P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
27ನೇ ಅಧ್ಯಾಯ
- Verse 1: ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I ನಾನಾರಿಗೂ ಅಳುಕೆನು II ನನ್ನ ಬಾಳಿಗಾಧಾರ ಪ್ರಭುವೆ I ನಾನಾರಿಗೂ ಅಂಜೆನು II
- Verse 2: ಕೇಡು ಮಾಡಬಂದರೆನಗೆ ಕೊಲೆಗಡುಕರು I ಎಡವಿಬಿದ್ದರು, ತಾವೇ ಅಳಿದುಹೋದರು II
- Verse 3: ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II
- Verse 4: ನಾನೊಂದನು ಕೋರಿದೆ ಪ್ರಭುವಿನಿಂದ I ನಾನದನ್ನೇ ನಿರೀಕ್ಷಿಸಿದೆ ಆತನಿಂದ : I ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II
- Verse 5: ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II
- Verse 6: ಸುತ್ತಲು ನೆರೆದಿಹ ಶತ್ರುಗಳ ನಡುವೆ ತಲೆಯೆತ್ತಿ ನಡೆವೆನು I ದೇವಾಲಯದೊಳು ಜಯಜಯ ಘೋಷದೊಡನೆ ಬಲಿಗಳನರ್ಪಿಸುವೆನು I ಪ್ರಭುವಿಗೆ ಹಾಡುವೆನು, ವಾದ್ಯ ನುಡಿಸುತ ಕೊಂಡಾಡುವೆನು II
- Verse 7: ಪ್ರಭೂ, ನಿನಗೆ ಮೊರೆಯಿಡುವೆನು I ಕರುಣಿಸೆನಗೆ ಸದುತ್ತರವನು II
- Verse 8: “ಅರಸೆನ್ನ ಮುಖದರುಶನವನು", ಎಂದೆ ನೀನು I “ಅರಸುವೆನು ಅದನೆ", ಎಂದು ಮರುನುಡಿದೆ ನಾನು II
- Verse 9: ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II
- Verse 10: ಹೆತ್ತವರು ತೊರೆದುಬಿಟ್ಟರೇನು I ಕರ್ತನು ಪೊರೆಯದಿರನು ನನ್ನನು II
- Verse 11: ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು I ಶತ್ರುರಹಿತ ಹಾದಿಯಲಿ ನಡೆಸು ಎನ್ನನು II
- Verse 12: ತಳ್ಳಬೇಡೆನ್ನನು ವೈರಿಗಳ ವಶಕ್ಕೆ I ಸುಳ್ಳುಸಾಕ್ಷಿಗಳು, ಕ್ರೂರಿಗಳವರೆನಗೆ II
- Verse 13: ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II
- Verse 14: ಪ್ರಭುವನು ಎದುರುನೋಡುತ್ತಿರು ಮನವೇ I ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ II