ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
28ನೇ ಅಧ್ಯಾಯ
- Verse 1: ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ, “ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲೇ ಬರಬೇಕೆಂಬುದು ನಿನಗೆ ಗೊತ್ತಿದೆಯಲ್ಲವೇ?’ ಎಂದನು.
- Verse 2: ದಾವೀದನು, “ಹೌದು, ತಮ್ಮ ಸೇವಕನ ಸಾಹಸ ತಮಗೇ ಗೊತ್ತಾಗುವುದು,” ಎಂದನು. ಆಕೀಷನು, “ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುತ್ತೇನೆ,” ಎಂದನು.
- Verse 3: ಸಮುವೇಲನು ಮರಣಹೊಂದಿದ್ದನು. ಇಸ್ರಯೇಲರು ಅವನಿಗಾಗಿ ಸಂತಾಪ ಸೂಚಿಸುತ್ತಾ ಅವನ ಶವವನ್ನು ಅವನ ಸ್ವಂತ ಊರಾದ ರಾಮಾದಲ್ಲಿ ಸಮಾಧಿಮಾಡಿದ್ದರು. ಸೌಲನು ಭೂತಪ್ರೇತಗಳನ್ನು ವಿಚಾರಿಸುವವರನ್ನೂ ಬೇತಾಳಿಕರನ್ನೂ ನಾಡಿನಿಂದ ಹೊರಡಿಸಿಬಿಟ್ಟಿದ್ದನು.
- Verse 4: ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇಮಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಸೌಲನು ಸಮಸ್ತ ಇಸ್ರಯೇಲರೊಡನೆ ಬಂದು ಗಿಲ್ಬೋವದಲ್ಲಿ ಇಳಿದುಕೊಂಡನು.
- Verse 5: ಫಿಲಿಷ್ಟಿಯರ ಪಾಳೆಯವನ್ನು ಕಂಡಾಗ ಭಯಭೀತಿಯಿಂದ ಅವನ ಎದೆಯೊಡೆಯಿತು.
- Verse 6: ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸುವುದರಿಂದಾಗಲಿ, ಕನಸುಗಳಿಂದಾಗಲಿ, ಊರಿಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಅವನಿಗೆ ಉತ್ತರ ಸಿಗಲಿಲ್ಲ.
- Verse 7: ಆದುದರಿಂದ ಅವನು ತನ್ನ ಸೇವಕರಿಗೆ, “ಭೂತಪ್ರೇತಗಳಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ; ನಾನು ಆಕೆಯ ಬಳಿಗೇ ಹೋಗಿ ವಿಚಾರಿಸುವೆನು,” ಎಂದು ಹೇಳಿದನು. ಅವರು, “ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ,” ಎಂದರು.
- Verse 8: ಆಗ ಸೌಲನು ಉಡಿಗೆತೊಡಿಗೆಗಳಿಂದ ತನ್ನನ್ನು ಮಾರ್ಪಡಿಸಿಕೊಂಡು ಇಬ್ಬರು ಸೇವಕರೊಡನೆ ಹೊರಟು ರಾತ್ರಿಯಲ್ಲಿ ಆಕೆಯ ಮನೆಗೆ ಬಂದನು. “ದಯವಿಟ್ಟು ನನಗಾಗಿ ಭೂತಪ್ರೇತಗಳಲ್ಲಿ ವಿಚಾರಿಸಿ ಶಾಸ್ತ್ರ ಹೇಳು; ನಾನು ಯಾವನ ಹೆಸರು ಹೇಳುತ್ತೇನೋ ಅವನನ್ನು ಇಲ್ಲಿಗೆ ಬರಮಾಡು,” ಎಂದು ಆಕೆಯನ್ನು ಬೇಡಿಕೊಂಡನು.
- Verse 9: ಆಗ ಆಕೆ ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನು ಹಾಗು ಬೇತಾಳಿಕರನ್ನು ನಾಡಿನಿಂದ ಹೊರಡಿಸಿಬಿಟ್ಟನಲ್ಲವೇ? ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವುದೇಕೆ?” ಎಂದಳು.
- Verse 10: ಅದಕ್ಕೆ ಸೌಲನು, ” ಸರ್ವೇಶ್ವರನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವುದಿಲ್ಲ,” ಎಂದು ಆಕೆಗೆ ಸರ್ವೇಶ್ವರನ ಹೆಸರಿನಲ್ಲಿ ಪ್ರಮಾಣ ಮಾಡಿದನು.
- Verse 11: ಆಗ ಆ ಸ್ತ್ರೀ, “ನಿನಗೆ ಯಾರನ್ನು ಬರಮಾಡಬೇಕು?” ಎಂದಳು. “ಸಮುವೇಲನನ್ನು,” ಎಂದು ಉತ್ತರಕೊಟ್ಟನು.
- Verse 12: ಆ ಸ್ತ್ರೀ ಸಮುವೇಲನನ್ನು ಕಂಡಕೂಡಲೆ ಗಟ್ಟಿಯಾಗಿ ಕೂಗಿ ಸೌಲನಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನೀನು ಸೌಲನಲ್ಲವೇ?,” ಎಂದಳು.
- Verse 13: ಆಗ ಅರಸನು, “ಹೆದರಬೇಡ, ನಿನಗೇನು ಕಾಣಿಸುತ್ತದೆ?” ಎಂದು ಆಕೆಯನ್ನು ಕೇಳಿದನು. “ಭೂಮಿಯೊಳಗಿಂದ ಪ್ರೇತಾತ್ಮವೊಂದು ಬರುತ್ತಿರುವುದನ್ನು ನೋಡುತ್ತಿದ್ದೇನೆ,” ಎಂದು ಉತ್ತರಕೊಟ್ಟಳು.
- Verse 14: ಅವನು ಮತ್ತೆ, “ಅವನ ರೂಪ ಹೇಗಿದೆ?” ಎಂದು ಕೇಳಿದನು. ಆಕೆ, “ನಿಲುವಂಗಿಯನ್ನು ತೊಟ್ಟುಕೊಂಡ ಒಬ್ಬ ಮುದುಕ ಬರುತ್ತಿದ್ದಾನೆ,” ಎಂದು ಹೇಳಿದಳು. ಅವನು ಸಮುವೇಲನೇ ಎಂದು ಸೌಲನು ತಿಳಿದು ನೆಲದಮಟ್ಟಿಗೂ ಬಾಗಿ ನಮಸ್ಕರಿಸಿದನು.
- Verse 15: ಆಗ ಸಮುವೇಲನು ಸೌಲನನ್ನು, “ನೀನು ನನ್ನ ವಿಶ್ರಾಂತಿಯನ್ನು ಕೆಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಏಕೆ ಬರಮಾಡಿದೆ?” ಎಂದು ಕೇಳಿದನು. ಅದಕ್ಕೆ ಸೌಲನು, “ನಾನು ಬಲು ಇಕ್ಕಟ್ಟಿನಲ್ಲಿ ಇದ್ದೇನೆ; ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ; ದೇವರು ನನ್ನನ್ನು ಕೈಬಿಟ್ಟು ದೂರಹೋಗಿದ್ದಾರೆ; ಅವರು ನನಗೆ ಪ್ರವಾದಿಗಳಿಂದಾಗಲಿ, ಕನಸುಗಳಿಂದಾಗಲಿ ಉತ್ತರಕೊಡಲೊಲ್ಲರು. ಆದುದರಿಂದ ನಾನು ಮಾಡಬೇಕಾದುದನ್ನು ನೀನು ತಿಳಿಸುವೆಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು,” ಎಂದನು.
- Verse 16: ಆಗ ಸಮುವೇಲನು, “ಸರ್ವೇಶ್ವರ ನಿನ್ನನ್ನು ಕೈಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವುದೇಕೆ?
- Verse 17: ಅವರು ನನ್ನ ಮುಖಾಂತರ ನಿನಗೆ ಹೇಳಿದ್ದನ್ನು ನೆರವೇರಿಸಿದ್ದಾರೆ; ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟಿದ್ದಾರೆ.
- Verse 18: ನೀನು ಸರ್ವೇಶ್ವರನ ಮಾತನ್ನು ಕೇಳಲಿಲ್ಲ; ಅವರು ಅಮಾಲೇಕ್ಯರ ಮೇಲೆ ಉಗ್ರಕೋಪಗೊಂಡು ಮಾಡಿದ ಕೋಪಾಜ್ಞೆಯನ್ನು ನೀನು ನೆರವೇರಿಸಲಿಲ್ಲ. ಆದುದರಿಂದಲೇ ಸರ್ವೇಶ್ವರ ಈಗ ನಿನಗೆ ಹೀಗೆ ಮಾಡುತ್ತಾರೆ.
- Verse 19: ನಿನ್ನ ಸಮೇತ ಇಸ್ರಯೇಲರನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವರು. ನಾಳೆ ನೀನೂ ನಿನ್ನ ಮಕ್ಕಳೂ ನಾನಿರುವಲ್ಲಿಗೆ ಬರುವಿರಿ. ಸರ್ವೇಶ್ವರ ಇಸ್ರಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವರು,” ಎಂದು ಹೇಳಿದನು.
- Verse 20: ಸೌಲನು ಸಮುವೇಲನ ಮಾತುಗಳನ್ನು ಕೇಳಿದ ಕೂಡಲೆ ದಿಗ್ಭ್ರಾಂತನಾಗಿ ನೆಲದ ಮೇಲೆ ಕೈಕಾಲು ಚಾಚಿಬಿದ್ದನು. ಅವನು ಇಡೀ ದಿವಸ ಊಟಮಾಡಿರಲಿಲ್ಲ. ಆದುದರಿಂದ ಅವನಲ್ಲಿ ಬಲವೇ ಇರಲಿಲ್ಲ.
- Verse 21: ಆ ಸ್ತ್ರೀ ಸೌಲನ ಹತ್ತಿರಕ್ಕೆ ಬಂದು ಅವನು ಬಹುಭೀತನಾಗಿದ್ದಾನೆಂದು ಕಂಡು, “ನಿಮ್ಮ ದಾಸಿಯಾದ ನಾನು ನಿಮ್ಮ ಮಾತು ಕೇಳಿದೆನು; ಕೈಯಲ್ಲಿ ಜೀವ ಹಿಡಿದವಳಾಗಿ ನಿಮ್ಮ ಅಪ್ಪಣೆಯನ್ನು ನೆರವೇರಿಸಿದೆನು.
- Verse 22: ಆದುದರಿಂದ ಈಗ ನೀವು ದಯವಿಟ್ಟು ನಿಮ್ಮ ದಾಸಿಯ ಮಾತನ್ನು ಕೇಳಬೇಕು. ಸ್ವಲ್ಪ ಆಹಾರ ತರುತ್ತೇನೆ, ಪ್ರಯಾಣಕ್ಕೆ ಬಲಬರುವ ಹಾಗೆ ಅದನ್ನು ಊಟಮಾಡಿ,” ಎಂದು ಹೇಳಿದಳು.
- Verse 23: ಅವನು, “ಒಲ್ಲೆ; ಊಟಮಾಡುವುದಿಲ್ಲ,” ಎಂದನು. ಆದರೆ, ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡಿದ್ದರಿಂದ ಅವನು ಕಡೆಗೆ ಅವರ ಮಾತಿಗೆ ಒಪ್ಪಿ ನೆಲದಿಂದೆದ್ದು ಮಂಚದ ಮೇಲೆ ಕುಳಿತುಕೊಂಡನು.
- Verse 24: ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರುವಿತ್ತು. ಆಕೆ ಶೀಘ್ರವಾಗಿ ಅದನ್ನು ಕೊಯ್ದು, ಪಕ್ವಮಾಡಿ, ಹಿಟ್ಟನ್ನು ತೆಗೆದುಕೊಂಡು ನಾದಿ, ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು,
- Verse 25: ಸೌಲನಿಗೂ ಅವನ ಸೇವಕರಿಗೂ ಬಡಿಸಿದಳು. ಅವರು ಊಟಮಾಡಿ ಅದೇ ರಾತ್ರಿ ಹೊರಟುಹೋದರು.