P. O. C ബൈബിള്
ಹಳೆಯ ಒಡಂಬಡಿಕೆ
ಯೆಶಾಯ
48ನೇ ಅಧ್ಯಾಯ
- Verse 1: ಇಸ್ರಯೇಲೆಂಬ ನಾಮಧಾರಿಗಳೇ, ಯೆಹೂದ ವಂಶೋತ್ಪನ್ನರೇ, ಯಕೋಬ ಮನೆತನದವರೇ, ಇಡುತ್ತೀರಿ ನೀವು ಸರ್ವೇಶ್ವರನ ಮೇಲೆ ಆಣೆ ಸ್ಮರಿಸುತ್ತೀರಿ ನಿಸ್ಸಂದೇಹವಾಗಿ ಇಸ್ರಯೇಲಿನ ದೇವರನೆ. ಆದರೆ, ದೂರವಾಗಿದೆ ಸತ್ಯಕ್ಕೂ ಧರ್ಮಕ್ಕೂ ನಿಮ್ಮ ಕಾರ್ಯಾಚರಣೆ.
- Verse 2: ಹೆಮ್ಮೆಪಡುವರಿವರು ತಾವು ಪವಿತ್ರನಗರದವರೆಂದು ಭರವಸೆಯಿಂದಿರುವರು ದೇವರು ಇಸ್ರಯೇಲಿನವನೇ ಎಂದು ಆತನ ಹೆಸರು ಸೇನಾಧೀಶ್ವರ ಸರ್ವೇಶ್ವರನೇ ಎಂದು.
- Verse 3: “ಕೇಳು, ಎಲೈ ಯಕೋಬ ಮನೆತನವೇ, ನಿನಗೆ ತಿಳಿಸಿದೆ ಈವರೆಗೆ ನಡೆದ ಸಂಗತಿಗಳನು ಪೂರ್ವದಲೇ. ಹೌದು ಪ್ರಕಟಿಸಿದೆ ನಾನು, ಹೊರಡಿಸಿದೆ ನನ್ನ ಬಾಯಿಂದಲೇ ಕೈಗೂಡುವಂತೆ ಮಾಡಿದೆ ನಾನವುಗಳನು ಕೂಡಲೆ.
- Verse 4: ತಿಳಿದಿದೆ ನನಗೆ ನಿನ್ನ ಹಟಮಾರಿತನ ನಿನ್ನ ಕುತ್ತಿಗೆಯ ನರಗಳು ಕಬ್ಬಿಣ ನಿನ್ನ ಹಣೆ ಕಂಚಿನಂತೆ ಕಠಿಣ.
- Verse 5: ‘ಈ ಕಾರ್ಯಗಳನ್ನು ನಡೆಸಿದ್ದು ನನ್ನ ವಿಗ್ರಹವೇ ವಿಧಿಸಿದ್ದು ನನ್ನ ಕೆತ್ತನೆಯ ಬೊಂಬೆಯೇ, ಎರಕದ ಮೂರ್ತಿಯೇ’ ಎಂದು ನೀ ಜಂಬ ಕೊಚ್ಚಿಕೊಳ್ಳದಂತೆ ಪುರಾತನ ಕಾಲದಲ್ಲೆ ನಾನಿವುಗಳನು ಮುಂತಿಳಿಸಿದೆ. ಅವುಗಳು ನೆರವೇರುವುದಕ್ಕೆ ಮುಂಚೆಯೇ ಪ್ರಕಟಿಸಿದೆ.
- Verse 6: ನೋಡು, ನೀ ಕೇಳಿದವೆಲ್ಲ ನಡೆದಿದೆಯೊ ಇಲ್ಲವೋ ಎಂಬುದನು. ಆದರೂ ಘೋಷಿಸುತ್ತಾರೆಯೇ ನಿನ್ನವರು ಅವುಗಳನ್ನು? ಅರುಹುವೆನು ನಿನಗಿಂದಿನಿಂದ ಹೊಸ ಸಂಗತಿಗಳನು ಈವರೆಗೂ ನೀನರಿಯದ ಗುಪ್ತ ವಿಷಯಗಳನು.
- Verse 7: ಪುರಾತನ ಕಾಲದಲ್ಲಿ ಅಲ್ಲ, ಈಗ ನಡೆಯುತ್ತಿವೆ ಈ ಘಟನೆಗಳೆಲ್ಲ. ‘ಇದೆಲ್ಲ ನನಗೆ ಮೊದಲೇ ತಿಳಿದಿತ್ತಲ್ಲಾ,’ ಎಂದು ನೀ ಕೊಚ್ಚಿಕೊಳ್ಳದಂತೆ, ನಾ ನಿನಗೆ ಮುಂತಿಳಿಸಲಿಲ್ಲ.
- Verse 8: ಹೌದು, ಹೌದು ನೀ ಕೇಳಿಲ್ಲ, ತಿಳಿದೂ ಇಲ್ಲ ಅದಿಯಿಂದ ನಿನ್ನ ಕಿವಿ ತೆರೆದೂ ಇಲ್ಲ ನೀನು ಆಗರ್ಭ ದ್ರೋಹಿ, ಮಹಾ ಕುಟಿಲ ಎಂಬುದು ನನಗೆ ತಿಳಿದು ಇದೆಯಲ್ಲ !
- Verse 9: ಆದರೂ ನನ್ನ ಹೆಸರು ಕೆಡದಂತೆ ತಡೆಹಿಡಿವೆನು ನಿನ್ನ ಮೇಲಣ ಕೋಪವನು; ನನ್ನ ಕೀರ್ತಿಗೆ ಕಳಂಕ ಬಾರದಂತೆ ತಾಳಿಕೊಳ್ಳುವೆನು, ನಿರ್ಮೂಲಮಾಡದೆ ನಿನ್ನನು.
- Verse 10: ಬೆಳ್ಳಿಯನು ಪುಟಕ್ಕೆ ಹಾಕಿದಂತಲ್ಲ; ನಿನ್ನನು ಸಂಕಟವೆಂಬ ಕೆಂಡಕ್ಕೆ ಹಾಕಿರುವೆ. ಶೋಧಿಸಿರುವೆನು, ಪರಿಶೋಧಿಸಿರುವೆನು ನಿನ್ನನು ನನಗಾಗೆ;
- Verse 11: ಇದನ್ನು ಮಾಡುವೆ ನನಗೋಸ್ಕರವೆ ಇದನ್ನು ಮಾಡುವೆ ಕಳಂಕಬಾರದಂತೆ ನನ್ನ ಹೆಸರಿಗೆ ಸಲ್ಲಗೊಡಿಸೆನು ನನ್ನ ಮಹಿಮೆಯನು ಮತ್ತೊಬ್ಬನಿಗೆ.”
- Verse 12: “ಯಕೋಬೆ, ನಾ ಕರೆದ ಇಸ್ರಯೇಲೆ ನನಗೆ ಕಿವಿಗೊಡು, ಪರಮಾತ್ಮ ನಾನೆ ಆದಿಯು ನಾನೆ, ಅಂತ್ಯವು ನಾನೆ.
- Verse 13: ಭೂಮಿಗೆ ಅಸ್ತಿವಾರ ಹಾಕಿದ್ದು ನನ್ನ ಕೈಯೇ, ಆಕಾಶವನ್ನು ಹರಡಿದ್ದು ನನ್ನ ಬಲಗೈಯೇ ಇವೆರಡೂ ಬರುತ್ತವೆ ನಾ ಕರೆದ ಮಾತ್ರಕ್ಕೇ.
- Verse 14: ಒಟ್ಟುಗೂಡಿ ಕೇಳಿ ನೀವೆಲ್ಲರು ಇದನ್ನು : ಆ ದೇವರುಗಳಲ್ಲಿ ಮುಂತಿಳಿಸಿದವನಾರು ಈ ಸಂಗತಿಯನು? ನನ್ನ ಪ್ರೀತಿಗೆ ಪಾತ್ರನಾದ ವ್ಯಕ್ತಿ ಸೈರಸನು ಕಸ್ದೀಯರ ಮೇಲೆ ಕೈಯೆತ್ತುವನು, ಈಡೇರಿಸುವನು ಬಾಬೆಲಿನಲ್ಲಿ ನನ್ನ ಇಷ್ಟಾರ್ಥವನು.
- Verse 15: ಆತನನ್ನು ಹೆಸರಿಸಿ ಕರೆದವನು ನಾನೇ ಆತನನ್ನು ಬರಮಾಡಿದವನೂ ನಾನೇ. ಆತನು ಗಳಿಸುವುದು ಜಯವನ್ನೇ.
- Verse 16: ಬಂದು ಕೇಳಿ ಇದನ್ನು ಹತ್ತಿರದಿಂದ ನಾ ಮಾತಾಡಿಲ್ಲ ಗುಟ್ಟಾಗಿ ಆದಿಯಿಂದ ಪ್ರಸನ್ನನಾಗಿಹೆನು ಭುವಿ ಉಂಟಾದಂದಿನಿಂದ.” (ಕಳುಹಿಸಿದ್ದಾರೆ ದೇವರಾದ ಸರ್ವೇಶ್ವರ ನನ್ನನ್ನೀಗ ತಮ್ಮ ಪವಿತ್ರಾತ್ಮರ ಸಮೇತ).
- Verse 17: ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರ ಸ್ವಾಮಿಯೆ ನುಡಿದಿಹನು : “ನಿನಗೆ ಕ್ಷೇಮಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರ ಸ್ವಾಮಿ ದೇವರು ನಾನು.
- Verse 18: ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತ್ತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ.
- Verse 19: ಅಗಣಿತವಾಗಿರುತ್ತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ.”
- Verse 20: ಹೊರಡಿರಿ ಬಾಬಿಲೋನ್ ನಗರದಿಂದ, ಓಡಿರಿ ಕಸ್ದೀಯರ ಕಡೆಯಿಂದ ಪ್ರಚುರಪಡಿಸಿರಿ ಹರ್ಷಧ್ವನಿಯಿಂದ, ಪ್ರಕಟಿಸಿರಿ ಭೂಮಿಯ ಕಟ್ಟಕಡೆಯ ತನಕ, ಈ ಪರಿ ತಿಳಿಸಿರಿ : “ಸರ್ವೇಶ್ವರ, ತಮ್ಮ ದಾಸ ಯಕೋಬನ ಉದ್ಧಾರಕ".
- Verse 21: ಆತ ಮರುಭೂಮಿಯಲ್ಲಿ ತನ್ನ ಜನರನ್ನು ನಡೆಸಿದಾಗ ಬಳಲಲಿಲ್ಲ ಅವರು ಬಾಯಾರಿಕೆಯಿಂದ; ಹರಿಸಿದನು ನೀರನ್ನು ಅವರಿಗಾಗಿ ಕಲ್ಲಿನೊಳಗಿಂದ ಜಲವಾಹಿನಿ ಹರಿಯಿತು ಆತ ಸೀಳಿದ ಬಂಡೆಯಿಂದ.
- Verse 22: “ದುಷ್ಟರಿಗಿಲ್ಲ ಶಾಂತಿಸಮಾಧಾನ” ಇದು ಸರ್ವೇಶ್ವರ ಸ್ವಾಮಿಯ ವಚನ.