ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಧರ್ಮೋಪದೇಶಕಾಂಡ
1ನೇ ಅಧ್ಯಾಯ
- Verse 1: ಜೋರ್ಡನ್ ನದಿಯ ಆಚೆ, ಪಾರಾನಿಗೂ, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳಿಗೂ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ ಮೋಶೆ ಇಸ್ರಯೇಲರಿಗೆ ಮಾಡಿದ ಉಪನ್ಯಾಸಗಳು ಇವು.
- Verse 2: (ಹೋರೇಬಿನಿಂದ ಸೇಯಿರ್ ಬೆಟ್ಟಗಳ ಮಾರ್ಗವಾಗಿ ಕಾದೇಶ್ ಬರ್ನೇಯದವರೆಗೆ ಹನ್ನೊಂದು ದಿನದ ಪ್ರಯಾಣ.)
- Verse 3: ಮೋಶೆ ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನನನ್ನು ಮತ್ತು ಅಷ್ಟಾರೋತ್, ಎದ್ರೈ ಎಂಬ ಪಟ್ಟಣಗಳಲ್ಲಿದ್ದ ಬಾಷಾನಿನ ಅರಸ ಓಗನನ್ನು ಜಯಿಸಿದನು. ತರುವಾಯ,
- Verse 4: ಅಂದರೆ ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಲವತ್ತನೆಯ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನ ಸರ್ವೇಶ್ವರ ಸ್ವಾಮಿ ತನಗೆ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸಿದನು.
- Verse 5: ಜೋರ್ಡನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ಮುಂದಣ ಧರ್ಮಶಾಸ್ತ್ರವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು:
- Verse 6: “ಹೋರೇಬಿನಲ್ಲಿ ನಮ್ಮ ದೇವರಾದ ಸರ್ವೇಶ್ವರ ನಮಗೆ, ‘ನೀವು ಈ ಬೆಟ್ಟದ ಬಳಿ ವಾಸಿಸಿದ್ದು ಸಾಕು;
- Verse 7: ಈಗ ಹಿಂದಿರುಗಿ ಅಮೋರಿಯರು ಇರುವ ಮಲೆನಾಡಿಗೂ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಪ್ರಯಾಣಮಾಡಿರಿ. ಅಲ್ಲಿನ ಕಣಿವೆ, ತಪ್ಪಲು, ಇಳಕಲು ಪ್ರದೇಶಗಳಿಗೂ ದಕ್ಷಿಣಸೀಮೆ, ಸಮುದ್ರತೀರ ಎಂಬ ನಾಡುಗಳಿಗೂ ಕಾನಾನ್ಯರ ನಾಡು, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಮಹಾನದಿಯವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೂ ತೆರಳಿರಿ.
- Verse 8: ಆ ನಾಡನ್ನು ನಿಮಗೆ ಕೊಟ್ಟಿದ್ದೇನೆ. ಸರ್ವೇಶ್ವರನೆಂಬ ನಾನು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಕೋಬರಿಗೂ ಅವರ ಸಂತತಿಯವರಿಗೂ ಆ ನಾಡನ್ನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ್ದೆನು. ಅದನ್ನು ಸೇರಿ ಸ್ವಾಧೀನಮಾಡಿಕೊಳ್ಳಿ,’ ಎಂದು ಆಜ್ಞಾಪಿಸಿದರು.
- Verse 9: “ಆ ಕಾಲದಲ್ಲಿ ನಾನು ನಿಮ್ಮನ್ನು ಸಂಬೋಧಿಸಿ, ‘ನಿಮ್ಮ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ;
- Verse 10: ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸಂಖ್ಯೆಯಲ್ಲಿ ಹೆಚ್ಚಿಸಿದ್ದಾರೆ; ನೀವು ಆಕಾಶದ ನಕ್ಷತ್ರಗಳಷ್ಟಾಗಿದ್ದೀರಿ;
- Verse 11: ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮ್ಮನ್ನು ಹೆಚ್ಚಿಸಲಿ; ಅವರೇ ವಾಗ್ದಾನಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ;
- Verse 12: ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ?
- Verse 13: ಆದುದರಿಂದ ನೀವು ಪ್ರತಿಯೊಂದು ಕುಲದಿಂದ ಜ್ಞಾನಿಗಳೂ, ವಿವೇಕಿಗಳೂ, ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿ; ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುತ್ತೇನೆ,’ ಎಂದು ಹೇಳಿದೆ.
- Verse 14: ಅದಕ್ಕೆ ನೀವು, ‘ನಿಮ್ಮ ಆಲೋಚನೆಯಂತೆ ನಡೆಯುವುದು ವಿಹಿತವಾದದ್ದೇ’ ಎಂದು ಉತ್ತರಕೊಟ್ಟಿರಿ.
- Verse 15: ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಬುದ್ಧಿವಂತರನ್ನು ಕರೆಯಿಸಿ ಒಂದೊಂದು ಕುಲದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ ಹಾಗು ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ಹಾಗು ಉಪಾಧಿಕಾರಿಗಳನ್ನಾಗಿ ನೇಮಿಸಿದೆ.
- Verse 16: ಆ ನ್ಯಾಯಾಧಿಪತಿಗಳಿಗೆ ನಾನು ಆಗ ಕೊಟ್ಟ ಸೂಚನೆ ಇದು: ‘ನೀವು ಸರ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಯೇಲರ ವ್ಯಾಜ್ಯವಾಗಿರಬಹುದು. ಅನ್ಯರೊಡನೆ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು.
- Verse 17: ನ್ಯಾಯ ವಿಚಾರಿಸುವಾಗ ಮುಖದಾಕ್ಷಿಣ್ಯ ಮಾಡಬಾರದು; ಅಧಿಕಾರಿಗೂ ಅಲ್ಪರಿಗೂ ಸಮನಾಗಿ ಕಿವಿಗೊಡಿ; ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವುದರಿಂದ ಯಾವ ಮನುಷ್ಯನಿಗೂ ಹೆದರಬೇಡಿ. ನೀವು ತೀರಿಸಲಿಕ್ಕಾಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತನ್ನಿ; ನಾನೇ ಅವುಗಳನ್ನು ತೀರಿಸುತ್ತೇನೆ,’ ಎಂದು ಹೇಳಿದೆ.
- Verse 18: ಹೀಗೆ, ನೀವು ಮಾಡಬೇಕಾದ ಎಲ್ಲ ಕಾರ್ಯಗಳ ವಿಷಯದಲ್ಲೂ ಆಗಲೇ ನಿಮಗೆ ಆಜ್ಞೆಕೊಟ್ಟೆ.
- Verse 19: “ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ಅಮೋರಿಯರ ಮಲೆನಾಡಿನ ಮಾರ್ಗವನ್ನು ಹಿಡಿದು, ನೀವು ನೋಡಿದ ಆ ಘೋರ ಮಹಾ ಅರಣ್ಯದಲ್ಲಿ ನಡೆದು, ಕಾದೇಶ್ ಬರ್ನೇಯಕ್ಕೆ ಸೇರಿದೆವು.
- Verse 20: ಆಗ ನಾನು, ‘ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಅಮೋರಿಯರ ಮಲೆನಾಡಿನ ಹತ್ತಿರಕ್ಕೆ ಬಂದಿದ್ದೀರಿ;
- Verse 21: ನಿಮ್ಮ ದೇವರಾದ ಸರ್ವೇಶ್ವರ ಆ ನಾಡನ್ನು ನಿಮಗೇ ಕೊಟ್ಟಿದ್ದಾರೆ; ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ಹೇಳಿದಂತೆ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿ; ನೀವು ದಿಗಿಲುಪಡದೆ ಧೈರ್ಯವಾಗಿಯೇ ಇರಬೇಕು,’ ಎಂದು ಹೇಳಿದೆ.
- Verse 22: “ಆಗ ನೀವೆಲ್ಲರೂ ನನ್ನ ಬಳಿಗೆ ಬಂದು, ‘ನಮಗಿಂತ ಮುಂದಾಗಿ ಜನರನ್ನು ಕಳುಹಿಸುತ್ತೇವೆ; ಅವರು ನಮ್ಮ ಪರವಾಗಿ ಆ ನಾಡನ್ನು ಪರೀಕ್ಷಿಸಿನೋಡಿ, ನಾವು ಹತ್ತಿ ಹೋಗಬೇಕಾದ ದಾರಿಯ ಬಗ್ಗೆ ಹಾಗು ಸೇರಬೇಕಾದ ಊರುಗಳ ಬಗ್ಗೆ ನಮಗೆ ಸಮಾಚಾರ ತರಲಿ’, ಎಂದು ಹೇಳಿದಿರಿ.
- Verse 23: ಅದು ಒಳ್ಳೇ ಆಲೋಚನೆಯೆಂದು ನಾನು ತಿಳಿದು, ನಿಮ್ಮಲ್ಲಿ ಕುಲಕ್ಕೆ ಒಬ್ಬೊಬ್ಬನ ಮೇರೆಗೆ, ಹನ್ನೆರಡು ಮಂದಿಯನ್ನು ಆರಿಸಿಕೊಂಡೆ.
- Verse 24: ಅವರು ಹೋಗಿ ಆ ಮಲೆನಾಡನ್ನು ಹತ್ತಿ ಎಷ್ಕೋಲೆಂಬ ಕಣಿವೆಯ ಬಳಿಗೆ ಬಂದು, ಆ ಪ್ರದೇಶವನ್ನು ಸಂಚರಿಸಿ ನೋಡಿ,
- Verse 25: ಅಲ್ಲಿನ ಹಣ್ಣುಹಂಪಲುಗಳಲ್ಲಿ ಕೆಲವನ್ನು ತಂದು ತೋರಿಸಿದರು; ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಆ ನಾಡು ಒಳ್ಳೆಯ ನಾಡೆಂದು ನಮಗೆ ತಿಳಿಸಿದರು.
- Verse 26: ಆದರೂ ನೀವು ಅಲ್ಲಿಗೆ ಹತ್ತಿಹೋಗದೆ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಉಲ್ಲಂಘಿಸಿದಿರಿ;
- Verse 27: ನಿಮ್ಮ ನಿಮ್ಮ ಡೇರೆಗಳಲ್ಲಿ ಗೊಣಗುಟ್ಟಿದಿರಿ; ‘ಸರ್ವೇಶ್ವರ ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ್ದು ಹಗೆತನದಿಂದಲೇ; ಅಮೋರಿಯರ ಕೈಗೆ ಒಪ್ಪಿಸಿ ಸಂಹರಿಸಬೇಕೆಂದೇ.
- Verse 28: ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿ ನೋಡಬೇಕು; ಅಲ್ಲಿಗೆ ಹೋಗಿದ್ದ ನಮ್ಮ ಸಹೋದರರು ಬಂದು ಆ ನಾಡಿನ ಜನರು ನಮಗಿಂತ ಬಲಿಷ್ಠರೂ ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡವು, ಆಕಾಶವನ್ನು ಮುಟ್ಟುವಂಥ ಕೋಟೆಕೊತ್ತಲುಳ್ಳವು; ಅಲ್ಲಿ ‘ಅನಾಕಿಮ್’ ವಂಶಸ್ಥರನ್ನು ಕಂಡೆವೆಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಿರಿ.
- Verse 29: “ಅದಕ್ಕೆ ನಾನು, ‘ಕಳವಳಪಡಬೇಡಿ, ಅವರಿಗೆ ಭಯಪಡಬೇಡಿ.
- Verse 30: ನಿಮ್ಮ ಮುಂದುಗಡೆಯಲ್ಲೇ ಹೋಗುವ ನಿಮ್ಮ ದೇವರಾದ ಸರ್ವೇಶ್ವರ ಈಜಿಪ್ಟ್ ದೇಶದಲ್ಲೂ ನೀವು ನೋಡಿದ ಮರುಭೂಮಿಯಲ್ಲೂ ಪ್ರತ್ಯಕ್ಷರಾಗಿ ನಿಮ್ಮ ಪರವಾಗಿ ಯುದ್ಧಮಾಡಿದಂತೆಯೇ, ಈಗಲೂ ನಿಮ್ಮ ಕಡೆಯವರಾಗಿದ್ದು ಯುದ್ಧಮಾಡುವರು.
- Verse 31: ನೀವು ಈ ಸ್ಥಳಕ್ಕೆ ಸೇರುವ ಪರ್ಯಂತರ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೋ ಹಾಗೆಯೇ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಹೊತ್ತುತಂದರಲ್ಲವೇ?” ಎಂದು ನಿಮಗೆ ಹೇಳಿದೆ.
- Verse 32: “ಆದರೂ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ನಂಬಲೇ ಇಲ್ಲ.
- Verse 33: ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ ಕಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ಇರುಳಲ್ಲಿ ಬೆಂಕಿಯಲ್ಲೂ ಹಗಲಲ್ಲಿ ಮೇಘದಲ್ಲೂ ನಿಮ್ಮ ಮುಂದುಗಡೆ ಹೋದ ದೇವರನ್ನು ನೀವು ನಂಬಲಿಲ್ಲ.
- Verse 34: “ಸರ್ವೇಶ್ವರ ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡರು. ಅವರು ನಿಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಒಳ್ಳೇ ನಾಡನ್ನು ಈ ದುಷ್ಟಜನರಲ್ಲಿ ಯಾರೂ ನೋಡುವುದಿಲ್ಲವೆಂದು ಪ್ರಮಾಣಮಾಡಿದರು.
- Verse 35: “ಸರ್ವೇಶ್ವರ ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡರು. ಅವರು ನಿಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಒಳ್ಳೇ ನಾಡನ್ನು ಈ ದುಷ್ಟಜನರಲ್ಲಿ ಯಾರೂ ನೋಡುವುದಿಲ್ಲವೆಂದು ಪ್ರಮಾಣಮಾಡಿದರು.
- Verse 36: ‘ಯೆಫುನ್ನೆಯ ಮಗ ಕಾಲೇಬನೊಬ್ಬನೇ ಸರ್ವೇಶ್ವರನಾದ ನನ್ನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ ಅವನೇ ಅದನ್ನು ನೋಡುವನು; ಅವನು ಸಂಚರಿಸಿದ ಪ್ರದೇಶವನ್ನು ಅವನಿಗೆ ಹಾಗು ಅವನ ಸಂತತಿ ಅವರಿಗೆ ಕೊಡುವೆನು,’ ಎಂದು ಹೇಳಿದರು.
- Verse 37: ಅದು ಮಾತ್ರವಲ್ಲದೆ, ಸರ್ವೇಶ್ವರ ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಮಾಡಿದರು. ‘ನೀನೂ ಆ ನಾಡಿಗೆ ಸೇರುವುದಿಲ್ಲ;
- Verse 38: ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಯೇಲರಿಗೆ ಆ ನಾಡನ್ನು ಸ್ವಾಧೀನಪಡಿಸುವನು; ಆದುದರಿಂದ ಅವನನ್ನು ಧೈರ್ಯಗೊಳಿಸು.
- Verse 39: ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರು ಹಾಗು ಒಳ್ಳೆಯದು, ಕೆಟ್ಟದು ಎಂಬುದನ್ನು ಅರಿಯದ ನಿಮ್ಮ ಹಸುಳೆಗಳು ಅಲ್ಲಿಗೆ ಸೇರುವರು; ಅವರಿಗೇ ಆ ನಾಡನ್ನು ಕೊಡುವೆನು; ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು.
- Verse 40: ನೀವಾದರೋ ಹಿಂದಿರುಗಿ ಕೆಂಪು ಸಮುದ್ರದ ಮಾರ್ಗವನ್ನು ಹಿಡಿದು ಮರುಭೂಮಿಗೆ ಹೊರಟುಹೋಗಿ’ ಎಂದು ಆಜ್ಞಾಪಿಸಿದರು.
- Verse 41: “ಅದಕ್ಕೆ ನೀವು, ‘ನಾವು ಸರ್ವೇಶ್ವರನಿಗೆ ದ್ರೋಹಿಗಳಾದೆವು; ಆದರೂ ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ನಾವೇ ಈಗ ಆ ಮಲೆನಾಡನ್ನು ಹತ್ತಿ ಯುದ್ಧಮಾಡುತ್ತೇವೆ,’ ಎಂದು ಉತ್ತರಕೊಟ್ಟಿರಿ; ನೀವೆಲ್ಲರು ನಿಮ್ಮ ನಿಮ್ಮ ಆಯುಧಗಳನ್ನು ತೆಗೆದುಕೊಂಡು ಆ ಮಲೆನಾಡನ್ನು ಹತ್ತಿ ಜಯಿಸುವುದು ಅಲ್ಪಕಾರ್ಯವೆಂದು ಭಾವಿಸಿ ಹೊರಡುವುದಕ್ಕಿದ್ದಿರಿ.
- Verse 42: ಆದರೆ ಸರ್ವೇಶ್ವರ ನನಗೆ, ‘ನಾನು ಇವರ ಮಧ್ಯೆ ಇಲ್ಲವಾದುದರಿಂದ ಇವರು ಸೋತುಹೋಗುವರು; ಯುದ್ಧಮಾಡಲೂಬಾರದು, ಆ ಮಲೆನಾಡಿಗೆ ಹೋಗಲೂಬಾರದು ಎಂದು ಇವರಿಗೆ ಆಜ್ಞಾಪಿಸು,’ ಎಂದರು.
- Verse 43: “ನಾನು ಆ ಮಾತನ್ನು ನಿಮಗೆ ತಿಳಿಸಿದರೂ ನೀವು ಕಿವಿಗೊಡದೆ ಸರ್ವೇಶ್ವರನ ಆಜ್ಞೆಯನ್ನು ತಾತ್ಸಾರಮಾಡಿ ಸೊಕ್ಕಿನಿಂದ ಆ ಬೆಟ್ಟವನ್ನು ಹತ್ತಿದಿರಿ.
- Verse 44: ಆಗ ಬೆಟ್ಟದಲ್ಲಿದ್ದ ಅಮೋರಿಯರು ನಿಮಗೆ ವಿರುದ್ಧ ಹೊರಟು ಜೇನುನೊಣಗಳಂತೆ ನಿಮ್ಮನ್ನು ಮುತ್ತಿ ಸೇಯೀರಿನಲ್ಲಿ ಹೊರ್ಮದವರೆಗೂ ಬೆನ್ನಟ್ಟಿ ಸಂಹರಿಸಿದರು.
- Verse 45: ನೀವು ಹಿಂದಿರುಗಿ ಬಂದು ಸರ್ವೇಶ್ವರನ ಮುಂದೆ ಗೋಳಾಡಿದಿರಿ. ಆಗ ಅವರು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ, ನಿಮ್ಮನ್ನು ರಕ್ಷಿಸಲೂ ಇಲ್ಲ.
- Verse 46: “ಆಮೇಲೆ ನೀವು ಕಾದೇಶಿನಲ್ಲಿ ಬಹುಕಾಲ ವಾಸವಾಗಿದ್ದಿರಿ.