ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
103ನೇ ಅಧ್ಯಾಯ
- Verse 1: ಭಜಿಸು ನನ್ನ ಮನವೇ, ಭಜಿಸು ಪ್ರಭುವನು I ನನ್ನ ಅಂತರಂಗವೇ, ಭಜಿಸು ಆತನನು I ನೆನೆ ಆತನ ಪರಮಪಾವನ ನಾಮವನು II
- Verse 2: ಭಜಿಸು ನನ್ನ ಮನವೇ, ಭಜಿಸು ಪ್ರಭುವನು I ಮರೆಯದಿರು ಆತನ ಉಪಕಾರಗಳೊಂದನು II
- Verse 3: ಮನ್ನಿಸುವನಾತ ನನ್ನ ದೋಷಗಳನು I ವಾಸಿಮಾಡುವನು ನನ್ನ ರೋಗಗಳನು II
- Verse 4: ಉಳಿಸುವನು ಪಾತಾಳದ ಕೂಪದಿಂದ ನನ್ನನು I ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು II
- Verse 5: ಒಳ್ಳೆಯವುಗಳಿಂದ ತುಂಬಿಸುವನು ನನ್ನ ಜೀವಮಾನವನು I ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ ಯೌವನವನು II
- Verse 6: ಸಾಧಿಸುವನು ಪ್ರಭು ನ್ಯಾಯನೀತಿಯನು I ದೊರಕಿಸುವನು ಶೋಷಿತರಿಗೆ ನ್ಯಾಯವನು II
- Verse 7: ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ I ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ II
- Verse 8: ಪ್ರಭು ದಯಾಳು, ಕೃಪಾಪೂರ್ಣನು I ಸಹನಶೀಲನು, ಪ್ರೀತಿಮಯನು II
- Verse 9: ಆತನು ಸದಾ ತಪ್ಪು ಹುಡುಕುವವನಲ್ಲ I ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ II
- Verse 10: ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ I ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ II
- Verse 11: ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II
- Verse 12: ಪಡುವಣದಿಂದ ಮೂಡಣವೆಷ್ಟೋ ದೂರ I ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ II
- Verse 13: ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ I ಕನಿಕರಿಸುವನಾತ ತನಗೆ ಅಂಜುವವರಿಗೆ II
- Verse 14: ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ I ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ II
- Verse 15: ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ I ಹೊಲದ ಹೂವಿನಂತೆ ಅವನ ಬೆಡಗು ಬಿನ್ನಾಣ II
- Verse 16: ಬಿದ್ದುಹೋಗುವುದಾ ಹೂವು ಗಾಳಿಯ ಬಡಿತಕ್ಕೆ I ಅದರ ಗುರುತೂ ಇರದಲ್ಲಿ ಮರಳಿ ನೋಡಲಿಕ್ಕೆ II
- Verse 17: ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು II
- Verse 18: ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ I ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ II
- Verse 19: ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು I ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು II
- Verse 20: ಭಜಿಸಿರಿ ಪ್ರಭುವನು ದೇವದೂತರುಗಳೇ I ಆತನ ಆಣತಿ ಪಾಲಿಪ ಪರಾಕ್ರಮಿಗಳೇ I ಆತನ ನುಡಿಯಂತೆಯೇ ನಡೆಯುವ ಜನಾಂಗಗಳೇ II
- Verse 21: ಪ್ರಭುವನು ಭಜಿಸಿರಿ ಆತನ ಸೇನೆಗಳೇ I ಭಜಿಸಿ ಪ್ರಭುವನು, ಓ ಎನ್ನಮನವೇ II
- Verse 22: ಭಜಿಸಿರಿ ಪ್ರಭುವನು ಆತನ ಸೃಷ್ಟಿಗಳೇ I ಆತನ ಅಧಿಕಾರದಲ್ಲಿಹ ಸಕಲ ವಸ್ತುಗಳೇ I ಭಜಿಸು ಪ್ರಭುವನು, ಓ ಎನ್ನಮನವೇ II