P. O. C ബൈബിള്
ಹಳೆಯ ಒಡಂಬಡಿಕೆ
ದಾನಿಯೇಲನು
9ನೇ ಅಧ್ಯಾಯ
- Verse 1: ಅದು, ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ. ಈತನು ಅಹಷ್ವೇರೋಷನ ಮಗ, ಮೇದ್ಯ ವಂಶದವನು ಹಾಗು ಬಾಬಿಲೋನಿನ ರಾಜ್ಯದ ದೊರೆ.
- Verse 2: ದಾನಿಯೇಲನಾದ ನಾನು ಪವಿತ್ರಗ್ರಂಥಗಳನ್ನು ಪರೀಕ್ಷಿಸಿ, ಸರ್ವೇಶ್ವರಸ್ವಾಮಿ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಜೆರುಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆ.
- Verse 3: ಉಪವಾಸವಿದ್ದು, ಗೋಣಿತಟ್ಟು ಸುತ್ತಿಕೊಂಡು, ಬೂದಿ ಬಳಿದುಕೊಂಡು, ಸರ್ವೇಶ್ವರನಾದ ದೇವರ ಕಡೆಗೆ ಮುಖವೆತ್ತಿ, ಪ್ರಾರ್ಥನೆ-ವಿಜ್ಞಾಪನೆಗಳಲ್ಲಿ ನಿತರನಾದೆ.
- Verse 4: ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ: “ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ.
- Verse 5: “ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞಾವಿಧಿಗಳನ್ನು ತೊರೆದುಬಿಟ್ಟಿದ್ದೇವೆ.
- Verse 6: ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ.
- Verse 7: ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ.
- Verse 8: ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ.
- Verse 9: ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು.
- Verse 10: ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.
- Verse 11: ಇಸ್ರಯೇಲರೆಲ್ಲರು ನಿಮ್ಮ ಧರ್ಮಶಾಸ್ತ್ರವನ್ನು ಮೀರಿ ನಿಮ್ಮ ಮಾತನ್ನು ಕೇಳಲೊಲ್ಲದೆ ಓರೆಯಾಗಿ ಹೋದರು. ಆದಕಾರಣ ನಿಮ್ಮ ಶಾಪದ ಕೇಡುಗಳನ್ನೂ ದೇವರ ದಾಸನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ನೀವು ಆಣೆಯಿಟ್ಟು ಪ್ರಕಟಿಸಿದ ವಿಪತ್ತುಗಳನ್ನೂ ನಮ್ಮ ಮೇಲೆ ಸುರಿಯಲಾಗಿದೆ. ನಾವು ದ್ರೋಹಿಗಳೇ ಸರಿ.
- Verse 12: ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.
- Verse 13: ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಧರ್ಮಮಾರ್ಗಗಳನ್ನು ತೊರೆದುಬಿಟ್ಟಿದ್ದೇವೆ. ನಿಮ್ಮ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಸರ್ವೇಶ್ವರನೆಂಬ ನಿಮ್ಮ ದಯೆಯನ್ನು ಬೇಡಿಕೊಳ್ಳಲಿಲ್ಲ.
- Verse 14: ಆದಕಾರಣ ಸರ್ವೇಶ್ವರ ಈ ಕೇಡನ್ನು ಸಕಾಲಕ್ಕೆ ನಮ್ಮ ಮೇಲೆ ಬರಮಾಡಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ತಾವು ಮಾಡುವ ಸಕಲ ಕಾರ್ಯಗಳಲ್ಲೂ ನ್ಯಾಯಸ್ವರೂಪರು. ನಾವೋ ಅವರ ಮಾತನ್ನು ಕೇಳಲಿಲ್ಲ.
- Verse 15: “ಸರ್ವೇಶ್ವರಾ, ನಮ್ಮ ದೇವರೇ, ನೀವು ನಿಮ್ಮ ಭುಜಪರಾಕ್ರಮವನ್ನು ತೋರಿಸಿ, ನಿಮ್ಮ ಜನರನ್ನು ಈಜಿಪ್ಟಿನಿಂದ ಪಾರುಮಾಡಿ, ಇಂದಿನವರೆಗೂ ಸುಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡವರಾಗಿದ್ದೀರಿ. ಈಗ ಚಿತ್ತೈಸಿ. ನಾವು ಪಾಪಮಾಡಿ ಕೆಟ್ಟವರಾಗಿ ನಡೆದಿದ್ದೇವೆ.
- Verse 16: ಸರ್ವೇಶ್ವರಾ, ನಿಮ್ಮ ಸಮಸ್ತ ಧರ್ಮಕಾರ್ಯಗಳಿಗೆ ಅನುಸಾರವಾಗಿ ನಿಮ್ಮ ನಗರವೂ ನಿಮ್ಮ ಪವಿತ್ರ ಪರ್ವತವೂ ಆದ ಜೆರುಸಲೇಮ್ ಮೇಲೆ ನಿಮಗಿರುವ ಕೋಪವನ್ನೂ ರೋಷಾಗ್ನಿಯನ್ನೂ ದಯಮಾಡಿ ತೊಲಗಿಸಿಬಿಡಿ. ನಮ್ಮ ಮತ್ತು ನಮ್ಮ ಪೂರ್ವಜರ ಪಾಪಾಪರಾಧಗಳ ನಿಮಿತ್ತ ಜೆರುಸಲೇಮ್ ಮತ್ತು ನಿಮ್ಮ ಜನತೆ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.
- Verse 17: ಓ ನಮ್ಮ ದೇವರೇ, ನಿಮ್ಮ ದಾಸನ ಪ್ರಾರ್ಥನೆ ವಿಜ್ಞಾಪನೆಗಳನ್ನು ಈಗ ಆಲಿಸಿರಿ. ಹಾಳಾಗಿರುವ ನಿಮ್ಮ ಪವಿತ್ರಾಲಯವನ್ನು ಸರ್ವೇಶ್ವರ ಎಂಬ ನಿಮ್ಮ ಹೆಸರಿನ ನಿಮಿತ್ತವೇ ಪ್ರಸನ್ನ ಮುಖದಿಂದ ನೋಡಿ.
- Verse 18: ನನ್ನ ದೇವರೇ, ಕಿವಿಗೊಟ್ಟು ಕೇಳಿ, ಕಣ್ಣು ತೆರೆದು ನಮ್ಮ ಹಾಳು ಪ್ರದೇಶಗಳನ್ನೂ ನಿಮ್ಮ ಹೆಸರುಗೊಂಡಿರುವ ನಗರವನ್ನೂ ನೋಡಿ. ನಾವು ಸದ್ಧರ್ಮಿಗಳೇನೂ ಅಲ್ಲ. ನಿಮ್ಮ ಮಹಾಕೃಪೆಯನ್ನೇ ನಂಬಿಕೊಂಡು ಈ ಬಿನ್ನಹಗಳನ್ನು ನಿಮ್ಮ ಮುಂದೆ ಅರಿಕೆಮಾಡುತ್ತಿದ್ದೇವೆ.
- Verse 19: ಸ್ವಾಮೀ, ಕೇಳಿ; ಸ್ವಾಮೀ, ಕ್ಷಮಿಸಿ; ಸ್ವಾಮೀ, ಆಲಿಸಿ ಕಾರ್ಯವನ್ನು ಸಾಧಿಸಿ. ತಡಮಾಡಬೇಡಿ. ನನ್ನ ದೇವರೇ, ನಿಮ್ಮ ಜನತೆ ಹಾಗು ನಿಮ್ಮ ನಗರ ನಿಮ್ಮ ಹೆಸರಿನವುಗಳು. ಆದಕಾರಣ, ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿ.”
- Verse 20: ನಾನು ಬಾಯಿಬಿಟ್ಟು ಬೇಡಿಕೊಂಡೆ. ನನ್ನ ಮತ್ತು ನನ್ನ ಜನರಾದ ಇಸ್ರಯೇಲರ ಪಾಪವನ್ನು ಅರಿಕೆಮಾಡುತ್ತಾ ನನ್ನ ದೇವರ ಪವಿತ್ರ ಪರ್ವತದ ವಿಷಯವಾಗಿ ದೇವರಾದ ಸರ್ವೇಶ್ವರನಿಗೆ ಬಿನ್ನವಿಸಿದೆ.
- Verse 21: ಹೀಗೆ ಪ್ರಾರ್ಥನೆ ಮಾಡುತ್ತಿರುವಾಗಲೇ, ಮೊದಲು ನನ್ನ ಕನಸಿನಲ್ಲಿ ಕಂಡ ಗಬ್ರಿಯೇಲೆಂಬ ವ್ಯಕ್ತಿ ಅಸುರುಸುರಾಗಿ ಹಾರಿಬಂದು, ಸಂಧ್ಯಾನೈವೇದ್ಯ ಸಮಯದಲ್ಲಿ ನನ್ನನ್ನು ಸೇರಿ, ನನ್ನೊಂದಿಗೆ ಮಾತಾಡಿ, ಹೀಗೆಂದು ಉಪದೇಶ ಮಾಡಿದನು:
- Verse 22: “ದಾನಿಯೇಲನೇ, ನಿನಗೆ ಜ್ಞಾನಬೋಧೆ ಮಾಡಲು ಈಗ ಬಂದಿದ್ದೇನೆ;
- Verse 23: ನಿನ್ನ ವಿಜ್ಞಾಪನೆಯ ಆರಂಭದಲ್ಲೇ ದೇವರ ಅಪ್ಪಣೆಯಾಯಿತು. ಅದನ್ನು ನಿನಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ. ನೀನು ದೇವರಿಗೆ ಅತಿ ಪ್ರಿಯನು. ಈ ದೈವೋಕ್ತಿಯನ್ನು ಆಲೋಚಿಸು; ಈ ದರ್ಶನವನ್ನು ಗ್ರಹಿಸಿಕೊ:
- Verse 24: “ಅಧರ್ಮವನ್ನು ಕೊನೆಗಾಣಿಸುವುದಕ್ಕೆ ಪಾಪಗಳನ್ನು ತೀರಿಸುವುದಕ್ಕೆ, ಅಪರಾಧವನ್ನು ನಿವಾರಿಸುವುದಕ್ಕೆ, ಸನಾತನ ಧರ್ಮವನ್ನು ಸ್ಥಾಪಿಸುವುದಕ್ಕೆ, ದರ್ಶನವನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥ ಮಾಡುವುದಕ್ಕೆ, ಅತಿಪರಿಶುದ್ಧವಾದುದನ್ನು ಅಭಿಷೇಕಿಸುವುದಕ್ಕೆ ನಿನ್ನ ಜನಕ್ಕೂ ನಿನ್ನ ಪವಿತ್ರನಗರಕ್ಕೂ ಏಳೆಪ್ಪತ್ತು ವರ್ಷಗಳು ಕಳೆಯಬೇಕೆಂದು ನಿಷ್ಕರ್ಷೆಯಾಗಿದೆ.
- Verse 25: ಇದನ್ನು ತಿಳಿದು ಮನದಟ್ಟು ಮಾಡಿಕೊ, ‘ಹಿಂದಿರುಗಿ ಜೆರುಸಲೇಮನ್ನು ಪುನರ್ ನಿರ್ಮಿಸಿ’ ಎಂಬ ದೈವೋಕ್ತಿ ಹೊರಡುವಂದಿನಿಂದ ಪ್ರಭುವಾಗಿ ಅಭಿಷಿಕ್ತನಾದವನು ಬರುವುದರೊಳಗೆ ಏಳು ಸಾರಿ ಏಳು ವರ್ಷಗಳು ಕಳೆಯಬೇಕು. ಅದು ಪುನಃ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಕಟ್ಟಲ್ಪಟ್ಟು ಏಳು ಸಾರಿ ಅರವತ್ತೆರಡು ವರ್ಷಗಳು ಇರುವುದು. ಆ ಕಾಲವು ಬಹು ಕಷ್ಟಕರವಾದ ಕಾಲವಾಗಿರುವುದು.
- Verse 26: ಆ ಏಳುಸಾರಿ ಅರವತ್ತೆರಡು ವರ್ಷಗಳು ಮುಗಿದ ಮೇಲೆ ಅಭಿಷಿಕ್ತನನ್ನು ಅನ್ಯಾಯವಾಗಿ ಕೊಲ್ಲುವರು. ದಂಡೆತ್ತಿಬರುವ ರಾಜನ ಜನರು ನಗರವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು. ಪ್ರಳಯದಿಂದಲೋ ಎಂಬಂತೆ ನಗರವು ನಾಶವಾಗುವುದು. ಅಂತ್ಯದವರೆಗೆ ಯುದ್ಧವೂ ನಿಶ್ಚಿತ ವಿನಾಶವೂ ಸಂಭವಿಸುವುವು.
- Verse 27: ಆ ರಾಜನು ಏಳು ವರ್ಷ ಗಳ ಮಟ್ಟಿಗೆ ಬಹುಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ಈ ಅವಧಿಯ ಅರ್ಧಭಾಗದಲ್ಲಿ ಬಲಿನೈವೇದ್ಯಗಳನ್ನು ನಿಲ್ಲಿಸಿಬಿಡುವನು. ದೇವಾಲಯದ ರೆಕ್ಕೆಯ ಮೇಲೆ ಅಸಹ್ಯವಾದುದನ್ನು ಸ್ಥಾಪಿಸಲಾಗುವುದು. ಅವನ್ನು ಅಲ್ಲಿ ಇಟ್ಟು ಅಶುದ್ಧಗೊಳಿಸಿದ ಘಾತುಕನು ನಿಶ್ಚಿತ ಪ್ರಳಯದಲ್ಲಿ ಮುಳುಗುವ ತನಕ ಅವು ಅಲ್ಲೇ ಇರುವುವು.”