पवित्र बाइबिल
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
16ನೇ ಅಧ್ಯಾಯ
1 : ಅವರು ದೇವಮಂಜೂಷವನ್ನು ತಂದು ದಾವೀದನು ಅದಕ್ಕಾಗಿ ಸಿದ್ಧಪಡಿಸಿದ್ದ ಗುಡಾರದೊಳಗೆ ಒಯ್ದು, ಅಲ್ಲಿ ಅದನ್ನು ಸ್ಥಾಪಿಸಿದರು. ದೇವರಿಗೆ ದಹನಬಲಿಗಳನ್ನೂ, ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದರು.
2 : ಬಲಿಹೋಮಗಳ ಅರ್ಪಣೆ ಮುಗಿದ ತರುವಾಯ ದಾವೀದನು ಸರ್ವೇಶ್ವರನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. ಅವರೆಲ್ಲರಿಗೂ ಪ್ರಸಾದವನ್ನು ಹಂಚಿದನು:
3 : ಇಸ್ರಯೇಲಿನ ಪ್ರತಿ ಒಬ್ಬ ಪುರುಷನಿಗೂ ಸ್ತ್ರೀಗೂ ಒಂದೊಂದು ರೊಟ್ಟಿಯನ್ನೂ ಬೇಯಿಸಿದ ಒಂದು ತುಂಡುಮಾಂಸವನ್ನೂ ಒಣಗಿದ ದ್ರಾಕ್ಷೆಗಳನ್ನೂ ಹಂಚಿದನು
4 : ಸರ್ವೇಶ್ವರನ ಮಂಜೂಷದ ಮುಂದೆ ದೇವರ ಆರಾಧನೆ ಮಾಡುವುದಕ್ಕಾಗಿ ದಾವೀದನು ಕೆಲವು ಮಂದಿ ಲೇವಿಯರನ್ನು ನೇಮಿಸಿದನು.
5 : ಅವರಲ್ಲಿ ಆಸಾಫನು ಮುಖ್ಯಸ್ಥನಾಗಿಯೂ ಜೆಕರ್ಯ ಅವನ ಸಹಾಯಕನಾಗಿಯೂ ನೇಮಕಗೊಂಡರು. ಯೇಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಹಾಗು ಯೆಗೀಯೇಲ್ ಸ್ವರಮಂಡಲಗಳನ್ನು ಬಾರಿಸಲು ನೇಮಕವಾದರು. ಆಸಾಫನು ತಾಳಗಳನ್ನು ಬಾರಿಸಬೇಕಾಗಿತ್ತು.
6 : ಬೆನಾಯ ಹಾಗೂ ಯಹಜೀಯೇಲ್ ಎಂಬ ಯಾಜಕರು ನಿಬಂಧನಾ ಮಂಜೂಷದ ಮುಂದೆ ಕ್ರಮವಾಗಿ ತುತೂರಿಗಳನ್ನು ಊದಬೇಕಾಗಿತ್ತು.
7 : ಆಸಾಫನಿಗೂ ಅವನ ಜೊತೆ ಲೇವಿಯರಿಗೂ ಸರ್ವೇಶ್ವರನ ಸ್ತೋತ್ರ ಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
8 : ಸಲ್ಲಿಸಿ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರವನು I ಮಾಡಿರಿ ಆತನ ನಾಮಸ್ಮರಣೆಯನು I ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II
9 : ಹಾಡಿ ಪಾಡಿ ಹೊಗಳಿರಿ ಆತನನು I ಧ್ಯಾನಿಸಿ ಆತನ ಪವಾಡಗಳನು II
10 : ಹೆಮ್ಮೆಪಡಿ, ನೆನೆದು ಆತನ ಶ್ರೀನಾಮವನು I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನವನು II
11 : ಆಶ್ರಯಿಸಿರಿ ಸರ್ವೇಶನನೂ ಆತನ ಶಕ್ತಿಯನೂ I ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
12 : ಆತನ ದಾಸ ಇಸ್ರಯೇಲನ ಸಂತತಿಯವರೇ I ಆತನಾರಿಸಿಕೊಂಡ ಯಕೋಬನ ವಂಶದವರೇ II
13 : ನೆನೆಯಿರಿ ಆತನ ಅದ್ಭುತಗಳನು, ಮಹತ್ಕಾರ್ಯಗಳನು I ಆತನ ವದನ ವಿಧಿಸಿದ ನ್ಯಾಯನಿರ್ಣಯಗಳನು II
14 : ಸರ್ವೇಶ ನಮ್ಮ ದೇವನೆಂಬುದು ಪ್ರಕಟಿತ I ಆತನಿತ್ತ ತೀರ್ಪು ವಿಶ್ವವ್ಯಾಪ್ತ II
15 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
16 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I ಇಸಾಕನಿಗೆ ಆಣೆಯಿಟ್ಟು ಆತನು ಹೇಳಿದುದನು II
17 : ಯಕೋಬನಿಗೆ ರಾಜಶಾಸನವಾಗಿ ಕೊಟ್ಟದ್ದನು I ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು: II
18 : “ನಾ ಕೊಡುವೆನು ಕಾನಾನ್ ನಾಡನು ನಿಮಗೆ I ಸ್ವಾಸ್ತ್ಯವಾಗುವುದಿದು ನಿಮ್ಮ ಸಂತತಿಗೆ” II
19 : ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರಲು II
20 : ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿರಲು II
21 : ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ I ಅವರಿಗಾಗಿ ಅರಸರನ್ನಾತ ಗದರಿಸದೆ ಬಿಡಲಿಲ್ಲ II
22 : “ನಾನು ಅಭಿಷೇಕಿಸಿದವರನು ಇಗೋ, ಮುಟ್ಟಬೇಡಿ I ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” II
23 : ಸರ್ವ ಭೂನಿವಾಸಿಗಳೇ, ಸರ್ವೇಶ್ವರನಿಗೆ ಹಾಡಿರಿ I ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ II
24 : ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ I ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ II
25 : ಏಕೆನೆ, ಮಹಾತ್ಮನು ಸರ್ವೇಶ್ವರ ಅತಿ ಸ್ತುತ್ಯರ್ಹನು I ಸಕಲ ದೇವರುಗಳಿಗಿಂತಲೂ ಘನಗಂಭೀರನು II
26 : ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ I ಸರ್ವೇಶ್ವರನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ II
27 : ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ I ಶಕ್ತಿ, ಸಂತೋಷ ಆತನ ಗರ್ಭಗುಡಿಯಲಿ II
28 : ಶಕ್ತಿಸಾಮರ್ಥ್ಯ ಸರ್ವೇಶ್ವರನವೇ ಎಂದು I ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದೂ II
29 : ಆತನ ನಾಮಕೆ ಘನತೆ ಗೌರವವನು ತನ್ನಿ I ಕಾಣಿಕೆಯೊಂದಿಗೆ ಆತನ ಮಂದಿರಕೆ ಬನ್ನಿ II
30 : ಸರ್ವೇಶನಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I ಕದಲದ ಸ್ಥಿರತೆಯನು ಇತ್ತಿಹನೀ ಧರೆಗೆ II
31 : “ಹರ್ಷಿಸಲಿ ಆಕಾಶ, ಸಂತೋಷಿಸಲಿ ಭೂಲೋಕ I ಗರ್ಜಿಸಲಿ ಸಮುದ್ರ ಮತ್ತು ಅದರೊಳಿರುವುದೆಲ್ಲ I ಸಾರಲಿ ರಾಷ್ಟ್ರಗಳಿಗೆ ಸರ್ವೇಶ್ವರ ರಾಜನೆಂದು I ಧರೆಗೆ ನ್ಯಾಯತೀರಿಸಲು ಖಂಡಿತ ಬರುವನೆಂದು II
32 : “ಹರ್ಷಿಸಲಿ ಆಕಾಶ, ಸಂತೋಷಿಸಲಿ ಭೂಲೋಕ I ಗರ್ಜಿಸಲಿ ಸಮುದ್ರ ಮತ್ತು ಅದರೊಳಿರುವುದೆಲ್ಲ I ಸಾರಲಿ ರಾಷ್ಟ್ರಗಳಿಗೆ ಸರ್ವೇಶ್ವರ ರಾಜನೆಂದು I ಧರೆಗೆ ನ್ಯಾಯತೀರಿಸಲು ಖಂಡಿತ ಬರುವನೆಂದು II
33 : ಉಲ್ಲಾಸಿಸಲಿ ಹೊಲಗದ್ದೆಗಳು ಪೈರುಪಚ್ಚೆಗಳು I ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು II
34 : ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II
35 : ಹೇ ದೇವಾ, ನಮ್ಮ ಸಹಾಯಕ, ನಮ್ಮನ್ನು ಉದ್ಧರಿಸು I ನಾಡು ನಾಡುಗಳಿಂದ ನಮ್ಮನ್ನು ಒಂದುಗೂಡಿಸು I ನಿನ್ನ ಪವಿತ್ರ ನಾಮವನು ಭಜಿಸುವೆವು ನಾವು I ನಿನ್ನ ಸ್ತುತಿಸ್ತೋತ್ರಗಳಲಿ ಹೆಚ್ಚಳಪಡುವೆವು II
36 : ಇಸ್ರಯೇಲಿನ ದೇವನಾದ ಸರ್ವೇಶಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್,’ ಸರ್ವೇಶ್ವರನಿಗೆ ಸ್ತೋತ್ರ II
37 : ನಿಬಂಧನಾ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡೆಸುವ ಜವಾಬ್ದಾರಿಯನ್ನು ಆಸಾಫ ಮತ್ತು ಅವನ ಜೊತೆ ಲೇವಿಯರಿಗೆ ಅರಸ ದಾವೀದ ಶಾಶ್ವತವಾಗಿ ವಹಿಸಿಕೊಟ್ಟನು. ಅಲ್ಲಿ ಅವರು ತಮ್ಮ ಕರ್ತವ್ಯವನ್ನು ದಿನನಿತ್ಯವೂ ನೆರವೇರಿಸಬೇಕಾಗಿತ್ತು.
38 : ಯೆದುತೂನನ ಮಗ ಓಬೇದೆದೋಮನೂ ಅವನ ಗೋತ್ರದ ಅರವತ್ತ ಎಂಟು ಜನರೂ ಅವರಿಗೆ ಸಹಾಯಕರು ಆಗಿದ್ದರು. ಹೋಸ ಮತ್ತು ಓಬೇದೆದೋಮರು ದ್ವಾರಪಾಲಕರ ಮೇಲ್ವಿಚಾರಕರಾಗಿದ್ದರು.
39 : ಯಾಜಕ ಚಾದೋಕ ಮತ್ತು ಅವನ ಜೊತೆ ಯಾಜಕರು ಗಿಬ್ಯೋನಿನಲ್ಲಿದ್ದ ಸರ್ವೇಶ್ವರನ ಗುಡಾರದಲ್ಲಿ ಆರಾಧನೆಯನ್ನು ನಡೆಸಲು ನೇಮಕರಾಗಿದ್ದರು.
40 : ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಬಲಿಪೀಠದ ಮೇಲೆ ಪ್ರತೀದಿನ ಮುಂಜಾನೆ ಹಾಗು ಸಂಜೆ ದಹನಬಲಿಯರ್ಪಿಸಬೇಕಾಗಿ ಇತ್ತು.
41 : ಅಲ್ಲಿ ಅವರೊಂದಿಗೆ ಸರ್ವೇಶ್ವರನ ನಿತ್ಯಪ್ರೀತಿಗಾಗಿ ಅವರನ್ನು ಸ್ತುತಿಸಿ, ಸಂಗೀತ ಹಾಡಲು ಹೇಮಾನ್, ಯೆದುತೂನ ಹಾಗು ಇನ್ನಿತರರು ನಿರ್ದಿಷ್ಟವಾಗಿ ನೇಮಕರಾಗಿದ್ದರು.
42 : ಸ್ತುತಿಗೀತೆಗಳನ್ನು ಹಾಡುವಾಗ ತುತೂರಿ, ತಾಳ, ಮತ್ತಿತರ ವಾದ್ಯಗಳನ್ನು ಬಾರಿಸುವವರ ಮೇಲ್ವಿಚಾರಣೆಯೂ ಹೇಮಾನ್ ಮತ್ತು ಯೆದುತೂನರದಾಗಿತ್ತು. ಯೆದುತೂನನ ಮಕ್ಕಳಿಗೆ ದ್ವಾರಗಳನ್ನು ಕಾಯುವ ಹೊಣೆಯೂ ಇತ್ತು.
43 : ಅನಂತರ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ತನ್ನ ಕುಟುಂಬದವರನ್ನು ಆಶೀರ್ವದಿಸಲು ದಾವೀದನೂ ತನ್ನ ಮನೆಗೆ ಹೋದನು.