పరిశుద్ధ గ్రంథము
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
31ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ:
- Verse 2: “ಮಿದ್ಯಾನರು ಇಸ್ರಯೇಲರಿಗೆ ಮಾಡಿದ ಹಿಂಸೆಗಾಗಿ ನೀನು ಮುಯ್ಯಿತೀರಿಸಬೇಕು. ಅನಂತರ ನಿನ್ನ ಪೂರ್ವಜರ ಬಳಿಗೆ ನೀನು ಸೇರಬೇಕು,” ಎಂದರು.
- Verse 3: ಆಗ ಮೋಶೆ ಇಸ್ರಯೇಲರಿಗೆ, “ನೀವು ಒಂದೊಂದು ಕುಲದಿಂದ ಸಾವಿರ ಜನರ ಮೇರೆಗೆ ಕಾಲಾಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಿ.
- Verse 4: ಅವರು ಮಿದ್ಯಾನರಿಗೆ ಸರ್ವೇಶ್ವರ ಆಜ್ಞಾಪಿಸಿದ ದಂಡನೆಯನ್ನು ಮಾಡಬೇಕು,” ಎಂದು ಅಪ್ಪಣೆ ಕೊಟ್ಟನು.
- Verse 5: ಅಂತೆಯೇ ಇಸ್ರಯೇಲರು ಕುಲ ಒಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು.
- Verse 6: ಮೋಶೆ ಇವರನ್ನು ಮಹಾಯಾಜಕನಾದ ಎಲ್ಲಾಜಾರನ ಮಗ ಫೀನೆಹಾಸನ ಮುಂದಾಳತ್ವದಲ್ಲಿ ಪವಿತ್ರ ಉಪಕರಣಗಳೊಂದಿಗೂ ಯುದ್ಧಕಹಳೆಗಳೊಂದಿಗೂ ಯುದ್ಧಕ್ಕೆ ಕಳುಹಿಸಿದನು.
- Verse 7: ಸರ್ವೇಶ್ವರನ ಆಜ್ಞೆಯಂತೆ ಅವರು ಮಿದ್ಯಾನರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನು ಸಂಹಾರ ಮಾಡಿದರು.
- Verse 8: ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್ ಹಾಗು ರೆಬಾ ಎಂಬ ಮಿದ್ಯಾನರ ಐದು ಮಂದಿ ರಾಜರು ಇದ್ದರು. ಅದೂ ಅಲ್ಲದೆ ಬೆಯೋರನ ಮಗ ಬಿಳಾಮನನ್ನು ಕತ್ತಿಯಿಂದ ಕೊಂದುಹಾಕಿದರು.
- Verse 9: ಇಸ್ರಯೇಲರು ಮಿದ್ಯಾನರ ಎಲ್ಲಾ ಮಡದಿ ಮಕ್ಕಳನ್ನೂ ಸೆರೆಹಿಡಿದರು; ಎಲ್ಲಾ ದನಕುರಿಗಳನ್ನೂ ಆಸ್ತಿಪಾಸ್ತಿಯನ್ನೂ ಸೂರೆಮಾಡಿದರು.
- Verse 10: ಅವರಿದ್ದ ಊರುಕೇರಿಗಳನ್ನು ಸುಟ್ಟುಹಾಕಿದರು.
- Verse 11: ನರಮಾನವರೆನ್ನದೆ, ಪಶುಪ್ರಾಣಿಗಳೆನ್ನದೆ ಏನನ್ನೂ ಬಿಡದೆ ಎಲ್ಲವನ್ನು ಕೊಳ್ಳೆಹೊಡೆದರು.
- Verse 12: ಹೀಗೆ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಆಸ್ತಿಪಾಸ್ತಿಯನ್ನೂ ತೆಗೆದುಕೊಂಡು ಜೆರಿಕೋ ಪಟ್ಟಣದ ಎದುರಿಗಿರುವ ಜೋರ್ಡನ್ ನದಿಯ ತೀರಕ್ಕೆ ಬಂದರು. ಅಲ್ಲಿ ಮೋವಾಬ್ಯರ ಮೈದಾನದ ಪಾಳೆಯದಲ್ಲಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್ ಹಾಗು ಇಸ್ರಯೇಲರ ಸರ್ವಸಮಾಜದವರ ಬಳಿಗೆ ಬಂದರು.
- Verse 13: ಮೋಶೆ, ಮಹಾಯಾಜಕ ಎಲ್ಲಾಜಾರನು ಮತ್ತು ಸಮಾಜದ ಮುಖಂಡರು ಪಾಳೆಯದ ಹೊರಗೆ ಬಂದು ಯುದ್ಧವೀರರನ್ನು ಎದುರುಗೊಂಡರು.
- Verse 14: ಯುದ್ಧಭೂಮಿಯಿಂದ ಬಂದಿದ್ದ ಆ ಸೈನ್ಯದ ಸಹಸ್ರಾಧಿಪತಿಗಳನ್ನು ಹಾಗು ಶತಾಧಿಪತಿಗಳನ್ನು ಕಂಡು ಮೋಶೆ ಕೋಪಗೊಂಡನು.
- Verse 15: “ನೀವು ಮಹಿಳೆಯರನ್ನೆಲ್ಲ ಉಳಿಸಿದ್ದೇಕೆ?
- Verse 16: ಪೆಗೋರದ ಬಾಳನ ವಿಷಯದಲ್ಲಿ ಬಿಳಾಮನ ದುರಾಲೋಚನೆಯನ್ನು ಅನುಸರಿಸಿ, ಇಸ್ರಯೇಲರನ್ನು ಸರ್ವೇಶ್ವರನಿಗೆ ದ್ರೋಹಿಗಳನ್ನಾಗಿಸಿ, ಸಮಾಜದವರಲ್ಲಿ ಘೋರ ವ್ಯಾಧಿಯುಂಟಾಗುವಂತೆ ಮಾಡಿದವರು ಅವರೇ ಅಲ್ಲವೆ?
- Verse 17: ಆದಕಾರಣ ಈ ಗುಂಪಿನಲ್ಲಿರುವ ಎಲ್ಲ ಗಂಡುಮಕ್ಕಳನ್ನು ಮತ್ತು ಪುರುಷ ಸಂಗಮಮಾಡಿದ ಎಲ್ಲ ಹೆಂಗಸರನ್ನು ಕೊಲ್ಲಬೇಕು.
- Verse 18: ಪುರುಷ ಸಂಗಮ ಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು.
- Verse 19: ನಿಮ್ಮಲ್ಲಿ ಮನುಷ್ಯಪ್ರಾಣ ತೆಗೆದವರು ಹಾಗು ಶವ ಸೋಂಕಿದವರು ಏಳು ದಿನದವರೆಗೆ ಪಾಳೆಯದ ಹೊರಗಡೆ ಇರಬೇಕು. ಮೂರನೆಯ ಮತ್ತು ಏಳನೆಯ ದಿನ ನಿಮ್ಮನ್ನೂ ಸೆರೆಯಾಳುಗಳನ್ನೂ ಶುದ್ಧೀಕರಿಸಿಕೊಳ್ಳಬೇಕು.
- Verse 20: ಎಲ್ಲ ಬಟ್ಟೆಬರೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತ್ರಗಳನ್ನೂ ಹಾಗು ಮರದ ಸಾಮಾನುಗಳನ್ನೂ ಶುದ್ಧಮಾಡಿಕೊಳ್ಳಬೇಕು,” ಎಂದು ಹೇಳಿದನು.
- Verse 21: ಮಹಾಯಾಜಕ ಎಲ್ಲಾಜಾರನು ಯುದ್ಧಕ್ಕೆ ಹೋಗಿ ಬಂದಿದ್ದ ಸೈನಿಕರಿಗೆ ಹೀಗೆಂದನು: “ಸರ್ವೇಶ್ವರಸ್ವಾಮಿ ಮೋಶೆಗೆ ಅಪ್ಪಣೆಮಾಡಿದ ವಿಧಿನಿಯಮ ಹೀಗಿದೆ -
- Verse 22: ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದುವುಗಳನ್ನು ಬೆಂಕಿದಾಟಿಸಿ ಶುದ್ಧಿಮಾಡಬೇಕು.
- Verse 23: ಅವುಗಳನ್ನು, ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯನ್ನು ತಡೆಯಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು.
- Verse 24: ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಬಳಿಕ ನೀವು ಪಾಳೆಯದೊಳಗೆ ಬರಬಹುದು.”
- Verse 25: ಸರ್ವೇಶ್ವರ ಮೋಶೆಗೆ:
- Verse 26: “ನೀನು, ಮಹಾಯಾಜಕ ಎಲ್ಲಾಜಾರನು ಮತ್ತು ಕುಲನಾಯಕರು ಸೈನಿಕರ ಕೈಗೆ ಸಿಕ್ಕಿರುವ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿ.
- Verse 27: ಅದನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಅರ್ಧವನ್ನೂ ಮಿಕ್ಕ ಸಮಾಜದವರಿಗೆ ಅರ್ಧವನ್ನೂ ಹಂಚಿಕೊಡಿ.
- Verse 28: ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ
- Verse 29: ಇವುಗಳಲ್ಲಿ ಐನೂರರಲ್ಲಿ ಒಂದರ ಮೇರೆಗೆ ಸರ್ವೇಶ್ವರನಿಗೋಸ್ಕರ ಕಪ್ಪವನ್ನು ತೆಗೆದುಕೊಳ್ಳಿ. ಇದನ್ನು ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿರಿ.
- Verse 30: ಮಿಕ್ಕ ಇಸ್ರಯೇಲರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಿ,” ಎಂದು ಆಜ್ಞಾಪಿಸಿದರು.
- Verse 31: ಸರ್ವೇಶ್ವರನ ಅಪ್ಪಣೆಯಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಮಾಡಿದರು.
- Verse 32: ಸೈನಿಕರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳಲು ಉಳಿದುದರ ವಿವರ ಇದು: ಆಡುಕುರಿಗಳೂ 675,000;
- Verse 33: ದನಕರುಗಳು 72,000;
- Verse 34: ಕತ್ತೆಗಳು 61,000;
- Verse 35: ಕನ್ಯೆಯರು 32,000;
- Verse 36: ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ದೊರಕಿದ ಅರ್ಧಭಾಗ ಆಗಿರುವ 337,500 ಆಡುಕುರಿಗಳಲ್ಲಿ
- Verse 37: 675 ಆಡುಕುರಿಗಳು ಸರ್ವೇಶ್ವರನಿಗೆ ಬಂದ ಕಪ್ಪ.
- Verse 38: ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ 72 ದನಕರುಗಳು,
- Verse 39: 30,500 ಕತ್ತೆಗಳಲ್ಲಿ 61 ಕತ್ತೆಗಳು,
- Verse 40: 16,000 ಕನ್ಯೆಯರಲ್ಲಿ 32 ಮಂದಿ ಸರ್ವೇಶ್ವರನಿಗೆ ಬಂದ ಕಪ್ಪ.
- Verse 41: ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಈ ಕಪ್ಪವನ್ನು ಸರ್ವೇಶ್ವರನಿಗೆ ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿದನು.
- Verse 42: ಸೈನಿಕರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿದ ಮಿಕ್ಕ ಅರ್ಧಭಾಗದ ವಿವರ ಇದು:
- Verse 43: 337,500 ಆಡುಕುರಿಗಳು;
- Verse 44: 36,000 ದನಕರುಗಳು;
- Verse 45: 30,500 ಕತ್ತೆಗಳು; 16,000 ಕನ್ಯೆಯರು.
- Verse 46: ಇಷ್ಟು ಇಸ್ರಯೇಲ ಸಮಾಜದವರ ಪಾಲಿಗೆ ಬಂದವುಗಳು.
- Verse 47: ಇವುಗಳಲ್ಲಿ ಮೋಶೆ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
- Verse 48: ಸೈನ್ಯದ ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಮೋಶೆ ಬಳಿಗೆ ಬಂದು,
- Verse 49: “ನಿಮ್ಮ ದಾಸರಾದ ನಾವು ನಮ್ಮ ಅಧಿಕಾರಕ್ಕೆ ಒಳಪಟ್ಟ ಸೈನಿಕರನ್ನು ಲೆಕ್ಕಿಸಿದಾಗ ಒಬ್ಬನಾದರೂ ಕಡಿಮೆ ಆಗಿಲ್ಲವೆಂದು ಗೊತ್ತಾಯಿತು.
- Verse 50: ಸರ್ವೇಶ್ವರ ಸ್ವಾಮಿ ನಮ್ಮ ಪ್ರಾಣಗಳನ್ನು ಕಾಪಾಡಿದ್ದಾರೆ. ಅದಕ್ಕೆ ಈಡಾಗಿ ಅವರಿಗೆ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು, ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ, ಮುಂತಾದುವುಗಳನ್ನು ತಂದಿದ್ದೇವೆ,” ಎಂದರು.
- Verse 51: ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನೂ ವಿಚಿತ್ರ ಆಭರಣಗಳನ್ನೂ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ತೆಗೆದುಕೊಂಡರು.
- Verse 52: ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಸರ್ವೇಶ್ವರನಿಗೆ ಹೀಗೆ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್ ಗಳು.
- Verse 53: ಪ್ರತಿಯೊಬ್ಬ ಸೈನಿಕನೂ ಸ್ವಂತಕ್ಕಾಗಿ ಲೂಟಿಯನ್ನು ಇಟ್ಟುಕೊಂಡಿದ್ದನು.
- Verse 54: ಆದರೆ ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಕೊಟ್ಟ ಚಿನ್ನವನ್ನು ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಸ್ವೀಕರಿಸಿ ಅದನ್ನು ಇಸ್ರಯೇಲರಿಗೋಸ್ಕರ ಸ್ಮರಣಾರ್ಥವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದೊಳಗಿಟ್ಟರು.