வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
62ನೇ ಅಧ್ಯಾಯ
1 : ಎನ್ನ ಮನಕ್ಕೆ ಶಾಂತಿ ದೇವನಿಂದಲೆ I ನನ್ನ ಜೀವೋದ್ಧಾರ ಆತನಿಂದಲೆ II
2 : ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II
3 : ಎನಿತುಕಾಲ ದಾಳಿ ಮಾಡುವಿರಿ ಒಬ್ಬನ ಮೇಲೆ ನೀವೆಲ್ಲಾ? I ಕೆಡವಲು ಯತ್ನಿಸುವಿರಾ ಬಾಗಿದಾ ಗೋಡೆಯ, ಕುಸಿದಾ ಪೌಳಿಯ? II
4 : ದಬ್ಬುವ ದುರಾಲೋಚನೆ ಅವರದು ಗಾದಿಯಿಂದ I ಅಬದ್ಧವಾಡುವುದೆಂದರೊ ಹಬ್ಬದಾನಂದ I ಹರಸುವರು ಅಧರದಿಂದ, ಶಪಿಸುವರು ಉದರದಿಂದ II
5 : ಎನ್ನ ಮನಕೆ ಶಾಂತಿ ದೇವನಿಂದಲೆ I ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ II
6 : ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II
7 : ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I ಭದ್ರವಾದ ಬಂಡೆ, ನನಗಾಶ್ರಯ ಆತನೆ II
8 : ಜನರೇ, ಸದಾ ಭರವಸೆ ಇಡಿ ದೇವನಲಿ I ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ II
9 : ನರಮಾನವರೆಲ್ಲರು ಬರೇ ಉಸಿರು I ನರಾಧಿಪತಿಗಳು ತೀರಾ ಹುಸಿಯು I ತ್ರಾಸಿನಲಿ ತೂಗಲು ಅವರೆಲ್ಲರು I ಉಸಿರಿಗಿಂತಲೂ ಅತ್ಯಂತ ಹಗುರು II
10 : ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ I ಸೂರೆಮಾಡಿ ಸೇರಿಕೊಂಡುದನು ಕೊಚ್ಚಬೇಡಿ I ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ II
11 : ದೇವನೊಮ್ಮೆ ನುಡಿದೀಮಾತು ನನಗಿಮ್ಮಡಿ ಕೇಳಿಸಿತು I ಸರ್ವಾಧಿಕಾರವು ದೇವನಿಗೇ ಸೇರಿದ ಸೊತ್ತು II
12 : ನಿನ್ನ ಪ್ರೀತಿ ಹೇ ಪ್ರಭು, ಅಚಲ ಹಿಮಾಚಲ I ಸರ್ವರಿಗು ನೀಡುವೆ ಕೃತ್ಯಕೆ ತಕ್ಕ ಫಲ II