ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
19ನೇ ಅಧ್ಯಾಯ
- Verse 1: ಆಗ ಯೋಬನು ಮತ್ತೆ ಹೀಗೆಂದನು:
- Verse 2: “ಇನ್ನೆಷ್ಟರವರೆಗೆ ನೀವು ನನ್ನನ್ನು ನೋಯಿಸುವಿರಿ? ನಿಮ್ಮ ಮಾತುಗಳಿಂದ ನನ್ನನು ನಸುಕುತ್ತಿರುವಿರಿ?
- Verse 3: ಈವರೆಗೆ ನನಗೆ ಕೇಡು ಮಾಡಿದ್ದಕ್ಕೆ ಹತ್ತಾರು ಸಾರಿ ನನ್ನನ್ನು ಅವಮಾನಿಸಿದ್ದಕ್ಕೆ ನಿಮಗಾಗುವುದಿಲ್ಲವೆ ನಾಚಿಕೆ?
- Verse 4: ನಿಶ್ಚಯವಾಗಿ ನಾನು ತಪ್ಪುಳ್ಳವನಾದರೆ ಅದರಿಂದ ನಿಮಗೇನು? ಆ ತಪ್ಪು ನನ್ನದೆ.
- Verse 5: ನನಗಿಂತ ನೀವೇ ಮೇಲೆಂದು ಭಾವಿಸುತ್ತೀರೋ? ನನ್ನ ದೀನ ಸ್ಥಿತಿಗೆ ನನ್ನ ದೋಷವೇ ಕಾರಣವೆನ್ನುತ್ತೀರೋ?
- Verse 6: ನನಗೆ ಅನ್ಯಾಯವಾಗಿರುವುದು ದೇವರಿಂದಲೇ ನನ್ನ ಸುತ್ತಲು ಬಲೆಯೊಡ್ಡಿರುವವನು ಆತನೇ! ನಾನು ಹೇಳುವ ಈ ಮಾತು ತಿಳಿದಿರಲಿ ನಿಮಗೆ:
- Verse 7: ‘ಇದೋ ಹಿಂಸಾಚಾರ’ ಎಂದು ನಾನು ಕೂಗಿಕೊಂಡರೂ ಕೇಳುವವರಿಲ್ಲ ನಾನು ಮೊರೆಯಿಟ್ಟರೂ ನನಗೆ ನ್ಯಾಯ ದೊರಕುವುದಿಲ್ಲ.
- Verse 8: ನಾನು ಮುಂದೆ ಹೋಗದಂತೆ ದೇವರು ಅಡ್ಡಗೋಡೆ ಹಾಕಿದ್ದಾನೆ ನನ್ನ ಹಾದಿಗೆ ಕತ್ತಲೆ ಕವಿಯುವಂತೆ ಮಾಡಿದ್ದಾನೆ.
- Verse 9: ನನ್ನ ಘನತೆಯನ್ನು ಸುಲಿದುಬಿಟ್ಟಿದ್ದಾನೆ ನನ್ನ ಕಿರೀಟವನ್ನು ಕಿತ್ತುಹಾಕಿದ್ದಾನೆ.
- Verse 10: ನಾಲ್ದೆಸೆಯಿಂದ ಧಾಳಿಮಾಡಿ ನಾಶಮಾಡಿದ್ದಾನೆ ಮರ ಕೀಳುವ ಪ್ರಕಾರ ನನ್ನ ನಿರೀಕ್ಷೆಯನು ಕಿತ್ತುಬಿಟ್ಟಿದ್ದಾನೆ.
- Verse 11: ತನ್ನ ಕೋಪಾಗ್ನಿಯನು ನನ್ನ ಮೇಲೆ ಧಗಧಗಿಸಿದ್ದಾನೆ ನನ್ನನ್ನು ತನ್ನ ವೈರಿಯೆಂದೇ ಪರಿಗಣಿಸಿದ್ದಾನೆ.
- Verse 12: ಮುನ್ನುಗ್ಗಿ ಬಂದಿದೆ ಆತನ ಸೇನೆ ಒಟ್ಟಿಗೆ ದಿಬ್ಬಹಾಕಿಕೊಂಡಿದೆ ಅದು ನನ್ನೆದುರಿಗೆ ನನ್ನ ಗುಡಾರದ ಎಲ್ಲಾ ಕಡೆಗೆ ದಂಡು ಇಳಿದಿದೆ.
- Verse 13: ಸೋದರನನ್ನೂ ನನ್ನಿಂದ ದೇವರು ದೂರವಾಗಿರಿಸಿದ್ದಾನೆ ಪರಿಚಿತರೆಲ್ಲರು ನನ್ನನು ತೊರೆದುಬಿಟ್ಟಿದ್ದಾರೆ.
- Verse 14: ನನ್ನನು ಬಂಧುಬಳಗದವರು ಕೈಬಿಟ್ಟಿದ್ದಾರೆ ಆಪ್ತಮಿತ್ರರೂ ನನ್ನನು ಮರೆತುಬಿಟ್ಟಿದ್ದಾರೆ.
- Verse 15: ಮನೆಯ ದಾಸದಾಸಿಯರಿಗೇ ನಾನು ಅನ್ಯನಾದೆ ಅವರ ಕಣ್ಣಿಗೇ ನಾನು ಪರದೇಶಿಯನಾದೆ.
- Verse 16: ಕರೆದರೂ ನನ್ನ ಸೇವಕರು ಉತ್ತರಕೊಡುವುದಿಲ್ಲ ಬಾಯಿತೆರೆದು ಬೇಡಿಕೊಳ್ಳುವ ಸ್ಥಿತಿ ನನ್ನದಾಯಿತಲ್ಲಾ!
- Verse 17: ನನ್ನುಸಿರು ನನ್ನ ಧರ್ಮಪತ್ನಿಗೆ ಅಸಹ್ಯವಾಗಿದೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೇ ಹೇಸಿಕೆಯಾದೆ.
- Verse 18: ಚಿಕ್ಕವರು ಕೂಡ ನನ್ನನು ತಿರಸ್ಕರಿಸುತ್ತಾರೆ ನಾನು ಕಾಣಿಸಿಕೊಂಡಾಗಲೆಲ್ಲ ಹಾಸ್ಯಮಾಡುತ್ತಾರೆ.
- Verse 19: ನನ್ನ ನೋಡಿ ಆಪ್ತಮಿತ್ರರೆಲ್ಲರು ಹೇಸಿಕೊಳ್ಳುತ್ತಾರೆ ನನ್ನ ಮೇಲೆ ನನ್ನ ಪ್ರೀತಿಪಾತ್ರರೂ ತಿರುಗಿಬಿದ್ದಿದ್ದಾರೆ.
- Verse 20: ಕೇವಲ ಎಲುಬೂ ತೊಗಲೂ ಆಗಿಬಿಟ್ಟಿದ್ದೇನೆ ಮೃತ್ಯುವಿನ ದವಡೆಗೆ ಸಿಕ್ಕಿಕೊಂಡಿದ್ದೇನೆ.
- Verse 21: ಕರುಣೆ ತೋರಿ ಗೆಳೆಯರೇ, ಕರುಣೆ ತೋರಿ ನನಗೆ! ಏಕೆಂದರೆ ದೇವರ ಕೈ ನನ್ನನು ದಂಡಿಸಿದೆ.
- Verse 22: ದೇವರಂತೆ ನೀವೂ ನನ್ನನು ದಂಡಿಸುವುದೇಕೆ? ನನ್ನನ್ನು ಛಿನ್ನಪನ್ನವಾಗಿಸಿದ್ದೀರಿ, ಇದು ಸಾಲದೆ ನಿಮಗೆ?
- Verse 23: ನನ್ನ ಮಾತುಗಳನು ಬರೆದಿಟ್ಟರೆ ಎಷ್ಟೋ ಮೇಲು! ಸುರುಳಿಯಲಿ ಅದು ಲಿಖಿತವಾದರೆ ಎಷ್ಟೋ ಲೇಸು!
- Verse 24: ಕಬ್ಬಿಣದ ಉಳಿಯಿಂದ ಬಂಡೆಯ ಮೇಲೆ ಕೆತ್ತಿ, ಸೀಸೆ ಎರೆದು ಶಾಶ್ವತ ಶಾಸನವಾಗಿಸಿದ್ದರೆ ಎಷ್ಟೋ ಒಳಿತು.
- Verse 25: ನಾನಂತು ಬಲ್ಲೆ, ನನ್ನ ಉದ್ಧಾರಕ ಜೀವಸ್ವರೂಪನೆಂದು ಕಡೆಯ ದಿನದಂದು ಧರೆಗಾತ ಇಳಿದುಬರುವನೆಂದು.
- Verse 26: ನನ್ನ ಚರ್ಮ ಹೀಗೆ ಬಿರಿದು ಹಾಳಾದರೂ ದೇಹಧಾರಿಯಾಗಿಯೇ ನಾನು ನೋಡುವೆನು ದೇವರನು.
- Verse 27: ಕಣ್ಣಾರೆ ಆತನನ್ನು ಕಾಣುವೆನು ಮತ್ತೊಬ್ಬನಾಗಲ್ಲ, ನಾನಾಗೇ ನೋಡುವೆನು. ಹಂಬಲಿಕೆಯಿಂದ ಕುಂದಿದೆ ನನ್ನ ಅಂತರಂಗವು.
- Verse 28: ‘ಅವನನ್ನು ಆದಷ್ಟೂ ಹಿಂಸೆಮಾಡೋಣ ಅವನ ದುರ್ಗತಿಗೆ ಮೂಲಕಾರಣ ಹುಡುಕೋಣ’ ಎಂದು ನೀವು ಆಡಿಕೊಳ್ಳುವ ಕಾರಣ.
- Verse 29: ಭಯಪಡಿ ನೀವು ಕತ್ತಿಗೆ ಪಾಪದ ಮೇಲೆ ದೇವರ ಕೋಪ ಬರಮಾಡುವಾ ಕತ್ತಿಗೆ ನ್ಯಾಯತೀರ್ಪು ಉಂಟೆಂದು ಆಗ ತಿಳಿವುದು ನಿಮಗೆ.”