ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
25ನೇ ಅಧ್ಯಾಯ
- Verse 1: ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಸ್ವಾಮಿ ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಹೇಳಿದರು:
- Verse 2: “ಸರ್ವೇಶ್ವರ ನಿಮಗೆ ಕೊಡುವ ನಾಡಿಗೆ ನೀವು ಬಂದಾಗ ಆ ನಾಡು ಸರ್ವೇಶ್ವರನ ಗೌರವಾರ್ಥ ವಿಶ್ರಾಂತಿಯನ್ನು ಆಚರಿಸಬೇಕು.
- Verse 3: ಆರು ವರ್ಷಗಳು ನೀವು ಹೊಲದಲ್ಲಿ ಬಿತ್ತನೆ ಮಾಡಬಹುದು. ದ್ರಾಕ್ಷಿತೋಟದ ಕೆಲಸವನ್ನು ಮಾಡಬಹುದು. ಹೊಲತೋಟಗಳ ಬೆಳೆಗಳನ್ನು ಸಂಗ್ರಹಿಸಬಹುದು.
- Verse 4: ಆದರೆ ಏಳನೆಯ ವರ್ಷ ಯಾವ ವ್ಯವಸಾಯವನ್ನೂ ಮಾಡಬಾರದು. ಅದು ವಿಶ್ರಾಂತಿಕಾಲವಾಗಿಯೂ ಸರ್ವೇಶ್ವರನ ಗೌರವಾರ್ಥ ಸಬ್ಬತ್ ಕಾಲವಾಗಿಯೂ ಇರಬೇಕು. ಆ ವರ್ಷ ಹೊಲದಲ್ಲಿ ವ್ಯವಸಾಯ ಮಾಡಬಾರದು; ದ್ರಾಕ್ಷೀ ತೋಟದ ಕೆಲಸವನ್ನೂ ಕೈಬಿಡಬೇಕು.
- Verse 5: ಹೊಲದಲ್ಲಿ ತಾನಾಗಿ ಬೆಳೆದ ಫಸಲನ್ನು ನೀವು ಕೂಡಿಸಿಟ್ಟುಕೊಳ್ಳಬಾರದು. ತಾನಾಗಿಯೇ ಬೆಳೆದ ದ್ರಾಕ್ಷಿ ಹಣ್ಣನ್ನು ಶೇಖರಿಸಿಟ್ಟುಕೊಳ್ಳಬಾರದು. ಆ ವರ್ಷ ಪೂರ್ತಿ ಭೂಮಿಗೆ ಸಂಪೂರ್ಣ ವಿಶ್ರಾಂತಿಯಿರಬೇಕು.
- Verse 6: ಆದರೆ ಅಂಥ ಸಬ್ಬತ್ ಸಂವತ್ಸರದಲ್ಲಿ ಭೂಮಿ ತಾನಾಗಿಯೇ ಬೆಳೆದದ್ದು ನಿಮಗೆ, ನಿಮ್ಮ ದಾಸದಾಸಿಯರಿಗೆ, ಕೂಲಿಯವರಿಗೆ
- Verse 7: ಮತ್ತು ನಿಮ್ಮಲ್ಲಿ ತಂಗಿರುವ ಪರದೇಶಿಯರಿಗೆ ಹಾಗು ನಿಮ್ಮ ಪಶುಪ್ರಾಣಿಗಳಿಗೆ ಮತ್ತು ನಾಡಿನ ಕಾಡುಮೃಗಗಳಿಗೆ ಆಹಾರವಾಗಬಹುದು.
- Verse 8: “ಅದಲ್ಲದೆ, ಏಳು ವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲ, ಅಂದರೆ ನಾಲ್ವತ್ತೊಂಬತ್ತು ವರ್ಷಗಳು ಕಳೆದ ಮೇಲೆ
- Verse 9: ಏಳನೆಯ ತಿಂಗಳಿನ ಹತ್ತನೆಯ ದಿವಸ ನಿಮ್ಮ ನಾಡಿನಲ್ಲೆಲ್ಲಾ ಕೊಂಬೂದಿಸಬೇಕು.
- Verse 10: ನೀವು ಆ ಐವತ್ತನೆಯ ವರ್ಷವನ್ನು ದೇವರಿಗೆ ಮೀಸಲಾದ ವರ್ಷವೆಂದು ಭಾವಿಸಬೇಕು. ಆ ವರ್ಷ ನಾಡಿನ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂದು ಸಾರಬೇಕು. ಅದು ‘ಜೂಬಿಲಿ’ ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಹಾಗು ಸ್ವಜನರ ಬಳಿಗೂ ಹೋಗಿ ಇರಬಹುದು.
- Verse 11: ಆ ಐವತ್ತನೆಯ ವರ್ಷದಲ್ಲಿ, ಅಂದರೆ ‘ಜೂಬಿಲಿ’ ಸಂವತ್ಸರದಲ್ಲಿ ನೀವು ಬಿತ್ತನೆ ಮಾಡಬಾರದು; ತಾನಾಗಿ ಬೆಳೆದ ಫಸಲನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ಕೃಷಿಮಾಡದೆ ಬಿಟ್ಟ ದ್ರಾಕ್ಷೀತೋಟದ ಹಣ್ಣನ್ನು ಸಂಗ್ರಹಿಸಬಾರದು.
- Verse 12: ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ಮೀಸಲಾದದ್ದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳೆದದ್ದನ್ನು ಊಟಮಾಡಬಹುದು.
- Verse 13: ಜೂಬಿಲಿ ವರ್ಷದಲ್ಲಿ ನಿಮ್ಮ ನಿಮ್ಮ ಸ್ವಂತ ಭೂಮಿಗಳು ಮರಳಿ ನಿಮ್ಮ ವಶಕ್ಕೆ ಬರುವುವು.
- Verse 14: ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ-ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯ ಮಾಡಬಾರದು.
- Verse 15: ಕಳೆದ ಜೂಬಿಲಿ ವರ್ಷದಿಂದ ಇಷ್ಟು ವರ್ಷ ಆಯಿತೆಂದು ಲೆಕ್ಕಿಸಿ ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬೇಕು; ಅಂತೆಯೇ ಮಾರುವವನು ಇಷ್ಟು ವರ್ಷಗಳ ಬೆಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು.
- Verse 16: ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು; ಕಡಿಮೆಯಾದರೆ ತಗ್ಗಿಸಬೇಕು. ಏಕೆಂದರೆ ಮಾರುವವನು ಭೂಮಿಯನ್ನಲ್ಲ, ಬೆಳೆಗಳನ್ನು ಲೆಕ್ಕಿಸಿ ಮಾರುತ್ತಾನಷ್ಟೆ.
- Verse 17: ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡಬಾರದು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರನು.
- Verse 18: “ನನ್ನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು. ಆಗ ನೀವು ನಾಡಿನಲ್ಲಿ ನಿರ್ಭಯವಾಗಿ ಬಾಳುವಿರಿ.
- Verse 19: ನಿಮ್ಮ ಭೂಮಿ ಫಲವತ್ತಾಗುವುದು; ನಿಮಗೆ ಸಮೃದ್ಧಿಯಾದ ಊಟ ದೊರಕುವುದು ಮತ್ತು ಆ ನಾಡಿನಲ್ಲಿ ನಿರ್ಭಯವಾಗಿ ವಾಸಮಾಡುವಿರಿ.
- Verse 20: ಆದರೆ ಆ ಏಳನೆಯ ವರ್ಷದಲ್ಲಿ ಬಿತ್ತನೆ ಮಾಡುವುದಕ್ಕಾಗಲಿ, ಬೆಳೆದದ್ದನ್ನು ಕೂಡಿಸಿಟ್ಟುಕೊಳ್ಳುವುದಕ್ಕಾಗಲಿ ಅಪ್ಪಣೆಯಿರುವುದಿಲ್ಲ. ಹಾಗಾದರೆ ಆ ವರ್ಷ ಏನು ತಿನ್ನಬೇಕೆಂದು ವಿಚಾರಿಸುತ್ತೀರೋ? ನಾನು ಹೇಳುವುದನ್ನು ಕೇಳಿ:
- Verse 21: ಆರನೆಯ ವರ್ಷದ ಬೆಳೆ ನನ್ನ ಪೂರ್ಣಾನುಗ್ರಹದಿಂದ ಮೂರು ವರ್ಷಗಳ ಬೆಳೆಯಷ್ಟಾಗುವುದು.
- Verse 22: ಎಂಟನೆಯ ವರ್ಷದಲ್ಲಿ ಬಿತ್ತನೆ ಮಾಡಿ ಅದರ ಬೆಳೆ ದೊರೆಯುವ ತನಕ, ಅಂದರೆ ಒಂಬತ್ತನೆಯ ವರ್ಷದವರೆಗೆ ಹಿಂದಿನ ಬೆಳೆಯಿಂದಲೇ ಜೀವನ ಮಾಡುವಿರಿ.
- Verse 23: “ಭೂಮಿಯನ್ನು ಶಾಶ್ವತವಾಗಿ ವಿಕ್ರಯಿಸಿ ಬಿಡಬಾರದು. ಏಕೆಂದರೆ ಭೂಮಿ ನನ್ನದು. ನೀವಾದರೋ ಪರವಾಸಿಗಳು, ನನ್ನ ಆಶ್ರಯದಲ್ಲಿ ತಂಗಿರುವವರು.
- Verse 24: ನಿಮ್ಮಲ್ಲಿ ಮತ್ತೊಬ್ಬನ ಸೊತ್ತು ನಿಮ್ಮ ವಶಕ್ಕೆ ಬಂದರೆ ಅದನ್ನು ಈಡುಕೊಟ್ಟು ಬಿಡಿಸಿಕೊಳ್ಳುವ ಹಕ್ಕು, ಕೊಟ್ಟವನಿಗೆ ಇರಬೇಕು.
- Verse 25: ನಿಮ್ಮ ಸ್ವಜನರಲ್ಲಿ ಒಬ್ಬನು ಬಡವನಾಗಿ ತನ್ನ ಭೂಮಿಯನ್ನು ಏನಾದರು ಮಾರಿಕೊಂಡರೆ ಅವನ ಸಮೀಪ ನೆಂಟನು ಇದನ್ನು ಬಿಡಿಸಿಕೊಳ್ಳಬೇಕು.
- Verse 26: ಬಿಡಿಸಬಲ್ಲ ನೆಂಟನು ಇಲ್ಲದೆಹೋದರೆ, ಮಾರಿದವನೇ ಮತ್ತೆ ಬಿಡಿಸಿಕೊಳ್ಳುವಷ್ಟು ಉತ್ತಮ ಸ್ಥಿತಿಗೆ ಬಂದರೆ,
- Verse 27: ಆ ಭೂಮಿಯನ್ನು ಮಾರಿದಂದಿನಿಂದ ಕಳೆದ ವರ್ಷಗಳನ್ನು ಬಿಟ್ಟು, ಉಳಿದ ಅವಧಿಗೆ ಕ್ರಯಕೊಟ್ಟು ತನ್ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು.
- Verse 28: ಅವನು ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗದೆ ಹೋದರೆ ಅದು ಜೂಬಿಲಿ ಸಂವತ್ಸರದ ತನಕ ಕೊಂಡುಕೊಂಡವನ ವಶದಲ್ಲೇ ಇರಬೇಕು. ಜೂಬಿಲಿ ವರ್ಷದಲ್ಲಿ ಅದು ಬಿಡುಗಡೆಯಾಗುವುದು. ಆಗ ಆ ಭೂಮಿ ಮರಳಿ ಅವನ ವಶಕ್ಕೆ ಬರುವುದು.
- Verse 29: “ಯಾವನಾದರು ಕೋಟೆಯಿರುವ ಪಟ್ಟಣದ ಮನೆಯನ್ನು ಮಾರಿದರೆ ಅದನ್ನು ಮಾರಿದ ದಿನದಿಂದ ಒಂದು ವರ್ಷ ಪೂರ್ತಿಯಾಗುವುದರೊಳಗೆ ಈಡುಕೊಟ್ಟು ಬಿಡಿಸಬಹುದು. ಒಂದು ವರ್ಷ ಪೂರ್ತಿ ಅದನ್ನು ಬಿಡಿಸುವ ಹಕ್ಕು ಅವನಿಗಿರುವುದು.
- Verse 30: ಕೋಟೆಯಿರುವ ಪಟ್ಟಣದ ಆ ಮನೆಯನ್ನು ಒಂದು ವರ್ಷದೊಳಗೆ ಬಿಡಿಸಲಾಗದೆ ಹೋದರೆ ಅದು ಜೂಬಿಲಿ ಸಂವತ್ಸರದಲ್ಲೂ ಬಿಡುಗಡೆ ಆಗದೆ ಕ್ರಯಕೊಟ್ಟವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ಉಳಿಯುವುದು.
- Verse 31: ಕೋಟೆಯಿಲ್ಲದ ಊರುಗಳಲ್ಲಿರುವ ಮನೆಗಳಲ್ಲಿ ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಹಕ್ಕು ಇರುವುದು. ಜೂಬಿಲಿ ಸಂವತ್ಸರದಲ್ಲಿ ಅವು ಬಿಡುಗಡೆಯಾಗುವುವು.
- Verse 32: ಆದರೆ ಲೇವಿಯರ ಸೊತ್ತಾಗಿರುವ ಪೇಟೆಗಳಲ್ಲಿನ ಮನೆಗಳು ಮಾರಲ್ಪಟ್ಟರೆ ಅವುಗಳನ್ನು ಬಿಡಿಸಿಕೊಳ್ಳುವ ಹಕ್ಕು ಲೇವಿಯರಿಗೆ ಯಾವಾಗಲು ಇರುವುದು.
- Verse 33: ಲೇವಿಯರಲ್ಲಿ ಯಾರೂ ಅದನ್ನು ಬಿಡಿಸದೆ ಹೋದರೆ ಲೇವಿಯರ ಸೊತ್ತಾದ ಅಂಥ ಪೇಟೆಮನೆ ಮಾರಾಟವಾಗಿದ್ದರೂ ಜೂಬಿಲಿ ಸಂವತ್ಸರದಲ್ಲಿ ಬಿಡುಗಡೆಯಾಗುವುದು. ಏಕೆಂದರೆ ಇಸ್ರಯೇಲರ ಮಧ್ಯೆಯಿರುವ ಲೇವಿಯರ ಪೇಟೆಮನೆಗಳು ಅವರ ಶಾಶ್ವತ ಸೊತ್ತು.
- Verse 34: ಅವರು ತಮ್ಮ ಪೇಟೆಗಳಿಗೆ ಸೇರಿರುವ ಹುಲ್ಲುಗಾವಲನ್ನು ಮಾರಲೇಕೂಡದು. ಅದು ಅವರಿಗೆ ಶಾಶ್ವತವಾದ ಸೊತ್ತು.
- Verse 35: “ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ ನೀವು ಅವನನ್ನು ನಿಮ್ಮ ನಡುವೆ ತಂಗಿರುವ ಆಗಂತುಕನೆಂದು ಭಾವಿಸಿ ಸಹಾಯಮಾಡಬೇಕು.
- Verse 36: ಅವನಿಂದ ಬಡ್ಡಿಯನ್ನಾಗಲಿ, ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ನೀವು ದೇವರಲ್ಲಿ ಭಯಭಕ್ತಿಯಿಟ್ಟು, ಅವನು ನಿಮ್ಮ ಬಳಿಯಲ್ಲಿ ಬದುಕುವಂತೆ ನೋಡಿಕೊಳ್ಳಬೇಕು.
- Verse 37: ನೀವು ಅವನಿಗೆ ಸಾಲಕೊಟ್ಟರೆ ಬಡ್ಡಿಯನ್ನು ಕೇಳಬೇಡಿ, ದವಸಧಾನ್ಯ ಕೊಟ್ಟರೆ ಲಾಭ ಕೇಳಬೇಡಿ.
- Verse 38: ನಾನು ನಿಮ್ಮ ದೇವರಾದ ಸರ್ವೇಶ್ವರ. ನಿಮಗೆ ದೇವರಾಗಿರಲು, ನಿಮಗೆ ಕಾನಾನ್ ನಾಡನ್ನು ನೀಡಲು, ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದವನು ನಾನೇ.
- Verse 39: ನಿಮ್ಮಲ್ಲಿ ಒಬ್ಬ ಸಹೋದರನು ಬಡವನಾಗಿ ತನ್ನನ್ನೇ ಮಾರಿಕೊಂಡರೆ ಅವನನ್ನು ಗುಲಾಮನಂತೆ ನಡೆಸಿಕೊಳ್ಳಬಾರದು.
- Verse 40: ಅವನು ಕಾರ್ಮಿಕನಂತೆ ಆಗಂತುಕನಂತೆ ನಿಮ್ಮ ಬಳಿಯಲ್ಲೆ ಇದ್ದು, ಜೂಬಿಲಿ ಸಂವತ್ಸರದ ತನಕ ನಿಮ್ಮ ಸೇವೆಮಾಡಲಿ.
- Verse 41: ಆಗ ಅವನನ್ನೂ ಅವನ ಮಕ್ಕಳನ್ನೂ ಬಿಡುಗಡೆ ಮಾಡಬೇಕು; ಆಗ ಅವನು ಸ್ವಜನರ ಬಳಿಗೂ ಪಿತ್ರಾರ್ಜಿತ ಸೊತ್ತಿಗೂ ಹಿಂದಿರುಗಬಹುದು.
- Verse 42: ಅಂಥವರು ನನಗೇ ದಾಸರು. ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದೆ. ಗುಲಾಮರನ್ನು ಮಾರುವಂತೆ ನೀವು ಅವರನ್ನು ವಿಕ್ರಯಿಸಬಾರದು.
- Verse 43: ಅವರಿಂದ ಕಠಿಣವಾದ ಸೇವೆ ಮಾಡಿಸಿಕೊಳ್ಳಬಾರದು. ನಿಮ್ಮ ದೇವರಲ್ಲಿ ಭಯಭಕ್ತಿಯಿರಲಿ.
- Verse 44: ಗುಲಾಮಗಿರಿಗಾಗಿ ನಿಮಗೆ ಸ್ತ್ರೀಪುರುಷರು ಬೇಕಾದರೆ ಸುತ್ತಮುತ್ತಲಿರುವ ಅನ್ಯರನ್ನು ಕೊಂಡುಕೊಳ್ಳಬಹುದು;
- Verse 45: ನಿಮ್ಮ ನಡುವೆ ಇರುವ ಪರವಾಸಿಗಳನ್ನೂ ನಿಮ್ಮ ನಾಡಿನಲ್ಲೇ ಅವರಿಂದ ಹುಟ್ಟಿದವರನ್ನೂ ಕೊಂಡುಕೊಳ್ಳಬಹುದು. ಅಂಥವರು ನಿಮಗೆ ಸೊತ್ತಾಗಬಹುದು.
- Verse 46: ಅಂಥವರನ್ನು ಸ್ವಾಧೀನಪಡಿಸಿಕೊಂಡು ನಿಮ್ಮ ತರುವಾಯ ನಿಮ್ಮ ಸಂತತಿಯವರಿಗೆ ಸೊತ್ತಾಗಿ ಕೊಟ್ಟುಬಿಡಬಹುದು. ಅವರನ್ನು ಶಾಶ್ವತ ಜೀತದಾರರನ್ನಾಗಿ ಮಾಡಿಕೊಳ್ಳಬಹುದು. ಆದರೆ ಇಸ್ರಯೇಲರಾದ ನೀವೆಲ್ಲರು ಸಹೋದರರು. ಆದುದರಿಂದ ಒಬ್ಬರಿಂದೊಬ್ಬರು ಕ್ರೂರವಾಗಿ ಸೇವೆ ಮಾಡಿಸಿಕೊಳ್ಳಬಾರದು.
- Verse 47: ನಿಮ್ಮ ಸಹೋದರರಲ್ಲಿ ಒಬ್ಬನು ಬಡವನಾಗಿ ನಿಮ್ಮ ನಡುವೆ ಮನೆಮಾಡಿಕೊಂಡ ಧನವಂತನಾದ ಅನ್ಯದೇಶದವನಿಗಾಗಲಿ ಅವನಿಗೆ ಸೇರಿದವನಾಗಲಿ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.
- Verse 48: ಅವನ ಬಂಧುಗಳಲ್ಲಿ ಯಾರಾದರೂ ಈಡುಕೊಟ್ಟು ಅವನನ್ನು ಬಿಡಿಸಬಹುದು.
- Verse 49: ಅವನ ದೊಡ್ಡಪ್ಪ ಚಿಕ್ಕಪ್ಪಂದಿರಾಗಲಿ ಇವರ ಮಕ್ಕಳಾಗಲಿ ಅಥವಾ ಸಮೀಪ ಬಂಧುಗಳಲ್ಲಿ ಯಾರೇ ಆಗಲಿ ಈಡುಕೊಟ್ಟು ಅವನನ್ನು ಬಿಡಿಸಬಹುದು. ಬೇಕಾದಷ್ಟು ಹಣವು ದೊರೆತರೆ ತನ್ನನ್ನು ತಾನೇ ಬಿಡಿಸಿಕೊಳ್ಳಬಹುದು.
- Verse 50: ಅವನು ತನ್ನನ್ನು ಮಾರಿಕೊಂಡ ವರ್ಷ ಮೊದಲುಗೊಂಡು ಮುಂದೆ ಜೂಬಿಲಿ ಸಂವತ್ಸರದ ತನಕ ದಣಿಯ ಸಂಗಡ ವರ್ಷಗಳ ಲೆಕ್ಕವನ್ನು ಮಾಡಿ ಆ ಲೆಕ್ಕದ ಮೇರೆಗೆ ಬಿಡುಗಡೆಯ ಕ್ರಯವನ್ನು ಕೊಡಬೇಕು. ಕೂಲಿಯವನ ವಿಷಯದಲ್ಲಿ ಲೆಕ್ಕಿಸುವಂತೆ ಅವನ ವಿಷಯದಲ್ಲಿ ಲೆಕ್ಕಿಸಬೇಕು.
- Verse 51: ಜೂಬಿಲಿ ಸಂವತ್ಸರವು ಬರುವುದಕ್ಕೆ ಇನ್ನು ಅನೇಕ ವರ್ಷಗಳಿದ್ದರೆ ಹೆಚ್ಚು ಭಾಗವನ್ನೂ
- Verse 52: ಕೆಲವು ವರ್ಷಗಳು ಮಾತ್ರ ಉಳಿದರೆ ಸ್ವಲ್ಪ ಭಾಗವನ್ನೂ ದಣಿಗೆ ಕೊಟ್ಟು ತನ್ನನ್ನು ಬಿಡಿಸಿಕೊಳ್ಳಬೇಕು.
- Verse 53: ಅವನು ವರುಷ ವರುಷಕ್ಕೆ ಗೊತ್ತುಮಾಡಿಕೊಂಡ ಕೂಲಿಯವನಂತೆಯೇ ದಣಿಯ ಬಳಿಯಲ್ಲಿರಬೇಕು. ಆ ದಣಿ ಅವನಿಂದ ಕಠಿಣವಾಗಿ ಸೇವೆ ಮಾಡಿಸಿಕೊಳ್ಳುವುದನ್ನು ನೀವು ನೋಡಿ ಸುಮ್ಮನೆ ಇರಬಾರದು.
- Verse 54: ಮೇಲೆ ಹೇಳಿದ ರೀತಿಯಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ ಜೂಬಿಲಿ ಸಂವತ್ಸರದಲ್ಲಿ ಅವನೂ ಅವನ ಮಕ್ಕಳೂ ಬಿಡುಗಡೆಯಾಗಬೇಕು.
- Verse 55: ಏಕೆಂದರೆ ಇಸ್ರಯೇಲರು ನನ್ನ ದಾಸರೇ; ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದೆನಲ್ಲವೇ? ನಾನು ನಿಮ್ಮ ದೇವರಾದ ಸರ್ವೇಶ್ವರ.