P. O. C ബൈബിള്
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
5ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ, ಮೋಶೆಗೆ ಹೀಗೆಂದರು:
- Verse 2: “ಕುಷ್ಠರೋಗಿಗಳಂಥ ಎಲ್ಲ ಅಂಟುರೋಗಿಗಳನ್ನು ಮೇಹಸ್ರಾವವುಳ್ಳವರನ್ನು ಹಾಗೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಯೇಲರಿಗೆ ಆಜ್ಞಾಪಿಸು.
- Verse 3: ಅಂಥವರು ಗಂಡಸರೇ ಆಗಿರಲಿ, ಹೆಂಗಸರೇ ಆಗಿರಲಿ, ಅವರೆಲ್ಲರನ್ನು ಪಾಳೆಯದಿಂದ ಹೊರಡಿಸಬೇಕು. ನಾನೇ ವಾಸವಾಗಿರುವ ಪಾಳೆಯವನ್ನು ಅವರು ಅಪವಿತ್ರಗೊಳಿಸಬಾರದು.
- Verse 4: ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು. ಅಂಥವರೆಲ್ಲರನ್ನು ಪಾಳೆಯದಿಂದ ಹೊರದೂಡಿದರು.
- Verse 5: ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಇಸ್ರಯೇಲರಿಗೆ ಇಂತೆಂದು ಆಜ್ಞಾಪಿಸು.
- Verse 6: ಯಾವ ಗಂಡಸೇ ಆಗಲಿ ಹೆಂಗಸೇ ಆಗಲಿ, ಮತ್ತೊಬ್ಬನನ್ನು ಮೋಸಗೊಳಿಸಿ ಸರ್ವೇಶ್ವರನಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದರೆ, ಅಂಥವರು ಅಪರಾಧಿಗಳು.
- Verse 7: ಅವರು ತಮ್ಮ ಅಪರಾಧವನ್ನು ಒಪ್ಪಿಕೊಳ್ಳಬೇಕು. ಅಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು.
- Verse 8: ದಂಡವನ್ನು ತೆಗೆದುಕೊಳ್ಳ ತಕ್ಕವನು ತೀರಿಹೋಗಿ ಬಾಧ್ಯಸ್ಥನೂ ಇಲ್ಲದ ಪಕ್ಷಕ್ಕೆ ಆ ದ್ರವ್ಯ ಸರ್ವೇಶ್ವರನಿಗೆ ಸೇರಬೇಕು. ಅದು ಮತ್ತು ದೋಷಪರಿಹಾರಕ್ಕಾಗಿ ಅರ್ಪಿಸಲ್ಪಡುವ ಪ್ರಾಯಶ್ಚಿತ್ತ ಬಲಿಪ್ರಾಣಿಯಾದ ಟಗರು ಇವೆರಡೂ ಯಾಜಕನಿಗೆ ಸೇರಬೇಕು.
- Verse 9: ಇಸ್ರಯೇಲಿನ ಜನರು ಪ್ರತ್ಯೇಕಿಸಿ ಯಾಜಕನಿಗೆ ಒಪ್ಪಿಸುವ ಪವಿತ್ರ ವಸ್ತುಗಳೆಲ್ಲವೂ ಯಾಜಕನವುಗಳಾಗಿಯೇ ಇರಬೇಕು.
- Verse 10: ಒಬ್ಬನು ಸರ್ವೇಶ್ವರನಿಗೆ ಮೀಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದೊಪ್ಪಿಸುತ್ತಾನೋ ಅದು ಅವನದಾಗಿಯೇ ಇರಬೇಕು.
- Verse 11: ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು -
- Verse 12: ಒಬ್ಬನ ಹೆಂಡತಿ ತಪ್ಪುದಾರಿ ಹಿಡಿದು, ತನ್ನ ಗಂಡನಿಗೆ ಅಪ್ರಾಮಾಣಿಕಳಾಗಿ ನಡೆದು ಸಿಕ್ಕಿಕೊಳ್ಳದೆ, ಸಾಕ್ಷಿಯಿಲ್ಲದೆ
- Verse 13: ಗುಟ್ಟಾಗಿಯೇ ಪರಪುರುಷನೊಡನೆ ಸಂಗಮಿಸಿ, ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾಗಿರಬಹುದು.
- Verse 14: ಅಥವಾ ಹಾಗೆ ಮಾಡದೆ ಕೆಟ್ಟುಹೋಗದೆ ಇದ್ದರೂ ಕೆಟ್ಟುಹೋದಳೆಂದು ಗಂಡನ ಸಂಶಯಕ್ಕೆ ಗುರಿಯಾಗಿರಬಹುದು.
- Verse 15: ಈ ಎರಡು ಸಂದರ್ಭಗಳಲ್ಲೂ ಆ ಗಂಡನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ, ಅವನು ಯಾಜಕನಿಗೆ ಮೂರು ಸೇರು ಜವೆಗೋದಿ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಪಾಪವನ್ನು ಹೊರಪಡಿಸುವುದಕ್ಕೂ, ಸರ್ವೇಶ್ವರನಿಗೆ ನೈವೇದ್ಯವಾದ ಕಾಣಿಕೆ. ಆದ್ದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹುಯ್ಯಬಾರದು, ಸಾಂಬ್ರಾಣಿಯನ್ನು ಹಾಕಬಾರದು.
- Verse 16: “ಯಾಜಕನು ಅವಳನ್ನು ಕರೆದು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಬೇಕು.
- Verse 17: ಒಂದು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು.
- Verse 18: ಯಾಜಕನು ಆಕೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಕೂದಲನ್ನು ಕೆದರಿಸಿ, ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿಡಬೇಕು; ಶಾಪವನ್ನು ತರುವ ವಿಷಕರವಾದ ನೀರನ್ನು ತನ್ನ ಕೈಯಲ್ಲೇ ಹಿಡಿದುಕೊಳ್ಳಬೇಕು.
- Verse 19: ಅದೇ ಯಾಜಕನು ಅವಳಿಂದ ಶಪಥಪೂರ್ವಕ ಪ್ರಮಾಣ ಮಾಡಿಸುತ್ತಾ ಅವಳಿಗೆ - “ನೀನು ನಿನ್ನ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ, ಪರಪುರುಷನನ್ನು ಕೂಡದೆ, ಅಶುದ್ಧಳಾಗದೆ ಇರುವವಳಾದರೆ ಶಾಪ ತರುವ ಈ ವಿಷಕರವಾದ ನೀರಿನಿಂದ ನಿನಗೆ ಹಾನಿಯಾಗದು.
- Verse 20: ಆದರೆ ನೀನು ಗಂಡಸಿದ್ದವಳಾಗಿ ಪರಪುರುಷನನ್ನು ಕೂಡಿ ಕೆಟ್ಟಿದ್ದರೆ ನಿನ್ನ ಗಂಡನಲ್ಲದೆ ಬೇರೊಬ್ಬನು ನಿನ್ನನ್ನು ಸಂಗಮಿಸಿದ್ದರೆ,
- Verse 21: ಸರ್ವೇಶ್ವರನು ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ, ನಿನ್ನ ಹೊಟ್ಟೆ ಉಬ್ಬುವಂತೆ ಮಾಡಿ, ನೀನು ನಿನ್ನ ಜನರ ಮಧ್ಯೆ ಶಾಪಗ್ರಸ್ತಳನ್ನಾಗಿ ಮಾಡಲಿ.
- Verse 22: ಶಾಪತರುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ,” ಎಂದು ಹೇಳಬೇಕು. ಅದಕ್ಕೆ ಆ ಹೆಂಗಸು, “ಆಗಲಿ, ಹಾಗೆಯೇ ಆಗಲಿ,” ಎಂದು ಹೇಳಬೇಕು.
- Verse 23: “ಬಳಿಕ ಯಾಜಕನು ಆ ಶಾಪವಚನಗಳನ್ನು ಒಂದು ಪತ್ರದಲ್ಲಿ ಬರೆದು ಆ ವಿಷಕರ ಜಲದಲ್ಲಿ ತೊಳೆಯಲಿ;
- Verse 24: ಶಾಪತರುವ ಆ ನೀರನ್ನು ಆಕೆಗೆ ಕುಡಿಸಲಿ; ಆ ನೀರು ಅವಳೊಳಗೆ ಸೇರಿ ವಿಷಕರವಾಗುವುದು.
- Verse 25: ಆಮೇಲೆ ವ್ಯಭಿಚಾರ ಸಂಶಯ ಸೂಚಕವಾದ ಆ ಹಿಟ್ಟನ್ನು ಅವಳ ಕೈಯಿಂದ ತೆಗೆದುಕೊಂಡ ಯಾಜಕನು ಬಲಿಪೀಠದ ಹತ್ತಿರಕ್ಕೆ ಬರಬೇಕು.
- Verse 26: ನೈವೇದ್ಯವಾದುದನ್ನು ಸೂಚಿಸುವುದಕ್ಕಾಗಿ ಆ ಹಿಟ್ಟಿನಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಅವನು ಹೋಮಮಾಡಬೇಕು. ಕೊನೆಗೆ ಯಾಜಕನು ಆ ನೀರನ್ನು ಆಕೆಗೆ ಕುಡಿಸಬೇಕು.
- Verse 27: ಅವಳು ದೋಷಿಯಾಗಿ ಗಂಡನಿಗೆ ದ್ರೋಹವೆಸಗಿದ್ದರೆ ಕುಡಿದ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷವಾಗುವುದು. ಈ ಕಾರಣ ಅವಳ ಹೊಟ್ಟೆ ಉಬ್ಬುವುದು. ಅವಳ ಜನನೇಂದ್ರಿಯಗಳು ಬತ್ತಿಹೋಗುವುವು. ಆಕೆ ತನ್ನ ಜನರ ಮಧ್ಯೆ ಶಾಪಗ್ರಸ್ತಳಾಗುವಳು.
- Verse 28: ಆದರೆ ಆಕೆ ದುಷ್ಟಳಾಗಿರದೆ, ನಿರಪರಾಧಿಯಾಗಿದ್ದ ಪಕ್ಷಕ್ಕೆ ಅವಳಿಗೆ ಯಾವ ಹಾನಿಯೂ ಸಂಭವಿಸದೆ ಗರ್ಭವತಿಯಾಗುವಳು.
- Verse 29: ವ್ಯಭಿಚಾರ ಸಂಶಯವನ್ನು ಪರಿಹರಿಸುವ ವಿಧಿ ಇದುವೆ. ಹೆಂಡತಿಯಾದವಳು ಗಂಡನ ಸ್ವಾಧೀನದಲ್ಲಿದ್ದರೂ ಪಾತಿವ್ರತ್ಯವನ್ನು ತೊರೆದು ಜಾರತ್ವ ಮಾಡಿರುವಾಗ
- Verse 30: ಅಥವಾ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗ ಅವನು ಅವಳನ್ನು ಸರ್ವೇಶ್ವರನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿ ನಿಯಮವನ್ನು ನೆರವೇರಿಸಬೇಕು.
- Verse 31: ಆಗ ಗಂಡನು ನಿರಪರಾಧಿಯಾಗುವನು. ಹೆಂಡತಿ ತನ್ನ ಅಕ್ರಮಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುವಳು.