ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
16ನೇ ಅಧ್ಯಾಯ
- Verse 1: ಆರೋನನ ಇಬ್ಬರು ಮಕ್ಕಳು ಸರ್ವೇಶ್ವರ ಸ್ವಾಮಿಯ ಸನ್ನಿಧಿಗೆ ಬಂದು ನಾಶವಾದ ಮೇಲೆ
- Verse 2: ಮೋಶೆಯ ಸಂಗಡ ಸರ್ವೇಶ್ವರ ಮಾತಾಡಿ ಹೇಳಿದ್ದೇನೆಂದರೆ - “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ, ಮಹಾಪವಿತ್ರ ಸ್ಥಾನದೊಳಕ್ಕೆ ಮಂಜೂಷದ ಮೇಲಿನ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ಬಂದರೆ ನಾಶವಾಗುವನು. ಏಕೆಂದರೆ ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವೆನು.
- Verse 3: ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಈ ರೀತಿಯಾಗಿ ಬರಬೇಕು. ದೋಷಪರಿಹಾರಕ ಬಲಿಗಾಗಿ ಹೋರಿಯನ್ನೂ ದಹನಬಲಿಗಾಗಿ ಟಗರನ್ನೂ ತರಬೇಕು.
- Verse 4: ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು ನಾರಿನ ಚಡ್ಡಿಯನ್ನು ಹಾಕಿಕೊಂಡು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ತಲೆಗೆ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
- Verse 5: ಇಸ್ರಯೇಲರ ಸಮಾಜದಿಂದ ದೋಷಪರಿಹಾರಕ ಬಲಿಗಾಗಿ ಎರಡು ಹೋತಗಳನ್ನೂ ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಂಡು ಬರಬೇಕು.
- Verse 6: ಆರೋನನು ತನಗಾಗಿ ತಂದ ಹೋರಿಯನ್ನು ಸಮರ್ಪಿಸಿ ತನ್ನ ಹಾಗು ತನ್ನ ಮನೆತನದವರ ಪರವಾಗಿ ಪಶ್ಚಾತ್ತಾಪ ವಿಧಿಯನ್ನು ನೆರವೇರಿಸಬೇಕು.
- Verse 7: ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
- Verse 8: ಆಗ ಅವನು ಆ ಹೋತಗಳಲ್ಲಿ ಯಾವುದು ಸರ್ವೇಶ್ವರನಿಗೆ, ಯಾವುದು ಅಜಾಜೇಲನಿಗೆ ಎಂದು ತಿಳಿದುಕೊಳ್ಳಲು ದಾಳಹಾಕಬೇಕು.
- Verse 9: ಯಾವ ಹೋತ ಸರ್ವೇಶ್ವರನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಬಲಿಗಾಗಿ ಸಮರ್ಪಿಸಬೇಕು.
- Verse 10: ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷ ಹೊರಿಸಿ, ಮರುಭೂಮಿಗೆ ಅಜಾಜೇಲನಿಗಾಗಿ ಬಿಡಿಸಿಬಿಡಬೇಕು.
- Verse 11: ಆರೋನನು ತನಗಾಗಿ ದೋಷಪರಿಹಾರಕ ಬಲಿಯ ಹೋರಿಯನ್ನು ಸಮರ್ಪಿಸಿ ತನ್ನ ಹಾಗು ತನ್ನ ಮನೆತನದವರ ಪರವಾಗಿ ಪ್ರಾಯಶ್ಚಿತ್ತ ವಿಧಿಯನ್ನು ನೆರವೇರಿಸಬೇಕು.
- Verse 12: ಅವನು ತನಗೋಸ್ಕರವಾದ ಆ ಹೋರಿಯನ್ನು ವಧಿಸಿದ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ ಪರಿಮಳ ಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ತೆರೆಯನ್ನು ದಾಟಿ,
- Verse 13: ಆ ಧೂಪವನ್ನು ಸರ್ವೇಶ್ವರನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಧೂಪದ ಹೊಗೆ ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಮುಚ್ಚುವುದು.
- Verse 14: ಆಗ ಆ ಹೋರಿಯ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
- Verse 15: ತರುವಾಯ ಅವನು ಜನರ ಪರವಾಗಿ ದೋಷಪರಿಹಾರಕ ಬಲಿಯ ಹೋತವನ್ನು ವಧಿಸಿ ಅದರ ರಕ್ತವನ್ನು ತೆರೆಯೊಳಗೆ ತಂದು ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ ಕೃಪಾಸನದ ಮೇಲೆಯೂ ಎದುರಾಗಿಯೂ ಚಿಮುಕಿಸಬೇಕು.
- Verse 16: ಹೀಗೆ ಇಸ್ರಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೂ ಹಾಗೆಯೇ ದೋಷಪರಿಹಾರ ಮಾಡುವನು.
- Verse 17: ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದೊಳಗೆ ಹೋಗಕೂಡದು. ಹಾಗೆ ತನ್ನ ಹಾಗು ಮನೆತನದವರ ಪರವಾಗಿ ಮತ್ತು ಇಸ್ರಯೇಲರ ಇಡೀ ಸಮಾಜದ ಪರವಾಗಿ ಪ್ರಾಯಶ್ಚಿತ್ತ ಮಾಡುವನು.
- Verse 18: ತರುವಾಯ ಅವನು ಹೊರಗೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿರುವ ಬಲಿಪೀಠದ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲೂ ಆ ಹೋತದ ರಕ್ತದಲ್ಲೂ ಸ್ವಲ್ಪ ಸ್ವಲ್ಪತೆಗೆದುಕೊಂಡು ಪೀಠದ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
- Verse 19: ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಯೇಲರಿಂದ ಅದಕ್ಕುಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
- Verse 20: ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಪೀಠ, ಇವುಗಳಿಗೋಸ್ಕರ ಆರೋನನು ದೋಷಪರಿಹಾರ ಮಾಡಿ ಮುಗಿಸಿದ ಮೇಲೆ, ಆ ಸಜೀವವಾದ ಹೋತವನ್ನು ತರಿಸಿ,
- Verse 21: ಅದರ ತಲೆಯ ಮೇಲೆ ಎರಡು ಕೈಗಳನ್ನೂ ಇಟ್ಟು ಇಸ್ರಯೇಲರ ಎಲ್ಲಾ ಪಾಪಗಳನ್ನೂ ದ್ರೋಹಗಳನ್ನೂ, ಅಪರಾಧಗಳನ್ನೂ, ಸರ್ವೇಶ್ವರನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಮರುಭೂಮಿಗೆ ಕಳಿಸಿಬಿಡಬೇಕು.
- Verse 22: ಆ ಹೋತ ಅವರ ಎಲ್ಲಾ ಪಾಪಗಳನ್ನೂ ತನ್ನ ಮೇಲೆ ಹೊತ್ತುಕೊಂಡು ದುರ್ಗಮವಾದ ಪ್ರದೇಶಕ್ಕೆ ಒಯ್ಯುವಂತೆ ಆ ಮನುಷ್ಯನು ಅದನ್ನು ಮರುಭೂಮಿಗೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
- Verse 23: ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು, ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಟ್ಟು,
- Verse 24: ಪ್ರಾಕಾರದಲ್ಲಿ ಸ್ನಾನಮಾಡಿ ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನ್ನ ಹಾಗು ಜನಸಮೂಹದ ಪರವಾಗಿ ದಹನಬಲಿಗಳನ್ನು ಸಮರ್ಪಿಸಿ ತನ್ನ ಮತ್ತು ಜನರ ಪರವಾಗಿ ಪ್ರಾಯಶ್ಚಿತ್ತ ವಿಧಿಯನ್ನು ನೆರವೇರಿಸಬೇಕು.
- Verse 25: ಅವನು ದೋಷಪರಿಹಾರಕ ಬಲಿಪ್ರಾಣಿಗಳ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಬೇಕು.
- Verse 26: ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
- Verse 27: ದೋಷಪರಿಹಾರಕ ಬಲಿಪ್ರಾಣಿಗಳಾದ ಹೋರಿಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ದೇಹಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಚರ್ಮಮಾಂಸ ಕಲ್ಮಷಗಳೆಲ್ಲವನ್ನೂ ಬೆಂಕಿಯಿಂದ ಸುಡಿಸಿಬಿಡಬೇಕು.
- Verse 28: ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನ ಮಾಡಿಯೇ ಪಾಳೆಯದೊಳಗೆ ಬರಬೇಕು.
- Verse 29: ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ ನಿಮ್ಮಲ್ಲಿ ವಾಸಮಾಡುವ ಅನ್ಯದೇಶದವರೆಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನ ಸಕಲ ವಿಧವಾದ ದುಡಿಮೆಗಳನ್ನೂ ಬಿಟ್ಟು ತಮ್ಮನ್ನೇ ಪರಿತ್ಯಜಿಸಿಕೊಳ್ಳಬೇಕು.
- Verse 30: ಏಕೆಂದರೆ ನೀವು ಪರಿಶುದ್ಧರಾಗುವಂತೆ ಈ ದಿನ ನಿಮ್ಮ ಪರವಾಗಿ ಪ್ರಾಯಶ್ಚಿತ್ತ ಮಾಡಲಾಗುವುದು. ಸರ್ವೇಶ್ವರನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವುವು.
- Verse 31: ಇದು ನಿಮಗೆ ಪೂರ್ತಿ ದುಡಿಮೆ ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸವಿರಬೇಕು; ನಿಮಗಿದು ಶಾಶ್ವತನಿಯಮ.
- Verse 32: ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ನೆರವೇರಿಸಬೇಕು.
- Verse 33: ಅವನೇ ಆ ನಾರುಮಡಿಗಳನ್ನು ಧರಿಸಿಕೊಂಡು ಪರಿಶುದ್ಧವಾದ ದೇವಸ್ಥಾನ, ದೇವದರ್ಶನದ ಗುಡಾರ, ಬಲಿಪೀಠ, ಯಾಜಕರು, ಜನಸಮೂಹದವರು ಈ ಎಲ್ಲರ ಪರವಾಗಿ ಪ್ರಾಯಶ್ಚಿತ್ತ ವಿಧಿಯನ್ನು ನೆರವೇರಿಸಬೇಕು.
- Verse 34: ಇಸ್ರಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ಪ್ರಾಯಶ್ಚಿತ್ತ ಮಾಡಬೇಕಾದುದು ನಿಮಗೆ ಶಾಶ್ವತ ನಿಯಮವಾಗಿರಬೇಕು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.