வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
50ನೇ ಅಧ್ಯಾಯ
- Verse 1: ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ I ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ II
- Verse 2: ಸುರಸುಂದರವಾದ ಸಿಯೋನಿನಿಂದ I ಉದಯಸಿಹನು ದೇವನು ಶೋಭೆಯಿಂದ II
- Verse 3: ಬರುತಿಹನು ನಮ್ಮ ದೇವನು, ಇನ್ನು ಸುಮ್ಮನಿರನಾತ I ಆತನ ಮುಂದೆ ಬೆಂಕಿಮಳೆ, ಸುತ್ತಲು ಚಂಡಮಾರುತ II
- Verse 4: ಭೂಮ್ಯಾಕಾಶಗಳನು ಕರೆಯುತಿಹನು I ಪ್ರಜೆಗೆ ವಿಧಿಪಾ ತೀರ್ಪನು ನೋಡಲೆಂದು II
- Verse 5: “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು I ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು II
- Verse 6: ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ I ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ II
- Verse 7: “ಎಲೈ ಪ್ರಜೆ ಇಸ್ರಯೆಲ್, ನಾನು ನಿನ್ನ ದೇವರು I ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು II
- Verse 8: ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ I ನನ್ನ ಮುಂದಿವೆ ಸತತ ನಿನ್ನ ದಹನಬಲಿಗಳೆಲ್ಲ II
- Verse 9: ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ I ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ II
- Verse 10: ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ I ಗುಡ್ಡದಲ್ಲಿರುವ ಸಹಸ್ರಾರು ಪಶುಗಳು ನನ್ನವೆ II
- Verse 11: ನಾ ಬಲ್ಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೆಲ್ಲ I ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವಜಂತುಗಳೆಲ್ಲ II
- Verse 12: ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ I ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ II
- Verse 13: ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ? I ಹೋತಗಳ ರಕ್ತವನು ನಾ ಕುಡಿಯುವುದುಂಟೇ? II
- Verse 14: ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ I ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ II
- Verse 15: ಕಷ್ಟದಲಿ ಮೊರೆಯಿಡೆ, ನೆರವಾಗುವೆ I ಆಗ ನೀ ನನ್ನನು ಕೊಂಡಾಡುವೆ II
- Verse 16: ದುರ್ಜನರಿಗೆ ದೇವ ಹೇಳುವನು ಇಂತೆಂದು I “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು? I ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?” II
- Verse 17: ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ I ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ II
- Verse 18: ಕಂಡೊಡನೆ ಬೇಕು ನಿಮಗೆ ಚೋರರ ಕೂಟ I ಸಾಕಾಗಿಲ್ಲ ನಿಮಗೆ ಜಾರರ ಒಡನಾಟ II
- Verse 19: ನಿಮ್ಮ ಬಾಯನ್ನಾಳುತ್ತದೆ ಕೆಡುಕುತನ I ನಿಮ್ಮ ನಾಲಿಗೆ ನೇಯುತ್ತದೆ ಕಪಟತನ II
- Verse 20: ಸೋದರನಿಗೆ ವಿರುದ್ಧ ಸುಳ್ಳಾಡಲು ಕೂರುತ್ತೀರಿ I ಒಡಹುಟ್ಟಿದವರಿಗೆ ಎದುರಾಗಿ ಚಾಡಿಹೇಳುತ್ತೀರಿ II
- Verse 21: ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ? I ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ? II ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು I ನೀವು ಅಪರಾಧಿಗಳೆಂದು ಸ್ಥಾಪಿಸದೆಬಿಡೆನು II
- Verse 22: ದೇವನ ನೆನೆಯದವರೇ, ನೀಡಿರಿ ಗಮನವನು I ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು I ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು? II
- Verse 23: ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು I ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು II