ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
92ನೇ ಅಧ್ಯಾಯ
- Verse 1: ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ I ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ II
- Verse 2: ಪ್ರಾತಃಕಾಲದಲೆ ನಿನ್ನ ಪ್ರೀತಿಯನು I ರಾತ್ರಿಕಾಲದಲೆ ನಿನ್ನ ಸತ್ಯತೆಯನು II
- Verse 3: ವರ್ಣಿಸುವುದುಚಿತ ವೀಣಾ ಸ್ವರಮಂಡಲದಿಂದ I ಕೊಳಲ ದನಿಯಿಂದ, ಕಿನ್ನರಿಯ ನಾದಸ್ವರದಿಂದ II
- Verse 4: ನಿನ್ನ ಕಾರ್ಯಗಳಿಂದ ಪ್ರಭು, ನನ್ನನ್ನು ಆನಂದಗೊಳಿಸಿರುವೆ I ನಿನ್ನಾ ಕಾರ್ಯಗಳ ನೋಡಿ, ನಾನು ಉಲ್ಲಾಸದಿಂದ ಹಾಡುವೆ II
- Verse 5: ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ I ನಿನ್ನಾಲೋಚನೆಗಳು ಎನಿತೋ ಅಶೋಧ್ಯ II
- Verse 6: ಇದನರಿಯನು ಪಶುಪ್ರಾಯನು I ಇದ ತಿಳಿಯನು ಬುದ್ಧಿಹೀನನು II
- Verse 7: ದುರುಳರು ಚಿಗುರಬಹುದು ಹುಲ್ಲಿನಂತೆ I ಕೆಡುಕರು ಅರಳಬಹುದು ಹೂವಿನಂತೆ I ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ II
- Verse 8: ನೀನಾದರೊ ಪ್ರಭು, ಸರ್ವದಾ ಇರುವೆ I ಮಹೋನ್ನತದೊಳು ವಿರಾಜಿಸುತ್ತಿರುವೆ II
- Verse 9: ಕಾಡುಕೋಣದ ಕೊಂಬಿನ ಬಲವನು ನನಗಿತ್ತಿರುವೆ I ಚೈತನ್ಯದ ತೈಲದಿಂದ ನನ್ನನು ಅಭ್ಯಂಜಿಸಿರುವೆ II
- Verse 10: ನಿನ್ನ ಶತ್ರುಗಳ ವಿನಾಶ ನಿಶ್ಚಿತ I ಕೆಡುಕರೆಲ್ಲ ಚದರಿ ಪೋಪುದು ಖಚಿತ II
- Verse 11: ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ ದುರ್ಗತಿಯನು I ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ ವಿಪತ್ತನು II
- Verse 12: ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ I ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ II
- Verse 13: ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II
- Verse 14: ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II
- Verse 15: ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ I ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ II