ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
23ನೇ ಅಧ್ಯಾಯ
- Verse 1: ಏಳನೆಯ ವರ್ಷದಲ್ಲಿ ಯೆಹೋಯಾದನು ಧೈರ್ಯತಂದುಕೊಂಡು ಯೆರೋಹಾಮನ ಮಗ ಅಜರ್ಯ, ಯೆಹೋಹಾನಾನನ ಮಗ ಇಷ್ಮಾಯೇಲ್, ಓಬೇದನ ಮಗ ಅಜರ್ಯ, ಅದಾಯನ ಮಗ ಮಾಸೇಯ, ಜಿಕ್ರಿಯ ಮಗ ಎಲೀಷಾಫಾಟ್ ಎಂಬ ಶತಾಧಿಪತಿಗಳೊಡನೆ ಒಂದು ಒಪ್ಪಂದ ಮಾಡಿಕೊಂಡನು.
- Verse 2: ಇವರು ಜುದೇಯದಲ್ಲೆಲ್ಲಾ ಸಂಚರಿಸಿ ಎಲ್ಲ ಪಟ್ಟಣಗಳಿಂದ ಲೇವಿಯರನ್ನೂ ಇಸ್ರಯೇಲರ ಗೋತ್ರಪ್ರಧಾನರನ್ನೂ ಕೂಡಿಸಿದರು. ಅವರೆಲ್ಲರು ಜೆರುಸಲೇಮಿಗೆ ಬಂದರು.
- Verse 3: ಹೀಗೆ ಕೂಡಿಬಂದವರೆಲ್ಲರು ದೇವಾಲಯದಲ್ಲಿ ಅರಸನೊಂದಿಗೆ ಒಪ್ಪಂದ ಮಾಡಿಕೊಂಡರು. ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು; ಸರ್ವೇಶ್ವರಸ್ವಾಮಿ ದಾವೀದನ ಸಂತಾನದವರಿಗೆ ಮಾಡಿದ ವಾಗ್ದಾನಕ್ಕನುಸಾರ ಅರಸನಾಗತಕ್ಕವನು ಇವನೇ.
- Verse 4: ಈಗ ನೀವು ಮಾಡತಕ್ಕದ್ದೇನೆಂದರೆ - ಸಬ್ಬತ್ದಿನ ದೇವಾಲಯದ ಸೇವೆಗೆ ಬರಬೇಕಾದ ಲೇವಿಯರಲ್ಲೂ ಯಾಜಕರಲ್ಲೂ ಮೂರರಲ್ಲೊಂದು ಭಾಗದವರು ದೇವಸ್ಥಾನದ ದ್ವಾರಪಾಲಕರಾಗಿ ನಿಲ್ಲಬೇಕು.
- Verse 5: ಇನ್ನೊಂದು ಭಾಗದವರು ಅರಮನೆಯನ್ನೂ ಮತ್ತೊಂದು ಭಾಗದವರು ಯೆಸೋದ್ ಬಾಗಿಲನ್ನೂ ಕಾಯಬೇಕು. ಇತರ ಜನರೆಲ್ಲರು ಸರ್ವೇಶ್ವರನ ಆಲಯದ ಪ್ರಾಕಾರದಲ್ಲೇ ಇರಬೇಕು.
- Verse 6: ಯಾಜಕರು ಹಾಗು ಸೇವೆಯಲ್ಲಿರುವ ಲೇವಿಯರು ಇವರನ್ನು ಬಿಟ್ಟು ಬೇರೆ ಯಾರೂ ಸರ್ವೇಶ್ವರನ ಆಲಯದೊಳಗೆ ಬರಬಾರದು. ಇವರು ಪರಿಶುದ್ಧರಾಗಿರುವುದರಿಂದ ಬರಬಹುದು. ಉಳಿದ ಜನರೆಲ್ಲರು ಸರ್ವೇಶ್ವರನ ಆಜ್ಞಾನುಸಾರ ಹೊರಗಿರಬೇಕು.
- Verse 7: ಲೇವಿಯರು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ನಿಂತು ಆಲಯದೊಳಕ್ಕೆ ನುಗ್ಗುವವರನ್ನು ಸಂಹರಿಸಬೇಕು. ಅರಸನು ಹೋಗಿ ಬರುವಾಗಲೆಲ್ಲಾ ಅವರು ಅವನ ಜೊತೆಯಲ್ಲೇ ಇರಬೇಕು,” ಎಂದು ಹೇಳಿದನು.
- Verse 8: ಲೇವಿಯರೂ ಎಲ್ಲ ಯೆಹೂದ್ಯರೂ ಯಾಜಕ ಯೆಹೋಯಾದನ ಆಜ್ಞೆಯಂತೆ ನಡೆದುಕೊಂಡರು. ಅವನು ಸಬ್ಬತ್ದಿನದಲ್ಲಿ ಸೇವಾವಿಮುಕ್ತರಾದ ವರ್ಗದವರನ್ನು ಕಳುಹಿಸಿಬಿಡಲಿಲ್ಲ; ಆದುದರಿಂದ ಪ್ರತಿಯೊಬ್ಬನು ಸಬ್ಬತ್ದಿನ ಮನೆಗೆ ಹೋಗಬೇಕಾಗಿದ್ದ ಮತ್ತು ಬರಬೇಕಾಗಿದ್ದ ತನ್ನ ಕೈ ಕೆಳಗಿನವರನ್ನು ಕೂಡಿಸಿಕೊಂಡನು.
- Verse 9: ದೇವಾಲಯದಲ್ಲಿಟ್ಟಿದ್ದ ದಾವೀದ ಅರಸನ ಬರ್ಜಿ, ಗುರಾಣಿ, ಖೇಡ್ಯಗಳೇ ಮುಂತಾದ ಆಯುಧಗಳನ್ನು ಯಾಜಕ ಯೆಹೋಯಾದನು ಶತಾಧಿಪತಿಗಳಿಗೆ ಕೊಟ್ಟನು.
- Verse 10: ಆಯುಧಪಾಣಿಗಳಾದ ಎಲ್ಲ ಜನರನ್ನು ಅರಸನ ಸುತ್ತಲು ದೇವಾಲಯದ ದಕ್ಷಿಣದಿಕ್ಕಿನ ಮೂಲೆಯಿಂದ ಬಲಿಪೀಠದವರೆಗೂ ಅಲ್ಲಿಂದ ಉತ್ತರದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಲ್ಲಿಸಿದನು.
- Verse 11: ಆಮೇಲೆ ಅವನೂ ಅವನ ಮಕ್ಕಳೂ ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜಾಭಿಷೇಕ ಮಾಡಿದರು. ಕೂಡಲೆ ಜನರು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.
- Verse 12: ಜನರು ಅತ್ತಿತ್ತ ಓಡಾಡುತ್ತಾ ಅರಸನನ್ನು ಹರಸುವ ಗದ್ದಲವನ್ನು ಅತಲ್ಯಳು ಕೇಳಿ ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು.
- Verse 13: ಅಲ್ಲಿ ಅರಸನು ಬಾಗಿಲಿನ ಬಳಿಯಲ್ಲಿರುವ ರಾಜಸ್ತಂಭದ ಹತ್ತಿರ ನಿಂತಿದ್ದನು. ಅಧಿಪತಿಗಳು ಹಾಗೂ ತುತೂರಿಗಳನ್ನು ಊದುವವರು ಅರಸನ ಹತ್ತಿರವಿದ್ದರು; ಜನಸಾಮಾನ್ಯರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಗಾಯಕರು ವಾದ್ಯಗಳನ್ನು ಬಾರಿಸುತ್ತಾ ಜನಪದ ಕೀರ್ತನೆಗಳನ್ನು ನುಡಿಸುತ್ತಿದ್ದರು. ಇದನ್ನು ಕಂಡಕೂಡಲೆ ಆಕೆ ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.
- Verse 14: ಆಗ ಯಾಜಕ ಯೆಹೋಯಾದನು ಸೇನಾನಿಗಳಾದ ಶತಾಧಿಪತಿಗಳನ್ನು ಹೊರಗೆ ಕರೆದುಕೊಂಡು ಹೋಗಿ ಅವರಿಗೆ, “ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಸಾಗಿಸಿಕೊಂಡು ಹೊರಗೆ ತಳ್ಳಲಿ; ಮತ್ತು ಈಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ,” ಎಂದು ಆಜ್ಞಾಪಿಸಿದನು.
- Verse 15: ಅವರು ಆಕೆಯನ್ನು ಹಿಡಿದು ಅರಮನೆಗೆ ಹೋಗುವ ಕುದುರೆಬಾಗಿಲಿನ ತನಕ ಒಯ್ದು, ಅಲ್ಲಿ ಕೊಂದರು.
- Verse 16: ಅನಂತರ ಯೆಹೋಯಾದನು ಎಲ್ಲ ಜನರನ್ನೂ ಅರಸನನ್ನೂ ಪ್ರೇರಿಸಿ ತಾವೆಲ್ಲರೂ ಸರ್ವೇಶ್ವರನ ಪ್ರಜೆಗಳಾಗಿರುವೆವೆಂದು ಅವರೊಡನೆ ಪ್ರಮಾಣಮಾಡಿದನು.
- Verse 17: ತರುವಾಯ ಜನರೆಲ್ಲರೂ ಬಾಳ್ದೇವಸ್ಥಾನಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಮುಂದೆಯೇ ಕೊಂದರು; ಆ ದೇವಸ್ಥಾನವನ್ನೂ ಅದರಲ್ಲಿದ್ದ ಪೀಠ ಹಾಗೂ ವಿಗ್ರಹಗಳನ್ನೂ ಹಾಳುಮಾಡಿಬಿಟ್ಟರು.
- Verse 18: ಯೆಹೋಯಾದನು ಲೇವಿಯರಾದ ಯಾಜಕರ ಕೈಕೆಳಗೆ ಸರ್ವೇಶ್ವರನ ಆಲಯದ ಕಾವಲುಗಾರರನ್ನು ನೇಮಿಸಿದನು. ದಾವೀದನು ಆ ಯಾಜಕರನ್ನು ಸರ್ವೇಶ್ವರನ ಆಲಯದ ಸೇವೆಗಾಗಿ ವರ್ಗವರ್ಗಗಳಾಗಿ ವಿಭಾಗಿಸಿದ್ದನು. ದಾವೀದನು ನೇಮಿಸಿದ್ದ ಉತ್ಸಾಹ ಗಾಯನದೊಡನೆ, ಮೋಶೆಯ ಧರ್ಮಶಾಸ್ತ್ರಾನುಸಾರ ಸರ್ವೇಶ್ವರನಿಗೆ ದಹನಬಲಿ ಸಮರ್ಪಣೆ ಮಾಡುವುದು ಅವರ ಕರ್ತವ್ಯವಾಗಿ ಇತ್ತು.
- Verse 19: ಯಾವ ವಿಧದಲ್ಲಾದರೂ ಅಶುದ್ಧನಾದವನು ಸರ್ವೇಶ್ವರನ ಆಲಯವನ್ನು ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನಿರಿಸಿದನು.
- Verse 20: ಆಮೇಲೆ ಅವನು ಶತಾಧಿಪತಿಗಳು, ಶ್ರೀಮಂತರು, ಜನನಾಯಕರು ಹಾಗು ಶ್ರೀಸಾಮಾನ್ಯರು ಇವರೊಡನೆ ಅರಸನನ್ನು ಸರ್ವೇಶ್ವರನ ಆಲಯದಿಂದ ಮೇಲಣ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.
- Verse 21: ನಾಡಿನವರೆಲ್ಲರೂ ಬಹಳವಾಗಿ ಸಂತೋಷಪಟ್ಟರು; ಪಟ್ಟಣವು ಶಾಂತವಾಯಿತು; ಅತಲ್ಯಳನ್ನು ಕತ್ತಿಯಿಂದ ಸಂಹರಿಸಿದರು.