வேதாகமம்
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
10ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ಆಜ್ಞಾಪಿಸಿದರು:
- Verse 2: “ನೀನು ಬೆಳ್ಳಿಯ ತಗಡಿನಿಂದ ಎರಡು ಕಹಳೆಗಳನ್ನು ಮಾಡಿಸು. ಜನರನ್ನು ಸಭೆಸೇರಿಸುವುದಕ್ಕೂ ಹಾಗೂ ದಂಡನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸು.
- Verse 3: ಅವೆರಡನ್ನೂ ನೀನು ಊದಿಸುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
- Verse 4: ಒಂದನ್ನು ಮಾತ್ರ ಊದಿಸಿದಾಗ ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳಾದ ಮುಖ್ಯಸ್ಥರು ನಿನ್ನ ಬಳಿಗೆ ಕೂಡಿಬರಬೇಕು.
- Verse 5: ಆರ್ಭಟವಾಗಿ ಮೊಳಗಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು.
- Verse 6: ಎರಡನೆಯ ಸಾರಿ ಆರ್ಭಟವಾಗಿ ಮೊಳಗಿಸಿದಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣ ಹೊರಡಬೇಕಾದಾಗ ಆರ್ಭಟವಾಗಿಯೇ ಮೊಳಗಿಸಬೇಕು.
- Verse 7: ಜನರನ್ನು ಸಭೆಸೇರಿಸಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಮೊಳಗಿಸಬೇಕಾಗಿಲ್ಲ.
- Verse 8: ಆರೋನನ ವಂಶಸ್ಥರಾದ ಯಾಜಕರೇ ಆ ಕಹಳೆಗಳನ್ನು ಊದಬೇಕು. “ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮವಾಗಿರಲಿ.
- Verse 9: ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಪೀಡಿಸುವ ಶತ್ರುಗಳ ಮೇಲೆ ಯುದ್ಧಕ್ಕೆ ಹೊರಡುವಾಗ ಆ ಕಹಳೆಗಳನ್ನು ಆರ್ಭಟವಾಗಿ ಮೊಳಗಿಸಬೇಕು. ಆಗ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ನೆನಪಿಗೆ ತಂದುಕೊಂಡು ಶತ್ರುಗಳ ಕೈಯಿಂದ ನಿಮ್ಮನ್ನು ಬಿಡಿಸುವರು.
- Verse 10: ಇದಲ್ಲದೆ, ಉತ್ಸವ ದಿನಗಳಲ್ಲೂ ಹಬ್ಬ ದಿನಗಳಲ್ಲೂ ಅಮಾವಾಸ್ಯೆಯಲ್ಲೂ ಮತ್ತು ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಅರ್ಪಿಸುವಾಗಲೂ ಆ ಕಹಳೆಗಳನ್ನು ಮೊಳಗಿಸಬೇಕು. ಆ ಧ್ವನಿ ನಿಮ್ಮನ್ನು ನಿಮ್ಮ ದೇವರ ನೆನಪಿಗೆ ತರಲು ನೆರವಾಗುವುದು. ನಾನೇ ನಿಮ್ಮ ದೇವರಾದ ಸರ್ವೇಶ್ವರ.”
- Verse 11: ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು.
- Verse 12: ಆದ್ದರಿಂದ ಇಸ್ರಯೇಲರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣ ಮಾಡಿದರು. ಬಳಿಕ ಆ ಮೇಘ ಪಾರಾನ್ ಮರುಭೂಮಿಯಲ್ಲಿ ನಿಂತಿತು.
- Verse 13: ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ ಕ್ರಮಾನುಸಾರ ದಂಡುಗಳು ಪ್ರಯಾಣಮಾಡಿದ್ದು ಇದೇ ಮೊದಲನಯ ಸಾರಿ.
- Verse 14: ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿದ್ದವನು ಅಮ್ಮೀನಾದಾಬನ ಮಗ ನಹಶೋನನು.
- Verse 15: ಇಸ್ಸಾಕಾರ್ ಕುಲಕ್ಕೆ ಸೇನಾನಾಯಕನಾಗಿದ್ದವನು ಚೂವಾರನ ಮಗ ನೆತನೇಲನು.
- Verse 16: ಜೆಬುಲೂನ್ ಕುಲಕ್ಕೆ ಹೇಲೋನನ ಮಗ ಎಲೀಯಾಬನು ಸೇನಾನಾಯಕನಾಗಿದ್ದನು.
- Verse 17: ಬಳಿಕ ದೇವದರ್ಶನದ ಗುಡಾರವನ್ನು ಇಳಿಸಿದ್ದೇ ಗೇರ್ಷೋನ್ಯರೂ ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.
- Verse 18: ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕ ಶೆದೇಯೂರನ ಮಗ ಎಲೀಚೂರನು.
- Verse 19: ಸಿಮೆಯೋನ್ ಕುಲದ ಸೇನಾನಾಯಕನು ಚೂರಿಷದ್ದೈಯನ ಮಗ ಶೆಲುಮೀಯೇಲನು.
- Verse 20: ಗಾದ್ ಕುಲದ ಸೇನಾನಾಯಕ ರೇಗೂವೇಲನ ಮಗ ಎಲ್ಯಾಸಾಫನು.
- Verse 21: ಅವರ ಹಿಂದೆ ಕೆಹಾತ್ಯರು ದೇವಸ್ಥಾನದ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಮಿಕ್ಕ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.
- Verse 22: ತದನಂತರ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರ ಸೇನಾನಾಯಕ ಅಮ್ಮೀಹೂದನ ಮಗ ಎಲೀಷಾಮನು.
- Verse 23: ಮನಸ್ಸೆ ಕುಲದ ಸೇನಾನಾಯಕ ಪೆದಾಚೂರನ ಮಗ ಗಮ್ಲೀಯೇಲನು.
- Verse 24: ಬೆನ್ಯಾಮೀನ್ ಕುಲದ ಸೇನಾನಾಯಕ ಗಿದ್ಯೋನಿಯ ಮಗ ಅಬೀದಾನನು.
- Verse 25: ಈ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕ ಅಮ್ಮೀಷದ್ದೈಯನ ಮಗ ಅಹೀಗೆಜೆರನು.
- Verse 26: ಆಶೇರ್ ಕುಲಕ್ಕೆ ಸೇನಾನಾಯಕ ಒಕ್ರಾನನ ಮಗ ಪಗೀಯೇಲನು.
- Verse 27: ನಫ್ತಾಲಿ ಕುಲಕ್ಕೆ ಸೇನಾನಾಯಕ ಏನಾನನ ಮಗ ಅಹೀರನು.
- Verse 28: ಈ ಕ್ರಮದಲ್ಲಿ ಇಸ್ರಯೇಲರು ಸೈನ್ಯ ಸೈನ್ಯವಾಗಿ ಹೊರಟು ಪ್ರಯಾಣ ಮಾಡಿದರು.
- Verse 29: ಮೋಶೆ ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗ ಹೋಬಾಬನಿಗೆ, “ಸರ್ವೇಶ್ವರ ನಮಗೆ ಕೊಡುವುದಾಗಿ ವಾಗ್ದಾನ ಮಾಡಿದ ನಾಡಿಗೆ ನಾವು ಪ್ರಯಾಣ ಮಾಡುತ್ತಿದ್ದೇವೆ. ಇಸ್ರಯೇಲರಿಗೆ ಒಳಿತನ್ನೇ ಮಾಡುವುದಾಗಿ ಸರ್ವೇಶ್ವರ ಸ್ವಾಮಿಯೇ ಹೇಳಿದ್ದಾರೆ. ಆದ್ದರಿಂದ ನೀನೂ ನಮ್ಮ ಸಂಗಡ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು,” ಎಂದು ಹೇಳಿದ.
- Verse 30: ಅದಕ್ಕೆ ಅವನು, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ,” ಎಂದು ಉತ್ತರಿಸಿದ.
- Verse 31: ಅದಕ್ಕೆ ಮೋಶೆ, “ನಮ್ಮನ್ನು ಬಿಟ್ಟುಹೋಗಬೇಡವೆಂದು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ತಿಳಿದಿವೆ.
- Verse 32: ಆದ್ದರಿಂದ ನೀನು ನಮಗೆ ಕಣ್ಣಾಗಿರಬೇಕು. ನೀನು ನಮ್ಮ ಸಂಗಡ ಬಂದರೆ ಸರ್ವೇಶ್ವರ ನಮಗೆ ಮಾಡುವ ಒಳಿತೆಲ್ಲವನ್ನು ನಿನ್ನೊಂದಿಗೆ ಹಂಚಿಕೊಳ್ಳುತ್ತೇವೆ,” ಎಂದು ಉತ್ತರಕೊಟ್ಟನು.
- Verse 33: ಅವರು ಸರ್ವೇಶ್ವರನ ಬೆಟ್ಟವನ್ನು ಬಿಟ್ಟು ಮೂರುದಿನದ ಪ್ರಯಾಣದಷ್ಟು ದೂರಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡಲು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರಿಗೆ ಮುಂದಾಗಿ ಹೋಗುತ್ತಿತ್ತು.
- Verse 34: ಅವರು ಪಾಳೆಯದಿಂದ ಹೊರಡುವಾಗ ಹಗಲಲ್ಲಿ ಸರ್ವೇಶ್ವರನ ಮೇಘ ಅವರ ಮೇಲೆ ಇರುತ್ತಿತ್ತು.
- Verse 35: ಸರ್ವೇಶ್ವರನ ಮಂಜೂಷ ಹೊರಡುವಾಗ ಮೋಶೆ, “ಹೊರಡೋಣವಾಗಲಿ ಸರ್ವೇಶ್ವರಾ, ಎಚ್ಚೆತ್ತು ಚದರಿಹೋಗಲಿ ನಿಮ್ಮ ಶತ್ರುಗಳು ಬೆಂಗೊಟ್ಟು ಓಡಿಹೋಗಲಿ ನಿಮ್ಮ ಹಗೆಗಾರರು” ಎಂದು ಹೇಳುತ್ತಿದ್ದನು.
- Verse 36: ಆ ಮಂಜೂಷ ನಿಂತಾಗ: “ಮರಳಿ ಬರೋಣವಾಗಲಿ, ಸರ್ವೇಶ್ವರಾ ಸಹಸ್ರಾರು ಇಸ್ರಯೇಲ್ ಕುಟುಂಬಗಳ ಬಳಿಗೆ,” ಎಂದು ಹೇಳುತ್ತಿದ್ದನು.