ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
23ನೇ ಅಧ್ಯಾಯ
- Verse 1: ಇಸ್ರಯೇಲರಿಗೆ ಈ ಪ್ರಕಾರ ಆಜ್ಞಾಪಿಸಬೇಕೆಂದು ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದರು:
- Verse 2: “ಸರ್ವೇಶ್ವರನಿಂದ ನೇಮಕಾವಾದ ಹಬ್ಬದಿನಗಳಲ್ಲಿ ದೇವಾರಾಧನೆಗಾಗಿ ಜನರು ಸಭೆಸೇರಬೇಕು. ಹಾಗೆ ನೇಮಕವಾದ ಹಬ್ಬದ ದಿನಗಳು ಇವು:
- Verse 3: ಆರು ದಿನಗಳಲ್ಲಿ ನೀವು ದುಡಿದು ಕೆಲಸಮಾಡಬೇಕು. ಏಳನೆಯ ದಿನ ಯಾವ ದುಡಿಮೆಯನ್ನೂ ಮಾಡಬಾರದ ಸಬ್ಬತ್ ದಿನ. ಅಂದು ದೇವರ ಆರಾಧನೆಗಾಗಿ ಸಭೆ ಸೇರಬೇಕು. ಆ ದಿನದಲ್ಲಿ ಯಾವ ವಿಧವಾದ ದುಡಿಮೆಯನ್ನೂ ಮಾಡಕೂಡದು. ನಿಮ್ಮ ನಿಮ್ಮ ನಿವಾಸಸ್ಥಳಗಳಲ್ಲೇ ಅದು ಸರ್ವೇಶ್ವರನಿಗೆ ಮೀಸಲಾದ ವಿಶ್ರಾಂತಿ ದಿನವಾಗಿರಬೇಕು.
- Verse 4: ಸರ್ವೇಶ್ವರನಿಂದ ನೇಮಕವಾದ ಹಬ್ಬದ ಕಾಲಗಳಲ್ಲಿ ದೇವರ ಆರಾಧನೆಗಾಗಿ ಸಭೆಸೇರಬೇಕು. ಆ ಹಬ್ಬದ ದಿನಗಳನ್ನು ನಿಯಮಿತ ಕಾಲದಲ್ಲಿ ಪ್ರಕಟಿಸಬೇಕು.
- Verse 5: “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ವೇಳೆಯಲ್ಲಿ ಸರ್ವೇಶ್ವರ ನೇಮಿಸಿದ ಪಸ್ಕಹಬ್ಬವಾಗಬೇಕು.
- Verse 6: ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಅಂದು ಮೊದಲ್ಗೊಂಡು ಏಳು ದಿನಗಳಲ್ಲೂ ಹುಳಿರಹಿತ ರೊಟ್ಟಿಯನ್ನು ಊಟಮಾಡಬೇಕು.
- Verse 7: ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು.
- Verse 8: ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಗಳನ್ನು ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಅಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು.
- Verse 9: ಮೋಶೆಯ ಮುಖಾಂತರ ಇಸ್ರಯೇಲರಿಗೆ ಸರ್ವೇಶ್ವರ ಹೀಗೆ ಆಜ್ಞಾಪಿಸಿದರು:
- Verse 10: “ನಾನು ನಿಮಗೆ ಕೊಡುವ ನಾಡನ್ನು ನೀವು ಸೇರಿದ ನಂತರ ಅಲ್ಲಿನ (ಜವೆಗೋದಿ) ಪೈರನ್ನು ಕೊಯ್ಯುವಾಗ ಪ್ರಥಮ ಫಲದ ಸಿವುಡನ್ನು ಯಾಜಕನ ಬಳಿಗೆ ತಂದೊಪ್ಪಿಸಬೇಕು.
- Verse 11: ನೀವು ಅಂಗೀಕೃತರಾಗುವಂತೆ ಯಾಜಕನು ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿಯೆತ್ತಬೇಕು. ಆ ಸಿವುಡನ್ನು ನೈವೇದ್ಯವಾಗಿ ಆರತಿಯೆತ್ತುವ ದಿನದಂದೇ
- Verse 12: ನೀವು ಒಂದು ವರ್ಷದ ಕಳಂಕರಹಿತವಾದ ಟಗರನ್ನು ದಹನಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 13: ಅದರ ಸಮೇತ ಎಣ್ಣೆಬೆರೆತ ಎರಡು ಕಿಲೋಗ್ರಾಂ ಹಿಟ್ಟನ್ನು ಧಾನ್ಯನೈವೇದ್ಯವಾಗಿ ಅರ್ಪಿಸಬೇಕು. ಸರ್ವೇಶ್ವರನಿಗೆ ಪ್ರಿಯವಾದ ಸುವಾಸನೆಯುಂಟುಮಾಡುವುದಕ್ಕೆ ಅದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯ ಒಂದು ಲೀಟರ್ ದ್ರಾಕ್ಷಾರಸ.
- Verse 14: ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದ ಕಾಣಿಕೆಯನ್ನು ತಂದುಕೊಡುವವರೆಗೆ ಆ ವರ್ಷದ ಬೆಳೆಯ ರೊಟ್ಟಿಯನ್ನಾಗಲಿ, ಸುಟ್ಟ ತೆನೆಗಳನ್ನಾಗಲಿ, ಅಥವಾ ಹಸಿತೆನೆಗಳನ್ನಾಗಲಿ ತಿನ್ನಲೇಕೂಡದು. ನೀವು ಎಲ್ಲಿದ್ದರೂ ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮವಾಗಿದೆ.
- Verse 15: ಸಬ್ಬತ್ ದಿನದ ಮಾರನೆಯ ದಿನ ಮೊದಲ್ಗೊಂಡು, ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ಆರತಿ ಎತ್ತಿದ ದಿನ ಮೊದಲುಗೊಂಡು, ಪೂರ್ಣವಾಗಿ ಏಳುವಾರಗಳು ಮುಗಿಯುವಂತೆ, ಐವತ್ತು ದಿನಗಳನ್ನು ಎಣಿಸಬೇಕು.
- Verse 16: ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಸರ್ವೇಶ್ವರನಿಗೆ ಹೊಸಬೆಳೆಯ ನೈವೇದ್ಯವನ್ನು ಸಮರ್ಪಿಸಬೇಕು.
- Verse 17: ನಿಮ್ಮ ನಿವಾಸಗಳಿಂದ ತಂದ ಹಿಟ್ಟಿನಲ್ಲಿ ಎರಡು ಕಿಲೋಗ್ರಾಂ ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 18: ಆ ರೊಟ್ಟಿಗಳೊಡನೆ ಒಂದು ವರ್ಷದ ಕಳಂಕರಹಿತವಾದ ಏಳು ಕುರಿಗಳನ್ನೂ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸಬೇಕು. ಇವು ಧಾನ್ಯದ್ರವ್ಯದೊಡನೆಯೂ ಪಾನದ್ರವ್ಯದೊಡನೆಯೂ ಅಗ್ನಿ ಮೂಲಕ ಸರ್ವೇಶ್ವರನಿಗೆ ಪ್ರಿಯವಾದ ಸುವಾಸನೆಯನ್ನುಂಟುಮಾಡುವ ದಹನಬಲಿದಾನಗಳಾಗುವುವು.
- Verse 19: ಅದಲ್ಲದೆ, ದೋಷಪರಿಹಾರಕ ಬಲಿಯಾಗಿ ಒಂದು ಹೋತವನ್ನೂ, ಶಾಂತಿಸಮಾಧನದ ಬಲಿಯಾಗಿ ಒಂದು ವರ್ಷದ ಎರಡು ಟಗರುಗಳನ್ನೂ ಸಮರ್ಪಿಸಬೇಕು.
- Verse 20: ಯಾಜಕನು ಇವುಗಳನ್ನೂ ಪ್ರಥಮಫಲದ ರೊಟ್ಟಿಗಳನ್ನೂ ಎರಡು ಕುರಿಗಳನ್ನೂ ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿ ಎತ್ತಬೇಕು. ಅವು ಸರ್ವೇಶ್ವರನಿಗೆ ಮೀಸಲಾಗಿ ಯಾಜಕನಿಗೆ ಸಲ್ಲಬೇಕು.
- Verse 21: ಆ ದಿವಸದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕೆಂದು ಪ್ರಕಟಿಸಬೇಕು. ಅಂದು ಯಾವ ದುಡಿಮೆಯನ್ನು ಕೈಗೊಳ್ಳಬಾರದು. ನೀವು ಎಲ್ಲೇ ಇರಲಿ ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರುವುದು.
- Verse 22: ನಿಮ್ಮ ನಾಡಿನ ಹೊಲ ಕೊಯ್ಯುವಾಗ ಮೂಲೆ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು, ಹಕ್ಕಲನ್ನು ಆಯಬಾರದು, ಬಡವರಿಗಾಗಿ ಹಾಗು ಪರದೇಶಿಗಳಿಗಾಗಿ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾಗಿರುವ ಸರ್ವೇಶ್ವರ.
- Verse 23: ಸರ್ವೇಶ್ವರ ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಹೇಳಿದರು:
- Verse 24: ನೀನು ಏಳನೆಯ ತಿಂಗಳಿನ ಮೊದಲನೆಯ ದಿನ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಕೂಡಬೇಕು.
- Verse 25: ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು; ಸರ್ವೇಶ್ವರನಿಗೆ ದಹನಬಲಿಯನ್ನು ಸಮರ್ಪಿಸಬೇಕು.
- Verse 26: ಸರ್ವೇಶ್ವರ ಮೋಶೆಗೆ ಹೇಳಿದ ಮಾತುಗಳಿವು:
- Verse 27: “ಅದೇ ಏಳನೆಯ ತಿಂಗಳಿನ ಹತ್ತನೆಯ ದಿನವನ್ನು ಸರ್ವದೋಷಪರಿಹಾರ ದಿನವನ್ನಾಗಿ ಆಚರಿಸಬೇಕು. ಅಂದು ದೇವಾರಾಧನೆಗಾಗಿ ಸಭೆಕೂಡಬೇಕು. ಪೂರ್ಣವಾಗಿ ಉಪವಾಸ ಮಾಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ ಮಾಡಬೇಕು.
- Verse 28: ಅ ದಿನದಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು. ಅದು ದೋಷಪರಿಹಾರಕ ದಿನ. ಅಂದು ನಿಮ್ಮ ಪರವಾಗಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ಆಚರಣೆ ನಡೆಯುವುದು.
- Verse 29: ಯಾವನಾದರು ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.
- Verse 30: ಯಾವನಾದರು ಆ ದಿನ ಕಿಂಚಿತ್ತಾದರು ದುಡಿದರೆ ಅವನನ್ನು ಇಸ್ರಯೇಲರಿಂದ ಅಳಿಸಿಬಿಡುವೆನು.
- Verse 31: ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು. ನೀವು ಎಲ್ಲೇ ವಾಸವಾಗಿದ್ದರೂ, ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮ.
- Verse 32: ಆ ದಿನವು ಸಂಪೂರ್ಣ ವಿರಾಮವುಳ್ಳ ವಿಶ್ರಾಂತಿದಿನವಾಗಿರಬೇಕು. ಅಂದು ಉಪವಾಸದಿಂದಿರಬೇಕು. ಆ ತಿಂಗಳಿನ ಒಂಬತ್ತನೆಯ ದಿನದ ಸಂಜೆ ಪ್ರಾರಂಭಿಸಿ ಮರುದಿನದ ಸಂಜೆಯವರೆಗೆ ನೀವು ಆ ವಿರಾಮ ದಿನವನ್ನು ಆಚರಿಸಬೇಕು.
- Verse 33: ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಮೋಶೆಗೆ ತಿಳಿಸಿದರು:
- Verse 34: “ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲ್ಗೊಂಡು ಏಳು ದಿನದವರೆಗೆ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು.
- Verse 35: ಮೊದಲನೆಯ ದಿನ ದೇವಾರಾಧನೆಗಾಗಿ ಸಭೆ ಸೇರಬೇಕು; ಯಾವ ದುಡಿಮೆಯನ್ನೂ ಕೈಗೊಳ್ಳಬಾರದು.
- Verse 36: ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿದಾನ ಮಾಡಬೇಕು. ಎಂಟನೆಯ ದಿನದಂದು ದೇವಾರಾಧನೆಗಾಗಿ ಸಭೆಸೇರಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನಬಲಿದಾನ ಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಅಂದು ಎಲ್ಲ ದುಡಿಮೆಯನ್ನು ನಿಲ್ಲಿಸಬೇಕು.
- Verse 37: “ಸರ್ವೇಶ್ವರ ನೇಮಿಸಿರುವ ಸಬ್ಬತ್ ದಿನಗಳನ್ನು ಮತ್ತು ಮೇಲೆ ಹೇಳಿದ ಸ್ವಾಮಿಯ ಹಬ್ಬದ ದಿನಗಳನ್ನು ನೀವು ಆಚರಿಸಬೇಕು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ಜನರಿಗೆ ಪ್ರಕಟಿಸಬೇಕು.
- Verse 38: ಸರ್ವೇಶ್ವರನಿಗೆ ಒಪ್ಪಿಸಬೇಕಾದ ಕಪ್ಪಕಾಣಿಕೆಗಳನ್ನೂ ಹರಕೆಗಳನ್ನೂ ಸಲ್ಲಿಸಬೇಕಲ್ಲದೆ, ಮೇಲೆ ಸೂಚಿಸಿರುವ ಹಬ್ಬಗಳಲ್ಲಿ ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ದಹನಬಲಿ, ನೈವೇದ್ಯದ್ರವ್ಯ, ಶಾಂತಿಸಮಾಧಾನದ ಬಲಿ, ಪಾನದ್ರವ್ಯ ಇವುಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಹೋಮಮಾಡಬೇಕು.
- Verse 39: ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ - ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಸರ್ವೇಶ್ವರ ನೇಮಿಸಿದ ಪರ್ಣಕುಟೀರಗಳ ಜಾತ್ರೆಯನ್ನು ಏಳುದಿನದವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿ ಹಾಗು ಎಂಟನೆಯ ದಿನದಲ್ಲಿ ಎಲ್ಲ ದುಡಿಮೆಯನ್ನು ನಿಲ್ಲಿಸಿ ಸಂಪೂರ್ಣ ವಿರಾಮದಿಂದಿರಬೇಕು.
- Verse 40: ಮೊದಲನೆಯ ದಿನ ಮರಗಳಿಂದ ಒಳ್ಳೊಳ್ಳೆಯ ಹಣ್ಣುಗಳನ್ನು, ಖರ್ಜೂರ ಮರದ ಗರಿಗಳನ್ನು, ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನು ಮತ್ತು ನೀರಿನ ಕಾಲುವೆಗಳ ಬಳಿ ಬೆಳೆಯುವ ನೀರವಂಜಿ ಚಿಗುರುಗಳನ್ನು ತೆಗೆದುಕೊಂಡು ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ಏಳು ದಿನಗಳೂ ಸಂಭ್ರಮದಿಂದಿರಬೇಕು.
- Verse 41: ಹೀಗೆ ಪ್ರತಿ ವರ್ಷ ಏಳುದಿನಗಳ ತನಕ ಈ ಉತ್ಸವವನ್ನು ಆಚರಿಸಬೇಕು. ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮ. ಏಳನೆಯ ತಿಂಗಳಲ್ಲಿ ಇದನ್ನು ಆಚರಿಸಬೇಕು.
- Verse 42: ಆ ಏಳು ದಿನಗಳು ನೀವು ಪರ್ಣಕುಟೀರಗಳಲ್ಲೇ ವಾಸವಾಗಿರಬೇಕು. ಸ್ವದೇಶೀಯರಾದ ಇಸ್ರಯೇಲರೆಲ್ಲರು ಪರ್ಣಕುಟೀರಗಳಲ್ಲೇ ವಾಸವಾಗಿರಬೇಕು.
- Verse 43: ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದಾಗ ಇಸ್ರಯೇಲರು ಪರ್ಣಕುಟೀರಗಳಲ್ಲಿ ವಾಸವಾಗಿರುವಂತೆ ಮಾಡಿದೆನೆಂಬುದಾಗಿ ಇದರಿಂದ ನಿಮ್ಮ ಸಂತತಿಯವರಿಗೆ ತಿಳಿಯುವುದು. ನಾನು ನಿಮ್ಮ ದೇವರಾದ ಸರ್ವೇಶ್ವರ.”
- Verse 44: ಹೀಗೆ ಮೋಶೆ ಸರ್ವೇಶ್ವರ ಸ್ವಾಮಿಯಿಂದ ನೇಮಕವಾದ ಹಬ್ಬಗಳ ವಿಷಯವಾಗಿ ಇಸ್ರಯೇಲರಿಗೆ ವಿವರಿಸಿದನು.