ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಹೋಶುವ
23ನೇ ಅಧ್ಯಾಯ
- Verse 1: ಸರ್ವೇಶ್ವರಸ್ವಾಮಿ ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಯೇಲರಿಗೆ ನೆಮ್ಮದಿಯಿತ್ತರು. ಬಹಳ ದಿನಗಳಾದ ತರುವಾಯ ಯೆಹೋಶುವ ಹಣ್ಣುಹಣ್ಣು ಮುದುಕನಾದ.
- Verse 2: ಆತ ಇಸ್ರಯೇಲರೆಲ್ಲರನ್ನು, ಅವರ ಹಿರಿಯರನ್ನು, ಮುಖ್ಯಸ್ಥರನ್ನು, ನ್ಯಾಯಾಧಿಪತಿಗಳನ್ನು ಹಾಗೂ ಅಧಿಕಾರಿಗಳನ್ನು ತನ್ನ ಬಳಿಗೆ ಕರೆಯಿಸಿದನು. ಅವರಿಗೆ, “ನಾನು ಮುಪ್ಪಿನ ಮುದುಕನಾದೆ.
- Verse 3: ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪರವಾಗಿದ್ದು, ಈ ಜನಾಂಗಗಳಿಗೆ ಮಾಡಿದ್ದೆಲ್ಲವನ್ನು ನೀವು ಕಣ್ಣಾರೆ ನೋಡಿದ್ದೀರಿ. ಹೌದು, ನಿಮ್ಮ ಪರವಾಗಿ ಯುದ್ಧಮಾಡಿದಾತ ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ.
- Verse 4: ನೋಡಿ, ಜೋರ್ಡನಿನಿಂದ ಪಶ್ಚಿಮ ಮಹಾ ಸಮುದ್ರದವರೆಗೂ ಇರುವ ಜನಾಂಗಗಳಲ್ಲಿ ಸತ್ತವರ ಹಾಗೂ ಉಳಿದವರ ನಾಡನ್ನು ನಿಮಗೆ ಸೊತ್ತಾಗಿ ಕೊಟ್ಟಿದ್ದೇನೆ,
- Verse 5: ನಿಮ್ಮ ದೇವರಾದ ಸರ್ವೇಶ್ವರ ತಾವೇ ಉಳಿದವರನ್ನು ನಿಮ್ಮ ಕಣ್ಮುಂದೆ ಹೊರಡಿಸಿಬಿಡುವರು. ಅವರ ವಾಗ್ದಾನದಂತೆ ಆ ಜನರ ನಾಡನ್ನು ನೀವು ವಶಪಡಿಸಿಕೊಳ್ಳುವಿರಿ.
- Verse 6: ಮೋಶೆಯ ಧರ್ಮಶಾಸ್ತ್ರವನ್ನೂ ಎಲ್ಲಾ ವಿಧಿಗಳನ್ನೂ ಕೈಗೊಳ್ಳುವುದರಲ್ಲಿ ಸ್ಥಿರಚಿತ್ತದಿಂದಿರಿ. ಎಡಕ್ಕಾಗಲಿ ಬಲಕ್ಕಾಗಲಿ ಓರೆಯಾಗಬೇಡಿ.
- Verse 7: ಉಳಿದಿರುವ ಈ ಜನಾಂಗಗಳ ಜೊತೆ ಸೇರಿಕೊಳ್ಳಬೇಡಿ. ಅವರ ದೇವತೆಗಳ ಹೆಸರು ಹೇಳಿ ಆರಾಧಿಸಬಾರದು, ಪ್ರಮಾಣ ಮಾಡಬಾರದು, ಅವುಗಳನ್ನು ಪೂಜಿಸಬಾರದು. ಅವುಗಳಿಗೆ ಸೇವೆ ಮಾಡಬಾರದು.
- Verse 8: ಈವರೆಗೆ ಹೇಗೋ ಹಾಗೆಯೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಸರ್ವೇಶ್ವರನನ್ನೇ ಅಂಟಿಕೊಂಡಿರಿ.
- Verse 9: ಸರ್ವೇಶ್ವರ ಮಹಾಪರಾಕ್ರಮಿಗಳಾದ ಜನಾಂಗಗಳನ್ನು ನಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾರೆ. ನಮ್ಮನ್ನು ಪ್ರತಿಭಟಿಸಿ ನಿಂತವನು ಒಬ್ಬನೂ ಇಲ್ಲ.
- Verse 10: ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನದಂತೆ ನಿಮ್ಮ ಪರವಾಗಿ ಯುದ್ಧಮಾಡಿದರು. ಆದ್ದರಿಂದಲೇ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವಷ್ಟು ಶಕ್ತನಾದ.
- Verse 11: ಇಂತಿರಲು ಜಾಗರೂಕತೆಯಿಂದಿರಿ, ನಿಮ್ಮ ಪ್ರಾಣದಂತೆ ದೇವರಾದ ಸರ್ವೇಶ್ವರನನ್ನೇ ಪ್ರೀತಿಸಿರಿ.
- Verse 12: ದೇವರಿಗೆ ವಿಮುಖರಾಗಿ, ನಿಮ್ಮ ಮಧ್ಯೆ ಉಳಿದಿರುವ ಈ ಜನಾಂಗಗಳೊಡನೆ ಕೊಟ್ಟು ತಂದು ಮಿಶ್ರವಾಗಬೇಡಿ.
- Verse 13: ಮಿಶ್ರವಾದರೆ ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಮಧ್ಯೆಯಿಂದ ಹೊರಡಿಸುವುದೇ ಇಲ್ಲವೆಂಬುದು ನಿಮಗೆ ತಿಳಿದಿರಲಿ. ಆ ಜನರೇ ನಿಮಗೆ ಉರುಳೂ ಬೋನೂ ಆಗುವರು; ಪಕ್ಕೆಗೆ ಬಡಿಯುವ ಕೊರಡಾಗಿಯೂ ಇರಿಯುವ ಶೂಲವಾಗಿಯೂ ಕಣ್ಣಿಗೆ ಚುಚ್ಚುವ ಮುಳ್ಳಾಗಿಯೂ ಮಾರ್ಪಡುವರು. ಕಡೆಗೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟ ಈ ಚೆಲುವ ನಾಡಲ್ಲಿ ನೀವೇ ಇಲ್ಲದಂತಾಗುವಿರಿ.
- Verse 14: ಈಗ ನಾನು, ಭೂನಿವಾಸಿಗಳೆಲ್ಲರು ಹಿಡಿಯುವ ಹಾದಿಯನ್ನು ಹಿಡಿಯಬೆಕಾಗಿದೆ. ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ. ಎಲ್ಲವೂ ತಪ್ಪದೆ ನೆರವೇರಿವೆ ಎಂಬುದು ನಿಮಗೆ ಮನದಟ್ಟಾಗಿರಲಿ.
- Verse 15: ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನಕ್ಕನುಸಾರ ಈಗ ನಿಮಗೆ ಎಲ್ಲಾ ವಿಧದ ಒಳಿತನ್ನೂ ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಎಲ್ಲಾ ತರದ ಕೇಡುಗಳನ್ನು ಬರಮಾಡಿ ತಾವು ಕೊಟ್ಟ ಈ ಚೆಲುವಾದ ನಾಡಿನಿಂದ ನಿಮ್ಮನ್ನು ನಿರ್ಮೂಲ ಮಾಡುವರು.
- Verse 16: ದೇವರಾದ ಸರ್ವೇಶ್ವರನ ನಿಬಂಧನೆಯನ್ನು ನೀವು ಮೀರಿ ಅನ್ಯದೇವತೆಗಳಿಗೆ ಸೇವೆಸಲ್ಲಿಸಿ, ಅಡ್ಡಬಿದ್ದರೆ, ಸರ್ವೇಶ್ವರನ ಕೋಪಾಗ್ನಿ ನಿಮ್ಮ ಮೇಲೆ ಎರಗುವುದು; ಅವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನಿಂದ ಹೊರದೂಡಲ್ಪಟ್ಟು ಬೇಗನೆ ನಾಶವಾಗುವಿರಿ,” ಎಂದನು.