ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
5ನೇ ಅಧ್ಯಾಯ
- Verse 1: “ನರಪುತ್ರನೇ, ಹರಿತವಾದ ಖಡ್ಗವನ್ನು ತೆಗೆದುಕೊಂಡು, ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ ನಿನ್ನ ತಲೆಯನ್ನೂ ಗಡ್ಡವನ್ನೂ ಬೋಳಿಸಿಬಿಡು; ತಕ್ಕಡಿಯನ್ನು ತಂದು ತೂಗಿ ಆ ಕೂದಲನ್ನು ಸರಿಯಾಗಿ ಮೂರು ಭಾಗಮಾಡು.
- Verse 2: ಮುತ್ತಿಗೆಯ ದಿನಗಳು ಮುಗಿದ ಕೂಡಲೆ ಕೂದಲಿನ ಒಂದು ಭಾಗವನ್ನು ಪಟ್ಟಣದ ಮಧ್ಯೆ ಬೆಂಕಿಯಲ್ಲಿ ಸುಡು; ಇನ್ನೊಂದು ಭಾಗವನ್ನು ತೆಗೆದುಕೊಂಡು ಪಟ್ಟಣದ ಸುತ್ತಲು ಖಡ್ಗದಿಂದ ಕಡಿ; ಮತ್ತೊಂದು ಭಾಗವನ್ನು ಗಾಳಿಗೆ ತೂರಿಬಿಡು; (ಈ ಪ್ರಕಾರ ನಾನು ನನ್ನ ಜನರ ಹಿಂದೆ ಕತ್ತಿಯನ್ನು ಬೀಸುವೆನು).
- Verse 3: ಈ ಕಡೆಯ ಭಾಗದಲ್ಲಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನಲ್ಲಿ ಕಟ್ಟು;
- Verse 4: ಆಮೇಲೆ ಇವುಗಳಲ್ಲಿ ಕೆಲವನ್ನು ಆರಿಸಿ ಬೆಂಕಿಯಲ್ಲಿ ಹಾಕಿ ಸುಡು; ಅವುಗಳಿಂದ ಬೆಂಕಿ ಹೊರಟು ಇಸ್ರಯೇಲ್ ವಂಶವನ್ನೆಲ್ಲಾ ವ್ಯಾಪಿಸುವುದು.”
- Verse 5: ಸರ್ವೇಶ್ವರನಾದ ದೇವರು ಹೀಗೆಂದರು: “ನಾನಾ ದೇಶಗಳ ನಡುವೆ, ನಾನಾ ಜನಾಂಗಗಳ ಮಧ್ಯೆ ನಾನು ಸ್ಥಾಪಿಸಿದ ಜೆರುಸಲೇಮ್ ಪಟ್ಟಣ ಈ ಮನೆ.
- Verse 6: ಅದು ನನ್ನ ನಿಯಮನಿಷ್ಠೆಗಳಿಗೆ ಒಳಪಡದೆ ಇತರ ಜನಾಂಗಗಳಿಗಿಂತಲೂ ಸುತ್ತಲಿನ ದೇಶಗಳಿಗಿಂತಲೂ ಹೆಚ್ಚು ಅಧರ್ಮವನ್ನು ನಡೆಸಿದೆ; ಅದರ ನಿವಾಸಿಗಳು ನನ್ನ ನಿಯಮವನ್ನು ಅನುಸರಿಸದೆ ನನ್ನ ವಿಧಿಗಳನ್ನು ನಿರಾಕರಿಸಿದ್ದಾರೆ.
- Verse 7: ಹೀಗಿರಲು ಸರ್ವೇಶ್ವರ ಸ್ವಾಮಿಯಾದ ನಾನು ಹೇಳುವುದಿದು: ‘ನೀವು ನನ್ನ ನಿಯಮಗಳನ್ನು ಅನುಸರಿಸದೆ, ನನ್ನ ವಿಧಿಗಳನ್ನು ಕೈಗೊಳ್ಳದೆ, ನಿಮ್ಮ ಸುತ್ತಲಿನ ಜನಾಂಗಗಳ ಧರ್ಮವಿಧಿಗಳನ್ನು ಆಚರಿಸಿ, ಆ ಜನಾಂಗಗಳಿಗಿಂತ ಹೆಚ್ಚು ದಂಗೆಕೋರರಾಗಿ ವರ್ತಿಸಿದ್ದೀರಿ.
- Verse 8: ಆದುದರಿಂದ ಜೆರುಸಲೇಮೇ, ಇಗೋ, ನಾನೇ ನಿನಗೆ ವಿರುದ್ಧವಾಗಿದ್ದೇನೆ. ಜನಾಂಗಗಳ ಕಣ್ಣೆದುರಿಗೆ ನಿನ್ನ ಜನರನ್ನು ದಂಡಿಸುವೆನು; ಇದು ಸರ್ವೇಶ್ವರನಾದ ನನ್ನ ನುಡಿ.
- Verse 9: ನೀನು ಬಹಳ ಅಸಹ್ಯಕೃತ್ಯಗಳಲ್ಲಿ ತೊಡಗಿದ್ದರಿಂದ ನಾನು ಈವರೆಗೂ ಇನ್ನು ಮುಂದಕ್ಕೂ ಮಾಡದಂಥ ದಂಡನೆಯನ್ನು ಈಗ ನಿನಗೆ ಮಾಡುವೆನು.
- Verse 10: ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.’
- Verse 11: “ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ ಅಸಹ್ಯವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ಸಹಿಸೆನು, ಕಟಾಕ್ಷಿಸೆನು, ಕ್ಷಮಿಸೆನು.
- Verse 12: ನಿನ್ನಲ್ಲಿನ ಮೂರನೆಯ ಒಂದು ಭಾಗದ ಜನರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲೆ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲು ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
- Verse 13: “ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.
- Verse 14: ಹಾದುಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳುಮಾಡಿ ಸುತ್ತಲಿನ ಜನಾಂಗಗಳ ನಿಂದೆಗೆ ಗುರಿಮಾಡುವೆನು.
- Verse 15: “ನಾನು ಕೋಪದಿಂದ, ರೋಷದಿಂದ ಹಾಗು ತೀವ್ರ ಖಂಡನೆಯಿಂದ ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ ಪರಿಹಾಸ್ಯಗಳಿಗೂ ಬೆರಗು ಬುದ್ಧಿವಾದಗಳಿಗೂ ಆಸ್ಪದವಾಗುವುವು; ಇದು ಸರ್ವೇಶ್ವರನಾದ ನನ್ನ ನುಡಿ.
- Verse 16: ಆಗ ನಾನು ನಿನ್ನನ್ನು ಹಾಳುಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣಬಾಣಗಳನ್ನು ನಿನ್ನ ಮೇಲೆ ಬಿಡುವನು. ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.
- Verse 17: ನಾನು ಕಳುಹಿಸುವ ಕ್ಷಾಮದಿಂದ, ದುಷ್ಟಮೃಗಗಳಿಂದ ನಿನಗೆ ಪುತ್ರಶೋಕ ಪ್ರಾಪ್ತಿಯಾಗುವುದು; ವ್ಯಾಧಿಯೂ ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು; ನಿನ್ನನ್ನು ಖಡ್ಗಕ್ಕೆ ತುತ್ತುಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”