P. O. C ബൈബിള്
ಹೊಸ ಒಡಂಬಡಿಕೆ
1 ತಿಮೊಥೇಯನಿಗೆ
2ನೇ ಅಧ್ಯಾಯ
- Verse 1: ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ.
- Verse 2: ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು.
- Verse 3: ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು.
- Verse 4: ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ.
- Verse 5: ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ; ಅವರೇ ಮಾನವರಾಗಿರುವ ಕ್ರಿಸ್ತಯೇಸು.
- Verse 6: ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು.
- Verse 7: ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ.
- Verse 8: ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.
- Verse 9: ಅಂತೆಯೇ, ಮಹಿಳೆಯರು, ಸಭ್ಯತೆಯನ್ನು ಮೀರದೆ ಘನತೆ, ಗೌರವಕ್ಕೆ ಒಪ್ಪುವಂತಹ ಉಡುಪನ್ನು ಧರಿಸಿಕೊಳ್ಳಬೇಕು.
- Verse 10: ಅವರು ಮಿತಿಮೀರಿದ ಕೇಶಾಲಂಕಾರ, ಆಭರಣಾಲಂಕಾರ, ವಸ್ತ್ರಾಲಂಕಾರಗಳಿಂದ ತಮ್ಮನ್ನೇ ಶೃಂಗರಿಸಿಕೊಳ್ಳುವುದರ ಬದಲು ದೈವಭಕ್ತೆಯರಾದ ಸ್ತ್ರೀಯರಿಗೆ ಲಕ್ಷಣವಾದ ಸತ್ಕಾರ್ಯಗಳಿಂದ ಅಲಂಕರಿಸಿಕೊಳ್ಳಲಿ.
- Verse 11: ಮಹಿಳೆಯರು ಮೌನದಿಂದಲೂ ನಮ್ರತೆಯಿಂದಲೂ ಧರ್ಮೋಪದೇಶವನ್ನು ಕಲಿಯಲಿ.
- Verse 12: ಅವರು ಬೋಧನೆಮಾಡುವುದಕ್ಕಾಗಲಿ, ಪುರುಷರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಅನುಮತಿಸೆನು. ಅವರು ಮೌನ ತಾಳಬೇಕು.
- Verse 13: ಏಕೆಂದರೆ, ದೇವರು ಮೊದಲು ಆದಾಮನನ್ನು, ಅನಂತರ ಹವ್ವಳನ್ನು ಸೃಷ್ಟಿಸಿದರು.
- Verse 14: ಅಲ್ಲದೆ, ಮೊದಲು ವಂಚನೆಗೊಳಗಾಗಿ ದೇವರಿಗೆ ವಿರುದ್ಧ ಪಾಪಮಾಡಿದವಳು ಹವ್ವಳೇ ಹೊರತು ಆದಾಮನಲ್ಲ.
- Verse 15: ಮಹಿಳೆ ಸಚ್ಚರಿತಳಾಗಿದ್ದು ವಿಶ್ವಾಸ, ಪ್ರೀತಿ ಮತ್ತು ಪವಿತ್ರತೆಯಲ್ಲಿ ಪ್ರವರ್ಧಿಸಿದರೆ, ತನ್ನ ತಾಯ್ತನದ ಮೂಲಕ ಸಂರಕ್ಷಣೆಯನ್ನು ಪಡೆಯುತ್ತಾಳೆ.