ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
31ನೇ ಅಧ್ಯಾಯ
1 : ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ I ನಿನ್ನ ಶರಣನಾದೆ, ನನಗಾಗದಿರಲಿ ತಾತ್ಸಾರ II
2 : ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ I ನನ್ನಾಶ್ರಯಗಿರಿ, ದುರ್ಗಸ್ಥಾನವಾಗಿರು ನೀನೆ II
3 : ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ I ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ II
4 : ವೈರಿಗಳ ಉರುಲುಬಂಡೆಯಿಂದೆನ್ನನು ರಕ್ಷಿಸು I ಅದರಲಿ ನಾ ಸಿಕ್ಕಿ ಬೀಳುವುದನು ತಪ್ಪಿಸು II
5 : ನನಗಾಧಾರ ನೀನಲ್ಲವೆ? ನನ್ನಾತ್ಮವನು ನಿನಗೊಪ್ಪಿಸಿರುವೆ I ನಂಬಿಕಸ್ತನಾದ ದೇವನೆ, ನೀಯೆನ್ನ ಮುಕ್ತಗೊಳಿಸಿರುವೆ II
6 : ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ I ನಾನಾದರೋ ಪ್ರಭು, ಭರವಸೆಯಿಟ್ಟಿರುವುದು ನಿನ್ನಲ್ಲೆ II
7 : ಹರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು I ಈಕ್ಷಿಸಿದೆ ನೀ ಭಕ್ತನ ದೀನತೆಯನು, ಲಕ್ಷಿಸಿದೆ ಬಾಧೆಗಳನು II
8 : ವಿರೋಧಿಗಳ ವಶಕ್ಕೆ ಎನ್ನನು ನೀ ಬಿಟ್ಟುಬಿಡಲಿಲ್ಲ I ನಿರಾತಂಕದೆಡೆಯಲಿ ನನ್ನ ನಿಲ್ಲಿಸಿದೆಯಲ್ಲಾ II
9 : ಸಂಕಟದಲಿ ನಾ ಸಿಲುಕಿಕೊಂಡಿರುವೆ I ಕಣ್ಣುಗುಡ್ಡೆಗಳಿದೋ ಸೇದಿಹೋಗಿವೆ I ದೇಹಾತ್ಮಗಳೆರಡು ಕುಗ್ಗಿಹೋಗಿವೆ II
10 : ಕರಗುತ್ತಿದೆ ಬದುಕು ತಾಪದಲಿ; ಕುಂದುತ್ತಿದೆ ಶಕ್ತಿ ಪಾಪದಲಿ I ಸವೆದು ಹೋಗುತ್ತಿವೆ ನನ್ನ ದೇಹದೆಲುಬುಗಳು ಕಾಲ ಚಕ್ರದಲಿ II
11 : ಶತ್ರುಗಳ ದೂಷಣೆಗೆ ಗುರಿಯಾದೆ, ನೆರೆಯವರಿಗೆ ನಿಂದಾಸ್ಪದನಾದೆ I ಮಿತ್ರರೂ ಬೆದರುವಂತಾದೆ; ದಾರಿಹೋಕರು ದೂರವಾಗುವಂತಾದೆ II
12 : ನುಚ್ಚುನೂರಾದೆ, ಮಡಕೆಚಿಪ್ಪಿನಂತಾದೆ I ಸತ್ತವರಂತಾದೆ: ನೆನಪಿಗೆ ಬಾರದಾದೆ II
13 : ನನಗೆ ವಿರುದ್ಧ ಜನರಾಡುವ ಗುಸುಗುಸು ಮಾತು ಕೇಳಿ ಬರುತಿದೆ I ಭಯಭೀತಿ ಎನ್ನನಾವರಿಸಿದೆ, ಒಳಸಂಚು, ಪ್ರಾಣಹರಣ ನಡೆಯುತಿವೆ II
14 : ನಾನಾದರೋ ಪ್ರಭೂ, ನಿನ್ನಲೆ ಭರವಸೆಯಿಟ್ಟಿರುವೆ I ನೀನೆ ನನ್ನ ದೇವರೆಂದು ಪ್ರಭು ಸಾರುವೆ II
15 : ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ I ಬೆನ್ನಟ್ಟಿಬರುವ ವೈರಿಯಿಂದ ರಕ್ಷಿಸೆನ್ನ II
16 : ಬೆಳಗಿಸಲಿ ದಾಸನನು ನಿನ್ನ ಮುಖತೇಜವು I ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು II
17 : ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ I ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ II
18 : ಸೇದಿಹೋಗಲಿ ಸಜ್ಜನರ ವಿರುದ್ಧ ಸುಳ್ಳಾಡುವ ನಾಲಿಗೆ I ಬಿದ್ದುಹೋಗಲಿ, ಸೊಕ್ಕಿನಿಂದವರನು ಧಿಕ್ಕರಿಸುವ ನಾಲಿಗೆ II
19 : ನಿನಗಂಜಿ ನಡೆವರಿಗೆ ನೀ ಕಟ್ಟಿಟ್ಟಿರುವ ಬುತ್ತಿ ಅದೆಷ್ಟು ಅಗಾಧ I ನಿನ್ನ ನಂಬಿದವರಿಗೆ ಬಟ್ಟ ಬಯಲಾಗಿ ನೀಡುವ ನೆರವದೆಷ್ಟು ಅಪಾರ II
20 : ಪಾರುಮಾಡುವುದವರನು ನಿನ್ನ ಸಾನ್ನಿಧ್ಯ ಸೆರಗು, ಜನರೊಳಸಂಚಿನಿಂದ I ದೂರವಿಡುವುದವರನು ನಿನ್ನಾಸರೆಯು, ವ್ಯಾಜ್ಯಮಾಡುವ ಜಿಹ್ವೆಯಿಂದ II
21 : ಮುತ್ತಿಗೆಗೆ ತುತ್ತಾದ ನಗರದೊಳಿಂದೆನ್ನ I ಅಚ್ಚರಿಯಿಂದ ರಕ್ಷಿಸಿದೊಡೆಯನಿಗೆ ನಮನ II
22 : ದೇವರಿಂದ ದೂರನಾದೆಯೆಂಬ ದಿಗಿಲೇರಲು I ಅಕ್ಕರೆಯಿಂದ ನೀ ಕಿವಿಗೊಟ್ಟೆ ನಾ ಮೊರೆಯಿಡಲು II
23 : ಪ್ರಭುವಿನ ಭಕ್ತರೇ, ಪ್ರೀತಿಸಿ ನೀವಾತನನು ಅಧಿಕಾಧಿಕವಾಗಿ I ಶರಣರನು ರಕ್ಷಿಸಿ, ಸೊಕ್ಕಿನವರನು ಶಿಕ್ಷಿಸುವನಾತ ಸರಿಯಾಗಿ II
24 : ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ ಅಭಯ I ಧೈರ್ಯದಿಂದಿರಲಿ ನಿರುತ ನಿಮ್ಮೆಲ್ಲರ ಹೃದಯ II