வேதாகமம்
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
34ನೇ ಅಧ್ಯಾಯ
- Verse 1: ಎಲೀಹುವನು ಮತ್ತೆ ಹೀಗೆಂದನು:
- Verse 2: “ಜ್ಞಾನಿಗಳೇ, ನನ್ನ ಮಾತನ್ನು ಗಮನಿಸಿ: ಮೇಧಾವಿಗಳೇ, ನನಗೆ ಕಿವಿಗೊಡಿ:
- Verse 3: ನಾಲಿಗೆ ಆಹಾರವನು ರುಚಿನೋಡುವಂತೆ ಕಿವಿ ನುಡಿಮಾತುಗಳನು ವಿವೇಚಿಸುತ್ತದೆ.
- Verse 4: ಸರಿಯಾದುದನ್ನೇ ಆಯ್ದುಕೊಳ್ಳೋಣ ಒಳಿತಾದುದನ್ನು ನಮ್ಮ ನಮ್ಮಲ್ಲೇ ನಿಶ್ಚಯಿಸಿಕೊಳ್ಳೋಣ.
- Verse 5: ಇಂತಿದೆ ಯೋಬನ ವಾದ - ‘ನಾನು ಸತ್ಯವಂತ ನನಗೆ ದೇವರಿಂದ ನ್ಯಾಯ ದೊರೆತಿಲ್ಲ.
- Verse 6: ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರನೆನಿಸಿಕೊಂಡಿದ್ದೇನೆ ನಿರ್ದೋಷಿಯಾಗಿದ್ದರೂ ನನಗೆ ದೇವರ ಪೆಟ್ಟು ಬಾಣಬಿಟ್ಟಂತಿದೆ.’
- Verse 7: ಈ ಯೋಬನಂಥ ಮನುಜನು ಯಾರಿದ್ದಾನೆ? ಇಗೋ, ದೇವದೂಷಣೆಯನು ನೀರಿನಂತೆ ಕುಡಿಯುತ್ತಾನೆ!
- Verse 8: ಇವನು ದುರ್ಜನರ ಸಂಗಡ ಸಂಚರಿಸುವವನು ಕೆಡುಕರ ಸಂಗಡ ನಡೆದಾಡುವವನು.
- Verse 9: ದೇವರನು ಪ್ರೀತಿಸಿ ಬಾಳುವುದರಿಂದ ಪ್ರಯೋಜನವಿಲ್ಲವೆಂಬುದು ಇವನ ವಾದ.
- Verse 10: ಹೀಗಿರಲು ಬುದ್ದಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ ದೇವರು ಕೆಟ್ಟದ್ದನ್ನು ಮಾಡಿಯಾನೆಂಬ ಯೋಚನೆ ದೂರವಿರಲಿ ಸರ್ವಶಕ್ತನು ಅನ್ಯಾಯವನು ಎಸಗಿಯಾನೆಂಬ ಭಾವನೆ ಬಾರದಿರಲಿ.
- Verse 11: ದೇವರು ನರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲವನ್ನೀಯುತ್ತಾನೆ ಪ್ರತಿಯೊಬ್ಬನು ಅವನವನ ಕರ್ಮಕ್ಕೆ ತಕ್ಕಂತೆ ಅನುಭವಿಸಮಾಡುತ್ತಾನೆ.
- Verse 12: ಹೌದು, ದೇವರು ಎಂದಿಗೂ ಕೆಡುಕನು ಮಾಡನು ಸರ್ವಶಕ್ತನು ಎಂದಿಗೂ ನೇರವಾದುದನು ಡೊಂಕುಮಾಡನು.
- Verse 13: ಭೂಲೋಕವನು ಆತನ ವಶಕ್ಕೆ ಕೊಟ್ಟವನುಂಟೆ? ಆತನಲ್ಲದೆ ಭೂಮಂಡಲವನು ಕ್ರಮಪಡಿಸಿದವನುಂಟೆ?
- Verse 14: ದೇವರು ಮನಸ್ಸುಮಾಡಿ ತನ್ನ ಆತ್ಮವನ್ನು ಹಿಂದಕ್ಕೆ ತೆಗೆದುಕೊಂಡನಾದರೆ ತನ್ನ ಶ್ವಾಸವನ್ನು ಹಿಂದಕೆ ಎಳೆದುಕೊಂಡನಾದರೆ,
- Verse 15: ಸಮಸ್ತಜನರು ಒಟ್ಟಾಗಿ ಅಳಿದುಹೋಗುವರು ಮರಳಿ ಮನುಷ್ಯರೆಲ್ಲರೂ ಮಣ್ಣಾಗಿ ಮಾರ್ಪಡುವರು.
- Verse 16: ಬುದ್ದಿಯಿದ್ದರೆ ಇದನು ಕೇಳಿ ನನ್ನ ಮಾತಿನ ದನಿಗೆ ಕಿವಿಗೊಡಿ.
- Verse 17: ನ್ಯಾಯವನ್ನು ದ್ವೇಷಿಸುವವನು, ಶಿಸ್ತನು ಪಾಲಿಸುವನೋ? ಸತ್ಯಸ್ವರೂಪಿ, ಸರ್ವಶಕ್ತ ಆದ ದೇವರನು ಕೆಟ್ಟವನೆನ್ನುವಿಯೋ?
- Verse 18: ದೇವರು ರಾಜನಿಗೆ “ಮೂರ್ಖ’ ಎಂದು ಹೇಳಬಲ್ಲನು ಪ್ರಭುಗಳನ್ನು “ದುಷ್ಟರು” ಎಂದು ಕರೆಯಬಲ್ಲನು.
- Verse 19: ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸುವನು ಬಡವ-ಬಲ್ಲಿದನೆಂಬ ಭೇದವನ್ನು ಮಾಡನು. ಏಕೆಂದರೆ ಅವರೆಲ್ಲರು ಆ ದೇವನಿಂದಲೇ ಸೃಷ್ಟಿಯಾದವರು.
- Verse 20: ಕ್ಷಣಮಾತ್ರದೊಳು, ನಡುರಾತ್ರಿಯೊಳು ಸತ್ತುಹೋಗುವರು ನಾಡಿನ ಪ್ರಜೆಗಳು ತಲ್ಲಣಗೊಂಡು ಇಲ್ಲದೆಹೋಗುವರು ಮನುಷ್ಯರ ಕೈಸೋಂಕದೆಯೆ ಪರಾಕ್ರಮಿಗಳು ಮಾಯವಾಗುವರು.
- Verse 21: ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಅವನ ಹೆಜ್ಜೆಗಳೆಲ್ಲ ಗೋಚರವಾಗಿವೆ ಆತನಿಗೆ.
- Verse 22: ಆತನ ದೃಷ್ಟಿಯಿಂದ ದುರುಳರು ಅಡಗಿಕೊಳ್ಳುವಂತಿಲ್ಲ ಅಂಥವರನ್ನು ಅಡಗಿಸಬಲ್ಲ ಇರುಳಿಲ್ಲ ಕಾರಿರುಳೂ ಇಲ್ಲ.
- Verse 23: ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ ಅವನನ್ನು ನ್ಯಾಯವಿಚಾರಣೆಗೆ ಕರೆಯುವ ಅವಶ್ಯಕತೆ ಇಲ್ಲ.
- Verse 24: ವಿಚಾರಣೆ ಇಲ್ಲದೆಯೆ ಪರಾಕ್ರಮಿಗಳನು ಸದೆಬಡಿಯುವನು ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸಬಲ್ಲನು.
- Verse 25: ದುಷ್ಕಾರ್ಯಗಳು ಆತನಿಗೆ ತಿಳಿದಿರುವ ಕಾರಣ ಇರುಳಲ್ಲೇ ದುರುಳರನು ಕೆಡವಿ ನಾಶಕ್ಕೆ ಗುರಿಮಾಡುವನು.
- Verse 26: ಅಪರಾಧಿಗಳಂತೆ ಅವರನು ದಂಡಿಸುವನು ಎಲ್ಲರು ನೋಡುವಂತೆ ಅವರನು ಖಂಡಿಸುವನು.
- Verse 27: ದೇವರ ಮಾರ್ಗಗಳೆಲ್ಲವನು ಅವರು ಅಲಕ್ಷ್ಯಮಾಡಿದರು ಆತನಿಗೆ ವಿಧೇಯರಾಗದೆ ತಿರುಗಿಬಿದ್ದರು.
- Verse 28: ಬಡವರ ಗೋಳಾಟ ದೇವರಿಗೆ ಮುಟ್ಟುವಂತೆ ಮಾಡಿದ್ದರು ದಿಕ್ಕಿಲ್ಲದವರ ಗೋಗರೆತ ಆತನ ಕಿವಿಗೆ ಬೀಳುವಂತೆ ಮಾಡಿದ್ದರು.
- Verse 29: ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?
- Verse 30: ಭಕ್ತಿಹೀನನು ಜನರನು ಆಳಬಾರದು ಅಂಥವನು ಜನರಿಗೆ ಉರುಲಾಗಬಾರದು.
- Verse 31: ಅಂಥ ಮನುಷ್ಯನು ದೇವರಿಗೆ: ‘ಪ್ರಾಯಶ್ಚಿತ್ತ ಮಾಡಿರುವೆ, ಇನ್ನು ಮುಂದೆ ಪಾಪಮಾಡೆ.
- Verse 32: ಕಾಣದಿರುವ ಮಾರ್ಗವನ್ನು ತೋರೆನಗೆ ತಪ್ಪುಮಾಡಿದ್ದರೂ ಮತ್ತೆ ಮಾಡೆ’ ಎಂದು ಹೇಳಿದ್ದಾದರೆ,
- Verse 33: ದೇವರು ಅಂಥವರನ್ನು ದಂಡಿಸಬೇಕೆನ್ನುತ್ತೀಯೋ? ಆತನ ತೀರ್ಪನ್ನು ನೀನೇ ಅಲ್ಲಗಳೆದಿರುವೆಯಲ್ಲವೆ? ಈಗ ನಾನು ಹೇಳಲಾರೆ, ನೀನೇ ಹೇಳು, ನಿನ್ನ ಅಭಿಪ್ರಾಯವನು ನಮಗೆ ತಿಳಿಸು.
- Verse 34: ಬುದ್ದಿವಂತರು, ನನ್ನನಾಲಿಸಿದ ಜ್ಞಾನಿಗಳು ನಿನ್ನ ವಿಷಯವಾಗಿ ಹೇಳುವ ಮಾತುಗಳಿವು:
- Verse 35: ‘ಯೋಬನು ತಿಳುವಳಿಕೆಯಿಲ್ಲದೆ ನುಡಿದಿದ್ದಾನೆ ಅವನ ಮಾತುಗಳಲ್ಲಿ ಬುದ್ದಿವಂತಿಕೆ ಇಲ್ಲ.
- Verse 36: ಅವನ ಪರಿಶೋಧನೆ ಇನ್ನೂ ಮುಂದುವರೆದರೆ ಒಳಿತು ಅವನು ಕೊಟ್ಟ ಉತ್ತರ ದುರುಳರಿಗೆ ತಕ್ಕುದಾದುದು.
- Verse 37: ಅವನು ಅಪರಾಧಿ ಮಾತ್ರವಲ್ಲ, ದೇವದ್ರೋಹವೆಸಗಿದ್ದಾನೆ ನಮ್ಮ ಮಧ್ಯೆ ಸಂದೇಹವನು ಎಬ್ಬಿಸಿದ್ದಾನೆ ದೇವರಿಗೆ ವಿರುದ್ಧವಾಗಿ ಅಧಿಕ ಪ್ರಸಂಗಮಾಡುತ್ತಾನೆ’.”