ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರಕಟನೆ
19ನೇ ಅಧ್ಯಾಯ
- Verse 1: ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಬಂದ ಒಂದು ಮಹಾಶಬ್ದವನ್ನು ಆಲಿಸಿದೆ. ಅದು ದೊಡ್ಡ ಜನಸಮೂಹದ ಆರ್ಭಟದಂತಿತ್ತು. “ಅಲ್ಲೆಲೂಯ ! ಜೀವೋದ್ಧಾರವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲುಂಟು.
- Verse 2: ಆತನ ನ್ಯಾಯತೀರ್ಪು ಸತ್ಯವಾದುದು, ನೀತಿಬದ್ಧವಾದುದು. ಇತ್ತಿರುವನಾತ ತೀರ್ಪನು ಮಹಾ ವೇಶ್ಯೆಯ ವಿರುದ್ಧ ಪೃಥ್ವಿಯನೇ ಹೊಲಸೆಬ್ಬಿಸಿದ ವ್ಯಭಿಚಾರಿಯ ವಿರುದ್ಧ ತನ್ನ ದಾಸರ ರಕ್ತಪಾತದ ಸೇಡನು ತೀರಿಸಿಹನಾತ,” ಎಂದು ಜನಸಮೂಹವು ಘೋಷಿಸಿತು.
- Verse 3: ಅವರು ಮತ್ತೊಮ್ಮೆ, “ಅಲ್ಲೆಲೂಯ ! ಅವಳ ದಹನದಿಂದ ಹೊಗೆ ಸತತ ಮೇಲೇರುತಿಹುದು ಒಂದೇಸಮನೆ,” ಎಂದು ಕೂಗಿದರು.
- Verse 4: ಆಗ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ನಾಲ್ಕು ಜೀವಿಗಳೂ ಸಿಂಹಾಸನಾರೂಢರಾದ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. “ಆಮೆನ್, ಅಲ್ಲೆಲೂಯ,” ಎಂದರು.
- Verse 5: ಬಳಿಕ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿ : “ದೇವರ ಎಲ್ಲಾ ದಾಸರೇ, ಅವರಲ್ಲಿ ಭಯಭಕ್ತಿಯುಳ್ಳ ಹಿರಿಯಕಿರಿಯರೇ, ನಮ್ಮ ದೇವರನ್ನು ಕೊಂಡಾಡಿ,” ಎಂದು ಹೇಳಿತು.
- Verse 6: ತರುವಾಯ ನನಗೆ ಮತ್ತೊಂದು ಧ್ವನಿ ಕೇಳಿಸಿತು. ಅದು ದೊಡ್ಡ, ಜನಸಮೂಹದ ಆರ್ಭಟದಂತೆಯೂ ಭೋರ್ಗರೆಯುವ ಜಲಪ್ರವಾಹದ ಮೊರೆತದಂತೆಯೂ ಭಾರಿ ಗುಡುಗಿನ ಗರ್ಜನೆಯಂತೆಯೂ ಇತ್ತು. ಅದು ಇಂತೆಂದಿತು : “ಅಲ್ಲೆಲೂಯ ! ಸರ್ವಶಕ್ತ ನಮ್ಮ ಪ್ರಭು ದೇವ ರಾಜ್ಯವಾಳುತಿಹನಾತ.
- Verse 7: ಬಂದಿದೆ ಯಜ್ಞದ ಕುರಿಮರಿಯ ಶುಭ ವಿವಾಹ ಸಿದ್ಧಳಿಹಳು ಮದುಮಗಳು ಶೃಂಗಾರ ಸಹಿತ ಸಂತೋಷಿಸೋಣ, ಸಂಭ್ರಮಿಸೋಣ ! ಆತನ ಮಹಿಮೆಯನು ಕೀರ್ತಿಸೋಣ;
- Verse 8: ದಿವ್ಯವಾದುವು, ಭವ್ಯವಾದುವು, ಮೌಲ್ಯವಾದುವು, ಆಕೆಗಿತ್ತ ಉಡುಗೆತೊಡುಗೆಗಳು; ಸತ್ಕಾರ್ಯಗಳೇ ದೇವಜನರು ಧರಿಸುವ ಅಮೂಲ್ಯ ಉಡುಗೆತೊಡುಗೆಗಳು.”
- Verse 9: ಅನಂತರ ದೇವದೂತನು, “ ‘ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು’ ಎಂದು ಬರೆ,” ಎಂದು ನನಗೆ ಆಜ್ಞಾಪಿಸಿದನು. “ಇವು ದೇವರ ಸತ್ಯವಾದ ವಾಕ್ಯಗಳು,” ಎಂದು ಸಹ ತಿಳಿಸಿದನು.
- Verse 10: ಕೂಡಲೇ ಆರಾಧಿಸಲೆಂದು ಆತನ ಪಾದಗಳಿಗೆ ಅಡ್ಡಬಿದ್ದೆ. ಆಗ ಆತನು, “ನೀನು ನನಗೆ ಅಡ್ಡಬೀಳಬಾರದು, ನಾನು ನಿನ್ನ ಹಾಗೂ ಕ್ರಿಸ್ತೇಸು ಶ್ರುತಪಡಿಸಿದ ಸತ್ಯವನ್ನು ಅಂಗೀಕರಿಸಿದ ನಿನ್ನ ಸಹೋದರರ ಸಹ ಸೇವಕನಷ್ಟೆ. ನೀನು ದೇವರನ್ನು ಆರಾಧಿಸು,” ಎಂದನು. ಯೇಸು ಶ್ರುತಪಡಿಸಿದ ಸತ್ಯವೇ ಪ್ರವಾದಿಗಳ ಜೀವಾಳ.
- Verse 11: ನಾನು ಈ ದೃಶ್ಯವನ್ನೂ ಕಂಡೆ: ಸ್ವರ್ಗವು ತೆರೆದಿತ್ತು. ಬಿಳಿಯ ಕುದುರೆಯೊಂದು ಕಾಣಿಸಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ನಂಬಿಕಸ್ಥನೆಂದೂ ಸತ್ಯವಂತನೆಂದೂ ಆತನ ಹೆಸರು; ಆತನು ನಿಷ್ಪಕ್ಷಪಾತದಿಂದ ನ್ಯಾಯತೀರ್ಪು ಕೊಡುವವನು; ನ್ಯಾಯಬದ್ಧವಾಗಿ ಯುದ್ಧಮಾಡುವವನು.
- Verse 12: ಆತನ ಕಣ್ಣುಗಳು ಬೆಂಕಿಯ ಕೆಂಡಗಳಂತಿವೆ; ತಲೆಯ ಮೇಲೆ ಅನೇಕ ಕಿರೀಟಗಳಿವೆ.ಆತನ ಹೆಸರನ್ನು ಬರೆದಿಟ್ಟಿದೆ; ಅದು ಆತನಿಗೇ ಹೊರತು ಬೇರೆ ಯಾರಿಗೂ ತಿಳಿಯದು.
- Verse 13: ಆತನು ಧರಿಸಿದ್ದ ಉಡುಪು ರಕ್ತಪ್ರೋಕ್ಷಿತವಾಗಿತ್ತು. ಆತನಿಗೆ ‘ದೇವರ ವಾಕ್ಯ’ ಎಂದು ಹೆಸರು.
- Verse 14: ಸ್ವರ್ಗದ ಸೈನಿಕರು ಬಿಳಿಯ ಕುದುರೆಗಳನ್ನೇರಿ ಆತನನ್ನು ಹಿಂಬಾಲಿಸಿದರು. ಅವರು ಶುಭ್ರವಾದ ಬಿಳಿಯ ಸಮವಸ್ತ್ರಗಳನ್ನು ಧರಿಸಿದ್ದರು.
- Verse 15: ರಾಷ್ಟ್ರಗಳನ್ನು ಹೊಡೆದುರುಳಿಸುವಂಥ ಹರಿತವಾದ ಖಡ್ಗವೊಂದು ಆತನ ಬಾಯಿಂದ ಹೊರಟಿತು. ಆತನು ಕಬ್ಬಿಣದ ದಂಡದಿಂದ ಅವುಗಳ ಆಳ್ವಿಕೆ ನಡೆಸುವನು. ಸರ್ವಶಕ್ತ ದೇವರ ರೋಷವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.
- Verse 16: ಆತನ ಉಡುಪಿನ ಮೇಲೂ ತೊಡೆಯ ಮೇಲೂ ‘ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು’ ಎಂಬ ಹೆಸರು ಲಿಖಿತವಾಗಿತ್ತು.
- Verse 17: ಅನಂತರ ದೇವದೂತನೊಬ್ಬ ಸೂರ್ಯನ ಮೇಲೆ ನಿಂತಿರುವುದನ್ನು ಕಂಡೆ. ಆತನು ಗಟ್ಟಿಯಾದ ಧ್ವನಿಯಿಂದ ಮಧ್ಯಾಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಹೀಗೆ ಹೇಳಿದನು: “ದೇವರ ದೊಡ್ಡ ಔತಣಕ್ಕೆ ಕೂಡಿಬನ್ನಿ;
- Verse 18: ರಾಜರುಗಳ ಮಾಂಸವನ್ನು, ಸೇನಾಧಿಪತಿಗಳ ಮಾಂಸವನ್ನು ಮತ್ತು ಪರಾಕ್ರಮಶಾಲಿಗಳ ಮಾಂಸವನ್ನು ತಿನ್ನ ಬನ್ನಿ; ಕುದುರೆಗಳ ಮಾಂಸವನ್ನೂ ರಾವುತರ ಮಾಂಸವನ್ನೂ ಉಣ ಬನ್ನಿ; ಯಜಮಾನರ, ಗುಲಾಮರ, ಚಿಕ್ಕವರ, ದೊಡ್ಡವರ ಈ ಎಲ್ಲಾ ನರಮಾನವರ ಮಾಂಸವನ್ನು ರುಚಿಸ ಬನ್ನಿ,” ಎಂದನು.
- Verse 19: ಅನಂತರ ಆ ಮೃಗವನ್ನು ಕಂಡೆ. ಕುದುರೆಯ ಮೇಲೆ ಕುಳಿತಿದ್ದಾತನ ಮೇಲೂ ಅವನ ಸೈನ್ಯದ ಮೇಲೂ ಯುದ್ಧಮಾಡುವುದಕ್ಕಾಗಿ, ಆ ಮೃಗವೂ ಭೂಲೋಕದ ರಾಜರೂ ಅವರ ಸೈನ್ಯಗಳೊಡನೆ ಒಟ್ಟಾಗಿ ಸೇರಿಬಂದರು.
- Verse 20: ಮೃಗವನ್ನು ಸೆರೆಹಿಡಿಯಲಾಯಿತು. ಅದರ ಜೊತೆಯಲ್ಲಿ ಕಪಟ ಪ್ರವಾದಿಯೂ ಸೆರೆಸಿಕ್ಕಿಬಿದ್ದನು. ಮೃಗದ ಮುಂದೆ ಪವಾಡ ಕಾರ್ಯಗಳನ್ನೆಸಗಿ ಅದರ ಮುದ್ರೆ ಒತ್ತಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಪೂಜೆ ಮಾಡಿದವರನ್ನು ಮರುಳುಗೊಳಿಸಿದವನು ಇವನೇ. ಇವರಿಬ್ಬರನ್ನೂ ಜೀವಸಹಿತ ಹಿಡಿದು ಗಂಧಕದಿಂದ ಉರಿಯುವ ಅಗ್ನಿಸರೋವರಕ್ಕೆ ಎಸೆಯಲಾಯಿತು.
- Verse 21: ಇನ್ನುಳಿದವರು ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹೊರಟ ಖಡ್ಗದಿಂದ ಹತರಾದರು; ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಆಹಾರವಾದರು.