ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
91ನೇ ಅಧ್ಯಾಯ
- Verse 1: ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು I ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು II
- Verse 2: ನಾನಾತನಿಗೆ, ‘ನೀನೇ ನನ್ನ ರಕ್ಷಕನೂ I ದುರ್ಗವೂ ನಾ ನಂಬಿದ ದೇವನು’ ಎನ್ನುವೆನು II
- Verse 3: ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ I ರಕ್ಷಿಸುವನು ಮಾರಕವಾದ ವ್ಯಾಧಿಯಿಂದ II
- Verse 4: ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ I ಆಶ್ರಯಪಡುವೆ ನೀ ಆತನ ರೆಕ್ಕೆಗಳಡಿಯಲಿ I ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ II
- Verse 5: ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ I ಹಗಲಿನಲಿ ಹಾರಿಬರುವ ಬಿರುಸು ಬಾಣಕೆ II
- Verse 6: ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ I ನಡುಹಗಲಲೆ ಪೀಡಿಸುವ ಜಾಡ್ಯಕೆ II
- Verse 7: ಬೀಳಬಹುದು ಸಾವಿರ ಹೆಣಗಳು ಪಕ್ಕದಲೆ I ಹತ್ತುಸಾವಿರ ಹೆಣಗಳು ನಿನ್ನ ಬಲಗಡೆಯಲೆ I ಅಂಥ ಕೇಡೊಂದೂ ಬಾರದು ನಿನ್ನ ಪಾಲಿಗೆ II
- Verse 8: ನೀನಿದನು ಕಣ್ಣಾರೆ ಕಾಣುವೆ I ದುರುಳರ ದಂಡನೆಯನು ನೋಡುವೆ II
- Verse 9: ಪ್ರಭುವನೆ ನಿನ್ನಾಶ್ರಯವಾಗಿಸಿಕೊಂಡಿರುವುದರಿಂದ I ಪರಾತ್ಪರನನೆ ನಿನ್ನ ನಿವಾಸ ಆಗಿಸಿಕೊಂಡದ್ದರಿಂದ II
- Verse 10: ಹಾನಿಯೊಂದೂ ನಿನಗೆ ಸಂಭವಿಸದು I ಕೆಡಕು ನಿನ್ನ ಗುಡಾರದ ಬಳಿ ಸುಳಿಯದು II
- Verse 11: ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ I ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ II
- Verse 12: ನಿನ್ನ ಕಾಲು ಕಲ್ಲಿಗೆ ತಾಗದಂತೆ I ನಿನ್ನನೆತ್ತಿಕೊಳ್ವರವರು ಕೈಗಳಲೆ II
- Verse 13: ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ I ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವೆ II
- Verse 14: ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು I ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು II
- Verse 15: ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು I ಸಂಕಟದೊಳು ಅವನ ಸಂಗಡವಿರುವೆನು I ಅವನನು ಉದ್ಧರಿಸಿ ಘನಪಡಿಸುವೆನು II
- Verse 16: ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು I ನಾನು ನೀಡುವ ಮುಕ್ತಿಯನವನಿಗೆ ಮನಗಾಣಿಸುವೆನು” II