పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
76ನೇ ಅಧ್ಯಾಯ
- Verse 1: ಸುಪ್ರಸಿದ್ಧನು ದೇವನು ಜುದೇಯನಾಡಿನಲಿ I ಸುಪ್ರಖ್ಯಾತ ಆತನ ನಾಮ ಇಸ್ರಯೇಲಿನಲಿ II
- Verse 2: ಆತನ ಬಿಡಾರ ಸಾಲೇಮಿನಲಿ I ಆತನ ನಿವಾಸ ಸಿಯೋನಿನಲಿ II
- Verse 3: ಚೂರು ಚೂರು ಮಾಡಿಹನಲ್ಲಿ ಥಳಥಳಿಸುವ ಬಾಣಗಳನು I ಖಡ್ಗ, ಗುರಾಣಿ ಎಂಬೆಲ್ಲ ಯುದ್ಧಾಯುಧಗಳನು II
- Verse 4: ಹೇ ದೇವಾ, ನೀ ತೇಜೋಮಯನು I ಸ್ಥಿರಗಿರಿಗಳಿಗಿಂತ ಗಂಭೀರನು II
- Verse 5: ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II
- Verse 6: ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ I ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ II
- Verse 7: ನೀನಾದರೋ ದೇವಾ, ಮಹಾಭಯಂಕರನು I ಸಿಟ್ಟೇರಿದ ನಿನ್ನ ಮುಂದೆ ಯಾವನು ನಿಂತಾನು? II
- Verse 8: ನಿನ್ನ ನಿರ್ಣಯ ಸಗ್ಗದಿಂದ ಕೇಳಿಸಿದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II
- Verse 9: ನ್ಯಾಯಸ್ಥಾಪನೆಗೆ ದೇವನೆದ್ದು ನಿಂತಾಗ I ಧರೆಯ ದೀನರನುದ್ಧರಿಸಲು ಅನುವಾದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II
- Verse 10: ನರರ ಕೋಪ, ದೇವಾ ನಿನ್ನ ಘನತೆಗೆ ಸಾಧಕ I ಅಳಿದುಳಿದಾ ಕೋಪ ನಿನ್ನ ನಡುಕಟ್ಟಿಗೆ ಲಾಯಕ II
- Verse 11: ನಿಮ್ಮ ದೇವನಾದ ಸ್ವಾಮಿಗೆ ಸಲ್ಲಿಸಿರಿ ಹೊತ್ತ ಹರಕೆ I ಸುತ್ತಣರೆಲ್ಲರು ಸಮರ್ಪಿಸಲಿ ಭಯಂಕರನಿಗೆ ಕಾಣಿಕೆ II
- Verse 12: ಅರಸರ ದರ್ಪವನಡಗಿಸಿಬಿಡುವನು I ಭೂಪತಿಗಳಿಗೋ ಕಂಪನ ಕೊಡುವನು II