ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
78ನೇ ಅಧ್ಯಾಯ
- Verse 1: ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ I ಗಮನಕೊಡಿ ನಾ ಹೇಳುವ ಮಾತುಗಳಿಗೆ II
- Verse 2: ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು I ಹೊರಪಡಿಸುವೆನು ಪೂರ್ವಕಾಲದ ಗೂಡಾರ್ಥಗಳನು II
- Verse 3: ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II
- Verse 4: ಮರೆಮಾಡೆವು ಅವರ ಸಂತತಿಯಾದ ನಿಮಗೆ I ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II
- Verse 5: ನೇಮವಿತ್ತನು ಯಕೋಬವಂಶಕೆ I ಶಾಸನಕೊಟ್ಟನು ಇಸ್ರಯೇಲರಿಗೆ II ವಿಧಿಸಿದ ನಿಂತು ನಮ್ಮ ಪೂರ್ವಜನರಿಗೆ I “ಕಲಿಸಿರಿ ಇವನ್ನು ನಿಮ್ಮ ಮಕ್ಕಳಿಗೆ” II
- Verse 6: “ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II
- Verse 7: ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II
- Verse 8: ಮರೆಯರು ನನ್ನ ಮಹತ್ಕಾರ್ಯಗಳನು I ಇಡುವರು ನನ್ನಲ್ಲೇ ಭರವಸೆಯನು I ಕೈಗೊಳ್ಳುವರು ನನ್ನ ಆಜ್ಞೆಗಳನು II
- Verse 9: ಎಫ್ರಯಿಮರು ಹೋದರು ಧನುರ್ಧಾರಿಗಳಾಗಿ I ಯುದ್ಧವೇಳೆಯಲಿ ಓಡೋಡಿದರು ಹಿಂದಿರುಗಿ II
- Verse 10: ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು I ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು II
- Verse 11: ಮರೆತುಬಿಟ್ಟರವರು ಆತನ ಮಹತ್ಕಾರ್ಯಗಳನು I ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು : II
- Verse 12: ಆ ಈಜಿಪ್ಟ್ ದೇಶದೊಳು, ಸೋನ್ ಬಯಲು ಸೀಮೆಯೊಳು I ಆತನೆಸಗಿದ ಪವಾಡಗಳು ಪೂರ್ವಜರ ಇದಿರೊಳು II
- Verse 13: ದಾಟಿಸಿದನವರನು ಸಮುದ್ರವನೆ ಭೇದಿಸಿ I ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ II
- Verse 14: ಹಗಲಲಿ ಕರೆದೊಯ್ದನು ಮೇಘದ ನೆರಳಲಿ I ಇರುಳೊಳು ನಡೆಸಿದನು ಜ್ವಾಲೆಯ ಬೆಳಕಲಿ II
- Verse 15: ಕಾಡಿನಾ ಕಗ್ಗಲ್ಲನು ಸೀಳಿ ಹೊರಡಿಸಿದನು ನೀರನು I ಆಳದ ಸರಸಿಯಿಂದೊ ಎಂಬಂತೆ ಅದನು ಕುಡಿಯಲಿತ್ತನು II
- Verse 16: ಬಂಡೆಗಳಿಂದಲೆ ಹೊರಡಿಸಿದನು ನೀರನು I ನದಿಗಳಂತೆಯೆ ಹರಿಯಮಾಡಿದನು ಅದನು II
- Verse 17: ಆದರೂ ಪಾಪಮಾಡುತ್ತಲೆ ಬಂದರು ದೇವರಿಗೆದುರಾಗಿ I ಪ್ರತಿಭಟಿಸಿದರು ಅಡವಿಯಲಿ ಪರಾತ್ಪರನಿಗೆ ವಿರುದ್ಧವಾಗಿ II
- Verse 18: ಕೋರಿದರು ತಮಗಿಷ್ಟವಾದ ಆಹಾರವನೇ I ಪರೀಕ್ಷಿಸಿದರು ಮನದಲಿ ಆ ದೇವರನೇ II
- Verse 19: ಜರೆವ ಮಾತಿನಲಿ ಆಡಿಕೊಂಡರಿಂತು : I “ಅಡವಿಯಲ್ಲಿ ದೇವನೂಟ ಬಡಿಸುವನೆಂತು?” II
- Verse 20: “ಹೊಡೆದನು ಆಸರೆಯನು, ಚಿಮ್ಮಿತು ನೀರು, ಹರಿಯಿತು ನೆರೆಯು I ಆದರೆ ಕೊಡಬಲ್ಲನೆ ರೊಟ್ಟಿ, ಒದಗಿಸುವನೆ ಮಾಂಸವನು?” II
- Verse 21: ಇದನ್ನು ಕೇಳಿ ಸಿಡಿದೆದ್ದನು ಪ್ರಭು ರೋಷದಿಂದಲೆ I ಉಕ್ಕೇರಿತಾತನ ಕೋಪ ಇಸ್ರಯೇಲರ ಮೇಲೆ I ಕಾರಿದನು ಕೋಪಾಗ್ನಿಯನು ಯಕೋಬಕುಲದ ಮೇಲೆ II
- Verse 22: ಏಕೆನೆ, ಅವರಿಗಿರಲಿಲ್ಲ ವಿಶ್ವಾಸ ದೇವರಲಿ I ಇರಲಿಲ್ಲ ನಂಬಿಕೆ ಆತನಾ ಸಲಹುವ ಶಕ್ತಿಯಲಿ II
- Verse 23: ಆದರು ಮೇಘಮಂಡಲಕೆ ಆಜ್ಞೆಯಿತ್ತನಾತ I ಅಂತರಿಕ್ಷದಾ ದ್ವಾರಗಳನು ತೆರೆದನಾತ II
- Verse 24: ಸುರಿಸಿದನು ಅವರ ಮೇಲೆ ಉಣಲು ಅನ್ನವನು I ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು II
- Verse 25: ನರರಿಗುಣಲುಕೊಟ್ಟನು ದೇವದೂತರ ಆಹಾರವನು I ಇತ್ತನವರಿಗೆ ತೃಪ್ತಿಕರವಾದ ಭೂರಿ ಔತಣವನು II
- Verse 26: ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು I ಒಲುಮೆಯಿಂದ ಹೊರಡಿಸಿದನು ತೆಂಕಣ ಗಾಳಿಯನು II
- Verse 27: ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು I ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು II
- Verse 28: ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ I ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ II
- Verse 29: ಸಿಕ್ಕಿತು ಅವರಿಗೆ ತಾವು ಬಯಸಿದ್ದು I ತೃಪ್ತರಾದರು ಹೊಟ್ಟೆತುಂಬ ತಿಂದು II
- Verse 30: ಆದರೆ ಆ ಜನಕೆ ಆಶೆ ಕೈಗೂಡುವುದಕೆ ಮುನ್ನ I ಬಾಯಿಗೆ ಬಂದ ತುತ್ತು ಹೊಟ್ಟೆಗಿಳಿಯುವುದಕ್ಕೆ ಮುನ್ನ II
- Verse 31: ದೈವಕೋಪವೆದ್ದಿತು ಅವರಿಗೆ ವಿರುದ್ಧ I ಮಾಡಿತವರಲಿ ಕೊಬ್ಬಿದವರ ವಧ I ನೆಲಕುರುಳಿತು ಇಸ್ರಯೇಲ ಸಿರಿಜನ II
- Verse 32: ಇಷ್ಟಾದರೂ ಪಾಪಮಾಡುತ ಬಂದವರು ಪದೇ ಪದೇ I ದೇವರ ಅದ್ಭುತಕಾರ್ಯಗಳನು ತೊರೆದರು ನಂಬದೆ II
- Verse 33: ಆರಿಸಿದನು ಊದಿ ಅವರ ಬಾಳ ಹಣತೆಯನು I ಬರಮಾಡಿದನು ಅವರಿಗೆ ಭೀಕರ ಮರಣವನು II
- Verse 34: ಆತನನು ನೆನಸಿಕೊಂಡರವರು ವಧೆಯಾಗುವಾಗ I ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ II
- Verse 35: ನೆನೆದರಾಗ ದೇವರೇ ತಮಗಾಶ್ರಯ ದುರ್ಗವೆಂದು I ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು II
- Verse 36: ಆದರೆ ಅವರ ನಾಲಿಗೆಯಾಡಿತು ಅಸತ್ಯ I ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ II
- Verse 37: ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ I ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ II
- Verse 38: ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ I ಕೋಪವ ತಾಳಿಕೊಂಡನು ಹಲವು ವೇಳೆ, ಉದ್ರೇಕಗೊಳ್ಳದೆ II
- Verse 39: ನೆನೆದುಕೊಂಡನಾತ ಅವರು ಕೇವಲ ನರರೆಂದು I ತಿಳಿದುಕೊಂಡನು ಮರಳಿಬಾರದ ಉಸಿರವರೆಂದು II
- Verse 40: ಎಷ್ಟೋ ಸಾರಿ ಅವಿಧೇಯರಾಗಿ ನಡೆದುಕೊಂಡರು ಅರಣ್ಯದಲಿ I ಎಷ್ಟೋ ಸಾರಿ ಆತನ ಮನನೋಯಿಸಿದರು ಮರುಭೂಮಿಯಲಿ II
- Verse 41: ಪದೇಪದೇ ಪರೀಕ್ಷಿಸಿದರು ದೇವರನು I ಕೆಣಕಿದರು ಇಸ್ರಯೇಲರ ಸದಮಲನನು II
- Verse 42: ಮರೆತೇಬಿಟ್ಟರು ಆತನ ಭುಜಬಲವನು I ವೈರಿಗಳಿಂದ ಬಿಡುಗಡೆಯಾದಾ ಸಮಯವನು II
- Verse 43: ಕಡೆಗಣಿಸಿದರು ಈಜಿಪ್ಟಿನಲಿ ಮಾಡಿದ ಪವಾಡಗಳನು I ಸೋನ್ ಬಯಲು ಸೀಮೆಯಲಾತ ಮಾಡಿದ ಮಹತ್ಕಾರ್ಯಗಳನು II
- Verse 44: ಅಲ್ಲಿ ಆತ ರಕ್ತವಾಗಿಸಿದನು ನದಿನೀರನು I ಕುಡಿಯಲಾಗದಂತೆ ಮಾಡಿದನಾ ತೊರೆನೀರನು II
- Verse 45: ಕಳುಹಿಸಿದನು ವಿನಾಶಕರ ಹುಳುಗಳನು I ಹಾಳುಮಾಡುವ ವಿಷಮಂಡೂಕಗಳನು II
- Verse 46: ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ I ಕಷ್ಟದ ಫಲಗಳನು ಮಿಡತೆಗಳಿಗೆ II
- Verse 47: ದ್ರಾಕ್ಷಾಲತೆಗಳನು ಹಾಳುಮಾಡಿದನು ಆಲಿಕಲ್ಲಿನಿಂದ I ಅವರ ಅತ್ತಿಮರಗಳನು ನಾಶಮಾಡಿದನು ಕಲ್ಮಳೆಯಿಂದ II
- Verse 48: ಅವರ ದನಕರುಗಳನೊಪ್ಪಿಸಿದ ಕಲ್ಮಳೆಗೆ I ಅವರ ಕುರಿಮಂದೆಗಳನೊಪ್ಪಿಸಿದ ಸಿಡಿಲಿಗೆ II
- Verse 49: ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II
- Verse 50: ತೂಬೆತ್ತಿಬಿಟ್ಟನು ತನ್ನ ಕ್ರೋಧಕೆ I ತುತ್ತಾಗಿಸಿದನು ದೇಹಗಳನು ಜಾಡ್ಯಕೆ I ಅಡ್ಡಿತರಲಿಲ್ಲ ಆತನು ಅವರ ಮರಣಕೆ II
- Verse 51: ಸಂಹರಿಸಿದನು ಈಜಿಪ್ಟಿನ ಚೊಚ್ಚಲ ಮಕ್ಕಳನು I ಹಾಮನ ಮನೆತನದ ಮೊತ್ತಮೊದಲ ಸಂತಾನವನು II
- Verse 52: ತನ್ನ ಜನರನ್ನೋ ಹೊರತಂದನು ಕುರಿಮಂದೆಯಂತೆ I ಅಡವಿಯೊಳು ಪರಿಪಾಲಿಸಿದನು ಕುರಿಗಾಹಿಯಂತೆ II
- Verse 53: ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II
- Verse 54: ಕರೆತಂದನವರನು ತನ್ನ ಪವಿತ್ರನಾಡಿಗೆ I ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ II
- Verse 55: ಓಡಿಸಿದನು ಅವರಿಗೆದುರಾಗಿದ್ದ ಜನಾಂಗಗಳನು I ಸೊತ್ತಾಗಿ ಹಂಚಿದನು ಇಸ್ರಯೇಲರಿಗಾ ನಾಡನು I ನೆಲೆಗೊಳಿಸಿದನಾ ಜನಾಂಗದ ಬಿಡಾರದಲಿ ಇವರನು II
- Verse 56: ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಪರ ದೇವರನು I ಕೈಗೊಂಡು ನಡೆಯದೆ ಹೋದರು ಆತನ ವಿಧಿನಿಯಮಗಳನು II
- Verse 57: ನಂಬಿಕೆಗೆಟ್ಟ ದ್ರೋಹಿಗಳಾದರು ತಮ್ಮ ಹಿರಿಯರಂತೆ I ಆತನಿಗೆ ಎದುರುಬಿದ್ದರು ಹಿಮ್ಮುಖವಾದ ಬಿಲ್ಲಿನಂತೆ II
- Verse 58: ಬೇಸರಗೊಳಿಸಿದರು ತಮ್ಮ ಪೂಜಾಸ್ಥಾನಗಳಿಂದ I ರೇಗಿಸಿದರಾತನನು ಕೆತ್ತನೆಯ ವಿಗ್ರಹಗಳಿಂದ II
- Verse 59: ರಣರೌದ್ರನಾದನು ಇದನರಿತ ದೇವನು I ತೊರೆದನು ಅಸಹ್ಯದಿಂದ ಇಸ್ರಯೇಲರನು II
- Verse 60: ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು I ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು II
- Verse 61: ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ I ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ II
- Verse 62: ಗುರಿಮಾಡಿದನು ತನ್ನ ಪ್ರಜೆಯನು ಖಡ್ಗಕೆ I ಉಗ್ರವಾದನು ತನ್ನ ವಾರಸುದಾರರಿಗೆ II
- Verse 63: ಆಹುತಿಯಾದರವರ ಯುವಜನ ಅಗ್ನಿಗೆ I ವಿವಾಹವಾಗಲಿಲ್ಲ ಅವರ ಕನ್ಯೆಯರಿಗೆ II
- Verse 64: ಬಲಿಯಾದರವರ ಯಾಜಕರು ಶತ್ರುಕತ್ತಿಗೆ I ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ II
- Verse 65: ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ I ಮಧುವಿನ ಅಮಲಿನಿಂದೆಚ್ಚೆತ್ತ ಬಲಿಷ್ಠನಂತೆ II
- Verse 66: ಸದೆಬಡಿದನಾತ ತನ್ನ ಶತ್ರುಗಳನು I ನಿತ್ಯನಿಂದೆಗೆ ಈಡುಮಾಡಿದನವರನು II
- Verse 67: ವರ್ಜಿಸಿದನು ಜೋಸೆಫ್ ಕುಲದ ಗುಡಾರವನು I ತ್ಯಜಿಸಿದನು ಎಫ್ರಯಿಮ್ ಕುಲದಾ ಗುಡಾರವನು II
- Verse 68: ಆರಿಸಿಕೊಂಡನು ಯೆಹೂದರ ಗೋತ್ರವನು I ತನಗತಿಪ್ರಿಯವಾದ ಸಿಯೋನ್ ಗಿರಿಯನು II
- Verse 69: ನಿರ್ಮಿಸಿದನು ತನ್ನ ಮಂದಿರವನು ಪರ್ವತದಂತೆ I ಶಾಶ್ವತವಾಗಿ ತಾನು ಸ್ಥಾಪಿಸಿದ ಭೂಮಿಯಂತೆ II
- Verse 70: ಆರಿಸಿಕೊಂಡನು ದಾಸ ದಾವೀದನನು I ತೆಗೆದುಕೊಂಡನು ಕುರಿಹಟ್ಟಿಯಿಂದವನನು II
- Verse 71: ಕುರಿಮೇಯಿಸುವಾ ಕಸಬಿನಿಂದವನನು ಬಿಡಿಸಿದನು I ಸ್ವಪ್ರಜೆ ಯಕೋಬ್ಯರನು, ಸ್ವಜನ ಇಸ್ರಯೇಲರನು I ಪರಿಪಾಲಿಸುವಂತೆ ನೇಮಕ ಮಾಡಿದನು ಆತನನು II
- Verse 72: ದಾವೀದನು ಪೋಷಿಸಿದನವರನು ನೇರ ಮನದಿಂದ I ಪರಿಪಾಲಿಸಿದನವರನು ರಾಜ್ಯಾಧಿಕಾರ ಕುಶಲತೆಯಿಂದ II