ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
22ನೇ ಅಧ್ಯಾಯ
- Verse 1: ಆಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು:
- Verse 2: “ನರಮಾನವನಿಂದ ದೇವರಿಗೇನು ಪ್ರಯೋಜನ? ಬುದ್ಧಿವಂತನಾಗಿ ನಡೆದುಕೊಂಡರೆ ಅದು ಅವನಿಗೇ ಪ್ರಯೋಜನ.
- Verse 3: ನೀನು ಸಜ್ಜನನಾಗಿದ್ದರೆ ಅದರಿಂದ ಸರ್ವಶಕ್ತನಿಗೆ ಸುಖವೇ? ನಿನ್ನ ನಿರ್ದೋಷ ನಡತೆಯಿಂದ ಆತನಿಗೆ ಲಾಭವೇ?
- Verse 4: ನಿನ್ನ ಭಯಭಕ್ತಿಗಾಗಿ ಆತ ನಿನ್ನನ್ನು ಶಿಕ್ಷಿಸುತ್ತಾನೆಯೇ? ಅದಕ್ಕಾಗಿ ನಿನ್ನನು ನ್ಯಾಯತೀರ್ಪಿಗೆ ಗುರಿಪಡಿಸುತ್ತಾನೆಯೆ?
- Verse 5: ಇಲ್ಲ,ಹಾಗೆಮಾಡುವುದು ನಿನ್ನ ಕೆಟ್ಟತನ ಹೆಚ್ಚಿದುದಕ್ಕಾಗಿ. ನಿನ್ನ ಪಾಪಗಳಿಗೆ ಮಿತಿಯಿಲ್ಲದುದಕ್ಕಾಗಿ.
- Verse 6: ನೀನು ನಿನ್ನ ಸೋದರನಿಂದ ಬಟ್ಟೆಯನು ಒತ್ತೆಯಾಗಿ ಪಡೆದೆ ಬಟ್ಟೆಕಿತ್ತುಕೊಂಡು ಅವನನ್ನು ಬೆತ್ತಲೆಯಾಗಿಸಿದೆ.
- Verse 7: ದಣಿದವನಿಗೆ ನೀ ಕೊಡಲಿಲ್ಲ ಪಾನ ಹಸಿದವನಿಗೆ ಬಡಿಸಲಿಲ್ಲ ಅನ್ನ.
- Verse 8: ನಿನ್ನನಿಸಿಕೆಯಂತೆ ಬಲಿಷ್ಠನಿಗೆ ನಾಡಿನೊಡೆತನ ಘನವಂತನಿಗೇ ಅಲ್ಲಿ ಮನೆತನ
- Verse 9: ವಿಧವೆಯರನ್ನು ಬರಿಗೈಯಲ್ಲಿ ಕಳಿಸಿಬಿಟ್ಟೆ ತಬ್ಬಲಿಯ ಕೈಗಳನು ನೀನು ಮುರಿದುಬಿಟ್ಟೆ.
- Verse 10: ನಿನ್ನ ಸುತ್ತಲು ಉರುಲುಗಳು ಕಾದಿವೆ ಈ ಕಾರಣ ನಿನ್ನನು ತಲ್ಲಣಗೊಳಿಸಲಿದೆ ಭಯಭ್ರಾಂತಿ ತಟ್ಟನೆ.
- Verse 11: ನಿನಗೆ ದಾರಿಕಾಣದಿರಲು ಬೆಳಕೇ ಕತ್ತಲಾಗಿದೆ ನಿನ್ನನು ಮುಳುಗಿಸಲು ಜಲಪ್ರವಾಹವಿದೆ.
- Verse 12: ದೇವರು ಉನ್ನತ ಆಕಾಶದಲ್ಲಿ ಇದ್ದಾನಲ್ಲವೇ? ನಕ್ಷತ್ರಗಳನ್ನು ನೋಡು, ಎಷ್ಟು ಗಹನವಾಗಿವೆ!
- Verse 13: ಈ ನಿಮಿತ್ತ ನೀನು, ‘ದೇವರಿಗೇನು ಗೊತ್ತು? ನ್ಯಾಯ ತೀರಿಸಬಲ್ಲನೆ ಕಾರ್ಗತ್ತಲು ಅಡ್ಡವಿರಲು?
- Verse 14: ಆತ ನೋಡಲಾಗದಂತೆ ದಟ್ಟವಾದ ಮೋಡಗಳ ಪರದೆ ಇದೆ ಆತನ ನಡೆದಾಟವೆಲ್ಲ ಆಕಾಶದ ಮೇಲ್ಗಡೆಯಲ್ಲವೆ?’ ಎಂದೆ.
- Verse 15: ನೀನು ಹಿಡಿದಿರುವುದು ಪುರಾತನ ಹಾದಿಯನೇ ದುರ್ಜನರು ನಡೆದುಬಂದ ಆ ಬೀದಿಯನೇ.
- Verse 16: ಅವರನ್ನು ಅಕಾಲ ಮರಣ ಅಪಹರಿಸಿತು ಅವರಿಗಿದ್ದ ಅಡಿಪಾಯ ನೀರುಪಾಲಾಯಿತು.
- Verse 17: ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರೂ ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’ ಎಂದರು.
- Verse 18: ಅಲ್ಲದೆ, ‘ಸರ್ವಶಕ್ತ ನಮಗೇನು ಮಾಡಬಲ್ಲ?’ ಎಂದುಕೊಂಡರು ಅಕಟ, ನನ್ನಿಂದ ದೂರ ಇರಲಿ! ದುರುಳರ ಈ ಮಾತು.
- Verse 19: ದುರುಳರ ದುರ್ಗತಿಯನು ನೋಡಿ ಸಜ್ಜನರು ಹಿಗ್ಗುವರು ನಿರ್ದೋಷಿಗಳು ಅವರನು ಈ ಪರಿ ಅಣಕಿಸಿ ಹಾಸ್ಯಮಾಡುವರು:
- Verse 20: ‘ನೋಡಿ, ನಮ್ಮ ವೈರಿಗಳು ಹೇಗೆ ಹಾಳಾಗಿಹೋದರು! ಅವರು ಬಿಟ್ಟುಹೋದ ಆಸ್ತಿ ಬೆಂಕಿಯಿಂದ ಭಸ್ಮವಾಯಿತು!’
- Verse 21: ದೇವರ ಚಿತ್ತಕ್ಕೆ ಮಣಿದು ಸಮಾಧಾನದಿಂದಿರು ಇದರಿಂದ ನಿನಗೆ ಶುಭವಾಗುವುದು.
- Verse 22: ಆತನ ಬಾಯಿಂದ ಬುದ್ಧಿ ಕಲಿತುಕೊ ಆತನ ಮಾತನು ಹೃದಯದಲ್ಲಿಟ್ಟುಕೊ.
- Verse 23: ಸರ್ವಶಕ್ತನ ಕಡೆಗೆ ಹಿಂದಿರುಗಿದೆಯಾದರೆ ನಿನ್ನ ಗುಡಾರಗಳಿಂದ ಅನ್ಯಾಯವನು ತೊರೆದೆಯಾದರೆ, ನೀನು ಉದ್ಧಾರವಾಗುವೆ.
- Verse 24: ಎಸೆದುಬಿಡು ನಿನ್ನ ಬಂಗಾರವನು ಧೂಳಿಗೆ ಓಫಿರ್ ನಾಡಿನ ಅಪರಂಜಿಯನು ನದಿತೀರದ ಕಲ್ಲುಗಳಿಗೆ.
- Verse 25: ಸರ್ವಶಕ್ತನಾದ ಸ್ವಾಮಿಯೇ ನಿನಗೆ ಬಂಗಾರವಾಗಿರಲಿ ಆತನೇ ನಿನಗೆ ಬೆಳ್ಳಿಯ ರಾಶಿಯಾಗಿರಲಿ.
- Verse 26: ಆಗ ನೀನು ಸರ್ವಶಕ್ತನಲಿ ಆನಂದಿಸುವೆ ತಲೆಯೆತ್ತಿ ದೇವರಿಗೆ ಅಭಿಮುಖಿಯಾಗುವೆ.
- Verse 27: ಆತನನು ಪ್ರಾರ್ಥಿಸುವೆ, ಆತ ಆಲಿಸುವನು ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು.
- Verse 28: ನಿನ್ನ ಯೋಜನೆಗಳು ಸಫಲವಾಗುವುವು ನಿನ್ನ ಮಾರ್ಗಗಳು ಪ್ರಜ್ವಲಿಸುವುವು.
- Verse 29: ದೇವರು ಕೆಳಕ್ಕೆ ದಬ್ಬುತ್ತಾನೆ ಗರ್ವಿಗಳನು ಉದ್ಧರಿಸುತ್ತಾನೆ ದೀನಮನಸ್ಕರನು.
- Verse 30: ಆತ ವಿಮೋಚಿಸುತ್ತಾನೆ ನಿರ್ದೋಷಿಗಳನು ನಿನ್ನ ಕೈ ಶುದ್ಧವಿರಲಿ ವಿಮೋಚಿಸುವನು ನಿನ್ನನು.