ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
1ನೇ ಅಧ್ಯಾಯ
- Verse 1: ಇಸ್ರಯೇಲರಿಗೆ ಅರಸನಾಗಿದ್ದ ದಾವೀದನ ಮಗ ಸೊಲೊಮೋನನ ಜ್ಞಾನೋಕ್ತಿಗಳು:
- Verse 2: ಜ್ಞಾನವನ್ನೂ ಶಿಸ್ತನ್ನೂ ಪಡೆಯುವುದಕ್ಕೆ ಒಳನೋಟದ ಮಾತುಗಳನ್ನು ಗ್ರಹಿಸುವುದಕ್ಕೆ,
- Verse 3: ವಿವೇಕ ಹಾಗೂ ನ್ಯಾಯನೀತಿಯ ಮಾರ್ಗದಲ್ಲಿ ಶಿಕ್ಷಿತರಾಗುವುದಕ್ಕೆ ಮತ್ತು
- Verse 4: ಮೂಢರಿಗೆ ಬುದ್ಧಿಯನ್ನೂ ಯುವಜನರಿಗೆ ತಿಳುವಳಿಕೆಯನ್ನೂ ಕಲಿಸುವುದಕ್ಕೆ ಒದಗುತ್ತವೆ ಈ ಜ್ಞಾನೋಕ್ತಿಗಳು.
- Verse 5: ಇವುಗಳನ್ನು ಕೇಳಿ ಜಾಣನು ಇನ್ನೂ ಜಾಣ ನಾಗುವನು, ವಿವೇಕಿಯು ಮತ್ತಷ್ಟು ಜ್ಞಾನಸಂಪನ್ನನಾಗುವನು.
- Verse 6: ಗಾದೆಗಳನ್ನೂ ಗೂಢಾರ್ಥಗಳನ್ನೂ ಜ್ಞಾನಿಯ ನುಡಿ ಹಾಗು ಒಗಟುಗಳನ್ನೂ ತಿಳಿದುಕೊಳ್ಳಲು ಸಹ ಇವು ಸಾಧನಗಳು.
- Verse 7: ಸರ್ವೇಶ್ವರನಲ್ಲಿ ಭಯಭಕ್ತಿಯೇ ಜ್ಞಾನಕ್ಕೆ ಮೂಲ; ಮೂರ್ಖರಿಗಾದರೋ ಜ್ಞಾನ, ಶಿಸ್ತು ಎಂದರೆ ತಾತ್ಸಾರ.
- Verse 8: ಮಗನೇ, ನಿನ್ನ ತಂದೆಯ ಬೋಧೆಗೆ ಕಿವಿಗೊಡು, ನಿನ್ನ ತಾಯಿಯ ಉಪದೇಶವನ್ನು ತೊರೆಯದಿರು.
- Verse 9: ಅವು ನಿನ್ನ ತಲೆಗೆ ಸುಂದರ ಕಿರೀಟ, ನಿನ್ನ ಕೊರಳಿಗೆ ಕಂಠಾಭರಣ.
- Verse 10: ಮಗನೇ, ಪಾಪಿಗಳ ಪ್ರೇರಣೆಗೆ ಒಪ್ಪಿಗೆ ಕೊಡಲೇಬೇಡ.
- Verse 11: ಅವರು ನಿನಗೆ “ನಮ್ಮೊಡನೆ ಬಾ, ಹೊಂಚುಹಾಕಿ ಹತ್ಯೆಮಾಡೋಣ;
- Verse 12: ಪಾತಾಳಕ್ಕಿಳಿಯುವವರನ್ನು ನರಕ ನುಂಗುವಂತೆ ಅವರನ್ನು ಜೀವಸಹಿತ ಪೂರ್ತಿಯಾಗಿ ಕಬಳಿಸಿಬಿಡೋಣ ಬಾ;
- Verse 13: ಅಮೂಲ್ಯವಾದ ಸೊತ್ತನ್ನೆಲ್ಲಾ ಕಂಡುಹಿಡಿಯೋಣ; ಕೊಳ್ಳೆಹೊಡೆದು ಮನೆ ತುಂಬಿಸಿಕೊಳ್ಳೋಣ, ಬಾ;
- Verse 14: ನಮ್ಮೊಡನೆ ಪಾಲುಗಾರನಾಗಲು ಬಾ; ನಮ್ಮೆಲ್ಲರ ನಿಧಿ ಒಂದೇ ಆಗಿರಲಿ” ಎಂದೆಲ್ಲಾ ಹೇಳುವರು.
- Verse 15: ಆದರೆ ಮಗನೇ, ಅವರೊಡನೆ ಸೇರಬೇಡ; ನೀನು ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
- Verse 16: ಅವರ ಕಾಲು ಕೇಡನ್ನು ಹಿಂಬಾಲಿಸಿ ಓಡುತ್ತವೆ ರಕ್ತಪಾತಕ್ಕಾಗಿ ಅವರು ತುಡಿಯುತ್ತಿರುತ್ತಾರೆ.
- Verse 17: ರೆಕ್ಕೆಯುಳ್ಳ ಹಕ್ಕಿಯ ಕಣ್ಣೆದುರಿಗೇ ಬಲೆಯನ್ನು ಹರಡುವುದು ವ್ಯರ್ಥವಲ್ಲವೆ?
- Verse 18: ಇಂಥವರು ಹೊಂಚುಹಾಕುವುದು ಸ್ವಹತ್ಯಕ್ಕೇ, ಬಲೆ ಒಡ್ಡುವುದು ಸ್ವಂತ ಪ್ರಾಣನಾಶಕ್ಕೆ.
- Verse 19: ಸೂರೆ ಮಾಡುವವರೆಲ್ಲರ ಪಾಡು ಇದುವೆ; ಕೊಳ್ಳೆಯು, ಕೊಳ್ಳೆಗಾರರ ಪ್ರಾಣವನ್ನೇ ಕೊಳ್ಳೆಮಾಡುತ್ತದೆ.
- Verse 20: ಜ್ಞಾನವೆಂಬಾಕೆ ಹಾದಿಗಳಲ್ಲಿ ಕೂಗುತ್ತಾ ಇದ್ದಾಳೆ; ಬೀದಿಚೌಕಗಳಲ್ಲಿ ದನಿಗೈಯುತ್ತಾ ಇದ್ದಾಳೆ;
- Verse 21: ಪೇಟೆಯ ಜನಜಂಗುಳಿಯ ನಡುವೆ, ಪುರ ದ್ವಾರಗಳಲ್ಲೆ, ಹೀಗೆಂದು ಪ್ರಚಾರ ಮಾಡುತ್ತಿದ್ದಾಳೆ:
- Verse 22: “ಮೂಢರೇ, ಎಂದಿನ ತನಕ ಮೂಢರಾಗಿರಲಾಶಿಸುವಿರಿ? ಕುಚೋದ್ಯಗಾರರೇ, ಎಷ್ಟುಕಾಲ ಕುಚೋದ್ಯಗಾರರಾಗಿರಲಿಚ್ಚಿಸುವಿರಿ? ಮೂರ್ಖರೇ, ಎಷ್ಟರವರೆಗೆ ತಿಳುವಳಿಕೆಯನ್ನು ಹಗೆಮಾಡುವಿರಿ?
- Verse 23: ನನ್ನ ಎಚ್ಚರಿಕೆಯ ಮಾತಿನತ್ತ ಗಮನಕೊಡಿ; ನನ್ನ ಚೈತನ್ಯವನ್ನು ನಿಮ್ಮ ಮೇಲೆ ಸುರಿಸಿ, ನನ್ನ ನುಡಿಯನ್ನು ನಿಮಗೆ ತಿಳಿಯಪಡಿಸುವೆನು.
- Verse 24: ನಾನು ನಿಮ್ಮನ್ನು ಕರೆದಾಗ ತಿರಸ್ಕರಿಸಿದಿರಿ. ನಾನು ನಿಮಗೆ ಕೈ ನೀಡಿದಾಗ ಗಮನಿಸದೆ ಹೋದಿರಿ.
- Verse 25: ನನ್ನ ಬುದ್ಧಿವಾದವನ್ನು ಅಲಕ್ಷ್ಯಮಾಡಿದಿರಿ, ನನ್ನ ತಿದ್ದುಪಾಟನ್ನು ತಳ್ಳಿಬಿಟ್ಟಿರಿ.
- Verse 26: ಆದುದರಿಂದ ಬಿರುಗಾಳಿಯಂತೆ ನಿಮಗೆ ಅಪಾಯಬಂದಾಗ, ತುಫಾನಿನಂತೆ ನಿಮಗೆ ಆಪತ್ತು ಬಂದೊದಗಿದಾಗ,
- Verse 27: ಕಷ್ಟಸಂಕಟಗಳು ನಿಮಗೆ ಸಂಭವಿಸಿದಾಗ ನಿಮ್ಮನ್ನು ಕುರಿತು ನಾನೆ ನಕ್ಕು ಪರಿಹಾಸ್ಯ ಮಾಡುವೆನು.
- Verse 28: ಆಗ ನನಗೆ ಮೊರೆಯಿಟ್ಟರೂ ಉತ್ತರಿಸೆನು; ಆತುರದಿಂದ ಹುಡುಕಿದರೂ ನಾನು ಕಾಣಸಿಗೆನು.
- Verse 29: ಏಕೆಂದರೆ ಸುಜ್ಞಾನವನ್ನೇ ಅವರು ದ್ವೇಷಿಸಿದರು, ಸರ್ವೇಶ್ವರನಲ್ಲಿ ಭಯಭಕ್ತಿಯಿರಿಸದೆ ಹೋದರು.
- Verse 30: ನನ್ನ ಆಲೋಚನೆಯನ್ನು ಅವರು ಕೇಳಲಿಲ್ಲ, ನನ್ನ ಪ್ರತಿಯೊಂದು ಎಚ್ಚರಿಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
- Verse 31: ಈ ಕಾರಣ, ತಮ್ಮ ನಡತೆಗೆ ತಕ್ಕ ಫಲವನ್ನು ಅನುಭವಿಸುವರು, ತಮ್ಮ ಕುಯುಕ್ತಿಗಳ ಪರಿಣಾಮದಿಂದ ಹೊಟ್ಟೆ ತುಂಬಿಸಿಕೊಳ್ಳುವರು.
- Verse 32: ಮೂಢರು ತಮ್ಮ ಉದಾಸೀನತೆಯಿಂದಲೆ ಹತರಾಗುವರು. ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೆ ನಾಶವಾಗುವರು.
- Verse 33: ನನ್ನ ಮಾತಿಗೆ ಕಿವಿಗೊಡುವವರಾದರೋ ಸುರಕ್ಷಿತವಾಗಿರುವರು, ಕೇಡಿಗೆ ಭಯಪಡದೆ ನೆಮ್ಮದಿಯಾಗಿ ಬಾಳುವರು.