வேதாகமம்
ಹಳೆಯ ಒಡಂಬಡಿಕೆ
ಯಾಜಕಕಾಂಡ
24ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ತಿಳಿಸಿದರು:
- Verse 2: “ದೇವಸ್ಥಾನದಲ್ಲಿರುವ ದೀಪಗಳನ್ನು ಪ್ರತಿನಿತ್ಯವೂ ಉರಿಸಬೇಕು. ಇದಕ್ಕಾಗಿ ಇಸ್ರಯೇಲರು ಎಣ್ಣೇಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಅಪ್ಪಟ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.
- Verse 3: ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ ಆ ದೀಪಗಳು ಉರಿಯುತ್ತಿರಬೇಕು. ಅವು ಸರ್ವೇಶ್ವರನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ.
- Verse 4: ಆರೋನನು ಪ್ರತಿನಿತ್ಯವೂ ಸರ್ವೇಶ್ವರನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕ ಬಂಗಾರದ ದೀಪವೃಕ್ಷದ ಮೇಲೆ ಸರಿಯಾಗಿ ಇಡಬೇಕು.
- Verse 5: “ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿಯೊಂದು ರೊಟ್ಟಿ ಎರಡೆರಡು ಕಿಲೋಗ್ರಾಂನದಾಗಿರಬೇಕು.
- Verse 6: ಅವುಗಳನ್ನು ಆರಾರರ ಮೇರೆಗೆ ಎರಡು ರಾಶಿಗಳಾಗಿ ಚೊಕ್ಕ ಬಂಗಾರದ ಮೇಜಿನ ಮೇಲೆ ಸರ್ವೇಶ್ವರನ ಸಮ್ಮುಖದಲ್ಲಿ ಇಡಬೇಕು.
- Verse 7: ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಸಾಂಬ್ರಾಣಿಯನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸಲು ಆ ಸಾಂಬ್ರಾಣಿಯನ್ನು ಸರ್ವೇಶ್ವರನಿಗೆ ಹೋಮಮಾಡಬೇಕು.
- Verse 8: ಶಾಶ್ವತವಾದ ನಿಬಂಧನೆಯ ಮೇರೆಗೆ ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಕ್ರಮಪಡಿಸಿ ಅವುಗಳನ್ನು ಇಸ್ರಯೇಲರ ಪರವಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 9: ಅವು ಆರೋನನಿಗೂ ಅವನ ಸಂತತಿಯವರಿಗೂ ಸಲ್ಲಬೇಕು. ಮಹಾಪರಿಶುದ್ಧವಾದ ಆ ರೊಟ್ಟಿಗಳನ್ನು ದೇವಸ್ಥಾನದ ಪ್ರಾಕಾರದಲ್ಲೇ ತಿನ್ನಬೇಕು. ಅವು ಸರ್ವೇಶ್ವರನಿಗೆ ಸಮರ್ಪಿತವಾದ ದಹನದ್ರವ್ಯಗಳಿಗೆ ಸೇರಿದವುಗಳಾಗಿರುವುದರಿಂದ ಶಾಶ್ವತ ನಿಯಮದ ಪ್ರಕಾರ ಯಾಜಕರಿಗೇ ಸಲ್ಲಬೇಕು.
- Verse 10: ಇಸ್ರಯೇಲ್ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ವ್ಯಕ್ತಿ ಇದ್ದನು. ಇವನು ಇಸ್ರಯೇಲರ ಪಾಳೆಯಕ್ಕೆ ಬಂದು ಇಸ್ರಯೇಲನೊಬ್ಬನ ಸಂಗಡ ಜಗಳವಾಡಿ, ಬೈದುದು ಮಾತ್ರವಲ್ಲದೆ ಸರ್ವೇಶ್ವರ ಸ್ವಾಮಿಯನ್ನು ದೂಷಿಸಿ ಶಾಪ ಹಾಕಿದನು.
- Verse 11: ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. ಆ ವ್ಯಕ್ತಿಯ ತಾಯಿ ದಾನ್ ಕುಲದ ದಿಬ್ರೀಯ ಮಗಳು ‘ಶೆಲೋಮೀತ್’ ಎಂದು ಅವಳ ಹೆಸರು.
- Verse 12: ಅವನ ವಿಷಯವಾಗಿ ಸರ್ವೇಶ್ವರನ ತೀರ್ಪನ್ನು ತಿಳಿದುಕೊಳ್ಳುವಷ್ಟು ಕಾಲ ಅವನನ್ನು ಕಾವಲಲ್ಲಿ ಇರಿಸಲಾಯಿತು.
- Verse 13: ಆಗ ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು:
- Verse 14: ಆ ದೇವದೂಷಕನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನಾಡಿದ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರು ಅವನ ತಲೆಯ ಮೇಲೆ ಕೈಚಾಚಬೇಕು. ಅನಂತರ ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
- Verse 15: ಮತ್ತು ಇಸ್ರಯೇಲರಿಗೆ ನೀನು ಹೀಗೆ ಹೇಳಬೇಕು: ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.
- Verse 16: ಸರ್ವೇಶ್ವರನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆಯಾಗಬೇಕು; ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶೀಯನಾಗಿರಲಿ, ಸ್ವದೇಶೀಯನಾಗಿರಲಿ ಸರ್ವೇಶ್ವರನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.
- Verse 17: ಕೊಲೆ ಮಾಡಿದವನಿಗೆ ಮರಣದಂಡನೆಯಾಗಬೇಕು.
- Verse 18: ಪಶುಪ್ರಾಣಿಯನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು; ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು.
- Verse 19: ಯಾವನಾದರು ಮತ್ತೊಬ್ಬನನ್ನು ಅಂಗಹೀನನನ್ನಾಗಿ ಮಾಡಿದರೆ ಅವನು ಮಾಡಿದಂತೆಯೆ ಅವನಿಗೆ ಮಾಡಿಸಬೇಕು.
- Verse 20: ಅವಯವವನ್ನು ಮುರಿಯುವುದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು ಕೀಳಿಸಬೇಕು. ಮತ್ತೊಬ್ಬನನ್ನು ಅಂಗವಿಕಲನನ್ನಾಗಿ ಮಾಡಿದವನಿಗೆ ಅದೇ ರೀತಿ ಪ್ರತೀಕಾರ ಮಾಡಿಸಬೇಕು.
- Verse 21: ಪಶುಪ್ರಾಣಿಯನ್ನು ಕೊಂದವನಿಗೆ ಅದಕ್ಕೆ ಬದಲಾಗಿ ಈಡುಕೊಡಬೇಕು; ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು.
- Verse 22: ಅನ್ಯರಿಗಾಗಲಿ ಸ್ವಜನರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.”
- Verse 23: ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಅವರು ಆ ದೂಷಕನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡು ಹೋಗಿ ಕಲ್ಲೆಸೆದು ಕೊಂದರು. ಸರ್ವೇಶ್ವರ ಸ್ವಾಮಿ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು.