P. O. C ബൈബിള്
ಹೊಸ ಒಡಂಬಡಿಕೆ
ಪ್ರೇಷಿತರ ಕಾರ್ಯಕಲಾಪಗಳು
5ನೇ ಅಧ್ಯಾಯ
- Verse 1: ಅನನೀಯ ಮತ್ತು ಸಫೈರ ಎಂಬ ದಂಪತಿಗಳಿದ್ದರು. ಇವರು ತಮ್ಮ ಆಸ್ತಿಯೊಂದನ್ನು ಮಾರಿದರು.
- Verse 2: ಬಂದ ಹಣದಲ್ಲಿ ಒಂದು ಭಾಗವನ್ನು ಅನನೀಯನು, ತನ್ನ ಪತ್ನಿಯ ಸಮ್ಮತಿ ಪಡೆದು, ಬಚ್ಚಿಟ್ಟುಕೊಂಡನು. ಉಳಿದುದನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು.
- Verse 3: ಆಗ ಪೇತ್ರನು, “ಅನನೀಯಾ, ನಿನ್ನ ಆಸ್ತಿಯ ವಿಕ್ರಯದಿಂದ ಬಂದ ಹಣದ ಒಂದು ಭಾಗವನ್ನು ಬಚ್ಚಿಟ್ಟುಕೊಂಡು, ನೀನು ಪವಿತ್ರಾತ್ಮ ಅವರಿಗೆ ಏಕೆ ವಂಚನೆಮಾಡಿದೆ? ನಿನ್ನ ಹೃದಯದಲ್ಲಿ ಪಿಶಾಚಿಗೇಕೆ ಎಡೆಮಾಡಿಕೊಟ್ಟೆ?
- Verse 4: ಮಾರುವುದಕ್ಕೆ ಮೊದಲು ಆಸ್ತಿ ನಿನಗೇ ಸೇರಿತ್ತು; ಮಾರಿದ ನಂತರವೂ ಅದರ ಹಣ ನಿನ್ನದೇ ಆಗಿತ್ತು. ಹೀಗಿರುವಲ್ಲಿ ಇಂಥಾ ದುಷ್ಟಯೋಚನೆ ಮಾಡಲು ನೀನೇಕೆ ಮನಸ್ಸುಮಾಡಿದೆ? ನೀನು ಸುಳ್ಳಾಡಿರುವುದು ಮನುಷ್ಯರಿಗಲ್ಲ, ದೇವರಿಗೆ,” ಎಂದನು.
- Verse 5: ಈ ಮಾತುಗಳನ್ನು ಕೇಳಿದಾಕ್ಷಣವೇ ಅನನೀಯನು ಸತ್ತುಬಿದ್ದನು.
- Verse 6: ಆಗ ಕೆಲವು ಯುವಕರು ಬಂದು ಅವನ ಶವವನ್ನು ಬಟ್ಟೆಯಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು.
- Verse 7: ಸುಮಾರು ಮೂರು ಗಂಟೆಗಳ ನಂತರ ಅವನ ಪತ್ನಿ ಅಲ್ಲಿಗೆ ಬಂದಳು. ಅಲ್ಲಿ ಸಂಭವಿಸಿದ್ದೇನೂ ಆಕೆಗೆ ತಿಳಿದಿರಲಿಲ್ಲ.
- Verse 8: ಪೇತ್ರನು ಆಕೆಯನ್ನು ನೋಡಿ, “ನೀನು ಮತ್ತು ನಿನ್ನ ಪತಿ ಆಸ್ತಿಮಾರಿ ಪಡೆದ ಹಣದ ಮೊತ್ತ ಇಷ್ಟೇ ಏನು?” ಎಂದು ಕೇಳಿದನು. ಆಕೆ, “ಹೌದು, ಇಷ್ಟೇ,” ಎಂದು ಉತ್ತರಕೊಟ್ಟಳು.
- Verse 9: ಪೇತ್ರನು, “ನೀನೂ ನಿನ್ನ ಪತಿಯೂ ಸರ್ವೇಶ್ವರನ ಆತ್ಮವನ್ನು ಪರೀಕ್ಷಿಸಲು ಹವಣಿಸಿದಿರೋ? ಇಗೋ, ನಿನ್ನ ಪತಿಯನ್ನು ಸಮಾಧಿಮಾಡಿಬಂದವರ ಕಾಲಿನ ಸಪ್ಪಳ. ಅವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದನು.
- Verse 10: ಆಕ್ಷಣವೇ ಆಕೆಯೂ ಸತ್ತು ಅವನ ಕಾಲಬಳಿ ಬಿದ್ದಳು. ಒಳಗೆ ಬಂದ ಯುವಕರು ಆಕೆಯೂ ಸತ್ತುಬಿದ್ದಿರುವುದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಪತಿಯ ಪಕ್ಕದಲ್ಲೇ ಸಮಾಧಿಮಾಡಿದರು.
- Verse 11: ಇಡೀ ಧರ್ಮಸಭೆಯೂ ಇದನ್ನು ಕೇಳಿದ ಎಲ್ಲರೂ ಭಯಭ್ರಾಂತರಾದರು.
- Verse 12: ಜನರೆಲ್ಲರ ಕಣ್ಮುಂದೆ ಅನೇಕ ಅದ್ಭುತಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆಸೇರುತ್ತಿದ್ದರು.
- Verse 13: ಹೊರಗಿನವರು ಅವರನ್ನು ಬಹಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ.
- Verse 14: ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು.
- Verse 15: ಪೇತ್ರನು ಹಾದುಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತುತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು.
- Verse 16: ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿಪೀಡಿತರನ್ನು ಜನರು ತರುತ್ತಿದ್ದರು; ಎಲ್ಲರೂ ಸ್ವಸ್ಥರಾಗುತ್ತಿದ್ದರು.
- Verse 17: ಇಂತಿರಲು ಪ್ರಧಾನಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು.
- Verse 18: ಪ್ರೇಷಿತರನ್ನು ಬಂಧಿಸಿ ಊರ ಸೆರೆಯಲ್ಲಿಟ್ಟರು.
- Verse 19: ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತಂದನು.
- Verse 20: “ಹೋಗಿರಿ, ಮಹಾದೇವಾಲಯದಲ್ಲಿ ನಿಂತು ಈ ನವಜೀವದ ಬಗ್ಗೆ ಜನರಿಗೆ ಬೋಧಿಸಿರಿ,” ಎಂದನು.
- Verse 21: ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು.
- Verse 22: ಈ ಅಧಿಕಾರಿಗಳು ಸೆರೆಮನೆಗೆ ಬಂದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ. ಹಿಂದಿರುಗಿ ಹೋಗಿ ನ್ಯಾಯಸಭೆಗೆ ಈ ವಿಷಯವನ್ನು ವರದಿಮಾಡಿದರು;
- Verse 23: “ನಾವು ಸೆರೆಮನೆಗೆ ಹೋದಾಗ ಅದಕ್ಕೆ ಹಾಕಿದ್ದ ಬೀಗ ಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ,” ಎಂದು ತಿಳಿಸಿದರು.
- Verse 24: ದೇವಾಲಯದ ದಳಪತಿ ಮತ್ತು ಮುಖ್ಯಯಾಜಕರು ಇದನ್ನು ಕೇಳಿ, ಇದರಿಂದೇನಾಗುವುದೋ ಎಂದು ಕಳವಳಗೊಂಡರು.
- Verse 25: ಅಷ್ಟರಲ್ಲಿ ಒಬ್ಬನು ಅಲ್ಲಿಗೆ ಬಂದು, “ಇಗೋ, ನೀವು ಸೆರೆಮನೆಯಲ್ಲಿಟ್ಟವರು ದೇವಾಲಯದಲ್ಲಿ ನಿಂತು ಜನರಿಗೆ ಬೋಧಿಸುತ್ತಿದ್ದಾರೆ,” ಎಂದನು.
- Verse 26: ಆಗ ಆ ದಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊಂಡು ಬಂದನು. ಜನರು ತಮ್ಮ ಮೇಲೆ ಕಲ್ಲು ತೂರಬಹುದೆಂಬ ಭಯದಿಂದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ.
- Verse 27: ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನಯಾಜಕನು ಅವರನ್ನು ಉದ್ದೇಶಿಸಿ,
- Verse 28: “ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟುಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು.
- Verse 29: ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ.
- Verse 30: ನೀವು ಶಿಲುಬೆಗೇರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ.
- Verse 31: ದೇವರು ಅವರನ್ನು ತಮ್ಮ ಬಲಪಾರ್ಶ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.
- Verse 32: ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು.
- Verse 33: ಇದನ್ನು ಕೇಳಿದ ಸಭಾಸದಸ್ಯರು ಕ್ರೋಧಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು.
- Verse 34: ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದುನಿಂತು ಪ್ರೇಷಿತರನ್ನು ಸ್ವಲ್ಪಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ
- Verse 35: ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಭಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ.
- Verse 36: ಸ್ವಲ್ಪಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು.
- Verse 37: ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದರಿಹೋದರು.
- Verse 38: ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವ ಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು.
- Verse 39: ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು.
- Verse 40: ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು.
- Verse 41: ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು.
- Verse 42: ಯೇಸುವೇ ಲೋಕೋದ್ಧಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.