पवित्र बाइबिल
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
41ನೇ ಅಧ್ಯಾಯ
- Verse 1: “’ಲಿವ್ಯತಾನ್’ ಮೊಸಳೆಯನು ಗಾಳದಿಂದ ಎಳೆಯಬಲ್ಲೆಯಾ? ಅದರ ನಾಲಿಗೆಯನು ಹಗ್ಗದಿಂದ ಬಿಗಿಯಬಲ್ಲೆಯಾ?
- Verse 2: ಅದರ ಮೂಗಿಗೆ ಆಪನು ಪೋಣಿಸಬಲ್ಲೆಯಾ? ಅದರ ದವಡೆಗೆ ಮುಳ್ಳನು ಚುಚ್ಚಬಲ್ಲೆಯಾ?
- Verse 3: ಅದು ನಿನ್ನ ಸಂಗಡ ಸವಿಮಾತಾಡೀತೆ? ನಿನಗೆ ವಿನಮ್ರ ವಿಜ್ಞಾಪನೆ ಮಾಡೀತೆ?
- Verse 4: ನೀನದನ್ನು ನಿನ್ನ ಚಿರದಾಸನನ್ನಾಗಿಸಿಕೊಳ್ಳುವಂತೆ ನಿನ್ನೊಡನೆ ಅದು ಒಪ್ಪಂದ ಮಾಡಿಕೊಂಡೀತೆ?
- Verse 5: ಅದನು ಹಕ್ಕಿಯಂತೆ ಆಡಿಸಬಲ್ಲೆಯಾ? ಆಟಕ್ಕೆಂದು ಹುಡುಗಿಯರಿಗೆ ಹಿಡಿದುಕೊಡಬಲ್ಲೆಯಾ?
- Verse 6: ಬೆಸ್ತರು ಅದನು ವ್ಯಾಪಾರಕ್ಕೆ ಇಡುವರೇ? ಪಾಲುಮಾಡಿಕೊಂಡು ಅದನು ವರ್ತಕರಿಗೆ ಮಾರುವರೆ?
- Verse 7: ಅದರ ಚರ್ಮವನು ಕೊಂಡಿಗಳಿಂದ ಚುಚ್ಚಬಲ್ಲೆಯಾ? ಅದರ ತಲೆಯನು ಮೀನು ಹಿಡಿಯುವ ಭರ್ಜಿಯಿಂದ ತಿವಿಯಬಲ್ಲೆಯಾ?
- Verse 8: ಅದರ ಮೇಲೆ ಒಮ್ಮೆ ಕೈಹಾಕಿ ನೋಡು! ಆಗ ನಡೆಯಬಹುದಾದ ಕದನವನು ನೆನೆಸಿಕೊಂಡರೆ ಸಾಕು! ನೀನು ಮತ್ತೆ ಮುಟ್ಟಹೋಗಲಾರೆ ಅದನು.
- Verse 9: ಅದನು ಹಿಡಿಯಬಹುದೆಂಬ ನಂಬಿಕೆ ವ್ಯರ್ಥ ಹಿಡಿಯಬಂದವನು ನೋಡಿದ್ದೇ ಬಿದ್ದುಹೋದ.
- Verse 10: ಅದನು ಕೆಣಕಲು ಧೈರ್ಯಗೊಂಡಾಗ ಅದು ಉಗ್ರವಾಗುತ್ತದೆ ‘ನನ್ನ ಮುಂದೆ ನಿಲ್ಲಬಲ್ಲವರಾರು?’ ಎನ್ನುತ್ತದೆ.
- Verse 11: ಅದನ್ನೆದುರಿಸಿ ಸುರಕ್ಷಿತವಾಗಿ ಇರಬಲ್ಲವನಾರು? ಗಗನದ ಕೆಳಗಿರುವ ಯಾರಿಂದಲೂ ಅದಾಗದು.
- Verse 12: ಅದರ ಅಂಗಗಳನು, ಶಕ್ತಿಯನು, ಸೊಬಗನು ನಾನು ವರ್ಣಿಸದೆ ಮುಚ್ಚಿಡಲಾಗದು.
- Verse 13: ಅದರ ಹೊರ ಕವಚವನು ಬಿಚ್ಚಬಲ್ಲವರಾರು? ಅದರ ಜೊಡುದವಡೆಗಳಲಿ ನುಗ್ಗಬಲ್ಲವರಾರು?
- Verse 14: ಅದರ ಮುಖದ ಕದಗಳನು ತೆರೆಯ ಬಲ್ಲವರಾರು? ಅದರ ಹಲ್ಲುಗಳ ಸುತ್ತಲೂ ಭಯಭೀತಿ ಆವರಿಸಿರುವುದು.
- Verse 15: ಬೆನ್ನಿನ ಅಡ್ಡಣಗಳು ಅದಕ್ಕೆ ಕೊಟ್ಟಿವೆ ಕೆಚ್ಚನು ಒತ್ತಿದ ಮುದ್ರೆಯಂತೆ ಬಿಗಿದಿವೆ ಅದನು.
- Verse 16: ಗಾಳಿ ಕೂಡ ನುಗ್ಗದಂತೆ ಆ ಅಡ್ಡಣಗಳು ಹೊಂದಿಕೊಂಡಿವೆ ಒಂದಕ್ಕೊಂದು.
- Verse 17: ಪ್ರತ್ಯೇಕಿಸಲಾಗದಂತೆ ಅಂಟಿಕೊಂಡಿವೆ ವಿಂಗಡಿಸಲಾಗದಂತೆ ಹಿಡಿದುಕೊಂಡಿವೆ.
- Verse 18: ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ ಅದರ ಕಣ್ಣುಗಳು ಅರುಣನೇತ್ರಕ್ಕೆ ಸಮಾನವಾಗಿವೆ.
- Verse 19: ಅದರ ಬಾಯಿಯೊಳಗಿಂದ ಕೊಳ್ಳಿಗಳು ಹೊರಬರುತ್ತವೆ ಅದರಿಂದ ಬೆಂಕಿಕಿಡಿಗಳು ಹಾರಿಬರುತ್ತವೆ.
- Verse 20: ಹುಲ್ಲುಹಾಕಿ ಕಾಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಅದರ ಮೂಗಿನ ಹೊಳ್ಳೆಗಳಿಂದ ಹೊಗೆ ಹಾಯುತ್ತದೆ.
- Verse 21: ಇದ್ದಿಲನು ಹೊತ್ತಿಸಲು ಅದರ ಉಸಿರೇ ಸಾಕು ಅದರ ಬಾಯಿಂದ ಹೊರಹೊಮ್ಮುವುದು ಜ್ವಾಲೆಯು.
- Verse 22: ಅದರ ಬಲ ನೆಲೆಗೊಂಡಿದೆ ಕುತ್ತಿಗೆಯಲಿ ಭಯವು ತಾಂಡವಾಡುತ್ತದೆ ಅದರ ಮುಂಗಡೆಯಲಿ.
- Verse 23: ಅಂಟಿಕೊಂಡಿದೆ ಅದರ ಮಾಂಸದ ಮಡಿಕೆಗಳು ಗಟ್ಟಿಯಾಗಿ ಅದರ ಮಾಂಸಖಂಡ ನಿಬಿಡವಾಗಿ.
- Verse 24: ಅದರ ಹೃದಯ ಬಂಡೆಯಂತೆ ಅದರ ಗಟ್ಟಿ, ಬೀಸುವ ಕೆಳಗಲ್ಲಿನಂತೆ.
- Verse 25: ಬಲಿಷ್ಠರೂ ಭಯಪಡುತ್ತಾರೆ ಅದು ಎದ್ದರೆ ಭಯಭ್ರಾಂತರಾಗಿ ತತ್ತರಿಸುತ್ತಾರೆ ಅದು ಬಡಿದರೆ.
- Verse 26: ಕತ್ತಿಯಿಂದ ಹೊಡೆದರೆ ಅದಕ್ಕೇನೂ ಆಗದು ಭರ್ಜಿ, ಬಾಣ, ಈಟಿಗಳಿಂದ ಏನೂ ಆಗದು.
- Verse 27: ಕಬ್ಬಿಣ ಅದಕ್ಕೆ ಒಣ ಹುಲ್ಲಿನಂತೆ ಕಂಚು ಅದಕ್ಕೆ ಟೊಳ್ಳುಮರದಂತೆ.
- Verse 28: ಅದನು ಬಿಲ್ಲುಬಾಣಗಳಿಂದ ಓಡಿಸಲು ಅಸಾಧ್ಯ ಕಣಿವೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
- Verse 29: ದೊಣ್ಣೆಗಳು ಅದಕ್ಕೆ ಹುಲ್ಲುಕಡ್ಡಿಯ ಹಾಗೆ ಅದು ನಗುತ್ತದೆ ಸರ್ರನೆ ಬರುವ ಈಟಿಗೆ.
- Verse 30: ಅದರ ಹೊಟ್ಟೆಯ ಅಡಿಭಾಗವು ಬೋಕಿಬಿಲ್ಲೆಗಳಂತೆ ಚೂಪು ಹಲಿವೆಯ ಹಾಗೆ ಕೆಸರಿನ ಮೇಲೆ ಮೈ ಚಾಚಿಕೊಂಡಿರುವುದು.
- Verse 31: ಜಲನಿಧಿಯನು ಅದು ಕುದಿಸುತ್ತದೆ ಹಂಡೆಯ ನೀರಿನಂತೆ ಸಮುದ್ರವನು ಕಲಕಿಸುತ್ತದೆ ತೈಲದ ಕುಡಿಕೆಯಂತೆ.
- Verse 32: ಸಾಗರಕ್ಕೆ ನೆರೆಬಂತೋ ಎಂಬ ಹಾಗೆ ಶುಭ್ರಗೊಳಿಸುತ್ತದೆ ತಾನು ಬಂದ ಹಾದಿಯನ್ನೇ.
- Verse 33: ಜಗದಲ್ಲೆಲ್ಲೂ ಸಿಗದು ಇದಕ್ಕೆ ಸಾಟಿ ಭಯಭೀತಿಯಿಲ್ಲದ್ದು ಈ ಸೃಷ್ಟಿ.
- Verse 34: ದಿಟ್ಟಿಸಿ ನೋಡುತ್ತದೆ ಘನಪ್ರಾಣಿಗಳನ್ನೆಲ್ಲಾ ರಾಜನಾಗಿರುತ್ತದೆ ಸೊಕ್ಕಿನ ಮೃಗಗಳಿಗೆಲ್ಲಾ!