पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
74ನೇ ಅಧ್ಯಾಯ
- Verse 1: ಹೇ ದೇವಾ, ನಮ್ಮ ನೀಪರಿ ವರ್ಜಿಸಿಬಿಟ್ಟೆ ಏಕೆ? I ನೀ ಪಾಲಿಪ ಮಂದೆಯ ಮೇಲೀಗ ಉರಿಗೋಪವೇಕೆ? II
- Verse 2: ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ ಸಭೆಯನು I ಸ್ಮರಿಸಿಕೊ ಸೊತ್ತಾಗಿ ನೀ ರಕ್ಷಿಸಿಕೊಂಡ ಗೋತ್ರವನು I ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್ ಶಿಖರವನು II
- Verse 3: ಬಿಜಯಮಾಡು ಪಾಳುಬಿದ್ದಿರುವ ಹಳೆಯ ಆಲಯಕೆ I ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ ಕೆಳಕೆ II
- Verse 4: ವೈರಿಗಳಾರ್ಭಟ ನಿನ್ನ ದರ್ಶನಾಲಯದ ಮಧ್ಯೆಯಲಿ I ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ ಪ್ರತಿಯಾಗಿ II
- Verse 5: ಕಾಡಿನಲೋ ಎಂಬಂತೆ ಕೊಡಲಿಯನೆತ್ತಿ ಹಿಡಿದು I ದೇಗುಲದಲಿ ಕೈಗೊಡಲಿ, ಚಮಟಿಗಳ ಪಿಡಿದು I ನಾಶಮಾಡುತಿಹರು ನೋಡು ಕೆತ್ತನೆಗಳ ಕಡಿದು II
- Verse 6: ಕಾಡಿನಲೋ ಎಂಬಂತೆ ಕೊಡಲಿಯನೆತ್ತಿ ಹಿಡಿದು I ದೇಗುಲದಲಿ ಕೈಗೊಡಲಿ, ಚಮಟಿಗಳ ಪಿಡಿದು I ನಾಶಮಾಡುತಿಹರು ನೋಡು ಕೆತ್ತನೆಗಳ ಕಡಿದು II
- Verse 7: ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ ಮಂದಿರವನು I ಹೊಲಸುಮಾಡಿ, ನೆಲಸಮಮಾಡಿಹರಿದೊ ನಿನ್ನ ದೇಗುಲವನು II
- Verse 8: ‘ನಾಶ ಮಾಡೋಣ ಈ ಜನರನು’ ಎಂದಾಡಿಕೊಂಡಿಹರು I ದೇಶದ ಸಭಾಮಂದಿರಗಳನ್ನೆಲ್ಲ ಭಸ್ಮಮಾಡಿಹರು II
- Verse 9: ಆರಾಧನಾ ಚಿಹ್ನೆಗಳಿಲ್ಲ, ಪ್ರವಾದಿಗಳು ನಮಗಿಲ್ಲ I ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ ಇಲ್ಲ II
- Verse 10: ಎಲ್ಲಿಯತನಕ ದೇವಾ, ಶತ್ರುನಿಂದೆಗೆ ನೀ ಗುರಿಯಾಗುವೇ? I ಅನವರತ ನಿನ್ನ ನಾಮವನು ಧಿಕ್ಕರಿಸುವುದು ಸರಿಯೇ? II
- Verse 11: ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ I ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ II
- Verse 12: ಆದಿಯಿಂದ ದೇವಾ, ನೀನೇ ನನಗೆ ಅರಸನು I ಸಾಧಿಸುತ್ತಿರುವೆ ಜಗದೊಳುದ್ಧಾರವನು II
- Verse 13: ಸ್ವಶಕ್ತಿಯಿಂದ ಸಮುದ್ರವನೆ ಭೇದಿಸಿದೆ ನೀನು I ಜಲರಾಶಿಯ ಭುಜಂಗಗಳ ತಲೆ ಜಜ್ಜಿದಾತ ನೀನು II
- Verse 14: ಲೆವಿಯಾತಾನನ ಶಿರಗಳ ಖಂಡನ ಮಾಡಿದವ ನೀನು I ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು II
- Verse 15: ಒರತೆ ಊಟೆಗಳ ಉಕ್ಕಿಸಿದಾತ ನೀನು I ಹರಿವ ನದಿಗಳ ಬತ್ತಿಸಿಬಿಟ್ಟವ ನೀನು II
- Verse 16: ಹಗಲಿರುಳುಗಳಿಗೆ ನಿಯಾಮಕ ನೀನು I ರವಿತಾರೆಗಳ ನಿರ್ಮಾಪಕ ನೀನು II
- Verse 17: ಜಗದೆಲ್ಲೆ ಮೇರೆಗಳನು ನಿಗದಿ ಮಾಡಿದೆ ನೀನು I ಶೀತೋಷ್ಣಕಾಲಗಳನು ನೇಮಿಸಿದವನು ನೀನು II
- Verse 18: ನೆನಪಿರಲಿ ಪ್ರಭು, ಶತ್ರು ನಿನಗೆ ಮಾಡಿದಪಮಾನ I ನಿನ್ನ ಪೂಜ್ಯ ನಾಮಕೆ ದುರುಳರು ಕಕ್ಕಿದ ದೂಷಣ II
- Verse 19: ಕೊಡಬೇಡ ನಿನ್ನ ಬೆಳವಕ್ಕಿಯ ಪ್ರಾಣವ ಕಾಡುಮೃಗಕೆ I ನೀ ಮರೆತುಬಿಡಬೇಡ ನಿನ್ನ ದೀನದಲಿತರನು ಒಮ್ಮೆಗೆ II
- Verse 20: ನಿನ್ನೊಡಂಬಡಿಕೆಯನು ಗಮನವಿಟ್ಟು ಮಾನ್ಯಮಾಡು I ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು II
- Verse 21: ಕುಗ್ಗಿದವರು ಹಿಂದಿರುಗದಿರಲಿ ಅವಮಾನದಿಂದ I ಬಡವರು ಕೀರ್ತಿಸಲಿ ನಿನ್ನ ನಾಮವನು ಭಕ್ತಿಯಿಂದ II
- Verse 22: ಎಚ್ಚೆತ್ತು, ದೇವಾ, ನಡೆಸು ನಿನ್ನ ನ್ಯಾಯವನು I ಗಮನಿಸು, ಅನುದಿನ ದುರ್ಮತಿ ನಿನ್ನ ನಿಂದಿಪುದನು II
- Verse 23: ಮರೆಯದಿರು ನಿನ್ನಾ ವಿರೋಧಿಗಳ ಗದ್ದಲವನು I ವೈರಿಯೆಬ್ಬಿಸುತ್ತಿರುವ ನಿರಂತರ ದೊಂಬಿಯನು II