ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಫಿಲಿಪ್ಪಿಯರಿಗೆ
2ನೇ ಅಧ್ಯಾಯ
- Verse 1: ಕ್ರಿಸ್ತಯೇಸುವಿನಲ್ಲಿ ನಿಮಗೆ ಉತ್ಸಾಹ, ಉತ್ತೇಜನ, ಪ್ರೀತಿ, ಪ್ರೇರಣೆ, ಪವಿತ್ರಾತ್ಮ ಅವರ ಅನ್ಯೋನ್ಯತೆ, ದೀನದಯಾಳತೆ ಇರುವುದಾದರೆ ಐಕಮತ್ಯದಿಂದ ಬಾಳಿರಿ.
- Verse 2: ನಿಮ್ಮೆಲ್ಲರಲ್ಲಿ ಒಂದೇ ಮನಸ್ಸು, ಒಂದೇ ಪ್ರೀತಿ ಇರಲಿ. ನಿಮ್ಮ ಗುರಿ ಧ್ಯೇಯಗಳು ಒಂದೇ ಆಗಿರಲಿ. ಆಗ ನನ್ನ ಸಂತೋಷವು ಸಂಪೂರ್ಣಗೊಳ್ಳುವುದು.
- Verse 3: ಸ್ವಾರ್ಥಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ.
- Verse 4: ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ.
- Verse 5: ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ:
- Verse 6: ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ.
- Verse 7: ತನ್ನನ್ನೇ ಬರಿದುಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ.
- Verse 8: ತನ್ನನ್ನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ.
- Verse 9: ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು.
- Verse 10: ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
- Verse 11: ‘ಕ್ರಿಸ್ತಯೇಸುವೇ ಪ್ರಭು' ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.
- Verse 12: ಪ್ರಿಯ ಸಹೋದರರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ, ನಾನು ದೂರವಿರುವಾಗ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿ. ನಿಮ್ಮ ಜೀವೋದ್ಧಾರಕ್ಕಾಗಿ ಭಯಭಕ್ತಿಯಿಂದ ಶ್ರಮಿಸಿರಿ.
- Verse 13: ಏಕೆಂದರೆ ದೈವಚಿತ್ತವನ್ನು ನೀವು ನೆರವೇರಿಸುವಂತೆ ಅವರೇ ನಿಮ್ಮಲ್ಲಿ ಸತ್ಪ್ರೇರಣೆಯನ್ನೂ ಸತ್ಫಲವನ್ನೂ ನೀಡುತ್ತಾರೆ.
- Verse 14: ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಗೊಣಗುಟ್ಟದೆ, ವಿವಾದವಿಲ್ಲದೆ, ಏಕಮನಸ್ಸಿನಿಂದ ಮಾಡಿ.
- Verse 15: ನಿರ್ದೋಷಿಗಳೂ ನಿಷ್ಕಳಂಕರೂ ಆಗಿರಿ. ವಕ್ರಬುದ್ಧಿಯ ದುಷ್ಟಜನರ ನಡುವೆ ದೇವರ ಪರಿಶುದ್ಧ ಮಕ್ಕಳಂತೆ ಬಾಳಿರಿ. ಜೀವದಾಯಕ ಸಂದೇಶವನ್ನು ಎತ್ತಿಹಿಡಿಯಿರಿ; ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ.
- Verse 16: ಹೀಗೆ ನೀವು ನಡೆದುಕೊಂಡರೆ ನನ್ನ ಸೇವೆ ವ್ಯರ್ಥವಾಗದೆ, ಶ್ರಮೆ ನಿಷ್ಫಲವಾಗದೆ, ಫಲಪ್ರದವಾಯಿತೆಂದು ಕ್ರಿಸ್ತರ ದಿನದಂದು ನಾನು ಹೆಮ್ಮೆಪಡಬಹುದು.
- Verse 17: ನಿಮ್ಮ ವಿಶ್ವಾಸವೆಂಬ ಬಲಿಕಾಣಿಕೆಯ ಮೇಲೆ ನನ್ನ ರಕ್ತವನ್ನು ಧಾರೆಯಾಗಿ ಹರಿಸಬೇಕಾಗಿಬಂದರೂ ನನಗೆ ಸಂತೋಷವೇ; ನಿಮ್ಮೆಲ್ಲರೊಡನೆ ಸೇರಿ ಸಂತೋಷಿಸುತ್ತೇನೆ.
- Verse 18: ಅದೇ ರೀತಿ ನೀವು ಸಹ ನನ್ನೊಡನೆ ಸಂತೋಷದಿಂದ ಸಂಭ್ರಮಿಸಿರಿ.
- Verse 19: ಪ್ರಭು ಯೇಸುವಿನ ಚಿತ್ತವಾದಲ್ಲಿ ತಿಮೊಥೇಯನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸಬೇಕೆಂದಿದ್ದೇನೆ. ಆತನಿಂದ ನಿಮ್ಮ ಸಮಾಚಾರವನ್ನು ತಿಳಿದು ನಾನು ಹರ್ಷಗೊಳ್ಳುತ್ತೇನೆ.
- Verse 20: ಆತನಂತೆ ನಿಷ್ಕಪಟವಾಗಿ ನಿಮ್ಮ ಯೋಗಕ್ಷೇಮವನ್ನು ಬಯಸುವವರು ಬೇರೆ ಯಾರೂ ಇಲ್ಲಿಲ್ಲ.
- Verse 21: ಇತರರೆಲ್ಲರೂ ಸ್ವಕಾರ್ಯದಲ್ಲಿ ಮಗ್ನರಾಗಿರುವವರೇ ಹೊರತು ಯೇಸುಸ್ವಾಮಿಯ ಕಾರ್ಯದಲ್ಲಿ ನಿರತರಾಗಿಲ್ಲ.
- Verse 22: ತಿಮೊಥೇಯನ ಯೋಗ್ಯತೆಯನ್ನು ನೀವು ಬಲ್ಲಿರಿ. ತಂದೆಯೊಂದಿಗೆ ಮಗನು ದುಡಿಯುವಂತೆ, ಶುಭಸಂದೇಶದ ಸೇವೆಯಲ್ಲಿ ನನ್ನೊಂದಿಗೆ ಆತನು ದುಡಿದಿದ್ದಾನೆ.
- Verse 23: ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶ ತಿಳಿದ ಕೂಡಲೇ ಆತನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ.
- Verse 24: ಅಲ್ಲದೆ, ದೇವರ ಚಿತ್ತವಿದ್ದರೆ, ನಾನೇ ನಿಮ್ಮಲ್ಲಿಗೆ ಬೇಗನೆ ಬರುವೆನೆಂಬ ದೃಢನಂಬಿಕೆಯೂ ನನಗಿದೆ.
- Verse 25: ನನಗೆ ನೆರವಾಗಲು ನೀವು ಕಳುಹಿಸಿದ ಸಹೋದರ ಎಪಫ್ರೋದಿತನು ನಿಮ್ಮಲ್ಲಿಗೆ ಹಿಂದಿರುಗುವುದು ಅವಶ್ಯವೆಂದು ಭಾವಿಸುತ್ತೇನೆ. ಅವನು ನನ್ನೊಂದಿಗೆ ದುಡಿಯುತ್ತಾ, ಹೋರಾಡುತ್ತಾ ಬಂದಿದ್ದಾನೆ.
- Verse 26: ನಿಮ್ಮನ್ನೆಲ್ಲಾ ನೋಡಲು ಅವನು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ದಿಯು ನಿಮ್ಮ ಕಿವಿಗೆ ಮುಟ್ಟಿತೆಂದು ತಿಳಿದು ಬಹಳ ವ್ಯಸನಪಡುತ್ತಿದ್ದಾನೆ.
- Verse 27: ಅವನು ಅಸ್ವಸ್ಥನಾದದ್ದು ನಿಜ; ಸಾವಿನ ದವಡೆಯಿಂದ ಪಾರಾದದ್ದೂ ನಿಜ. ದೇವರ ಕರುಣೆ ಅವನ ಮೇಲೆ ಮಾತ್ರವಲ್ಲದೆ ನನ್ನ ಮೇಲೂ ಇದ್ದುದರಿಂದ ನನಗೆ ದುಃಖದ ಮೇಲೆ ದುಃಖ ಬರದಂತಾಯಿತು.
- Verse 28: ಎಪಫ್ರೋದಿತನನ್ನು ನಿಮ್ಮ ಬಳಿಗೆ ಕಳುಹಿಸಲು ತವಕದಿಂದಿದ್ದೇನೆ. ಅವನನ್ನು ಕಂಡು ನಿಮಗೆ ಆನಂದವಾಗುವುದು, ನನ್ನ ದುಃಖವೂ ಶಮನವಾಗುವುದು.
- Verse 29: ಪ್ರಭುವಿನ ಹೆಸರಿನಲ್ಲಿ ನೀವು ಅವನನ್ನು ತುಂಬು ಹೃದಯದಿಂದ ಸ್ವಾಗತಿಸಿರಿ. ಅವನಂಥವರಿಗೆ ಸೂಕ್ತ ಗೌರವ ಸಲ್ಲಿಸಿರಿ.
- Verse 30: ಕ್ರಿಸ್ತಯೇಸುವಿನ ಸೇವೆಯಲ್ಲಿ ಅವನು ಸತ್ತು ಬದುಕಿದ್ದಾನೆ. ನೀವು ಕೊಡಲು ಸಾಧ್ಯವಾಗದೆ ಹೋದ ನೆರವನ್ನು ಅವನು ನನಗೆ ಕೊಟ್ಟು ಸೇವೆಯನ್ನು ಪೂರ್ಣಗೊಳಿಸಿದ್ದಾನೆ.