ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆದಿಕಾಂಡ
41ನೇ ಅಧ್ಯಾಯ
- Verse 1: ಎರಡು ವರ್ಷಗಳಾದ ಮೇಲೆ ಫರೋಹನಿಗೆ ಒಂದು ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್ ನದಿಯ ತೀರದಲ್ಲಿ ನಿಂತಿದ್ದನು.
- Verse 2: ಆಗ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಆ ನದಿಯೊಳಗಿಂದ ಬಂದು ಜೊಂಡು ಹುಲ್ಲಿನಲ್ಲಿ ಮೇಯುತ್ತಿದ್ದವು.
- Verse 3: ಅವುಗಳ ಹಿಂದೆಯೇ ಒಣಕಲಾದ ಏಳು ಬಡ ಹಸುಗಳು ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಹಸುಗಳ ಹತ್ತಿರ ನದಿಯ ತೀರದಲ್ಲೇ ನಿಂತವು.
- Verse 4: ಒಣಕಲಾದ ಈ ಬಡ ಹಸುಗಳು ಅಚ್ಚುಕಟ್ಟಾದ ಆ ಕೊಬ್ಬಿದ ಹಸುಗಳನ್ನು ತಿಂದುಬಿಟ್ಟವು. ಅಷ್ಟರಲ್ಲಿ ಫರೋಹನಿಗೆ ಎಚ್ಚರವಾಯಿತು.
- Verse 5: ಫರೋಹನಿಗೆ ಮತ್ತೆ ನಿದ್ರೆ ಹತ್ತಿದಾಗ ಅವನಿಗೆ ಇನ್ನೊಂದು ಕನಸುಬಿತ್ತು. ಅದರಲ್ಲಿ ಕಾಳುತುಂಬಿದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು.
- Verse 6: ಅವುಗಳ ಹಿಂದೆಯೇ ಮೂಡಣಗಾಳಿಯಿಂದ ಒಣಗಿ, ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
- Verse 7: ಬತ್ತಿಹೋಗಿದ್ದ ಈ ತೆನೆಗಳು, ಕಾಳುತುಂಬಿದ್ದ ಆ ಏಳು ಬಲಿತ ತೆನೆಗಳನ್ನು ನುಂಗಿಬಿಟ್ಟವು. ಅಷ್ಟರೊಳಗೆ ಫರೋಹನು ಎಚ್ಚೆತ್ತು, ತಾನು ಕಂಡದ್ದು ಕನಸೆಂದು ತಿಳಿದುಕೊಂಡ.
- Verse 8: ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡು ಇತ್ತು. ಈಜಿಪ್ಟ್ ದೇಶದ ಎಲ್ಲ ಜೋಯಿಸರನ್ನೂ ವಿದ್ವಾಂಸರನ್ನೂ ಬರಮಾಡಿದ. ಅವರಿಗೆ ತನ್ನ ಕನಸನ್ನು ವಿವರಿಸಿದ. ಅದರ ಅರ್ಥವನ್ನು ಅವನಿಗೆ ಹೇಳಬಲ್ಲವರು ಯಾರೂ ಸಿಕ್ಕಲಿಲ್ಲ.
- Verse 9: ಆಗ ಪಾನಸೇವಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಒಡೆಯಾ, ಈ ದಿನತಾನೆ ನನ್ನ ನೆನಪಿಗೆ ಬರುತ್ತಿದೆ.
- Verse 10: ತಾವು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು, ನನ್ನನ್ನೂ ಆ ಮುಖ್ಯ ಅಡಿಗೆಭಟ್ಟನನ್ನೂ ದಳಪತಿಯ ವಠಾರದಲ್ಲಿ ಇರುವ ಸೆರೆಯಲ್ಲಿ ಇಟ್ಟಿದ್ದಿರಿ. ಅಲ್ಲಿದ್ದಾಗ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು
- Verse 11: ಒಬ್ಬೊಬ್ಬನ ಕನಸಿಗೂ ಬೇರೆಬೇರೆ ಅರ್ಥವಿತ್ತು.
- Verse 12: ಹಿಬ್ರಿಯನಾದ ಒಬ್ಬ ಯುವಕ ನಮ್ಮ ಸಂಗಡ ಅಲ್ಲಿದ್ದ. ಅವನು ದಳಪತಿಯವರ ಸೇವಕ. ನಾವು ನಮ್ಮ ಕನಸನ್ನು ಅವನಿಗೆ ತಿಳಿಸಿದೆವು. ಅವನು ಆ ಕನಸುಗಳಿಗೆ ಸರಿಯಾದ ಅರ್ಥವನ್ನು ಹೇಳಿದ.
- Verse 13: ಅದು ಮಾತ್ರವಲ್ಲ, ಅವನು ಹೇಳಿದ ಪ್ರಕಾರವೇ ಆಯಿತು. ನನಗೆ ನೌಕರಿ ಮತ್ತೆ ದೊರಕಿತು. ಆ ಮುಖ್ಯ ಅಡಿಗೆಭಟ್ಟನನ್ನೋ ನೇಣುಹಾಕಲಾಯಿತು,’ ಎಂದು ಸನ್ನಿಧಿಯಲ್ಲಿ ಅರಿಕೆಮಾಡಿದ.
- Verse 14: ಇದನ್ನು ಕೇಳಿದ ಫರೋಹನು ಜೋಸೆಫನನ್ನು ಕರೆತರುವಂತೆ ಆಳುಗಳನ್ನು ಕಳಿಸಿದ. ಅವರು ಬಂದು ಅವನನ್ನು ಸೆರೆಯಿಂದ ತ್ವರೆಯಾಗಿ ಬಿಡುಗಡೆ ಮಾಡಿದರು. ಜೋಸೆಫನು ಕ್ಷೌರಮಾಡಿಕೊಂಡು, ಬಟ್ಟೆ ಬದಲಾಯಿಸಿಕೊಂಡು ಫರೋಹನ ಸನ್ನಿಧಿಯಲ್ಲಿ ಹಾಜರಾದ.
- Verse 15: ಫರೋಹನು ಅವನಿಗೆ, “ನಾನು ಒಂದು ಕನಸುಕಂಡೆ, ಅದರ ಅರ್ಥ ಹೇಳಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳಬಲ್ಲೆ ಎಂಬ ಸಮಾಚಾರ ಕೇಳಿದ್ದೇನೆ,” ಎಂದ.
- Verse 16: ಜೋಸೆಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು, ಫರೋಹ ಆದ ನಿಮಗೆ ತೃಪ್ತಿಕರವಾದ ಉತ್ತರಕೊಡಬಲ್ಲರು,” ಎಂದು ಹೇಳಿದ.
- Verse 17: ಆಗ ಫರೋಹನು ಜೋಸೆಫನಿಗೆ, “ಕನಸಿನಲ್ಲಿ ನಾನು ನೈಲ್ ನದಿಯ ತೀರದಲ್ಲಿ ನಿಂತಿದ್ದೆ.
- Verse 18: ನದಿಯೊಳಗಿಂದ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಬಂದು ಜೊಂಡುಹುಲ್ಲಿನಲ್ಲಿ ಮೇಯುತ್ತಿದ್ದವು.
- Verse 19: ಅವುಗಳ ಹಿಂದೆಯೆ ಬಹಳ ಒಣಕಲಾದ ಹಾಗೂ ಸಣಕಲಾದ, ಬೇರೆ ಏಳು ಬಡಹಸುಗಳು ಬಂದವು. ಅಂಥ ಬಡಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಲ್ಲೂ ನೋಡಿದ್ದಿಲ್ಲ.
- Verse 20: ಅದಲ್ಲದೆ, ಸಣಕಲಾಗಿದ್ದ ಆ ಬಡಹಸುಗಳು ಮೊದಲೇ ಕಾಣಿಸಿದ ಆ ಏಳು ಕೊಬ್ಬಿನ ಹಸುಗಳನ್ನು ತಿಂದುಬಿಟ್ಟವು.
- Verse 21: ತಿಂದರೂ ತಿಂದಂತೆಯೇ ತೋರಲಿಲ್ಲ. ಮೊದಲಿದ್ದಂತೆಯೇ ಬಡಕಲಾಗಿದ್ದವು. ಅಷ್ಟರ ಒಳಗೆ ನನಗೆ ಎಚ್ಚರವಾಯಿತು.
- Verse 22: ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಕಾಳುತುಂಬಿದ್ದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿಬಂದವು.
- Verse 23: ಅವುಗಳ ಹಿಂದೆಯೆ, ಮೂಡಣ ಗಾಳಿಯಿಂದ ಒಣಗಿ, ಬತ್ತಿ, ಕೆಟ್ಟುಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
- Verse 24: ಬತ್ತಿಹೋಗಿದ್ದ ತೆನೆಗಳು ಕಾಳು ತುಂಬಿದ್ದ ಆ ಏಳು ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆ; ಅವುಗಳ ಅರ್ಥವನ್ನು ವಿವರಿಸಿ ಹೇಳಲು ಅವರಲ್ಲಿ ಯಾರಿಂದಲೂ ಆಗಲಿಲ್ಲ.”
- Verse 25: ಜೋಸೆಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳ ವಿಷಯ ಒಂದೇ. ದೇವರು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾರೆ.
- Verse 26: ಆ ಏಳು ಒಳ್ಳೆಯ ಹಸುಗಳೇ ಏಳು ವರ್ಷಗಳು; ಆ ಏಳು ಒಳ್ಳೆಯತೆನೆಗಳೂ ಏಳು ವರ್ಷಗಳು; ಎರಡು ಕನಸುಗಳ ಅರ್ಥ ಒಂದೇ.
- Verse 27: ಒಳ್ಳೆಯ ಹಸುಗಳ ಹಿಂದೆ ಬಂದ ಒಣಕಲಾಗಿದ್ದ ಆ ಏಳು ಬಡಹಸುಗಳು ಮತ್ತು ಮೂಡಣ ಗಾಳಿಯಿಂದ ಕೆಟ್ಟುಹೋಗಿದ್ದ ಆ ಏಳು ಕಾಳಿಲ್ಲದ ತೆನೆಗಳು ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ.
- Verse 28: ನಾನು ತಮಗೆ ಅರಿಕೆಮಾಡಿದಂತೆ ದೇವರು ಮಾಡಬೇಕೆಂದು ಇರುವುದನ್ನು ತಮಗೆ ತಿಳಿಸಿದ್ದಾರೆ.
- Verse 29: ಈಜಿಪ್ಟ್ ದೇಶದಲ್ಲೆಲ್ಲ ಬಹುವಿಶೇಷವಾದ ಏಳು ಸುಭಿಕ್ಷ ವರ್ಷಗಳೂ
- Verse 30: ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವುವು. ಆಗ ಈಜಿಪ್ಟ್ ದೇಶದ ಅವರು ಮೊದಲಿದ್ದ ಆ ಸುಭಿಕ್ಷವನ್ನು ಮರೆತುಬಿಡುವರು; ಆ ಬರದಿಂದ ದೇಶವು ಹಾಳಾಗಿಹೋಗುವುದು.
- Verse 31: ಮುಂದೆ ಬರಲಿರುವ ಕ್ಷಾಮವು ಅತ್ಯಂತ ಘೋರಾವಾಗಿರುವುದು; ಮೊದಲಿದ್ದ ಸಮೃದ್ಧಿಯ ಗುರುತೇ ಇಲ್ಲದೆ ಹೋಗುವುದು.
- Verse 32: ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ.
- Verse 33: “ಆದುದರಿಂದ ತಾವು ವಿವೇಕಿಯೂ ಬುದ್ಧಿವಂತನೂ ಆದ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಆಧಿಕಾರಿಯನ್ನಾಗಿ ನೇಮಿಸಬೇಕು.
- Verse 34: ಅದೂ ಅಲ್ಲದೆ, ದೇಶದ ಎಲ್ಲ ಭಾಗಗಳಲ್ಲೂ ಗುಮಾಸ್ತರನ್ನು ನೇಮಿಸಿ ಅವರ ಮೂಲಕ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯಲ್ಲಿ ಐದನೆಯ ಒಂದು ಪಾಲನ್ನು ಕಂದಾಯವಾಗಿ ಎತ್ತಬೇಕು.
- Verse 35: ಮುಂದಣ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಶೇಖರಿಸಿ ಪಟ್ಟಣಗಳಲ್ಲಿ ಜೋಪಾನವಾಗಿಡುವಂತೆ ತಾವು ಆಜ್ಞಾಪಿಸಬೇಕು.
- Verse 36: ಹೀಗೆ ಆಹಾರ ಪದಾರ್ಥಗಳನ್ನು ಶೇಖರಿಸುವುದರಿಂದ ಈಜಿಪ್ಟ್ ದೇಶದಲ್ಲಿ ದುರ್ಭಿಕ್ಷವುಂಟಾಗುವ ಏಳು ವರ್ಷಗಳಲ್ಲಿ ಜನರು ಕ್ಷಾಮದಿಂದ ಸಾಯುವುದಿಲ್ಲ,” ಎಂದು ಹೇಳಿದನು.
- Verse 37: ಜೋಸೆಫನು ಸೂಚಿಸಿದ ಯೋಜನೆ ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೆಯದೆಂದು ತೋರಿತು.
- Verse 38: ಫರೋಹನು ತನ್ನ ಪರಿವಾರದವರಿಗೆ, “ಈತ ದೇವರಾತ್ಮ ಪಡೆದವನು,
- Verse 39: ಈತನಿಗಿಂತ ಯೋಗ್ಯವಾದ ವ್ಯಕ್ತಿ ನಮಗೆ ಸಿಕ್ಕುವುದು ಸಾಧ್ಯವೆ?” ಎಂದು ಹೇಳಿ ಜೋಸೆಫನಿಗೆ, “ದೇವರೇ ನಿನಗೆ ಇದನ್ನೆಲ್ಲ ತಿಳಿಸಿರುವುದರಿಂದ ನಿನಗೆ ಸಮಾನವಾದ ಬುದ್ಧಿವಿವೇಕಗಳುಳ್ಳ ವ್ಯಕ್ತಿ ಯಾವನೂ ಇಲ್ಲ.
- Verse 40: ನೀನೇ ಅರಮನೆಯಲ್ಲಿ ಮುಖ್ಯಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರು ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದು ಹೇಳಿದನು.
- Verse 41: ಬಳಿಕ ಫರೋಹನು ಜೋಸೆಫನಿಗೆ, “ಇದೀಗಲೆ ಈಜಿಪ್ಟ್ ದೇಶದ ಮೇಲೆಲ್ಲ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸುತ್ತಿದ್ದೇನೆ,” ಎಂದು ಹೇಳಿ
- Verse 42: ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು.
- Verse 43: ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ, “ಈತನಿಗೆ ಅಡ್ಡಬೀಳಿ,” ಎಂದು ಪ್ರಕಟನೆ ಮಾಡಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದನು.
- Verse 44: ಅಷ್ಟು ಮಾತ್ರವಲ್ಲ, ಫರೋಹನು ಅವನಿಗೆ, “ಫರೋಹನಾದ ನಾನು ಹೇಳುತ್ತಿದ್ದೇನೆ: ನಿನ್ನ ಅಪ್ಪಣೆಯಿಲ್ಲದೆ ಇಡೀ ಈಜಿಪ್ಟ್ ದೇಶದಲ್ಲಿ ಯಾರೂ ಏನನ್ನೂ ಮಾಡಕೂಡದು,” ಎಂದು ಹೇಳಿದನು.
- Verse 45: ಬಳಿಕ ಫರೋಹನು ಜೋಸೆಫನಿಗೆ ‘ಸಾಪ್ನತ್ಪನ್ನೇಹ’ ಎಂಬ ಹೊಸ ಹೆಸರಿಟ್ಟನು; ಓನ್ ಎಂಬ ಗುರುಪೀಠದ ಆಚಾರ್ಯನಾಗಿದ್ದ ಪೋಟೀಫೆರನ ಮಗಳು ಆಸನತ್ ಎಂಬಾಕೆಯನ್ನು ಅವನಿಗೆ ಮದುವೆಮಾಡಿಸಿದನು. ತರುವಾಯ ಜೋಸೆಫನು ಈಜಿಪ್ಟ್ ದೇಶಸಂಚಾರ ಹೊರಟನು.
- Verse 46: ಈಜಿಪ್ಟ್ ದೇಶದ ಅರಸನಾದ ಫರೋಹನ ಆಸ್ಥಾನವನ್ನು ಸೇರಿದಾಗ ಜೋಸೆಫನಿಗೆ ಮೂವತ್ತು ವರ್ಷ ವಯಸ್ಸು. ಜೋಸೆಫನು ಫರೋಹನ ಸನ್ನಿಧಿಯಿಂದ ಹೊರಟು ಈಜಿಪ್ಟ್ ದೇಶದಲ್ಲೆಲ್ಲ ಸಂಚಾರ ಮಾಡಿದನು.
- Verse 47: ಆ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳಲ್ಲಿ ಭೂಮಿ ಹೇರಳವಾದ ಬೆಳೆಕೊಟ್ಟಿತು.
- Verse 48: ಆ ಏಳು ವರ್ಷದ ಬೆಳೆಯನ್ನು ಜೋಸೆಫನು ಶೇಖರಿಸಿ ಪಟ್ಟಣಗಳಲ್ಲಿ ಇಟ್ಟನು. ಆಯಾ ಪಟ್ಟಣದ ಸುತ್ತಲಿದ್ದ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲೇ ಶೇಖರಿಸಿದನು.
- Verse 49: ಹೀಗೆ ಕೂಡಿಸಿದ ದವಸಧಾನ್ಯ ಸಮುದ್ರದ ಮರಳಿನಂತೆ ರಾಶಿರಾಶಿಯಾಗಿತ್ತು. ಲೆಕ್ಕಮಾಡುವುದಕ್ಕೂ ಆಗದೆ ಲೆಕ್ಕ ಇಡುವುದನ್ನೇ ಬಿಟ್ಟುಬಿಡಬೇಕಾಯಿತು.
- Verse 50: ಬರಗಾಲ ಬರುವುದಕ್ಕೆ ಮುಂಚೆ ಜೋಸೆಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅವರ ತಾಯಿ ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್.
- Verse 51: ಜೇಷ್ಠಮಗ ಹುಟ್ಟಿದಾಗ ಜೋಸೆಫನು, “ನಾನು ನನ್ನ ಕಷ್ಟದುಃಖವನ್ನೂ ತಂದೆಯ ಮನೆಯವರನ್ನೂ ಮರೆಯುವಂತೆ ದೇವರು ಮಾಡಿದ್ದಾರಲ್ಲಾ!” ಎಂದುಕೊಂಡು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು.
- Verse 52: ಎರಡನೆಯ ಮಗನು ಹುಟ್ಟಿದಾಗ, ಯಾವ ದೇಶದಲ್ಲಿ ನನಗೆ ಸಂಕಷ್ಟವಿತ್ತೋ ಆ ದೇಶದಲ್ಲಿ ದೇವರು ನನಗೆ ಸಮೃದ್ಧಿಯನ್ನು ದಯಪಾಲಿಸಿದ್ದಾರೆ!” ಎಂದು ಆ ಮಗನಿಗೆ ‘ಎಫ್ರಾಯೀಮ್’ ಎಂದು ನಾಮಕರಣ ಮಾಡಿದನು.
- Verse 53: ಈಜಿಪ್ಟ್ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದವು.
- Verse 54: ಜೋಸೆಫನು ಹೇಳಿದ್ದ ಪ್ರಕಾರವೇ ಕ್ಷಾಮದ ಏಳು ವರ್ಷಗಳು ಪ್ರಾರಂಭವಾದವು. ಬರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ಹಬ್ಬಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು.
- Verse 55: ಕ್ರಮೇಣ ಈಜಿಪ್ಟಿಗೂ ಬರ ಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, “ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ,” ಎಂದು ಉತ್ತರಕೊಟ್ಟನು.
- Verse 56: ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.
- Verse 57: ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು.