पवित्र बाइबिल
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
32ನೇ ಅಧ್ಯಾಯ
1 : ಈ ಧಾರ್ಮಿಕ ಸುಧಾರಣೆಗಳಾದ ನಂತರ ಅಸ್ಸೀರಿಯಾದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಜುದೇಯಕ್ಕೆ ನುಗ್ಗಿದನು. ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಮುತ್ತಿಗೆ ಹಾಕಿದನು.
2 : ನಾಡಿನೊಳಗೆ ನುಗ್ಗಿದ ಸನ್ಹೇರೀಬನು ಜೆರುಸಲೇಮಿನ ಮೇಲೂ ಯುದ್ಧಕ್ಕೆ ಬರಲು ನಿಶ್ಚಯಿಸಿದ್ದಾನೆಂದು ಹಿಜ್ಕೀಯನಿಗೆ ಗೊತ್ತಾಯಿತು.
3 : ಅವನು ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸಬೇಕೆಂದು ಮನಸ್ಸುಮಾಡಿ ತನ್ನ ಪ್ರಮುಖರ ಮತ್ತು ಶೂರರ ಮುಂದೆ ಆ ಪ್ರಸ್ತಾಪವೆತ್ತಿ ಅವರ ಸಹಾಯವನ್ನು ಪಡೆದುಕೊಂಡನು.
4 : ಆಗ ಅನೇಕರು ಸೇರಿ, “ಇಲ್ಲಿಗೆ ಬರುವ ಅಸ್ಸೀರಿಯದ ರಾಜನಿಗೆ ಬೇಕಾದಷ್ಟು ನೀರು ಏಕೆ ಸಿಕ್ಕಬೇಕು?,” ಎಂದುಕೊಂಡು ಎಲ್ಲಾ ಬಾವಿಗಳನ್ನೂ ನಾಡಿನ ಮಧ್ಯದಲ್ಲಿ ಹರಿಯುವ ಹಳ್ಳವನ್ನೂ ಮುಚ್ಚಿಬಿಟ್ಟರು.
5 : ಇದರಿಂದ ಅರಸನು ಧೈರ್ಯಗೊಂಡು, ಅಲ್ಲಲ್ಲಿ ಬಿದ್ದುಹೋಗಿದ್ದ ಪೌಳಿಗೋಡೆಯನ್ನು ದುರಸ್ತಿಮಾಡಿಸಿ, ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿದನು. ದಾವೀದ ನಗರದ ಮಿಲ್ಲೋ ಕೋಟೆಯನ್ನು ಭದ್ರಪಡಿಸಿದನು. ಅನೇಕ ಆಯುಧಗಳನ್ನೂ ಗುರಾಣಿಗಳನ್ನೂ ಮಾಡಿಸಿದನು.
6 : ಅನಂತರ ಅವನು ಜನರ ಮೇಲೆ ಸೇನಾಪತಿಗಳನ್ನು ನೇಮಿಸಿ ಅವರನ್ನು ಊರುಬಾಗಿಲಿನ ಬಯಲಿನಲ್ಲಿ ಕೂಡಿಸಿದನು. ಅವರಿಗೆ, “ಶೂರರಾಗಿರಿ, ಧೈರ್ಯದಿಂದಿರಿ;
7 : ಅಸ್ಸೀರಿಯದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಸೈನ್ಯಕ್ಕೂ ಅಂಜಬೇಡಿ, ಕಳವಳಪಡಬೇಡಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯ ದೊಡ್ಡದು.
8 : ಅವನಿಗಿರುವ ಸಹಾಯ ಮೂಳೆ ಮಾಂಸದ ತಡಿಕೆಯ ಬಲ; ನಮಗಿದ್ದಾರೆ ನಮ್ಮ ದೇವರಾದ ಸರ್ವೇಶ್ವರ. ಅವರೇ ನಮಗೆ ನೆರವಾಗಿ, ಯುದ್ಧಗಳಲ್ಲಿ ನಮ್ಮ ಪರವಾಗಿ ಕಾದಾಡುವರು,” ಎಂದು ಹೇಳಿ ಹುರಿದುಂಬಿಸಿದನು. ಜನರು ಜುದೇಯದ ಅರಸ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.
9 : ಇದಾದ ಮೇಲೆ, ಸರ್ವಸೇನೆಯೊಡನೆ ಲಾಕೀಷಿನ ಎದುರಿನಲ್ಲಿ ಪಾಳೆಯಮಾಡಿಕೊಂಡು ಇದ್ದ ಅಸ್ಸೀರಿಯದ ಅರಸ ಸನ್ಹೇರೀಬನು ತನ್ನ ಮುಖಾಂತರ ಜುದೇಯದ ಅರಸ ಹಿಜ್ಕೀಯನಿಗೂ ಜೆರುಸಲೇಮಿನಲ್ಲಿದ್ದ ಎಲ್ಲಾ ಯೆಹೂದ್ಯರಿಗೂ ಹೀಗೆಂದು ಹೇಳಿಸಿದನು:
10 : “ಅಸ್ಸೀರಿಯದ ಅರಸ ಸನ್ಹೇರೀಬನ ಮಾತಿಗೆ ಕಿವಿಗೊಡಿ; ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಜೆರುಸಲೇಮಿನಲ್ಲಿ ನಿಂತಿದ್ದೀರಿ?
11 : ಹಿಜ್ಕೀಯನು, ‘ನಮ್ಮ ದೇವರಾದ ಸರ್ವೇಶ್ವರಸ್ವಾಮಿ ಅಸ್ಸೀರಿಯಾದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು,’ ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕೇ ಅಲ್ಲದೆ ಮತ್ತೇನಕ್ಕೂ ಅಲ್ಲ.
12 : ಹಿಜ್ಕೀಯನು ಒಂದೇ ಬಲಿಪೀಠದ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ ಜೆರುಸಲೇಮಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿದನು ಅಲ್ಲವೆ?
13 : ನಾನೂ ನನ್ನ ತಂದೆತಾತಂದಿರೂ ಎಲ್ಲಾ ದೇಶಗಳ ಜನಾಂಗಗಳಿಗೆ ಮಾಡಿದ್ದನ್ನು ನೀವು ಕೇಳಲಿಲ್ಲವೋ? ಆ ಜನಾಂಗಗಳ ದೇವತೆಗಳಿಗೆ ಅವರ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸುವುದಕ್ಕೆ ಶಕ್ತಿಯಿತ್ತೋ?
14 : ನನ್ನ ತಂದೆತಾತಂದಿರು ನಾಶಮಾಡಿಬಿಟ್ಟ ಆ ರಾಜ್ಯಗಳ ದೇವರುಗಳಲ್ಲಿ ಯಾವನು ತಾನೆ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸುವುದಕ್ಕೆ ಸಮರ್ಥನಾಗಿದ್ದನು? ಹೀಗಿರುವಲ್ಲಿ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವುದಕ್ಕೆ ಶಕ್ತನಾಗಿರುತ್ತಾನೋ?
15 : ನೀವು ಹಿಜ್ಕೀಯನಿಂದ ಮರುಳಾಗಿ ಮೋಸಹೋಗಬೇಡಿ; ಅವನನ್ನು ನಂಬಲೂಬೇಡಿ. ಯಾವ ರಾಜ್ಯಜನಾಂಗಗಳ ದೇವತೆಯೂ ತನ್ನ ಪ್ರಜೆಯನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆಹೋದರು. ಅಂದ ಮೇಲೆ, ನಿಮ್ಮ ದೇವರಂಥವನು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಬಲ್ಲನೇ?".
16 : ದೇವರಾದ ಸರ್ವೇಶ್ವರನಿಗೂ ಅವರ ಸೇವಕನಾದ ಹಿಜ್ಕೀಯನಿಗೂ ವಿರೋಧವಾದ ಈ ಮೊದಲಾದ ಮಾತುಗಳನ್ನು ಸನ್ಹೇರೀಬನು ತನ್ನ ಸೇವಕರ ಮುಖಾಂತರ ಹೇಳಿಕಳುಹಿಸಿದ್ದನು;
17 : ಅಷ್ಟುಮಾತ್ರವಲ್ಲ, ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ನಿಂದಿಸಿ ದೂಷಿಸುವುದಕ್ಕಾಗಿ ‘ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆಹೋದಂತೆ ಹಿಜ್ಕೀಯನ ದೇವರೂ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸಲಾರನು’ ಎಂಬುದಾಗಿ ಪತ್ರದಲ್ಲಿ ಬರೆದು ಕಳುಹಿಸಿದ್ದನು.
18 : ಜೆರುಸಲೇಮಿಗೆ ಬಂದ ಆ ಅಸ್ಸೀರಿಯದವರು ಗೋಡೆಯ ಮೇಲಿದ್ದ ಜನರನ್ನು ಬೆದರಿಸಿ, ಅಂಜಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು
19 : ಜೆರುಸಲೇಮಿನ ದೇವರು ಮನುಷ್ಯರ ಕೈಕೆಲಸವಾಗಿರುವ ಅನ್ಯದೇಶಗಳ ಜನರ ದೇವತೆಗಳಿಗೆ ಸಮಾನನಾಗಿರುತ್ತಾನೆ, ಎಂಬ ಅರ್ಥದಲ್ಲಿ ಅವರ ಬಗ್ಗೆ ಗಟ್ಟಿಯಾಗಿ ಕೂಗಿ ಹೇಳಿದರು; ಆ ಜನರೊಡನೆ ಹಿಬ್ರುಭಾಷೆಯಲ್ಲೆ ಮಾತಾಡಿದರು.
20 : ಈ ಕಾರಣ ಅರಸ ಹಿಜ್ಕೀಯನು ಹಾಗು ಆಮೋಚನ ಮಗ ಯೆಶಾಯನೆಂಬ ಪ್ರವಾದಿಯು ಪರಲೋಕಕ್ಕೆ ಮೊರೆಯಿಟ್ಟು ಪ್ರಾರ್ಥಿಸಿದರು. ಸರ್ವೇಶ್ವರಸ್ವಾಮಿ ದೂತನನ್ನು ಕಳುಹಿಸಿ
21 : ಅಸ್ಸೀರಿಯದ ಅರಸನ ದಂಡಿನಲ್ಲಿದ್ದ ಎಲ್ಲ ಶೂರರನ್ನೂ ನಾಯಕರನ್ನೂ ಅಧಿಪತಿಗಳನ್ನೂ ಸಂಹರಿಸಿದರು; ಆ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದರು.
22 : ಹೀಗೆ ಸರ್ವೇಶ್ವರ, ಹಿಜ್ಕೀಯನನ್ನೂ ಜೆರುಸಲೇಮಿನವರನ್ನೂ ಅಸ್ಸೀರಿಯದ ಅರಸ ಸನ್ಹೇರೀಬನ ಕೈಗೂ ಸುತ್ತಲಿನ ಎಲ್ಲ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡುತ್ತಿದ್ದರು.
23 : ಅನೇಕರು ಸರ್ವೇಶ್ವರನಿಗೆ ಕಾಣಿಕೆಗಳನ್ನೂ ಜುದೇಯದ ಅರಸ ಹಿಜ್ಕೀಯನಿಗೆ ಶ್ರೇಷ್ಠವಸ್ತುಗಳನ್ನೂ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲ ರಾಷ್ಟ್ರಗಳವರು ಹಿಜ್ಕೀಯನನ್ನು ಮಹಾನ್ವ್ಯಕ್ತಿಯೆಂದು ಸನ್ಮಾನಿಸುತ್ತಿದ್ದರು.
24 : ಕ್ರಮೇಣ ಹಿಜ್ಕೀಯನು ಮರಣಕರ ರೋಗಕ್ಕೆ ಗುರಿಯಾದನು. ಆಗ ಅವನು ದೇವರನ್ನು ಪ್ರಾರ್ಥಿಸಲು ಅವರು ಸದುತ್ತರವನ್ನು ದಯಪಾಲಿಸಿ ಅವನಿಗೆ ಒಂದು ಗುರುತನ್ನು ಅನುಗ್ರಹಿಸಿದರು.
25 : ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದ್ದರಿಂದ ಜುದೇಯದ ಮೇಲೂ ಜೆರುಸಲೇಮಿನವರ ಮೇಲೂ ದೇವರ ಕೋಪವೆರಗಿತು.
26 : ಆಗ ಹಿಜ್ಕೀಯನ ಗರ್ವ ಇಳಿಯಿತು; ಜೆರುಸಲೇಮಿನವರೊಡನೆ ಅವನು ದೀನಮನಸ್ಕನಾದನು. ಈ ಕಾರಣ ಅವನ ಜೀವಮಾನದಲ್ಲಿ ಸರ್ವೇಶ್ವರನ ಕೋಪ ಅವರ ಮೇಲೆ ಬರಲಿಲ್ಲ.
27 : ಹಿಜ್ಕೀಯನಿಗೆ ಅತ್ಯಧಿಕವಾದ ಧನಘನತೆಗಳು ಒದಗಿದವು; ಅವನು ಬೆಳ್ಳಿಬಂಗಾರ, ರತ್ನ, ಪರಿಮಳ ದ್ರವ್ಯ, ಗುರಾಣಿ ಮುಂತಾದ ಶ್ರೇಷ್ಠಾಯುಧಗಳನ್ನು ಇಡುವುದಕ್ಕಾಗಿ ಭಂಡಾರಗಳನ್ನು ಏರ್ಪಡಿಸಿದನು. ಧಾನ್ಯ, ದ್ರಾಕ್ಷಾರಸ, ಎಣ್ಣೆ, ಇವುಗಳನ್ನು ಸಂಗ್ರಹಿಸುವುದಕ್ಕಾಗಿ ಉಗ್ರಾಣಗಳನ್ನು ಕಟ್ಟಿಸಿದನು;
28 : ಆಯಾಜಾತಿಯ ಪಶುಗಳಿಗಾಗಿ ಕೊಟ್ಟಿಗೆಯನ್ನೂ ಆಡುಕುರಿಗಳಿಗಾಗಿ ಹಟ್ಟಿಗಳನ್ನೂ ಸಿದ್ಧಮಾಡಿಸಿಕೊಂಡನು.
29 : ಇದಲ್ಲದೆ, ಪಟ್ಟಣಗಳನ್ನು ಕಟ್ಟಿಸಿ ದನಕುರಿಗಳ ದೊಡ್ಡ ಹಿಂಡುಗಳನ್ನು ಸಂಪಾದಿಸಿಕೊಂಡನು. ದೇವರು ಅವನಿಗೆ ಕೊಟ್ಟ ಸಂಪತ್ತು ಅಪರಿಮಿತವಾಗಿತ್ತು.
30 : ಮೇಲಣ ಗೀಹೋನ್ ಎಂಬ ಬುಗ್ಗೆಗೆ ಕಟ್ಟೆಕಟ್ಟಿಸಿ ಅದರ ನೀರು ನೆಟ್ಟಗೆ ದಾವೀದನಗರದ ಪೂರ್ವದಿಕ್ಕಿನ ಕಣಿವೆಗೆ ಹರಿಯುವಂತೆ ಮಾಡಿದವನು ಹಿಜ್ಕೀಯನೇ. ಅವನು ತನ್ನ ಎಲ್ಲ ಕಾರ್ಯಗಳಲ್ಲೂ ಯಶಸ್ವಿ ಆದನು.
31 : ಆದುದರಿಂದ ಅವನ ನಾಡಿನಲ್ಲಾದ ಅದ್ಭುತಕರವಾದ ಮಾರ್ಪಾಟುಗಳನ್ನು ಪರಿಶೀಲಿಸುವುದಕ್ಕಾಗಿ ಬಾಬಿಲೋನಿಯದ ಅಧಿಪತಿಗಳು ರಾಯಭಾರಿಗಳನ್ನು ಅವನ ಬಳಿಗೆ ಕಳುಹಿಸಿದರು. ಅವರು ಬಂದಾಗ, ಅವನನ್ನು ಪರೀಕ್ಷಿಸುವುದಕ್ಕಾಗಿ ಹಾಗು ಅವನ ಅಂತರಾಳವನ್ನು ತಿಳಿದುಕೊಳ್ಳುವುದಕ್ಕಾಗಿ ದೇವರು ಅವನನ್ನು ಕೈಬಿಟ್ಟರು.
32 : ಹಿಜ್ಕೀಯನ ಉಳಿದ ಚರಿತ್ರೆಯನ್ನೂ ಅವನ ಭಕ್ತಿಕಾರ್ಯಗಳನ್ನೂ ಆಮೋಚನ ಮಗ ಯೆಶಾಯನ ದರ್ಶನ ಗ್ರಂಥದಲ್ಲಿ ಹಾಗು ಯೆಹೂದ್ಯರ ಮತ್ತು ಇಸ್ರಯೇಲರ ರಾಜಗ್ರಂಥದಲ್ಲಿ ಬರೆಯಲಾಗಿದೆ.
33 : ಹಿಜ್ಕೀಯನು ಮೃತನಾಗಿ ಪಿತೃಗಳ ಬಳಿಗೆ ಸೇರಲು, ಅವನ ಶವವನ್ನು ದಾವೀದವಂಶದವರ ಕುಟುಂಬದ ಸ್ಮಶಾನಭೂಮಿಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನ ಶವಸಂಸ್ಕಾರ ನಡೆಯುವಾಗ ಎಲ್ಲಾ ಯೆಹೂದ್ಯರೂ ಜೆರುಸಲೇಮಿನವರೂ ಅವನನ್ನು ಬಹಳವಾಗಿ ಸನ್ಮಾನಿಸಿದರು. ಅವನಿಗೆ ಬದಲಾಗಿ ಅವನ ಮಗ ಮನಸ್ಸೆ ಅರಸನಾದನು.