ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
2 ಕೊರಿಂಥಿಯರಿಗೆ
9ನೇ ಅಧ್ಯಾಯ
- Verse 1: ದೇವಜನರಿಗೆ ಸಲ್ಲಿಸಬೇಕಾದ ಈ ಸೇವಾಕಾರ್ಯವನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
- Verse 2: ನೆರವು ನೀಡಲು ಸಿದ್ಧರಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ. “ಅಖಾಯದ ಸಹೋದರರು ಕಳೆದ ವರ್ಷದಿಂದಲೂ ನೆರವು ನೀಡಲು ಏರ್ಪಾಡುಮಾಡುತ್ತಿರುವರು,” ಎಂದು ಮಕೆದೋನಿಯರ ಮುಂದೆ ನಾನು ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಉತ್ಸಾಹ ಅವರಲ್ಲಿ ಅನೇಕರನ್ನು ಹುರಿದುಂಬಿಸಿದೆ.
- Verse 3: ಆದರೂ ನಮ್ಮ ಹೊಗಳಿಕೆ ಸುಳ್ಳಾಗಬಾರದೆಂದು ನಾನು ಈ ಸಹೋದರರನ್ನು ಮುಂಚಿತವಾಗಿ ಕಳುಹಿಸುತ್ತಿದ್ದೇನೆ.
- Verse 4: ನಾನು ನಿಮಗೆ ಹೇಳಿರುವಂತೆ ನಿಮ್ಮ ಏರ್ಪಾಡೆಲ್ಲಾ ಮುಗಿದಿರಬೇಕು. ಇಲ್ಲದಿದ್ದರೆ ನಾನು ಬರುವಾಗ, ನನ್ನ ಜೊತೆಯಲ್ಲಿಯೇ ಮಕೆದೋನಿಯದ ಸಹೋದರರೂ ಬಂದು, ನೀವು ಸಿದ್ಧರಿಲ್ಲದೆ ಇರುವುದನ್ನು ಕಂಡರೆ ನೀವು ತಲೆತಗ್ಗಿಸಬೇಕಾಗುತ್ತದೆ. ನಿಮ್ಮಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ನಾನೂ ತಲೆ ತಗ್ಗಿಸಬೇಕಾಗುತ್ತದೆ.
- Verse 5: ಆದ್ದರಿಂದಲೇ, ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಏರ್ಪಾಡನ್ನು ಮಾಡುವಂತೆ ಈ ಸಹೋದರರನ್ನು ನಮಗೆ ಮುಂಚಿತವಾಗಿಯೇ ನಿಮ್ಮ ಬಳಿಗೆ ಕಳುಹಿಸುವುದು ಉಚಿತವೆಂದು ನನಗೆ ತೋಚಿತು. ಹೀಗೆ ಈ ಕೊಡುಗೆ ಬಲಾತ್ಕಾರವಾದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ನಿಧಿ ಆಗಿರುತ್ತದೆ.
- Verse 6: ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ
- Verse 7: ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.
- Verse 8: ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ.
- Verse 9: “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ.
- Verse 10: ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.
- Verse 11: ನೀವು ಸದಾ ಉದಾರಿಗಳಾಗಿರುವಂತೆ ನಿಮ್ಮನ್ನು ಎಲ್ಲಾ ವಿಧದಲ್ಲೂ ಸಿರಿವಂತರನ್ನಾಗಿ ಮಾಡುವರು. ನಿಮ್ಮ ಕೊಡುಗೆ ನಮ್ಮ ಸೇವೆಯ ಮೂಲಕ ಬೇರೆಯವರಿಗೆ ತಲುಪಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡುವುದು.
- Verse 12: ಹೀಗೆ ನಿಮ್ಮ ಕೊಡುಗೆ ದೇವಜನರ ಕೊರತೆಗಳನ್ನು ನೀಗಿಸುವುದಲ್ಲದೆ ಅನೇಕರು ದೇವರಿಗೆ ಸ್ತೋತ್ರ ಸಲ್ಲಿಸುವಂತೆ ಮಾಡುವುದು.
- Verse 13: ಕ್ರಿಸ್ತಯೇಸುವಿನ ಶುಭಸಂದೇಶದ ಅಂಗೀಕಾರದಿಂದ ನೀವು ಎಷ್ಟು ನಿಷ್ಠಾವಂತ ಸೇವಾಸಕ್ತರಾಗಿದ್ದೀರಿ, ತಮಗೂ ಇತರರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂದು ತಿಳಿದು ಅನೇಕರು ದೇವರನ್ನು ಕೊಂಡಾಡುವರು.
- Verse 14: ದೇವರು ನಿಮಗೆ ಅನುಗ್ರಹಿಸಿರುವ ಅತಿಶಯವಾದ ವರಕ್ಕಾಗಿ ಅವರು ಪ್ರೀತಿವಾತ್ಸಲ್ಯದಿಂದ ನಿಮಗೋಸ್ಕರ ಪ್ರಾರ್ಥಿಸುವರು.
- Verse 15: ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತುತಿಸ್ತೋತ್ರ ಸಲ್ಲಲಿ!