வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
143ನೇ ಅಧ್ಯಾಯ
- Verse 1: ಆಲಿಸು ಪ್ರಭು ನನ್ನ ಪ್ರಾರ್ಥನೆ ಸೇರಲಿ ನಿನಗೀ ಬಿನ್ನಹ I ನಿನ್ನ ನೀತಿಸತ್ಯತೆಗಳನುಸಾರ ಪಾಲಿಸೆನಗೆ ಸದುತ್ತರ II
- Verse 2: ಗುರಿಮಾಡಬೇಡ ನಿನ್ನ ದಾಸನನು ನ್ಯಾಯ ವಿಚಾರಣೆಗೆ I ಯಾವ ಜೀವಾತ್ಮನೂ ನಿರ್ದೋಷಿಯಲ್ಲ ನಿನ್ನ ಲೆಕ್ಕಕೆ II
- Verse 3: ಮಾಡಿಹನು ನನ್ನ ಪ್ರಾಣ ನೆಲಕಚ್ಚುವಂತೆ ಬೆನ್ನಟ್ಟಿಹಾ ವೈರಿ I ದೂಡಿಹನು ಎಂದೊ ಸತ್ತ ಶವದಂತೆ ಕಾರ್ಗತ್ತಲೆಗಾ ದ್ರೋಹಿ II
- Verse 4: ಸೊರಗಿಹೋಗಿದೆ ನನ್ನ ಚೈತನ್ಯ I ನಿಬ್ಬೆರಗಾಗಿದೆ ನನ್ನ ಹೃದಯ II
- Verse 5: ನೆನಸಿಕೊಳ್ಳುತಿಹೆನು ಹಳೆಯ ಕಾಲವನು I ಧ್ಯಾನಿಸುತಿಹೆನು ನಿನ್ನ ಕಾರ್ಯಗಳನು I ಸ್ಮರಿಸುತಿಹೆನು ನಿನ್ನ ಕೈಕೆಲಸಗಳನು II
- Verse 6: ಬೇಡುತಾ ನಿನ್ನ ಕಡೆಗೆ ಕೈಚಾಚಿದೆ I ನಿನಗಾಗಿ ನನ್ನಾತ್ಮ ತವಕಪಡುತ್ತಿದೆ II
- Verse 7: ಸದುತ್ತರ ಪಾಲಿಸು ಪ್ರಭೂ, ಸೊರಗಿದೆ ಎನ್ನ ಚೇತನ I ನೀ ವಿಮುಖನಾದರೆ ನಾ ನರಕಹೊಕ್ಕವರಿಗೆ ಸಮಾನ II
- Verse 8: ಬೆಳಿಗ್ಗೆ ಸ್ಮರಿಸಮಾಡು ನಿನ್ನಚಲ ಪ್ರೀತಿಯನು I ನಿನ್ನಲ್ಲಿಯೆ ಇಟ್ಟಿರುವೆನು ನನ್ನ ನಂಬಿಕೆಯನು I ತೋರಿಸು ನನಗೆ ನಾ ಹಿಡಿಯಬೇಕಾದ ಮಾರ್ಗವನು I ನಿನ್ನ ಕಡೆಗೆ ಎತ್ತಿರುವೆನು ನನ್ನ ಹೃನ್ಮನಗಳನು II
- Verse 9: ಶತ್ರುಗಳಿಂದ ಪ್ರಭು ಮುಕ್ತಗೊಳಿಸೆನ್ನನು I ನಿನ್ನನೇ ಮೊರೆಹೊಕ್ಕು ನಾ ಬಂದಿರುವೆನು II
- Verse 10: ನೀನೆನ್ನ ದೇವರು; ಕಲಿಸೆನಗೆ ನಡೆಯಲು ನಿನ್ನ ಚಿತ್ತದಂತೆ I ನಿನ್ನ ಶುಭಾತ್ಮ ನೆರವಾಗಲಿ ನಾ ಸಮಹಾದಿಯಲಿ ನಡೆವಂತೆ II
- Verse 11: ಜೀವಿಸಮಾಡೆನ್ನನು ಪ್ರಭು, ನಿನ್ನ ನಾಮದ ನಿಮಿತ್ತ I ನಿನ್ನ ನೀತಿಗನುಸಾರ ಬಿಡಿಸೆನ್ನ ಪ್ರಾಣವನು ಆಪತ್ತಿನಿಂದ II
- Verse 12: ನಿನ್ನಚಲ ಪ್ರೀತಿಯಿಂದ ಧ್ವಂಸಮಾಡು ಶತ್ರುಗಳನು I ನಶಿಸಿಹಾಕು ಪ್ರಾಣವೈರಿಗಳನು, ನಾ ನಿನ್ನ ದಾಸನು II