पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
37ನೇ ಅಧ್ಯಾಯ
- Verse 1: ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II
- Verse 2: ಅವರು ಒಣಗಿಹೋಗುವರು ಕಾಡುಗರಿಕೆಯಂತೆ I ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II
- Verse 3: ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II
- Verse 4: ಪ್ರಭುವಿನಿಂದಲೆ ಬಯಸು ನಿನ್ನಾನಂದವನು I ನೆರವೇರಿಸುವನಾತ ನಿನ್ನ ಮನದಾಸೆಯನು II
- Verse 5: ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II
- Verse 6: ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II
- Verse 7: ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II
- Verse 8: ಅಡಗಿಸು ಕೋಪವನು; ವರ್ಜಿಸು ಕ್ರೋಧವನು I ಕಿಡಿಕಿಡಿಯಾಗಬೇಡ, ತರುವುದದು ಕೇಡನು II
- Verse 9: ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II
- Verse 10: ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II
- Verse 11: ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II
- Verse 12: ದುರ್ಜನನು ಹೂಡಿಹನು ಒಳಸಂಚು ಸಜ್ಜನನ ವಿರುದ್ಧ I ಕಟಕಟನೆ ಹಲ್ಲು ಕಡಿಯುತಿಹನಿದೋ ಆತನ ವಿರೋಧ II
- Verse 13: ಅಂಥವನ ಕಂಡು ಪ್ರಭು ನಸುನಗುತಿಹನು I ಅವನಿಗೊದಗಲಿಹ ಗತಿಯನು ಕಾಣುತಿಹನು II
- Verse 14: ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು I ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು II
- Verse 15: ಹಿಡಿದ ಕತ್ತಿ ಹಿಡಿದವರೆದೆಯನೆ ಇರಿವುದು I ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು II
- Verse 16: ದುರುಳರ ವಿಪುಲ ಆಸ್ತಿಪಾಸ್ತಿಗಿಂತಲು I ಸತ್ಯವಂತರ ಬಡತನವೆನಿತೊ ಮಿಗಿಲು II
- Verse 17: ಬತ್ತಿಹೋಗುವುದು ದುರ್ಜನರ ಭುಜಬಲ I ಸತ್ಯವಂತರಿಗೆ ಪ್ರಭುವೇ ಉನ್ನತಬಲ II
- Verse 18: ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ I ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ II
- Verse 19: ಮಾನನಷ್ಟವಿರದು ಕಷ್ಟಕಾಲದಲಿ I ಕುಂದುಕೊರತೆಯಿರದು ಬರಗಾಲದಲಿ II
- Verse 20: ದುರುಳರ ಬೆಡಗೋ ಬಾಡಿಹೋಗುವುದು ಹುಲ್ಲಿನಂತೆ I ಪ್ರಭುವಿನ ಶತ್ರುಗಳು ತೇಲಿಹೋಗುವರು ಹೊಗೆಯಂತೆ II
- Verse 21: ಕೊಂಡ ಸಾಲವನು ತೀರಿಸಲಾರನಾ ದುರ್ಜನನು I ಉದಾರವಾಗಿ ದಾನ ಧರ್ಮಮಾಳ್ಪನಾ ಸಜ್ಜನನು II
- Verse 22: ಪ್ರಭುವಿನಿಂದ ಆಶೀರ್ವದಿತರು ನಾಡಿಗೆ ಬಾಧ್ಯಸ್ಥರು I ಆತನಿಂದ ಶಾಪಗ್ರಸ್ಥರು ಬಹಿಷ್ಕೃತರು II
- Verse 23: ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ I ಅವನ ನಡತೆಗೆ ಆತನೆ ಮಾರ್ಗದರ್ಶನ II
- Verse 24: ಬಿದ್ದರೂ ಅವನೆದ್ದೇ ತೀರುವನು I ಪ್ರಭು ಅವನಿಗೆ ಊರುಗೋಲಾಗಿಹನು II
- Verse 25: ಸಜ್ಜನ ದಿಕ್ಕಿಲ್ಲದಿರುವುದನು, ಅವನ ಸಂತತಿ ಭಿಕ್ಷೆ ಬೇಡುವುದನು I ನಾ ಕಾಣೆನು, ವೃದ್ಧ ನಾನೆಂದೂ ಕಾಣೆನು, ಬಾಲ್ಯದಿಂದ ಕಾಣೆನು II
- Verse 26: ದಾನ ನೀಡುವನು, ಸಾಲ ನಿರಾಕರಿಸನು ಸಜ್ಜನನು I ಆತನ ಸಂತಾನ ಹೊಂದುವುದು ಆಶೀರ್ವಾದವನು II
- Verse 27: ಕೆಟ್ಟದನು ಬಿಡು, ಒಳ್ಳೆಯದನು ಮಾಡು I ಸಿರಿನಾಡಿನಲಿ ಚಿರಕಾಲ ಬಾಳು II
- Verse 28: ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು I ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು II
- Verse 29: ಸಜ್ಜನರು ಸಿರಿನಾಡಿಗೆ ಬಾಧ್ಯಸ್ಥರು I ಅಲ್ಲವರು ಶಾಶ್ವತವಾಗಿ ಬಾಳುವರು II
- Verse 30: ಸಜ್ಜನರ ಬಾಯಿ ಆಡುವುದು ಸುಜ್ಞಾನವನು I ಅವನ ನಾಲಿಗೆ ನುಡಿಯುವುದು ನ್ಯಾಯನೀತಿಯನು II
- Verse 31: ಅವನ ಎದೆಯಲ್ಲಿದೆ ದೇವರ ನಿಯಮ I ನೆಲೆತಪ್ಪದು ಅವನ ನಡತೆಯ ಕ್ರಮ II
- Verse 32: ದುಷ್ಟನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ I ಹೊಂಚುಹಾಕಿ ನೋಡುತಿಹನು ಮಾಡಲವರ ಕೊಲೆ II
- Verse 33: ಪ್ರಭು ಬಿಡನವನನು ದುಷ್ಟ ಶಕ್ತಿಯ ವಶಕ್ಕೆ I ಗುರಿಪಡಿಸನು ನ್ಯಾಯಸ್ಥಾನದ ಶಿಕ್ಷೆಗೆ II
- Verse 34: ಪ್ರಭುವನು ನಂಬಿ ನಡೆ ಆತನ ಪಥದಲೇ I ಉದ್ಧಾರವಾಗುವೆ, ನಾಡಿಗೊಡೆಯನಾಗುವೆ I ದುಷ್ಟರ ವಿನಾಶವನು ಕಣ್ಣಾರೆ ಕಾಣುವೆ II
- Verse 35: ದುರುಳನೋರ್ವ ಮಹಾಗರ್ವದಿಂದ ಬಾಳುತ್ತಿದ್ದ I ಹುಲುಸಾಗಿ ಬೆಳೆದ ದೇವದಾರು ಮರದಂತಿದ್ದ II
- Verse 36: ಕ್ರಮೇಣ ನಾನು ಆ ಮಾರ್ಗವಾಗಿ ನಡೆಯಲು I ಕಾಣಲಿಲ್ಲ, ಗುರುತೂ ಇರಲಿಲ್ಲ ಹುಡುಕಲು II
- Verse 37: ನಿರಪರಾಧಿಯನ್ನು ಲಕ್ಷಿಸು, ಸತ್ಪುರುಷನನು ವೀಕ್ಷಿಸು I ಶಾಂತಿಪ್ರಿಯನಿಗಿದೆ ಸಂತಾನವೃದ್ಧಿ, ಇದ ಗಮನಿಸು II
- Verse 38: ನಾಶವಾಗುವುದು ನಿಜ, ದೋಷಿಗಳ ಮನೆತನ I ನಿರ್ಮೂಲವಾಗುವುದು ದುರುಳರ ಸಂತಾನ II
- Verse 39: ಸಜ್ಜನರ ಜೀವೋದ್ಧಾರ ಪ್ರಭುವಿನಿಂದ I ಆಪತ್ಕಾಲದಲಿ ಆಶ್ರಯ ಆತನಿಂದ II
- Verse 40: ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು I ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು II