ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಸಮುವೇಲನು
15ನೇ ಅಧ್ಯಾಯ
- Verse 1: ಸ್ವಲ್ಪಕಾಲವಾದನಂತರ ಅಬ್ಷಾಲೋಮನು ತನ್ನ ಮುಂದೆ ಮೈಗಾವಲಾಗಿ ಓಡುವುದಕ್ಕೆ ಐವತ್ತು ಮಂದಿ ಆಳುಗಳನ್ನು ನೇಮಿಸಿದನು. ಅದಕ್ಕಾಗಿ ಒಂದು ರಥವನ್ನೂ ಕುದುರೆಗಳನ್ನೂ ಪಡೆದುಕೊಂಡನು.
- Verse 2: ಅವನು ಮುಂಜಾನೆಯೇ ಎದ್ದು ಊರುಬಾಗಿಲ ಬಳಿಯಲ್ಲಿ ನಿಂತುಕೊಳ್ಳುತ್ತಿದ್ದನು. ಯಾರಾದರೂ ತಮ್ಮ ವ್ಯಾಜ್ಯ ತೀರಿಸಿಕೊಳ್ಳುವುದಕ್ಕಾಗಿ ಅರಸನ ಬಳಿಗೆ ಹೋಗುವುದನ್ನು ಅಬ್ಷಾಲೋಮನು ಕಂಡರೆ ಅಂಥವನನ್ನು ತನ್ನ ಬಳಿಗೆ ಕರೆದು, “ನೀನು ಯಾವ ಊರಿನವನು?” ಎಂದು ವಿಚಾರಿಸುತ್ತಿದ್ದನು. ಅವರು, “ನಿನ್ನ ಸೇವಕರಾದ ನಾವು ಇಸ್ರಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರಕೊಡುತ್ತಿದ್ದರು.
- Verse 3: ಆಗ ಅಬ್ಷಾಲೋಮನು, “ನೋಡಿ, ನಿಮ್ಮ ವ್ಯಾಜ್ಯ ಒಳ್ಳೆಯದು ಹಾಗು ನ್ಯಾಯವಾದದ್ದು. ಆದರೆ ವ್ಯಾಜ್ಯಗಳನ್ನು ವಿಚಾರಿಸುವುದಕ್ಕೆ ರಾಜಪ್ರತಿನಿಧಿ ಒಬ್ಬನೂ ನೇಮಕವಾಗಿಲ್ಲ.
- Verse 4: ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡೆದುಕೊಳ್ಳುವ ಹಾಗೆ ನನ್ನನ್ನೇ ನಾಡಿನ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದು ಸೂಚಿಸುತ್ತಿದ್ದನು.
- Verse 5: ಯಾವನಾದರು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದಕ್ಕೆ ಬಂದರೆ ಅಂಥವನನ್ನು ಕೂಡಲೆ ಕೈಚಾಚಿ ಅವನನ್ನು ಎತ್ತಿ ಮುದ್ದಿಡುತ್ತಿದ್ದನು.
- Verse 6: ಅರಸನ ಬಳಿಗೆ ನ್ಯಾಯನಿರ್ಣಯಕ್ಕಾಗಿ ಬರುತ್ತಿದ್ದ ಎಲ್ಲಾ ಇಸ್ರಯೇಲರಿಗೆ ಅಬ್ಷಾಲೋಮನು ಹೀಗೆಯೇ ಮಾಡಿ ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ಒಲಿಸಿಕೊಳ್ಳುತ್ತಿದ್ದನು.
- Verse 7: ನಾಲ್ಕು ವರ್ಷಗಳಾದನಂತರ ಅಬ್ಷಾಲೋಮನು ಅರಸನಿಗೆ, “ನಾನು ಸರ್ವೇಶ್ವರನಿಗೆ ಹೊತ್ತ ಹರಕೆಗಳನ್ನು ಸಲ್ಲಿಸುವುದಕ್ಕಾಗಿ ಹೆಬ್ರೋನಿಗೆ ಹೋಗಬೇಕಾಗಿದೆ, ಅಪ್ಪಣೆಯಾಗಲಿ.
- Verse 8: ನಿಮ್ಮ ಸೇವಕನಾದ ನಾನು ಸಿರಿಯಾದೇಶದ ಗೆಷೂರಿನಲ್ಲಿದ್ದಾಗ ಸರ್ವೇಶ್ವರ ನನ್ನನ್ನು ಮರಳಿ ಜೆರುಸಲೇಮಿಗೆ ಬರಮಾಡುವುದಾದರೆ ಅವರಿಗೆ ಒಂದು ವಿಶೇಷ ಆರಾಧನೆ ಮಾಡಿಸುವೆನೆಂದು ಹರಕೆ ಮಾಡಿದ್ದೆನು,” ಎಂದು ವಿಜ್ಞಾಪಿಸಿದನು.
- Verse 9: ಅರಸನು, “ಹೋಗು, ನಿನಗೆ ಶುಭವಾಗಲಿ!” ಎಂದನು. ಅಬ್ಷಾಲೋಮನು ಹೆಬ್ರೋನಿಗೆ ಹೊರಟುಹೋದನು.
- Verse 10: ಅವನು ಗೂಢಚಾರನನ್ನು ಕಳುಹಿಸಿ ಇಸ್ರಯೇಲರ ಎಲ್ಲಾ ಕುಲದವರಿಗೆ, “ನೀವು ತುತೂರಿಯ ಧ್ವನಿಯನ್ನು ಕೇಳುತ್ತಲೇ ‘ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸ’ ಎಂದು ಘೋಷಿಸಿರಿ,” ಎಂದು ಹೇಳಿಸಿದ್ದನು.
- Verse 11: ಅಬ್ಷಾಲೋಮನು ಜೆರುಸಲೇಮಿನಿಂದ ಸಮಾರಾಧನೆಗೆಂದು ಇನ್ನೂರು ಜನರನ್ನು ಕರೆದುಕೊಂಡು ಹೋಗಿದ್ದನು. ಅವರು ಯಥಾರ್ಥಮನಸ್ಸಿನಿಂದ ಹೋದವರು; ಒಳಸಂಚಿನ ಸುಳಿವೇನೂ ಅವರಿಗೆ ಗೊತ್ತಿರಲಿಲ್ಲ.
- Verse 12: ಇದಲ್ಲದೆ ಅವನು ಶಾಂತಿಸಮಾಧಾನದ ಬಲಿದಾನ ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಬರಮಾಡಿಸಿದ್ದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದುದರಿಂದ ಒಳಸಂಚು ಪ್ರಬಲವಾಗುತ್ತಾ ಹೋಯಿತು.
- Verse 13: ಇಸ್ರಯೇಲರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನ ದಾವೀದನಿಗೆ ಮುಟ್ಟಿತು.
- Verse 14: ಆಗ ಅವನು ಜೆರುಸಲೇಮಿನಲ್ಲಿದ್ದ ತನ್ನ ಸೇವಕರಿಗೆ, “ಏಳಿ, ಓಡಿಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು,” ಎಂದು ಹೇಳಿದನು.
- Verse 15: ಸೇವಕರು ಅರಸನಿಗೆ, “ನಮ್ಮ ಒಡೆಯರಾದ ಅರಸರಿಗೆ ಸರಿತೋಚಿದ್ದನ್ನೇ ಮಾಡಲು ಸಿದ್ಧರಾಗಿದ್ದೇವೆ,” ಎಂದು ಉತ್ತರಕೊಟ್ಟರು.
- Verse 16: ಆಗ ಅರಸನು ಮನೆಕಾಯುವುದಕ್ಕಾಗಿ ಹತ್ತುಮಂದಿ ಉಪಪತ್ನಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಕರೆದುಕೊಂಡು ಹೊರಟನು.
- Verse 17: ಅರಸನೂ ಅವನ ಜೊತೆಯಲ್ಲಿ ಹೋದ ಜನರೆಲ್ಲರೂ ಪಟ್ಟಣದ ಕಡೇ ಮನೆಯ ಬಳಿಯಲ್ಲಿ ತುಸು ಹೊತ್ತು ನಿಂತರು.
- Verse 18: ದಾವೀದನ ಎಲ್ಲಾ ಸೇವಕರೂ, ‘ಕೆರೇತ್ಯ’ ಹಾಗು ‘ಪೆಲೇತ್ಯ’ ಎಂಬ ಕಾವಲುದಂಡುಗಳು ಮತ್ತು ಗತ್ ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಮಂದಿ ಗಿತ್ತೀಯರು ಅರಸನ ಮುಂದೆ ಹೋದರು.
- Verse 19: ಆಗ ಅರಸನು ಗಿತ್ತೀಯನಾದ ಇತ್ತೈ ಎಂಬವನಿಗೆ, “ನೀನು ನಮ್ಮ ಸಂಗಡ ಏಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ? ಹಿಂದಿರುಗಿ ಹೋಗಿ ಅರಸನ ಬಳಿಯಲ್ಲೇ ವಾಸಮಾಡು.
- Verse 20: ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವುದು; ಹೀಗಿರುವುದರಿಂದ ನಿನ್ನೆ ಬಂದಂಥ ನಿನ್ನನ್ನು ಕರೆದುಕೊಂಡುಹೋಗಿ ಸುಮ್ಮನೆ ಏಕೆ ತಿರುಗಾಡಲಿಕ್ಕೆ ಹಚ್ಚಬೇಕು? ನಿನ್ನ ಸಹೋದರನನ್ನು ಕರೆದುಕೊಂಡು ಹಿಂದಿರುಗಿ ಹೋಗು; ದೇವರ ಅನಂತ ಕೃಪೆ ನಿನ್ನ ಮೇಲಿರಲಿ,” ಎಂದು ಹೇಳಿದನು.
- Verse 21: ಅದಕ್ಕೆ ಇತ್ತೈ, “ಸರ್ವೇಶ್ವರನಾಣೆ, ನನ್ನ ಒಡೆಯರಾದ ಅರಸರ ಜೀವದಾಣೆ, ಪ್ರಾಣಹೋದರೂ ಉಳಿದರೂ ನನ್ನ ಒಡೆಯರಾದ ಅರಸರಿರುವಲ್ಲಿಗೇ ಹೋಗುವೆನು,” ಎಂದು ಉತ್ತರಕೊಟ್ಟನು.
- Verse 22: ಆಗ ದಾವೀದನು, “ಒಳ್ಳೆಯದು, ಮುಂದೆ ನಡೆ,” ಎಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನರನ್ನೂ, ಕರೆದುಕೊಂಡು ಮುಂದೆ ನಡೆದನು.
- Verse 23: ಇವರೆಲ್ಲರೂ ಬಹಳವಾಗಿ ನಡೆಯುವಾಗ ಸುತ್ತ-ಮುತ್ತಿನವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.
- Verse 24: ಚಾದೋಕನೂ ಅವನ ವಶದಲ್ಲಿದ್ದ ಲೇವಿಯರೆಲ್ಲರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು, ಅದನ್ನು ಜನರೆಲ್ಲರು ದಾಟಿ ಹೋಗುವವರೆಗೆ ಕೆಳಗಿಳಿಸಿದ್ದರು. ಎಬ್ಯಾತಾರನೂ ಬಂದಿದ್ದನು.
- Verse 25: ಅರಸನು ಚಾದೋಕನಿಗೆ, “ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಕ್ಕೆ ತೆಗೆದುಕೊಂಡುಹೋಗು; ಸರ್ವೇಶ್ವರನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ಅವರನ್ನೂ ಅವರ ಆಲಯವನ್ನೂ ನೋಡುವ ಹಾಗೆ ತಾವೇ ನನ್ನನ್ನು ಹಿಂದಕ್ಕೆ ಬರಮಾಡುವರು.
- Verse 26: ‘ನಿನ್ನಲ್ಲಿ ನನಗೆ ಇಷ್ಟವಿಲ್ಲ,’ ಎಂದು ತೋರಿದರೆ ತಮಗೆ ಸರಿಕಂಡಂತೆ ಮಾಡಲಿ. ಅವರ ಚಿತ್ತದಂತೆ ಆಗಲಿ,” ಎಂದನು.
- Verse 27: ಇದಲ್ಲದೆ ಅರಸನು ಯಾಜಕನಾದ ಚಾದೋಕನಿಗೆ, “ನೀನು ದೇವದರ್ಶಿ; ನೀನು ನಿನ್ನ ಮಗನಾದ ಅಹೀಮಾಚನು ಮತ್ತು ಎಬ್ಯಾತಾರನ ಮಗನಾದ ಯೋನಾತಾನನು ಎಂಬ ಈ ಇಬ್ಬರು ಹುಡುಗರನ್ನು ಕರೆದುಕೊಂಡು ಸುರಕ್ಷಿತವಾಗಿ ಪಟ್ಟಣಕ್ಕೆ ಹೋಗಬೇಕು.
- Verse 28: ನಿಮ್ಮಿಂದ ವರ್ತಮಾನ ಬರುವ ತನಕ ನಾನು ಅಡವಿಯಲ್ಲಿ ನದಿದಾಟುವ ಸ್ಥಳದ ಹತ್ತಿರ ಇರುವೆನು,” ಎಂದು ಹೇಳಿದನು.
- Verse 29: ಆಗ ಚಾದೋಕನು ಹಾಗು ಎಬ್ಯಾತಾರನು ದೇವರ ಮಂಜೂಷವನ್ನು ಜೆರುಸಲೇಮಿಗೆ ಕೊಂಡೊಯ್ದು ಅಲ್ಲೇ ವಾಸಿಸಿದರು.
- Verse 30: ದಾವೀದನು, ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು.
- Verse 31: ಅಬ್ಷಾಲೋಮನ ಸಂಗಡ ಒಳಸಂಚು ಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು, “ಸರ್ವೇಶ್ವರಾ, ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು,” ಎಂದು ಪ್ರಾರ್ಥಿಸಿದನು.
- Verse 32: ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ, ಅರ್ಕೀಯನಾದ ಹೂಷೈ ಎಂಬವನು ಅಂಗಿಯನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣು ಹಾಕಿಕೊಂಡು ಅರಸನ ಬಳಿಗೆ ಬಂದನು.
- Verse 33: ಅರಸನು ಅವನಿಗೆ, “ನೀನು ನನ್ನ ಸಂಗಡ ಬರುವುದಾದರೆ ನನಗೆ ಭಾರ ಆಗುವಿಯಷ್ಟೆ.
- Verse 34: ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ, ‘ಅರಸರೇ, ನಾನು ನಿಮ್ಮ ಸೇವಕನು; ಹಿಂದೆ ನಿಮ್ಮ ತಂದೆಗೆ ಸೇವೆಸಲ್ಲಿಸಿದಂತೆ ಈಗ ನಿಮ್ಮ ಸೇವೆಮಾಡುತ್ತೇನೆ,’ ಎಂದು ಹೇಳುವುದಾದರೆ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ನೀನು ನನಗೆ ಅನುಕೂಲ ಮಾಡಿಕೊಟ್ಟಂತಾಗುವುದು.
- Verse 35: ಅಲ್ಲಿ ನಿನ್ನ ಸಂಗಡ ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರು ಇರುತ್ತಾರೆ ಅಲ್ಲವೆ; ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲಾ ಆ ಇಬ್ಬರು ಯಾಜಕರಿಗೆ ತಿಳಿಸು. ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ;
- Verse 36: ಒಬ್ಬನು ಚಾದೋಕನ ಮಗನಾದ ಅಹೀಮಾಚನು, ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು,” ಎಂದು ಹೇಳಿ ಅವನನ್ನು ಕಳುಹಿಸಿದನು.
- Verse 37: ಅಬ್ಷಾಲೋಮನು ಜೆರುಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು.