P. O. C ബൈബിള്
ಹೊಸ ಒಡಂಬಡಿಕೆ
ಲೂಕ
11ನೇ ಅಧ್ಯಾಯ
- Verse 1: ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು. “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆಮಾಡಬೇಕು: ತಂದೆಯೇ,
- Verse 2: ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ.
- Verse 3: ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ.
- Verse 4: ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.”
- Verse 5: ಪುನಃ ಯೇಸುಸ್ವಾಮಿ ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು.
- Verse 6: ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು,
- Verse 7: ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ?
- Verse 8: ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದುಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ.
- Verse 9: ಆದುದರಿಂದ: ‘ಕೇಳಿರಿ, ನಿಮಗೆ ದೊರಕುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.
- Verse 10: ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’
- Verse 11: “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?
- Verse 12: ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?
- Verse 13: ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”
- Verse 14: ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟುಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು.
- Verse 15: ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ
- Verse 16: ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು.
- Verse 17: ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು.
- Verse 18: ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು?
- Verse 19: ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
- Verse 20: ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ.
- Verse 21: “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ.
- Verse 22: ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ.
- Verse 23: “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ,” ಎಂದರು.
- Verse 24: ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ.
- Verse 25: ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ.
- Verse 26: ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು.
- Verse 27: ಯೇಸುಸ್ವಾಮಿ ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, “ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!” ಎಂದು ಕೂಗಿ ಹೇಳಿದಳು.
- Verse 28: ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!” ಎಂದರು.
- Verse 29: ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.
- Verse 30: ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.
- Verse 31: “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
- Verse 32: ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
- Verse 33: “ಯಾರೂ ದೀಪವನ್ನು ಹಚ್ಚಿ ನೆಲಮಾಳಿಗೆಯಲ್ಲಾಗಲಿ, ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ.
- Verse 34: “ನಿನ್ನ ಕಣ್ಣೇ ದೇಹಕ್ಕೆ ದೀಪ; ನಿನ್ನ ಕಣ್ಣು ಸರಿಯಿದ್ದರೆ ನಿನ್ನ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ, ದೇಹವೆಲ್ಲಾ ಕತ್ತಲೆಮಯವಾಗುವುದು.
- Verse 35: ಆದುದರಿಂದ ನಿನ್ನೊಳಗಿರುವ ಬೆಳಕಿಗೆ ಕತ್ತಲೆ ಕವಿಯದಂತೆ ಎಚ್ಚರಿಕೆ ವಹಿಸು.
- Verse 36: ದೇಹದ ಯಾವುದೊಂದು ಭಾಗದಲ್ಲೂ ಕತ್ತಲೆಯಿಲ್ಲದೆ ದೇಹವೆಲ್ಲ ಕಾಂತಿಮಯವಾಗಿದ್ದರೆ, ದೀಪವು ತನ್ನ ಪ್ರಕಾಶದಿಂದ ನಿನ್ನನ್ನು ಬೆಳಗಿಸುವಂತೆ, ನಿನ್ನ ದೇಹದಾದ್ಯಂತವೂ ದೇದೀಪ್ಯಮಾನವಾಗಿರುವುದು,” ಎಂದರು.
- Verse 37: ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು.
- Verse 38: ಊಟಕ್ಕೆ ಮುಂಚೆ ಅವರು ಕೈ ತೊಳೆಯದೆಹೋದುದನ್ನು ಕಂಡು ಫರಿಸಾಯನು ಚಕಿತನಾದನು.
- Verse 39: ಆಗ ಯೇಸು, “ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ.
- Verse 40: ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಲಿಲ್ಲವೇ?
- Verse 41: ನಿಮ್ಮ ತಟ್ಟೆ, ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವು ನಿಮಗೆ ಶುದ್ಧಿಯಾಗಿರುವುದು.
- Verse 42: “ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು.
- Verse 43: “ಫರಿಸಾಯರೇ ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ.
- Verse 44: ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.
- Verse 45: ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು.
- Verse 46: ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ.
- Verse 47: ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದುಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ.
- Verse 48: ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು.
- Verse 49: ಈ ಕಾರಣದಿಂದಲೇ ‘ದೇವರ ಜ್ಞಾನವು’ ಹೇಳಿರುವುದೇನೆಂದರೆ - ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆಮಾಡುವರು; ಕೆಲವರನ್ನು ಚಿತ್ರಹಿಂಸೆಪಡಿಸುವರು.
- Verse 50: ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
- Verse 51: ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
- Verse 52: ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,” ಎಂದರು.
- Verse 53: ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ,
- Verse 54: ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.