಿಶ್ವಾಸಾರ್ಹವಾದುವು,” ಎಂದು ಹೇಳಿದನು.
- Verse 6: ಸಿಂಹಾಸನಾರೂಢನಾಗಿದ್ದವನು ನನಗೆ ಮತ್ತೂ ಹೇಳಿದ್ದೇನೆಂದರೆ : ಮುಗಿಸಿದ್ದಾಯಿತು, ‘ಅ'ಕಾರವೂ ‘ಳ'ಕಾರವೂ ನಾನೇ; ಆದಿಯೂ ಅಂತ್ಯವೂ ನಾನೇ; ಬಾಯಾರಿದವರಿಗೆ ಕೊಡುವೆ, ಜೀವಜಲವನು ಉಚಿತವಾಗಿಯೇ.
- Verse 7: ಜಯಶಾಲಿಯಾದವನು ಆಗುವನು ಇದಕ್ಕೆಲ್ಲಾ ಬಾಧ್ಯನು ನಾನವನಿಗೆ ದೇವನಾಗಿರುವೆನು ಅವನೆನಗೆ ಪುತ್ರನಾಗಿರುವನು.
- Verse 8: ಆದರೆ ಹೇಡಿಗಳಿಗೆ, ಹೇಯಕೃತ್ಯಗಾರರಿಗೆ ಅವಿಶ್ವಾಸಿಗಳಿಗೆ, ಹಲವು ಅಸತ್ಯಗಾರರಿಗೆ ಕಾಮುಕರಿಗೆ, ಕೊಲೆಗಾರರಿಗೆ ವಿಗ್ರಹಾರಾಧಕರಿಗೆ, ಮಾಟಮಂತ್ರಗಾರರಿಗೆ ಗಂಧಕದಿಂದುರಿಯುವ ಅಗ್ನಿಸರೋವರವೇ ಗತಿ ಇದುವೇ ಅವರೆಲ್ಲರ ಎರಡನೆಯ ಮೃತಿ.” ಎಂದು ಹೇಳಿದನು.
- Verse 9: ಏಳು ಅಂತಿಮ ವಿಪತ್ತುಗಳಿಂದ ತುಂಬಿದ್ದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು.
- Verse 10: ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು;
- Verse 11: ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.
- Verse 12: ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು.
- Verse 13: ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.
- Verse 14: ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.
- Verse 15: ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಕೋಟೆಗಳನ್ನೂ ಅಳತೆಮಾಡುವುದಕ್ಕಾಗಿ ಒಂದು ಚಿನ್ನದ ಅಳತೆಗೋಲನ್ನು ಹಿಡಿದಿದ್ದನು.
- Verse 16: ಆ ನಗರ ಚಚ್ಚೌಕವಾಗಿತ್ತು. ಅದರ ಚದರ ಅಳತೆ 2,400 ಕಿಲೊಮೀಟರುಗಳಷ್ಟಿತ್ತು.
- Verse 17: ಅನಂತರ, ಆತನು ನಗರದ ಕೋಟೆಯನ್ನು ಅಳೆದನು. ಅದು ಆತನು ಅಳೆದ ಆಳತೆಯ ಪ್ರಮಾಣದಲ್ಲಿ ಅರವತ್ತು ಮೀಟರಿನಷ್ಟು ಎತ್ತರವಾಗಿತ್ತು.
- Verse 18: ಆ ಕೋಟೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವು ಅಪ್ಪಟ ಬಂಗಾರದಂತೆ ಥಳಥಳಿಸುತ್ತಿತ್ತು.
- Verse 19: ನಗರದ ಕೋಟೆಯ ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿತ್ತು. ಮೊದಲನೆಯ ಅಸ್ತಿವಾರವನ್ನು ಸೂರ್ಯಕಾಂತ ಶಿಲೆಯಿಂದಲೂ ಎರಡನೆಯ ಅಸ್ತಿವಾರವನ್ನು ವೈಢೂರ್ಯದಿಂದಲೂ ಮೂರನೆಯ ಅಸ್ತಿವಾರವನ್ನು ಪಚ್ಚೆಯಿಂದಲೂ ಮತ್ತು ನಾಲ್ಕನೆಯ ಅಸ್ತಿವಾರವನ್ನು ಪದ್ಮರಾಗದಿಂದಲೂ ಅಲಂಕೃತಗೊಳಿಸಲಾಗಿತ್ತು.
- Verse 20: ಅಂತೆಯೇ, ಐದನೆಯ ಅಸ್ತಿವಾರವನ್ನು ಗೋಮೇಧಿಕದಿಂದಲೂ ಆರನೆಯದನ್ನು ಮಾಣಿಕ್ಯದಿಂದಲೂ ಏಳನೆಯದನ್ನು ಪೀತರತ್ನದಿಂದಲೂ ಎಂಟನೆಯದನ್ನು ಬೆರುಲ್ಲದಿಂದಲೂ ಒಂಬತ್ತನೆಯದನ್ನು ಪುಷ್ಯರಾಗದಿಂದಲೂ ಹತ್ತನೆಯದನ್ನು ಗರುಡ ಪಚ್ಚೆಯಿಂದಲೂ ಹನ್ನೊಂದನೆಯದನ್ನು ಇಂದ್ರನೀಲದಿಂದಲೂ ಹಾಗೂ ಹನ್ನೆರಡನೆಯದನ್ನು ನೀಲಸ್ಪಟಿಕದಿಂದಲೂ ಅಲಂಕೃತಗೊಳಿಸಲಾಗಿತ್ತು.
- Verse 21: ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಹೆಬ್ಬಾಗಿಲನ್ನು ಒಂದೊಂದು ಮುತ್ತಿನಿಂದ ಮಾಡಲಾಗಿತ್ತು. ನಗರದ ಬೀದಿ ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
- Verse 22: ಆ ನಗರದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ; ಏಕೆಂದರೆ, ಸರ್ವಶಕ್ತ ದೇವರಾದ ಪ್ರಭುವೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ.
- Verse 23: ನಗರಕ್ಕೆ ಬೆಳಕನ್ನು ಕೊಡಲು ಸೂರ್ಯನ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು; ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ.
- Verse 24: ಅದರ ಬೆಳಕಿನಲ್ಲಿ ಸರ್ವಜನಾಂಗಗಳು ಸಂಚರಿಸುವರು. ಭೂರಾಜರು ತಮ್ಮ ಸಿರಿಸಂಪತ್ತನ್ನು ಅಲ್ಲಿಗೆ ತರುವರು.
- Verse 25: ಹಗಲಿನಲ್ಲಿ ಅದರ ಹೆಬ್ಬಾಗಿಲುಗಳನ್ನು ಮುಚ್ಚುವಂತಿಲ್ಲ. ರಾತ್ರಿಯೆಂಬುದು ಅಲ್ಲಿ ಇಲ್ಲವೇ ಇಲ್ಲ.
- Verse 26: ರಾಷ್ಟ್ರಗಳ ಸಿರಿಸಂಪತ್ತನ್ನೂ ಘನಮಾನವನ್ನೂ ಅಲ್ಲಿಗೆ ತರಲಾಗುವುದು.
- Verse 27: ಆದರೆ ಅಶುದ್ಧವಾದುದು ಯಾವುದೂ ಅದನ್ನು ಸೇರಲಾರದು. ಅಂತೆಯೇ, ಹೇಯ ಕೃತ್ಯಗಳನ್ನೆಸಗುವವನೂ ಅಸತ್ಯವನ್ನು ಆಡುವವನೂ ಅದನ್ನು ಸೇರಲಾರನು. ಯಜ್ಞದ ಕುರಿಮರಿಯ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳು ಲಿಖಿತವಾಗಿವೆಯೋ ಅಂಥವರು ಮಾತ್ರ ಅದನ್ನು ಪ್ರವೇಶಿಸಬಲ್ಲರು.