ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
36ನೇ ಅಧ್ಯಾಯ
- Verse 1: “ನರಪುತ್ರನೇ, ನೀನು ಇಸ್ರಯೇಲಿನ ಪರ್ವತಗಳಿಗೆ ಈ ದೈವೋಕ್ತಿಯನ್ನು ನುಡಿ: ಇಸ್ರಯೇಲಿನ ಪರ್ವತಗಳೇ, ಸರ್ವೇಶ್ವರನ ಈ ವಾಕ್ಯವನ್ನು ಕೇಳಿರಿ:
- Verse 2: ಶತ್ರು ನಿಮ್ಮನ್ನು ನೋಡಿ, ‘ಆಹಾ ಈ ಪುರಾತನ ದುರ್ಗಗಳು ನಮ್ಮ ವಶವಾಗಿವೆ’ ಎಂದು ಹಿಗ್ಗಿಕೊಂಡದ್ದರಿಂದ ಈ ದೈವೋಕ್ತಿಯನ್ನು ನುಡಿಯಬೇಕೆಂದು ಸರ್ವೇಶ್ವರನಾದ ದೇವರ ಅಪ್ಪಣೆಯಾಯಿತು.”
- Verse 3: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ : “ಅಯ್ಯೋ, ಎಲ್ಲಾ ಕಡೆಯೂ ತುಳಿಯಲ್ಪಟ್ಟು, ಹಾಳಾದ ನೀವು, ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಕೊಚ್ಚುವವರ ಬಾಯಿಗೆ ಬಿದ್ದು, ಜನರ ದೂಷಣೆಗೆ ಗುರಿಯಾಗಿದ್ದೀರಿ.
- Verse 4: ಆದಕಾರಣ ಇಸ್ರಯೇಲಿನ ಪರ್ವತಗಳೇ, ಸರ್ವೇಶ್ವರನಾದ ದೇವರ ಈ ವಾಕ್ಯವನ್ನು ಕೇಳಿರಿ - ಬೆಟ್ಟಗುಡ್ಡಗಳಿಗೆ ತೊರೆತಗ್ಗುಗಳಿಗೆ, ಕಾಡಾದ ಹಾಳು ಪ್ರದೇಶಗಳಿಗೆ, ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೆ ಸರ್ವೇಶ್ವರನಾದ ದೇವರು ಹೀಗೆ ನುಡಿಯುತ್ತಾರೆ :
- Verse 5: “ಆಹಾ, ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡು, ಪೂರ್ಣಹೃದಯದಿಂದ ಆನಂದಪಟ್ಟವರು ಹಾಗು ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರು ಆದ ಎದೋಮಿನವರೆಲ್ಲರನ್ನು ಮತ್ತು ಇತರ ಜನಾಂಗಗಳಲ್ಲಿ ಉಳಿದವರನ್ನು ನಾನು ರೋಷಾವೇಶದಿಂದ ಶಪಿಸಿಯೇ ಶಪಿಸಿದ್ದೇನೆ.
- Verse 6: “ಹೀಗಿರಲು ಇಸ್ರಯೇಲ್ ನಾಡಿನ ವಿಷಯವಾದ ಈ ದೈವೋಕ್ತಿಯನ್ನು ಅದರ ಬೆಟ್ಟಗುಡ್ಡ, ತೊರೆ-ತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನು ಕೋಪೋದ್ರೇಕದಿಂದ ರೋಷಾವೇಷದಿಂದ ಮಾತನಾಡಿದ್ದೇನೆ. ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಿ.
- Verse 7: ಆದಕಾರಣ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿಮ್ಮ ಸುತ್ತಣ ಆ ಅನ್ಯ ಜನಾಂಗಗಳೇ ತಮ್ಮ ಮೇಲೆ ಬಿದ್ದ ಅವಮಾನವನ್ನು ಅನುಭವಿಸುವುದು ಖಂಡಿತ ಎಂದು ಕೈಯೆತ್ತಿ ಪ್ರಮಾಣಮಾಡಿದ್ದೇನೆ.
- Verse 8: ಇಸ್ರಯೇಲಿನ ಪರ್ವತಗಳೇ, ನಿಮ್ಮ ಗಿಡಗಳು ರೆಂಬೆಗಳನ್ನು ಹರಡಿಕೊಂಡು ನನ್ನ ಜನರಾದ ಇಸ್ರಯೇಲರಿಗೆ ಫಲಕೊಡುವುವು; ಅವರ ಬರುವಿಕೆ ಸಮೀಪವಾಯಿತು.
- Verse 9: ಇಗೋ, ನಾನು ನಿಮ್ಮ ಪಕ್ಷದವನು; ನಿಮ್ಮ ಕಡೆಗೆ ತಿರುಗಿಕೊಳ್ಳುವೆನು.
- Verse 10: ನಿಮ್ಮ ಹೊಲಗಳನ್ನು ಉಳುಮೆಮಾಡಿ ಬಿತ್ತುವರು; ನಿಮ್ಮಲ್ಲಿ ಬಹುಜನರು ಅಂದರೆ, ಇಸ್ರಯೇಲ್ ವಂಶವೆಲ್ಲವೂ ವಾಸಿಸುವಂತೆಮಾಡುವೆನು; ಪಟ್ಟಣಗಳು ಜನಭರಿತವಾಗುವುವು, ಹಾಳುನಿವೇಶನಗಳಲ್ಲಿ ಕಟ್ಟಡಗಳು, ಏಳುವುವು;
- Verse 11: ನಿಮ್ಮಲ್ಲಿ ಬಹುಜನರನ್ನೂ ಪಶುಗಳನ್ನೂ ವೃದ್ಧಿಗೊಳಿಸುವೆನು; ಅವು ಹೆಚ್ಚಿ ಫಲಭರಿತವಾಗುವುವು. ಮೊದಲಿನಂತೆ ನಿಮ್ಮಲ್ಲಿ ನಿವಾಸಿಗಳನ್ನು ತುಂಬಿಸಿ, ಮೊದಲಿಗಿಂತ ನಿಮ್ಮನ್ನು ಉತ್ತಮಸ್ಥಿತಿಗೆ ತರುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು.
- Verse 12: ಬೆಟ್ಟದ ಸೀಮೆಯೇ, ನಾನು ನಿನ್ನಲ್ಲಿ ಜನಸಂಚಾರವನ್ನು ಉಂಟುಮಾಡುವೆನು; ನನ್ನ ಜನರಾದ ಇಸ್ರಯೇಲರೇ, ನಿನ್ನಲ್ಲಿ ಸಂಚರಿಸುತ್ತಾ, ನಿನ್ನನ್ನು ಸೊತ್ತಾಗಿ ಅನುಭವಿಸುವರು; ನೀನು ಇನ್ನು ಅವರಿಗೆ ಪುತ್ರಶೋಕವನ್ನು ಕೊಡದಿರುವೆ.”
- Verse 13: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ ‘ನೀನು ನರಭಕ್ಷಕನಾಗಿ ನಿನ್ನ ಪ್ರಜೆಗೆ ಪುತ್ರಶೋಕವನ್ನು ಕೊಟ್ಟಿರುವೆ’ ಎಂದು ನಿನ್ನನ್ನು ಬಯ್ಯುತ್ತಾರಲ್ಲವೆ?
- Verse 14: ಇನ್ನು ಮುಂದೆ ನೀನು ನರಭಕ್ಷಕನಾಗುವುದಿಲ್ಲ; ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡದಿರುವೆ;
- Verse 15: ಮ್ಲೇಚ್ಛರ ಧಿಕ್ಕಾರವನ್ನು ಇನ್ನು ನಿನ್ನ ಕಿವಿಗೆ ಬೀಳಿಸೆನು; ನೀನು ಜನಾಂಗಗಳಿಂದ ಇನ್ನು ಅವಮಾನವನ್ನು ಅನುಭವಿಸದಿರುವೆ; ನಿನ್ನ ಪ್ರಜೆ ಮುಗ್ಗರಿಸುವುದಕ್ಕೆ ಇನ್ನು ನೀನು ಕಾರಣನಾಗುವುದಿಲ್ಲ” ಇದು ಸರ್ವೇಶ್ವರನಾದ ದೇವರ ನುಡಿ.
- Verse 16: ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು -
- Verse 17: “ನರಪುತ್ರನೇ, ಇಸ್ರಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು. ಅವರ ನಡತೆ ಮುಟ್ಟಿನ ಹೊಲಸಿನಂತೆ ನನಗೆ ಅಸಹ್ಯವಾಗಿತ್ತು.
- Verse 18: ಅವರು ನಾಡಿನ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಹೊಲೆಗೈದಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸುವೆನು;
- Verse 19: ಜನಾಂಗಗಳೊಳಗೆ ಅವರನ್ನು ಚದರಿಸುವೆನು; ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ ದುರಾಚಾರಗಳಿಗೆ ಸರಿಯಾಗಿ ದಂಡಿಸಿದೆನು.
- Verse 20: ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಓಹೋ, ಇವರು ಸರ್ವೇಶ್ವರನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದೆನಿಸಿಕೊಂಡರು. ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತಂದರು.
- Verse 21: ಇಸ್ರಯೇಲ್ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು, ನಾನು ಮರುಗಿದೆನು.
- Verse 22: “ಆದಕಾರಣ - ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಸ್ರಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮದ ನಿಮಿತ್ತವೆ, ಈ ರಕ್ಷಣಾಕಾರ್ಯವನ್ನು ಮಾಡುತ್ತೇನೆ.
- Verse 23: ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ.
- Verse 24: ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು.
- Verse 25: ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು.
- Verse 26: ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು.
- Verse 27: ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ.
- Verse 28: ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
- Verse 29: ನಾನು ನಿಮ್ಮನ್ನು ನಿಮ್ಮ ಎಲ್ಲ ಅಶುದ್ಧತೆಯಿಂದ ಉದ್ಧರಿಸಿ, ಕಾಳನ್ನು ಬೆಳೆಯಲೆಂದು ಅಪ್ಪಣೆಕೊಟ್ಟು ಅದನ್ನು ವೃದ್ಧಿಗೊಳಿಸುವೆನು; ನಿಮಗೆ ಕ್ಷಾಮವನ್ನು ಇನ್ನು ಬರಮಾಡೆನು.
- Verse 30: ನೀವು ಕ್ಷಾಮದೇಶದವರೆಂದು ಜನಾಂಗಗಳು ಇನ್ನು ನಿಮ್ಮನ್ನು ನಿಂದಿಸದಂತೆ ನಾನು ಮರದ ಹಣ್ಣನ್ನೂ ಹೊಲದ ಬೆಳೆಯನ್ನೂ ಹೆಚ್ಚಿಸುವೆನು.
- Verse 31: ಆಗ ನೀವು ನಿಮ್ಮ ದುರ್ಮಾರ್ಗ, ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು, ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ, ನಿಮಗೆ ನೀವೇ ಹೇಸಿಕೊಳ್ಳುವಿರಿ.”
- Verse 32: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ಈ ರಕ್ಷಣಾಕಾರ್ಯವನ್ನು ಮಾಡುವುದು ನಿಮ್ಮ ನಿಮಿತ್ತವಲ್ಲವೆಂಬುದು ನಿಮಗೆ ತಿಳಿದಿರಲಿ; ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳಿಗಾಗಿ ಲಜ್ಜೆಗೊಳ್ಳಿರಿ, ನಾಚಿಕೆಪಡಿರಿ.
- Verse 33: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ನಿಮ್ಮನ್ನು ನಿಮ್ಮ ಅಪರಾಧಗಳಿಂದೆಲ್ಲಾ ಶುದ್ಧಿಮಾಡುವ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು. ನಿವೇಶನಗಳಲ್ಲಿ ಕಟ್ಟಡಗಳು ಏಳುವುವು.
- Verse 34: ಹೌದು, ಹೋಗುವವರೆಲ್ಲರ ಕಣ್ಣೆದುರಿಗೆ ಬೀಡುಬಿದ್ದು ಕಾಡಾದ ಭೂಮಿಯನ್ನು ಕೃಷಿಮಾಡುವರು.
- Verse 35: ಆಗ ಜನರು, ‘ಕಾಡಾಗಿದ್ದ ಈ ನಾಡು ಏದೆನ ಉದ್ಯಾನದಂತೆ ಕಂಗೊಳಿಸುತ್ತದೆ; ಬಿದ್ದುಹೋಗಿ ಹಾಳುಪಾಳಾದ ಪಟ್ಟಣಗಳು ಕೋಟೆಕೊತ್ತಲಗಳಿಂದ ಕೂಡಿ ಜನಭರಿತವಾಗಿವೆಯಲ್ಲಾ!’ ಎಂದು ಹೇಳುವರು.
- Verse 36: ಸರ್ವೇಶ್ವರನಾದ ನಾನೇ ಬಿದ್ದುಹೋದುದನ್ನು ಕಟ್ಟಿ, ಹಾಳಾದುದನ್ನು ಬೆಳೆಯಿಸಿದ್ದೇನೆಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಸರ್ವೇಶ್ವರನಾದ ನಾನೇ ನುಡಿದಿದ್ದೇನೆ, ಹಾಗೆಯೇ ನಡೆಸುತ್ತೇನೆ.”
- Verse 37: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ಇನ್ನೊಂದು ವಿಷಯದಲ್ಲಿ ಇಸ್ರಯೇಲ್ ವಂಶದವರ ವಿಜ್ಞಾಪನೆಯನ್ನು ಆಲಿಸಿ ನೆರವೇರಿಸುವೆನು. ಅದೇನೆಂದರೆ, ಅವರ ಜನಸಂಖ್ಯೆಯನ್ನು ಹಿಂಡಿನಂತೆ ಹೆಚ್ಚಿಸುವೆನು.
- Verse 38: ಮೀಸಲಾದ ಮಂದೆಯಂತೆ, ಹಬ್ಬಗಳಲ್ಲಿ ಜೆರುಸಲೇಮಿಗೆ ಬಂದು ಸೇರುವ ಹಿಂಡಿನ ಹಾಗೆ, ಜನರು ಹಾಳುಪಟ್ಟಣಗಳಲ್ಲಿ ಹಿಂಡುಹಿಂಡಾಗಿ ತುಂಬಿಕೊಳ್ಳುವರು. ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ನಿಶ್ಚಯವಾಗುವುದು.”