வேதாகமம்
ಹೊಸ ಒಡಂಬಡಿಕೆ
ಪ್ರೇಷಿತರ ಕಾರ್ಯಕಲಾಪಗಳು
10ನೇ ಅಧ್ಯಾಯ
- Verse 1: ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ಅವನು ‘ಇಟಲಿಯ ದಳ’ದಲ್ಲಿ ಒಬ್ಬ ಶತಾಧಿಪತಿ.
- Verse 2: ಅವನೂ ಅವನ ಕುಟುಂಬವೂ ದೇವರಲ್ಲಿ ಭಯಭಕ್ತಿಯಿಂದ ಜೀವಿಸುತ್ತಿದ್ದರು. ಯೆಹೂದ್ಯರಿಗೆ ಅವನು - ಧಾರಾಳವಾಗಿ ದಾನಧರ್ಮಮಾಡುತ್ತಿದ್ದನು. ದೇವರಿಗೆ ತಪ್ಪದೆ ಪ್ರಾರ್ಥನೆ ಸಲ್ಲಿಸುತ್ತಿದ್ದನು.
- Verse 3: ಅದೊಂದು ಮಧ್ಯಾಹ್ನ, ಸುಮಾರು ಮೂರು ಗಂಟೆಯ ಸಮಯ, ಅವನಿಗೊಂದು ದಿವ್ಯದರ್ಶನವಾಯಿತು: ದೇವದೂತನೊಬ್ಬನು ತನ್ನ ಮನೆಯೊಳಗೆ ಬಂದು, “ಕೊರ್ನೇಲಿಯಾ,” ಎಂದು ಕರೆಯುವುದನ್ನು ಸ್ಪಷ್ಟವಾಗಿ ಕಂಡನು.
- Verse 4: ಕೊರ್ನೇಲಿಯನು ಭಯದಿಂದ ದೇವದೂತನನ್ನು ದಿಟ್ಟಿಸಿನೋಡುತ್ತಾ, “ಏನು ಸ್ವಾಮಿ?” ಎಂದನು. ಅದಕ್ಕೆ ದೇವದೂತನು, “ನಿನ್ನ ಪ್ರಾರ್ಥನೆ ಮತ್ತು ದಾನಧರ್ಮ ದೇವರನ್ನು ಮುಟ್ಟಿವೆ. ಅವರು ನಿನ್ನನ್ನು ಮೆಚ್ಚಿದ್ದಾರೆ; ನಿನ್ನ ಕೋರಿಕೆಗಳನ್ನು ಈಡೇರಿಸಲಿದ್ದಾರೆ.
- Verse 5: ನೀನು ಈಗಲೇ ಜೊಪ್ಪಕ್ಕೆ ಆಳುಗಳನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು.
- Verse 6: ಅವನು, ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದು ಹೇಳಿ ದೂತನು ಅದೃಶ್ಯನಾದನು.
- Verse 7: ಕೂಡಲೇ ಕೊರ್ನೇಲಿಯನು ತನ್ನ ಇಬ್ಬರು ಪರಿಚಾರಕರನ್ನೂ ತನ್ನ ಪಹರೆಯವರಲ್ಲಿ ಧರ್ಮನಿಷ್ಠನಾಗಿದ್ದ ಒಬ್ಬ ಸೈನಿಕನನ್ನೂ ಕರೆದು,
- Verse 8: ನಡೆದುದೆಲ್ಲವನ್ನೂ ತಿಳಿಸಿ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.
- Verse 9: ಮಾರನೆಯ ದಿನ ಅವರು ಪ್ರಯಾಣ ಮಾಡಿ ಜೊಪ್ಪವನ್ನು ಸಮೀಪಿಸಿದಾಗ ಮಧ್ಯಾಹ್ನ ಸಮಯ. ಆಗತಾನೇ ಪೇತ್ರನು ಪ್ರಾರ್ಥನೆ ಮಾಡಲು ಮಾಳಿಗೆಯ ಮೇಲಕ್ಕೆ ಹೋದನು.
- Verse 10: ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕು ಎನಿಸಿತು. ಊಟ ಸಿದ್ಧವಾಗುತ್ತಿದ್ದಂತೆ, ಪೇತ್ರನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡನು.
- Verse 11: ಸ್ವರ್ಗದ ಬಾಗಿಲು ತೆರೆಯಿತು. ದೊಡ್ಡ ದುಪ್ಪಟಿಯಂತಹ ವಸ್ತುವೊಂದು ಇಳಿದು ಬರುತ್ತಿತ್ತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಭೂಮಿಯ ಮೇಲೆ ಅದನ್ನು ಇಳಿಯಬಿಡಲಾಗಿತ್ತು.
- Verse 12: ಅದರಲ್ಲಿ, ಹರಿದಾಡುವ ಕ್ರಿಮಿಕೀಟಗಳು, ಹಾರಾಡುವ ಪಕ್ಷಿಗಳು ಮತ್ತು ಎಲ್ಲಾ ತರಹದ ಪ್ರಾಣಿಗಳು ಇದ್ದವು.
- Verse 13: ಅಲ್ಲದೆ, “ಪೇತ್ರಾ, ಏಳು, ಕೊಯ್ದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.
- Verse 14: ಪೇತ್ರನು, “ಇದು ಬೇಡವೆ ಬೇಡ ಸ್ವಾಮಿ, ಅಶುದ್ಧ ಹಾಗೂ ನಿಷಿದ್ಧ ಆದುದನ್ನು ನಾನೆಂದೂ ತಿಂದವನಲ್ಲ,” ಎಂದನು.
- Verse 15: ಅದಕ್ಕೆ ಮತ್ತೊಮ್ಮೆ ಆ ವಾಣಿ ಅವನಿಗೆ, “ದೇವರೇ ಶುದ್ಧೀಕರಿಸಿರುವ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.
- Verse 16: ಹೀಗೆ ಮೂರು ಸಾರಿ ನಡೆದ ಮೇಲೆ ಆ ವಸ್ತುವನ್ನು ಸ್ವರ್ಗಕ್ಕೆ ಎತ್ತಿಕೊಳ್ಳಲಾಯಿತು.
- Verse 17: ಇತ್ತ ಪೇತ್ರನು ತಾನು ಕಂಡ ದರ್ಶನದ ಅರ್ಥವೇನಿರಬಹುದೆಂದು ತಬ್ಬಿಬ್ಬಾದನು. ಅಷ್ಟರಲ್ಲಿ ಕೊರ್ನೇಲಿಯನು ಕಳುಹಿಸಿದ್ದ ಆಳುಗಳು ಸಿಮೋನನ ಮನೆಯನ್ನು ವಿಚಾರಿಸಿ ಕಂಡುಹಿಡಿದರು. ಹೊರಬಾಗಿಲ ಬಳಿ ನಿಂತುಕೊಂಡು,
- Verse 18: “ಪೇತ್ರನೆಂದು ಕರೆಯಲಾಗುವ ಸಿಮೋನ ಎಂಬವರು ಇಲ್ಲಿ ತಂಗಿರುವರೇ?” ಎಂದು ಕೂಗಿ ಕೇಳಿದರು.
- Verse 19: ಪೇತ್ರನು ತನ್ನ ದರ್ಶನವನ್ನು ಕುರಿತು ಇನ್ನೂ ಆಲೋಚಿಸುತ್ತಿರುವಾಗ ಪವಿತ್ರಾತ್ಮ ಅವರು, “ಇಗೋ, ಮೂರು ಜನರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ,
- Verse 20: ಸಿದ್ಧವಾಗಿ ಕೆಳಕ್ಕೆಹೋಗು. ನಾನೇ ಅವರನ್ನು ಕಳುಹಿಸಿರುವುದರಿಂದ ಸಂಕೋಚಪಡದೆ ಅವರೊಡನೆ ಹೋಗು,” ಎಂದರು.
- Verse 21: ಪೇತ್ರನು ಕೆಳಕ್ಕೆ ಹೋಗಿ ಆ ಜನರನ್ನು ನೋಡಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ. ನೀವು ಬಂದ ಕಾರಣವೇನು?” ಎಂದು ವಿಚಾರಿಸಿದನು.
- Verse 22: “ಶತಾಧಿಪತಿ ಕೊರ್ನೇಲಿಯ ನಮ್ಮನ್ನು ಕಳುಹಿಸಿದರು. ಅವರೊಬ್ಬ ಸತ್ಪುರುಷರು, ದೈವಭಕ್ತರು, ಯೆಹೂದ್ಯ ಜನತೆಯಿಂದ ಗೌರವಾನ್ವಿತರು. ನಿಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ, ನೀವು ಹೇಳುವುದನ್ನು ಕೇಳಬೇಕೆಂದು ದೇವದೂತನಿಂದ ಆದೇಶಪಡೆದಿದ್ದಾರೆ,” ಎಂದರು.
- Verse 23: ಪೇತ್ರನು ಅವರನ್ನು ಒಳಕ್ಕೆ ಬರಮಾಡಿಕೊಂಡು ಉಪಚರಿಸಿ, ರಾತ್ರಿ ಅಲ್ಲೇ ತಂಗುವಂತೆ ಮಾಡಿದನು. ಮಾರನೆಯ ದಿನ ಪೇತ್ರನು ಅವರೊಡನೆ ಹೋದನು. ಜೊತೆಯಲ್ಲಿ ಜೊಪ್ಪದ ಕೆಲವು ಸಹೋದರರೂ ಹೋದರು.
- Verse 24: ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆ ಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು.
- Verse 25: ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿಯನು ಅವನನ್ನು ಎದುರುಗೊಂಡು, ಪಾದಕ್ಕೆರಗಿ, ಸಾಷ್ಟಾಂಗ ನಮಸ್ಕಾರಮಾಡಿದನು.
- Verse 26: ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದು ನಿಲ್ಲು, ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.
- Verse 27: ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು.
- Verse 28: ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆ. ಆದರೆ, ನಾನು ಯಾರನ್ನೂ ಅಶುದ್ಧ ಅಥವಾ ಅಸ್ಪೃಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ.
- Verse 29: ಆದುದರಿಂದಲೇ ನೀವು ಹೇಳಿಕಳುಹಿಸಿದಾಗ ನಾನು ಯಾವ ಆಕ್ಷೇಪಣೆಮಾಡದೆ ಬಂದಿದ್ದೇನೆ. ಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯಬಯಸುತ್ತೇನೆ,” ಎಂದನು.
- Verse 30: ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು.
- Verse 31: ಅವನು, “ಕೊರ್ನೇಲಿಯಾ, ದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆ; ನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ.
- Verse 32: ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊ. ಅವನು ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು.
- Verse 33: ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆ. ತಾವು ಇಲ್ಲಿಗೆ ದಯಮಾಡಿಸಿದಿರಿ. ಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.
- Verse 34: ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಮನದಟ್ಟಾಗಿದೆ.
- Verse 35: ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
- Verse 36: ಸಮಸ್ತ ಮಾನವಕೋಟಿಯ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ಶಾಂತಿ ಲಭಿಸುತ್ತದೆ ಎಂಬ ಶುಭಸಂದೇಶವನ್ನು ದೇವರು ಇಸ್ರಯೇಲ್ ಜನಾಂಗಕ್ಕೆ ಸಾರಿದರು. ಈ ವಿಷಯ ನಿಮಗೆ ತಿಳಿದಿದೆ.
- Verse 37: ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು.
- Verse 38: ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿ ಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು.
- Verse 39: ಅವರು ಯೆಹೂದ್ಯರ ಹಳ್ಳಿಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆಮರಕ್ಕೆ ನೇತುಹಾಕಿ ಕೊಂದರು.
- Verse 40: ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವಂತೆ ಮಾಡಿದರು.
- Verse 41: ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊಂದಿದ ನಂತರ ಅವರೊಡನೆಯೇ ಊಟಮಾಡಿದವರು ನಾವು.
- Verse 42: ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೂ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ.
- Verse 43: ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆಮಾಡಿದ್ದಾರೆ.”
- Verse 44: ಪೇತ್ರನು ಮಾತನಾಡುತ್ತಿದ್ದಂತೆ ಅವನ ಉಪದೇಶವನ್ನು ಕೇಳುತ್ತಿದ್ದ ಎಲ್ಲರ ಮೇಲೆ ಪವಿತ್ರಾತ್ಮ ಇಳಿದುಬಂದರು.
- Verse 45: ಎಲ್ಲರು ವಿವಿಧ ಭಾಷೆಗಳನ್ನು ಮಾತನಾಡುತ್ತಾ ದೇವರ ಮಹತ್ವವನ್ನು ಸ್ತುತಿಸತೊಡಗಿದರು. ಜೊಪ್ಪದಿಂದ ಪೇತ್ರನೊಡನೆ ಬಂದಿದ್ದ ಯೆಹೂದ್ಯ ಭಕ್ತವಿಶ್ವಾಸಿಗಳು ಇದನ್ನು ಕಂಡು, ದೇವರು ಅನ್ಯಧರ್ಮದವರ ಮೇಲೂ ಪವಿತ್ರಾತ್ಮಧಾರೆ ಎರೆಯುತ್ತಿದ್ದಾರಲ್ಲಾ ಎಂದು ವಿಸ್ಮಿತರಾದರು. ಆಗ ಪೇತ್ರನು,
- Verse 46: ಎಲ್ಲರು ವಿವಿಧ ಭಾಷೆಗಳನ್ನು ಮಾತನಾಡುತ್ತಾ ದೇವರ ಮಹತ್ವವನ್ನು ಸ್ತುತಿಸತೊಡಗಿದರು. ಜೊಪ್ಪದಿಂದ ಪೇತ್ರನೊಡನೆ ಬಂದಿದ್ದ ಯೆಹೂದ್ಯ ಭಕ್ತವಿಶ್ವಾಸಿಗಳು ಇದನ್ನು ಕಂಡು, ದೇವರು ಅನ್ಯಧರ್ಮದವರ ಮೇಲೂ ಪವಿತ್ರಾತ್ಮಧಾರೆ ಎರೆಯುತ್ತಿದ್ದಾರಲ್ಲಾ ಎಂದು ವಿಸ್ಮಿತರಾದರು. ಆಗ ಪೇತ್ರನು,
- Verse 47: “ನಮ್ಮಂತೆಯೇ ಪವಿತ್ರಾತ್ಮ ಅವರನ್ನು ಪಡೆದಿರುವ ಈ ಜನರಿಗೆ ದೀಕ್ಷಾಸ್ನಾನ ಕೊಡಲು ಅಭ್ಯಂತರವಿದೆಯೇ?’ ಎಂದನು.
- Verse 48: ಅನಂತರ ಅವರಿಗೆ ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನ ಪಡೆಯುವಂತೆ ಆಜ್ಞಾಪಿಸಿದನು. ಅದಾದ ಬಳಿಕ ತಮ್ಮೊಡನೆ ಕೆಲವು ದಿನ ಇರಬೇಕೆಂದು ಪೇತ್ರನನ್ನು ಆ ಜನರು ಕೇಳಿಕೊಂಡರು.